ಮೇ11. ಇಂದು ಸಾದತ್ ಹಸನ್ ಮಾಂಟೋ ಜನ್ಮ ದಿನ (ಮೇ 11, 1912- ಜನವರಿ 18, 1955) ಭಾರತ-ಪಾಕಿಸ್ತಾನ ಉಪಖಂಡ ಕಂಡಂತಹ ಮಹಾನ್ ಲೇಖಕ ಮಾಂಟೋ. ಭಾರತ- ಪಾಕಿಸ್ತಾನ ವಿಭಜನೆ ಸೃಷ್ಟಿಸಿದ ವಿಲಕ್ಷಣ ಕಥೆಗಾರ ಹಸನ್ ಸಾದತ್ ಮಾಂಟೋ. ವಿಭಜನೆ ಕಾಲದ ಘೋರ ನರಹತ್ಯೆ ಮತ್ತು ಭೀಭತ್ಸಗಳನ್ನು ಮಾಂಟೋನಷ್ಟು ಹರಿತವಾಗಿ ಸಶಕ್ತವಾಗಿ ಬರೆದವರು ಮತ್ತೊಬ್ಬರಿಲ್ಲ. ಮಾಂಟೋ ಅವರಷ್ಟು ಪ್ರಸಿದ್ಧಿ ಪಡೆದ ಉರ್ದು ಕತೆಗಾರರಿಲ್ಲ. ಹಾಗೆಯೇ ಅವರಷ್ಟು ವಿವಾದಕ್ಕೊಳಗಾದವರೂ ಇಲ್ಲ. ’ಅಶ್ಲೀಲ’ ಸಾಹಿತ್ಯ ರಚಿಸಿದ್ದಕ್ಕಾಗಿ ಪಾಕಿಸ್ತಾನ ಸರ್ಕಾರ ಅವರ ವಿರುದ್ಧ ಕೇಸು ದಾಖಲಿಸಿತ್ತು. ಮಾಂಟೋ ತಮ್ಮ ಬದುಕನ್ನೇ ಕತೆಯಾಗಿಸಿದರು. “ನನ್ನ ಅನಿಸಿಕೆಗಳು ಅಕ್ಷರದ ಉಡುಗೆ ತೊಟ್ಟರೂ ಹಸಿಹಸಿಯಾಗಿರುತ್ತವೆ” ಎಂದ ಹೇಳುತ್ತಿದ್ದ ಮಾಂಟೋ ತಮ್ಮ ಹೃದಯದಾಳದ ನೋವು, ತಳಮಳ ಹಾಗೂ ರೋಷವನ್ನು ಕತೆಗಳ ಮೂಲಕ ಹೊರಹಾಕಿದರು. ಅದವರಿಗೆ ಅನಿರ್ವಾವೂ ಆಗಿತ್ತು. ದೇಶವಿಭಜನೆಯ ಕಾಲದಲ್ಲಿ ಮತಾಂಧತೆ ಹಾಗೂ ಅಧಿಕಾರದ ಹಪಾಹಪಿಗಳು ಹುಟ್ಟುಹಾಕಿದ ದುರಂತದಿಂದ ಜನಸಾಮಾನ್ಯರು ಹೇಗೆ ತತ್ತರಿಸಿದರೆಂಬುದನ್ನು ಅವರು ತಮ್ಮ ಬರಹಗಳಲ್ಲಿ ಕಾಣಿಸಿದ್ದಾರೆ.
