ನಾಳೆ ಮತ್ತು ಮುಂದಿನ ಭಾನುವಾರ ನಡೆಯಲಿರುವ ಆರು ಮತ್ತು ಏಳನೇ ಸುತ್ತಿನ ಮತದಾನದ ಬಳಿಕ ದೇಶ ಚುನಾವಣೆಯ ಬಿಸಿಯಿಂದ ಹೊರಬರಲಿದೆ. ಅಂದರೆ, ಕನಿಷ್ಟು ಇನ್ನೂ ಎಂಟು ದಿನ ದೇಶದಲ್ಲಿ ನೆಹರೂ, ಇಂದಿರಾ, ರಾಜೀವ್ ಅವರ ಸಮಾಧಿಗಳಲ್ಲಿ ಇತಿಹಾಸವನ್ನು ಬಗೆಯುವ ಕಾರ್ಯ ಮುಂದುವರಿಯಲಿದೆ ಮತ್ತು ಸಿಖ್ ಮತ್ತು ಗುಜರಾತ್ ಹತ್ಯಾಕಾಂಡಗಳ ಮಹಜರು ಕೂಡ ಚಾಲ್ತಿಯಲ್ಲಿರಲಿದೆ. ಆದರೆ, ಈ ನಡುವೆ ಒಂದು ಹೊಸ ಬೆಳವಣಿಗೆ ಆಗಿಹೋಗಿದೆ. ಅದು ‘ವಿಶ್ವಗುರು’ ಎಂದು ‘ಭಕ್ತ’ರು ಪುಲಕಿತರಾಗುತ್ತಿದ್ದ ಪ್ರಧಾನಿ ಮೋದಿಯವರ ವರ್ಚಸ್ಸು ಅಂತಾರಾಷ್ಟ್ರೀಯ ಮಟ್ಟದಲ್ಲಿ ದಿಢೀರನೇ ಕುಸಿದುಬಿದ್ದಿದೆ ಹಾಗೂ ಅದಕ್ಕೂ ಮುನ್ನ ಅವರ ‘ಭಕ್ತ’ರ ಹೆಸರಿನ ಹಿಂದೆ ಸೇರಿಕೊಂಡಿದ್ದ ‘ಚೌಕಿದಾರ’ ಬಿರುದುಬಾವಲಿಗಳು ರೆಕ್ಕೆ ಕಳಚಿಕೊಂಡುಬಿಟ್ಟಿವೆ!
ಈ ಎರಡು ಅಚಾನಕ್ ಬೆಳವಣಿಗೆಗಳ ಪೈಕಿ, ಮೊದಲನೆಯದು; ಮೋದಿ ವರ್ಚಸ್ಸು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕುಸಿದುಬಿದ್ದಿರುವುದು ‘ಟೈಮ್’ ನಿಯತಕಾಲಿಕದ ಮುಖಪುಟ ಸುದ್ದಿಯಿಂದ ಈಗ ಜಗಜ್ಜಾಹೀರಾಗಿದೆ. ಆದರೆ, ಎರಡನೆಯ ಬೆಳವಣಿಗೆ; ಮೋದಿ ಭಕ್ತರ ಚೌಕಿದಾರ ಬಿರುದು ಕಳಚಿಬೀಳುತ್ತಿರುವುದು ಮಾತ್ರ ಸದ್ದಿಲ್ಲದೆ ನಡೆಯುತ್ತಿದೆ.
2015ರಲ್ಲಿ “ವೈ ಮೋದಿ ಮ್ಯಾಟರ್ಸ್” ಎಂಬ ತಲೆಬರಹದಲ್ಲಿ ಪ್ರಧಾನಿ ಮೋದಿ ಕುರಿತು ಮುಖಪುಟ ಲೇಖನ ಪ್ರಕಟಿಸಿದ್ದ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಭಾವಿ ನಿಯತಕಾಲಿಕವಾಗಿರುವ ‘ಟೈಮ್’, ಭಾರತವನ್ನು ವಿಶ್ವ ಶಕ್ತಿಯಾಗಿ ಬೆಳೆಸುವಲ್ಲಿ ಮೋದಿ ಎಂತಹ ಮಹತ್ವದ ಪಾತ್ರ ವಹಿಸಬಹುದು? ಅವರಿಗೆ ಸಿಕ್ಕಿರುವ ಅಪಾರ ಜನಾದೇಶ ಮತ್ತು ಭಾರತದಲ್ಲಿ ಅವರ ಮೇಲಿರುವ ನಂಬಿಕೆ ಹಾಗೂ ಆರ್ಥಿಕವಾಗಿ ಭಾರತ ಕಳೆದ ದಶಕದಲ್ಲಿ ಬೆಳೆದುನಿಂತಿರುವ ಪರಿಯ ಹಿನ್ನೆಲೆಯಲ್ಲಿ ಮೋದಿ ಜಾಗತಿಕ ಮಟ್ಟದಲ್ಲಿ ದೇಶಕ್ಕೆ ಎಂತಹ ಪ್ರಭಾವವನ್ನು ದಕ್ಕಿಸಿಕೊಡಬಹುದು ಎಂಬ ಅಂಶಗಳನ್ನು ಪ್ರಸ್ತಾಪಿಸಿ ‘ಯಾಕೆ ಮೋದಿ ಮಹತ್ವದ ನಾಯಕ’ ಎಂಬ ಬಗ್ಗೆ ವಿಸ್ತೃತ ಲೇಖನ ಪ್ರಕಟಿಸಿತ್ತು.
ಆ ಸಂಚಿಕೆಗೆ ಮೋದಿಯವರ ಫೋಟೋವನ್ನೇ ಮುಖಪುಟಕ್ಕೆ ಹಾಕಿ, ಕವರ್ ಪೇಜ್ ಸ್ಟೋರಿ ಮಾಡಿತ್ತು. ಆಗ ದೇಶದ ಮೋದಿ ‘ಭಕ್ತ’ರು(ಆಗ ಅವರ ಸಂಖ್ಯೆ ಈಗಿನಷ್ಟಿರಲಿಲ್ಲ!) ಮಾತ್ರವಲ್ಲದೆ, ಮೋದಿಯ ಬಗ್ಗೆ ಅಷ್ಟೇನೂ ಒಲವಿಲ್ಲದ, ಕೆಲವು ಆಕ್ಷೇಪಗಳನ್ನು ಹೊಂದಿದ ನಿರ್ಲಿಪ್ತ ಭಾರತೀಯರು ಕೂಡ ಮೋದಿಯವರ ಎದುರು ಇರುವ ಅವಕಾಶ ಮತ್ತು ಸಾಧ್ಯತೆಯ ಹಿನ್ನೆಲೆಯಲ್ಲಿ ಅವರನ್ನು ಮೆಚ್ಚಿಕೊಂಡಿದ್ದರು. ಹೆಮ್ಮೆ ಪಟ್ಟಿದ್ದರು. ಸರಿ ಸುಮಾರು ಅದೇ ಹೊತ್ತಿಗೆ, ಮೋದಿ ಭಕ್ತರು ಎಂದುಕೊಳ್ಳುವ ಮಂದಿ ಮೋದಿ ಅವರನ್ನು ‘ವಿಶ್ವಗುರು’ ಎಂದು ಬಣ್ಣಿಸಿದ್ದರು. ಅದೇ ಭಜನೆಯ ಮಾಧ್ಯಮಗಳು ಕೂಡ ಭಕ್ತರ ಉವಾಚವನ್ನೇ ಪುನರುಚ್ಚರಿಸಿದ್ದವು. ಆ ಮೂಲಕ ಮೋದಿಯವರಿಗೆ ಜಾಗತಿಕ ನಾಯಕನ ಚಹರೆ ಅಂಟಿಸುವ ಪ್ರಯತ್ನ ನಡೆದಿತ್ತು. ಒಟ್ಟಾರೆ, ಅಂದಿನ ಆ ‘ಟೈಮ್’ ಸ್ವತಃ ಮೋದಿಯವರೂ ಸೇರಿದಂತೆ, ಅವರ ‘ಭಕ್ತ’ರು, ಬಿಜೆಪಿ, ಸಂಘಪರಿವಾರ ಮತ್ತು ಅವರ ಸಾಮಾನ್ಯ ಬೆಂಬಲಿಗರ ಪಾಲಿಗೆ ‘ಒಳ್ಳೆಯ ಟೈಮ್’ ಆಗಿತ್ತು.