ದೇಶವಿಭಜನೆ ಮಾಂಟೋನಂತಹ ಸೂಕ್ಷ್ಮ ಮನಸ್ಸಿನ ಮಾನವತಾವಾದಿಯನ್ನು ಸಿಜೋಫ್ರೇನಿಯಾ (ಒಡೆದ ವ್ಯಕ್ತಿತ್ವ) ದಂತಹ ಭಯಂಕರ ಮನೋರೋಗಕ್ಕೆ ದೂಡಿತು. ಮಾಂಟೋ ಅವರು ಭಾರತ ಬಿಟ್ಟು ಪಾಕಿಸ್ತಾನಕ್ಕೆ ಹೋದರೂ ಅತ್ತ ಭಾರತದವರೂ ಆಗದ ಪಾಕಿಸ್ತಾನದವನೂ ಆಗದೆ ಗೊಂದಲದಲ್ಲಿ ಮುಳುಗಿಬಿಟ್ಟಿದ್ದರು. ಅವರ ಪ್ರಸಿದ್ಧ ಕತೆ ತೊ ಬಾಕ್ ತೇ ಸಿಂಗ್ (ಹುಚ್ಚರ ದರ್ಬಾರ್) ಕತೆಯಲ್ಲಿ ಅಂತಿಮವಾಗಿ ಭಾರತಕ್ಕೂ ಸೇರದ ಪಾಕಿಸ್ತಾನಕ್ಕೂ ಸೇರದ ’ನೋ ಮ್ಯಾನ್ ಲ್ಯಾಂಡ್’ ನಲ್ಲಿ ಪ್ರಾಣ ಬಿಡುವ ಹುಚ್ಚನ ಸ್ಥಿತಿಯೇ ಮಾಂಟೋನ ಬದುಕೂ ಆಗಿಬಿಟ್ಟಿತು. ಪಾಕಿಸ್ತಾನ ಸರ್ಕಾರ ಮಾಂಟೋರನ್ನು ಅಕ್ಷರಶಃ ಹುಚ್ಚಾಸ್ಪತ್ರೆಯಲ್ಲಿ ಇಟ್ಟಿತ್ತು. ಅಗಾಧ ಮಾನವಪ್ರೇಮಿ ಪಾಕಿಸ್ತಾನದಲ್ಲಿ ಅನಾಥರಾದರು. ಭಾರತದಲ್ಲೂ ಪರಕೀಯರೆನಿಸಿಕೊಂಡರು.
ರಾಜಕಾರಣ ಹಾಗೂ ಧರ್ಮಗಳು ಹುಟ್ಟಿಸುವ ಕ್ರೌರ್ಯವನ್ನು ಮಾತ್ರ ಮಾಂಟೋ ಕತೆಗಳು ಹೇಳುವುದಿಲ್ಲ. ಅವು ಬದುಕಿನ ಅಪಾರ ಚೆಲುವನ್ನು ಕುರಿತೂ ಹೇಳುತ್ತವೆ. ಇದಕ್ಕೆ ಅವರ ’ಏಜಿದ್’ ಕತೆ ಸಾಕ್ಷಿ.
ದೇಶ ವಿಭಜನೆಯಾಗಿ ಆರು ದಶಕಗಳ ನಂತರವೂ ಮತಾಂಧತೆ, ದೇಶ ದುರಭಿಮಾನಗಳಲ್ಲಿ ಮುಳುಗಿ ಹೋಗಿರುವ ಭಾರತೀಯರು, ಪಾಕಿಸ್ತಾನೀಯರು ಸಾದತ್ ಹಸನ್ ಮಾಂಟೋನನ್ನು ಅವರು ಪ್ರತಿಪಾದಿಸಿದ ದೇಶ-ಧರ್ಮಗಳನ್ನು ಮೀರಿದ ಮಾನವೀಯತೆಗಾಗಿ ನೆನಪಿಸಿಕೊಳ್ಳುವ ಜರೂರಿದೆ
ಮಂಗಳೂರಿನ ಸೂಕ್ಷ್ಮ ಮನಸಿನ ಯುವ ಕವಿ, ಲೇಖಕ, ನ್ಯಾಯವಾದಿ ಪುನೀತ್ ಅಪ್ಪು ಸಾದತ್ ಹಸನ್ ಮಾಂಟೋನನ್ನು ನೆನಪಿಸಿಕೊಂಡಿರುವುದು ಹೀಗೆ