ಈಗ ನಾಲ್ಕು ವರ್ಷಗಳ ಬಳಿಕ; ಮೋದಿಯವರು ತಮ್ಮ ಆಡಳಿತ ಅವಧಿಯಲ್ಲಿ ದೇಶದ ಒಳಗೆ ಮತ್ತು ಹೊರಗೆ ತಂದಿರುವ ‘ಸುಧಾರಣೆ’, ಬದಲಾವಣೆ ಮತ್ತು ಮುಂದಿನ ಅವಧಿಗೆ ಹುಟ್ಟಿಸಿರುವ ಭರವಸೆಗಳು ಜನರ ಮುಂದಿವೆ. ದೇಶದ ಮತದಾರರ ಮುಂದಿವೆ. ಪ್ರತಿಪಕ್ಷಗಳಂತೆಯೇ, ಮೋದಿಯವರ ಭಜನೆಯನ್ನೇ ವೃತ್ತಿಧರ್ಮ ಮಾಡಿಕೊಂಡಿರುವ ದೇಶದ ಬಹುಸಂಖ್ಯಾತ ಮುಖ್ಯವಾಹಿನಿ ಮಾಧ್ಯಮಗಳ ಮುಂದೆಯೂ ಇದೆ. ಹಾಗೇ ‘ಟೈಮ್’ ನಿಯತಕಾಲಿಕ ಕೂಡ ಈ ನಾಲ್ಕು ವರ್ಷಗಳ ಅವಧಿಯಲ್ಲಿ ಮೋದಿ ಸಾಧನೆಗಳನ್ನು ಗಮನಿಸಿದೆ. ಭಾರತದಂತಹ ಬಹುಭಾಷೆ, ಬಹುಧರ್ಮ, ಬಹುಸಂಸ್ಕೃತಿಯ ಜಾತ್ಯತೀತ, ಪ್ರಜಾಸತ್ತಾತ್ಮಕ ದೇಶವೊಂದರಲ್ಲಿ ಭಾರೀ ಜನಾದೇಶದೊಂದಿಗೆ ಅಧಿಕಾರದ ಕುರ್ಚಿಗೆ ಏರಿದ ನಾಯಕನೊಬ್ಬ ಎಂತಹ ಬದಲಾವಣೆ ತರಬಹುದಿತ್ತು ಮತ್ತು ವಾಸ್ತವವಾಗಿ ಎಂತಹ ಬದಲಾವಣೆ ಆಗಿದೆ ಎಂಬುದನ್ನು ಇತರ ಎಲ್ಲಾ ಸ್ವಸ್ಥ ಮಾಧ್ಯಮಗಳಂತೆ ಅದೂ ಗಮನಿಸಿದೆ. ಹಾಗೇ ತಾನು ನಾಲ್ಕು ವರ್ಷಗಳ ಹಿಂದೆ ಬಿಂಬಿಸಿದ ಭಾರತದ ಪ್ರಭಾವಿ ಪ್ರಧಾನಿ ತನ್ನ ಎದುರಿನ ಜಾಗತಿಕ ಮತ್ತು ದೇಶೀಯ ಅವಕಾಶ ಮತ್ತು ಸಾಧ್ಯತೆಗಳನ್ನು ಹೇಗೆ ಬಳಸಿಕೊಂಡಿದ್ದಾರೆ ಎಂಬುದನ್ನೂ ತುಲನೆ ಮಾಡಿದೆ. ಆ ಹಿನ್ನೆಲೆಯಲ್ಲೇ ಇದೀಗ, ಮೋದಿಯವರ ಕುರಿತ ಮತ್ತೊಂದು ಮುಖಪುಟ ವರದಿ ಪ್ರಕಟಿಸಿದೆ ಮತ್ತು ಅದಕ್ಕೆ “ಇಂಡಿಯಾಸ್ ಡಿವೈಡರ್ ಇನ್ ಚೀಫ್’ ಎಂದು ತಲೆಬರಹ ನೀಡಿದೆ. ಈ ಮುಖಪುಟದಲ್ಲಿಯೂ ಮೋದಿಯವರ ಚಿತ್ರವನ್ನೇ ಪ್ರಕಟಿಸಿದೆ. ಹಿಂದಿನ ಬಾರಿ, ಮೋದಿಯವರ ವ್ಯಕ್ತಿತ್ವವನ್ನು ದೂರದಿಂದ ಗ್ರಹಿಸಿದಂತೆ ಅವರ ಇಡೀ ನಿಲುವಿನ ಚಿತ್ರ ಬಳಸಿದ್ದರೆ, ಈಗ ಸಮೀಪದ ವಿಶ್ಲೇಷಣೆಯಂತೆ ಅವರ ಪೋಟ್ರಾಯ್ಟ್ ಚಿತ್ರವನ್ನು ಬಳಸಿದೆ. ಈ ಚಿತ್ರಗಳ ವ್ಯತ್ಯಾಸ, ಮೋದಿ ಕುರಿತ ವಿಶ್ಲೇಷಣೆಯ ದೃಷ್ಟಿಕೋನದ ಸೂಚಕವೂ ಹೌದು!
ದೇಶದಲ್ಲಿ ಐದು ವರ್ಷಗಳ ಮೋದಿ ಆಡಳಿತ, ಸಮಾಜವನ್ನು ಹೇಗೆ ಧರ್ಮದ ಹೆಸರಿನಲ್ಲಿ ಒಡೆದಿದೆ. ತಮ್ಮನ್ನು ಬೆಂಬಲಿಸದ ತಮ್ಮ ನೀತಿಗಳನ್ನು ಹೊಗಳದ ದೇಶದ ಪ್ರಜೆಗಳನ್ನು ಹೇಗೆ ದೇಶದ್ರೋಹಿಗಳೆಂದು ಬಿಂಬಿಸಲಾಗಿದೆ. ಹಿಂದುತ್ವವಾದಿ ಸಿದ್ಧಾಂತವನ್ನು ಮತ್ತು ದಬ್ಬಾಳಿಕೆಯನ್ನು ಹೇಗೆ ಜನರ ಮೇಲೆ ಹೇರಲಾಗುತ್ತಿದೆ ಮತ್ತು ಅದನ್ನು ವಿರೋಧಿಸುವವರನ್ನು ದೇಶದ ವಿರೋಧಿಗಳೆಂದು ಹೆಸರಿಸಲಾಗುತ್ತಿದೆ, ಹೆದರಿಸಲಾಗುತ್ತಿದೆ ಮತ್ತು ಹತ್ಯೆ ಮತ್ತು ಹಲ್ಲೆಯ ಮೂಲಕ ಬಗ್ಗುಬಡಿಯಲಾಗುತ್ತಿದೆ ಎಂಬ ಹಿನ್ನೆಲೆಯಲ್ಲಿ ‘ಟೈಮ್’ “ಇಂಡಿಯಾಸ್ ಡಿವೈಡರ್ ಇನ್ ಚೀಫ್’ ಎಂಬ ಶೀರ್ಷಿಕೆ ಬಳಸಿದೆ. ಅದು ವಾಸ್ತವ ಕೂಡ.
ಅದರಲ್ಲೂ ಮುಖ್ಯವಾಗಿ ಚುನಾವಣೆಯ ಈ ಬಾರಿಯ ಇಡೀ ಪ್ರಚಾರ ವಾಗ್ವಾದವನ್ನು ಮೋದಿ, ದೇಶ, ದೇಶಭಕ್ತಿ, ಹಿಂದೂ ಹೆಚ್ಚುಗಾರಿಕೆ ವರ್ಸಸ್ ಪಾಕಿಸ್ತಾನ, ದೇಶದ್ರೋಹ, ಮುಸ್ಲಿಂ ಉಗ್ರವಾದದ ಸುತ್ತಲೇ ಕಟ್ಟಿದ್ದಾರೆ. ಆ ಮೂಲಕ ತಮ್ಮ ಪರ ಮತ ಹಾಕದವರೆಲ್ಲಾ ದೇಶ ವಿರೋಧಿಗಳು, ದೇಶದ್ರೋಹಿಗಳು, ದೇಶದ ಹಿತವನ್ನು ಬಲಿಕೊಡುವವರು, ದೇಶದ ಬಗ್ಗೆ ಕಾಳಜಿ ಇಲ್ಲದವರು ಎಂದು ಬಿಂಬಿಸುವ ಪ್ರಯತ್ನ ಮಾಡಿದ್ದಾರೆ. ತಮ್ಮ ಮತ್ತು ತಮ್ಮ ಪಕ್ಷದ ಎದುರಾಳಿ ಪಕ್ಷಗಳು ಮತ್ತು ಆ ಪಕ್ಷಗಳ ನಾಯಕರನ್ನು ಕೂಡ ದೇಶದ ವಿರುದ್ಧ ಇರುವವರು ಎಂದು ಬಿಂಬಿಸುವ ದುಃಸ್ಸಾಹಸ ಕೂಡ ನಡೆದಿದೆ. ಅದಕ್ಕೆ ಕಣ್ಣೆದುರಿನ ನಿದರ್ಶನ ‘ಮೈ ಭೀ ಚೌಕಿದಾರ್’ ಆಂದೋಲನ. ಆ ಘೋಷಣೆಯ ಮೂಲಕ ತಾವು ಮಾತ್ರ ದೇಶರಕ್ಷಕರು, ಉಳಿದವರೆಲ್ಲಾ ದೇಶ ವಿರೋಧಿಗಳು ಎಂಬ ಪರಿಕಲ್ಪನೆ ಬಿತ್ತುವ ಯತ್ನ ನಡೆಯಿತು.
ಮೋದಿ ಅನುಯಾಯಿಗಳು ಎನ್ನಲಾಗುವ ‘ಭಕ್ತ’ರು ಕೂಡ ಮೋದಿ ಮತ್ತು ಅಮಿತ್ ಶಾ ಜೋಡಿಯ ಈ ಘೋಷಣೆಗಳನ್ನು ಪ್ರತಿಧ್ವನಿಸಿದರು. ಚುನಾವಣೆ ಘೋಷಣೆಯ ಹೊತ್ತಿಗೆ ಇಡೀ ದೇಶದ ತುಂಬಾ ‘ನಾನೂ ಚೌಕಿದಾರ’ ಎಂಬ ಘೋಷಣೆ ಬಹುತೇಕ ಜಾಲತಾಣಗಳಲ್ಲಿ ಭರ್ಜರಿ ಸದ್ದು ಮಾಡಿತು. ಆದರೆ, ಒಂದೊಂದೇ ಹಂತದ ಮತದಾನ ಮುಗಿಯತ್ತಲೇ ಅಂತಹ ಘೋಷಣೆಗಳು ನಿಧಾನಕ್ಕೆ ಮರೆಗೆ ಸರಿಯತೊಡಗಿವೆ! ಇದು ಸದ್ದಿಲ್ಲದೆ ನಡೆಯುತ್ತಿರುವ ಬೆಳವಣಿಗೆ!
ವಿದೇಶಿ ಬ್ಯಾಂಕುಗಳಲ್ಲಿ ಕೊಳೆಯುತ್ತಿರುವ ಕಾಳಧನಿಕರ ಕಪ್ಪುಹಣವನ್ನು ವಾಪಸು ತಂದು, ಭಾರತೀಯರೆಲ್ಲರ ಬ್ಯಾಂಕ್ ಖಾತೆಗೆ ತಲಾ 15 ಲಕ್ಷ ಸುರಿಯುತ್ತೇನೆ, ರೈತರ ಆದಾಯವನ್ನು ದುಪ್ಪಟ್ಟು ಮಾಡುವೆ, ಆಡಳಿತದ ಐದು ವರ್ಷದಲ್ಲಿ ಹತ್ತು ಕೋಟಿ ಉದ್ಯೋಗ ಸೃಷ್ಟಿ ಮಾಡುವೆ, ಗಂಗೆಯನ್ನು ಶುದ್ಧೀಕರಿಸಿ ಮತ್ತೆ ಪವಿತ್ರ ಮಾಡುವೆ, ದೇಶವನ್ನು ವಿಶ್ವ ಶಕ್ತಿಯನ್ನಾಗಿ ಮಾಡುವೆ ಸೇರಿದಂತೆ ಮೋದಿಯವರು ನೀಡಿದ ಭರವಸೆಗಳಲ್ಲಿ ಯಾವೊಂದೂ ನಿಜವಾಗಿಲ್ಲ ಮತ್ತು ಆ ಭರವಸೆಗಳಿಗೆ ವ್ಯತಿರಿಕ್ತವಾಗಿ ದೇಶದ ಪರಿಸ್ಥಿತಿ ಮೋದಿ ಆಡಳಿತದ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಇನ್ನಷ್ಟು ಹದಗೆಟ್ಟಿದೆ ಎಂಬುದನ್ನು ಈವರೆಗೆ ವಿರೋಧಪಕ್ಷಗಳು, ಕೆಲವು ನಿಷ್ಪಕ್ಷಪಾತಿ ಮಾಧ್ಯಮ ಹೇಳುತ್ತಿದ್ದವು. ಅದನ್ನು ಆಗ ಭಕ್ತರು ನಂಬುವ ಸ್ಥಿತಿಯಲ್ಲಿರಲಿಲ್ಲ. ಜೊತೆಗೆ ಮೋದಿ ಮತ್ತು ಬಿಜೆಪಿ ಕೂಡ ಜನರ ನಿತ್ಯ ಬದುಕಿನ ಸಂಕಷ್ಟಗಳನ್ನು ಇನ್ನಷ್ಟು ತೀವ್ರಗೊಳಿಸಿದ ತಮ್ಮ ಆಡಳಿತದ ನೋಟು ರದ್ದತಿ, ಜಿಎಸ್ಟಿಯಂತಹ, ಬೆಲೆ ಏರಿಕೆ, ಪೆಟ್ರೋಲ್- ಡೀಸಲ್-ಅಡುಗೆ ಅನಿಲ ದುಬಾರಿ, ರಾಫೇಲ್ ಯುದ್ಧ ವಿಮಾನ ಖರೀದಿ ಹಗರಣದಂತಹ ವಿಷಯಗಳನ್ನು ಮರೆಮಾಚಲು ಪುಲ್ವಾಮಾ ದಾಳಿ, ಬಾಲಾಕೋಟ್ ವಾಯುದಾಳಿ, ದೇಶದ ಗಡಿ ಭದ್ರತೆ, ಸುರಕ್ಷತೆಯಂತಹ ವಿಷಯಗಳನ್ನೇ ಮತ್ತೆ ಮತ್ತೆ ಪ್ರಸ್ತಾಪಿಸಿ, ಜನಸಾಮಾನ್ಯರಲ್ಲಿ ದೇಶಕ್ಕೆ ಏನೋ ಗಂಡಾಂತರ ಬಂದುಬಿಟ್ಟಿದೆ. ಆ ಗಂಡಾಂತರದಿಂದ ಪಾರು ಮಾಡಲು ಮೋದಿ ಮತ್ತೊಮ್ಮೆ ಪ್ರಧಾನಿಯಾಗಲೇಬೇಕು ಎಂಬ ಫೋಬಿಯಾ ಬಿತ್ತುವ ಪ್ರಯತ್ನ ಮಾಡಿದರು. ‘ಭಕ್ತ’ರು ಕೂಡ ಅದನ್ನೇ ಬಡಬಡಿಸಿದರು.
ಆದರೆ, ಮೊದಲ ಮತ್ತು ಎರಡನೇ ಹಂತದ ಚುನಾವಣೆಯಲ್ಲಿ ಬಹುತೇಕ ದಕ್ಷಿಣ ಭಾರತದ ರಾಜ್ಯಗಳಲ್ಲಿ ವ್ಯಕ್ತವಾದ ಜನರ ಭಾವನೆ ಮತ್ತು ಆ ಆಧಾರದಲ್ಲಿ ಹೊರಬಿದ್ದ ಮತಗಟ್ಟೆ ಸಮೀಕ್ಷೆಗಳು ಬೇರೆಯದೇ ಚಿತ್ರಣ ನೀಡಿದವು. ‘ಭಕ್ತ’ರು ಮತ್ತು ಅವರ ‘ಆರಾಧ್ಯ ದೈವ’ ಭಾವಿಸಿದಂತೆ ದೇಶದ ಜನ ಪೂರ್ತಿಯಾಗಿ ತಮ್ಮ ವಿವೇಚನೆ ಕಳೆದುಕೊಂಡಿಲ್ಲ. ಗಡಿ ಕಾಯಲು ದೇಶದ ದಿಟ್ಟ ಯೋಧರಿದ್ದಾರೆ. ಪಾಕಿಸ್ತಾನ ಮತ್ತು ಅದರ ಕುಮ್ಮಕ್ಕಿನ ಉಗ್ರರಿಗೆ ತಕ್ಕ ಪಾಠ ಕಲಿಸಲು ದೇಶದ ಬಲಿಷ್ಠ ಭದ್ರತಾ ವ್ಯವಸ್ಥೆ ಇದೆ. ಯಾರು ಅಧಿಕಾರದಲ್ಲಿರಲಿ, ಇಲ್ಲದೇ ಇರಲಿ ದೇಶದ ಸುಭದ್ರತೆಯ ವಿಷಯದಲ್ಲಿ ಅವರೆಲ್ಲಾ ತಮ್ಮ ಕೆಲಸವನ್ನು ತಮ್ಮ ಪಾಡಿಗೆ ಮಾಡುತ್ತಾರೆ. ಆದರೆ, ದೇಶಕ್ಕೆ ಅನ್ನ ಕೊಡುವ ಕೃಷಿಕ, ವಿವಿಧ ಸೌವಲತ್ತು, ಸಲಕರಣೆ ಕೊಡುವ ಕಾರ್ಮಿಕ, ಸೇವೆ ಕೊಡುವ ನೌಕರ ವರ್ಗ ಸೇರಿದಂತೆ ದೇಶದ ವಿದ್ಯಾರ್ಥಿಗಳು, ಮಹಿಳೆಯರ ಹಿತ ಕಾಯುವ ಮತ್ತು ಅವರ ಹಿತಕ್ಕೆ ಪೂರಕ ವ್ಯವಸ್ಥೆ ನಿರ್ಮಿಸುವ ಹೊಣೆ ಅಧಿಕಾರದ ಸ್ಥಾನದಲ್ಲಿ ಕೂತಿರುವವರದ್ದು. ಆದರೆ, ಮೋದಿ ಅಧಿಕಾರದಲ್ಲಿದ್ದು ಮಾಡಬೇಕಾದ ಆ ಪ್ರಾಥಮಿಕ ಹೊಣೆಗಾರಿಕೆಯಲ್ಲೇ ವಿಫಲರಾಗಿದ್ದಾರೆ ಎಂಬುದು ಜನಸಾಮಾನ್ಯರ ವಿವೇಕಕ್ಕೆ ನಿಲುಕದ್ದೇನಲ್ಲ ಎಂಬ ಸಂಗತಿ ತಡವಾಗಿ ಅರಿವಿಗೆ ಬಂತು.
ಬಿಜೆಪಿ ಸ್ವಂತ ಬಲದ ಮೇಲೆ ಸರ್ಕಾರ ರಚಿಸುವಷ್ಟು ಸ್ಥಾನ ಪಡೆಯುವುದೂ ಅನುಮಾನ ಎಂಬ ಸಮೀಕ್ಷೆಗಳು ಹೊರಬೀಳುತ್ತಲೇ ಎಲ್ಲವೂ ಬದಲಾಗತೊಡಗಿತು. ಹಾಗಾಗಿ, ಪುಲ್ವಾಮಾ, ಬಾಲಾಕೋಟ್ ವಿಷಯಗಳು ಮೋದಿಯವರ ಚುನಾವಣಾ ಪ್ರಚಾರದ ಮಾತುಗಳಿಂದ ನಿಧಾನಕ್ಕೆ ಕಳಚಿಬಿದ್ದವು. ಅಷ್ಟೇ ನಾಜೂಕಾಗಿ ತೆರೆಮರೆಯಲ್ಲಿ ಫೇಸ್ಬುಕ್, ಟ್ವಿಟರ್ ನಂತಹ ಜಾಲತಾಣಗಳಿಂದಲೂ ‘ಚೌಕಿದಾರ್’ ಗರಿ ಕಳಚತೊಡಗಿತು. ಮಾರ್ಚ್- ಏಪ್ರಿಲ್ ನಲ್ಲಿ ‘ಮೈ ಭೀ ಚೌಕಿದಾರ್’ ಎಂದು ಘರ್ಜಿಸುತ್ತಿದ್ದವರೆಲ್ಲಾ ಈಗ ಸದ್ದಿರದೆ ತೆರೆಮರೆಗೆ ಸರಿದಿದ್ದಾರೆ. ಜಾಲತಾಣಗಳಲ್ಲಿ ಸಂಪೂರ್ಣ ‘ಸಹಜ ಸ್ಥಿತಿ’ ನೆಲೆಸಿದೆ!
ಒಟ್ಟಾರೆ, ‘ಟೈಮ್’ ನಿಯತಕಾಲಿಕದ ಮುಖಪುಟದ ‘ಶ್ರೇಯಾಂಕ’ಕ್ಕೆ ಮುನ್ನವೇ ‘ಚೌಕಿದಾರರು’ ಬಸವಳಿದು ಹೋಗಿದ್ದರು. ಜಾಲತಾಣಗಳಲ್ಲಿ ಅಷ್ಟೇ ಅಲ್ಲದೆ, ಸಾರ್ವಜನಿಕವಾಗಿಯೂ ಮೋದಿ ಭಕ್ತರು ಮೌನಕ್ಕೆ ಶರಣಾಗತೊಡಗಿದ ಹೊತ್ತಲ್ಲೇ ಈಗ “ಇಂಡಿಯಾಸ್ ಡಿವೈಡರ್ ಇನ್ ಚೀಫ್’ ಎಂಬ ‘ಟೈಮ್’ ಬಂದಿದೆ. ‘ಕಾಲ’ ಬದಲಾಗುತ್ತಲೇ ಇರುತ್ತದೆ. ಆದರೆ, ಮೋದಿಯವರು ದೇಶದ ಬಡವರು, ರೈತರು, ಕಾರ್ಮಿಕರನ್ನು ತಮ್ಮ ಮೇಲೆ ಇಟ್ಟಿದ್ದ ಭರವಸೆಯನ್ನು ವಿಫಲಗೊಳಿಸಿದ್ದಷ್ಟೇ ಅಲ್ಲ; ಇದೀಗ ಸ್ವತಃ ತಮ್ಮದೇ ‘ಭಕ್ತ’ರು ಇಟ್ಟಿದ್ದ ಭರವಸೆಯನ್ನೂ ವಿಫಲಗೊಳಿಸಿದ್ದಾರೆ. ಹಾಗಾಗಿ, ಈಗ ಕಾಲ ಸಂಪೂರ್ಣ ಬದಲಾಗಿಬಿಟ್ಟಿದೆ!