“ದೇಶ ವಿಭಜನೆಯ ಆಘಾತವನ್ನು ತಡೆದುಕೊಳ್ಳಲಾರದೆ ಕೊನೆಯ ಕ್ಷಣದವರೆಗೂ ಭಾರತ ಮತ್ತು ಪಾಕಿಸ್ಥಾನದ ಬಡ, ದಮನಿತ ಮತ್ತು ನಿಕೃಷ್ಟ ಜನರಿಗೋಸ್ಕರ ಮರುಗಿದ, ಭಾರತದ ಕನವರಿಕೆಯಲ್ಲಿಯೇ ಪ್ರಾಣ ತ್ಯಜಿಸಿದ ಮಾಂಟೋ ಬರಿಯ ಕಥೆಗಾರನಲ್ಲ, ಆತನ ಬದುಕೇ ಒಂದು ರೂಪಕ. ಆತನ ಸಾವು ಇನ್ನೂ ವಿಚಿತ್ರ. ಮಾಂಟೋ ಯಾರು ಎಂದು ಯಾರಾದರೂ ಕೇಳಿದರೆ ಮಾಂಟೋ ಅಂದರೆ ಕಳ್ಳಭಟ್ಟಿ ಸಾರಾಯಿ ಎನ್ನಬಯಸುತ್ತೇನೆ. ಮಾಂಟೋನ ಕಥೆಗಳು ಕೂಡಾ ಆ ಸಾರಾಯಿಯಂತೆ ಸುಡುತ್ತಲೇ ಒಳಗಿಳಿಯುತ್ತವೆ. ಆದರೆ ಅದನ್ನು ಮೋಹಿಸಿದವನಿಗೆ ಮಾತ್ರ ಗೊತ್ತು ಅದರ ಮತ್ತು ಮತ್ತು ಗತ್ತು. ಬದುಕಬೇಕೆಂದು ಯಾರೂ ಅದನ್ನು ಕುಡಿಯುವುದಿಲ್ಲ. ಇದು ಸತ್ತವರ ಕಥೆ. ಬದುಕಿದವರು ಕಥೆಯಾಗುವುದಿಲ್ಲ. ನಾನು ಕುಡಿದರೂ ಸಾಯುತ್ತೇನೆ, ಕುಡಿಯದಿದ್ದರೂ ಸಾಯುತ್ತೇನೆ, ಅಮೇರಿಕಾದಿಂದ ಆಮದಾಗುವ ಈ ಗೋದಿಯ ಬೆಲೆ ನೋಡಿದರೆ ಮಾನ ಮರ್ಯಾದೆ ಇಲ್ಲದವರು ಮಾತ್ರ ಬದುಕಲು ಸಾಧ್ಯ ಎಂದಿದ್ದ ಮಾಂಟೋ”.
ಮಾಂಟೋನ ಕೆಲವು ಸಣ್ಣ ಸಾಲುಗಳನ್ನು ಪುನೀತ್ ಅಪ್ಪು ಕನ್ನಡೀಕರಿಸಿದ್ದಾರೆ
ಶಾಶ್ವತ ರಜೆ
.ಗಲಭೆಕೋರರ ಒಂದು ಗುಂಪು ಗಣಿಯತ್ತ ತೆರಳಿತು. ಸಿಕ್ಕಿ ಸಿಕ್ಕಿದವರನ್ನು ಹೊಡೆದು ಸಾಯಿಸ ತೊಡಗಿತು. ಒಬ್ಬ ಕಾರ್ಮಿಕ ಕೂಗಿಕೊಂಡ, ” ಅಯ್ಯೋ ನನ್ನ ಕೊಲ್ಲಬೇಡಿ, ನಾನು ರಜೆಯಲ್ಲಿ ಊರಿಗೆ ತೆರಳುತಿರುವೆ”.
ಪಠಾಣಿಸ್ತಾನ್
ಗಲಭೆಕೋರರ ತಂಡ ಒಬ್ಬನನ್ನು ತಡೆದು ನಿಲ್ಲಿಸಿತು.
“ಏಯ್ ಯಾರು ನೀನು ಇಂದೂವ ಅಥವಾ ಮುಸ್ಲಮೀನಾ”?
ವ್ಯಕ್ತಿ : ” ಹ್ಞಾಂ ಹ್ಞಾ.. ಮುಸ್ಲಮೀನ್ ಮುಸ್ಲಮೀನ್”
ತಂಡ : “ಓಹೋ ಹಾಗಾದರೆ ನಿನ್ನ ಪ್ರವಾದಿ ಯಾರು ಹೇಳು ನೋಡೋಣ”.
ವ್ಯಕ್ತಿ: “ಹ್ಞಾಂ? …. ಮಹಮ್ಮದ್ ಖಾನ್”
ತಂಡ : ” ಸರಿ, ಈತನನ್ನು ಬಿಟ್ಟು ಬಿಡೋಣ”.
ರೇಡಿಯೋ ವಾರ್ತೆ
” ಪಂಜಾಬ್, ಗ್ವಾಲಿಯರ್ ಮತ್ತು ಮುಂಬಯಿಯ ಕೆಲವು ಗಲ್ಲಿಗಳಲ್ಲಿ ಜನರು ಸಿಹಿ ಹಂಚುತ್ತಿದ್ದಾರೆ. ಮಹಾತ್ಮಾ ಗಾಂಧಿಯವರ ಹತ್ಯೆಯಾಗಿದೆ”.
ಮೂರ್ಖ
ಆತನ ಆತ್ಮಹತ್ಯೆಯ ಬಗ್ಗೆ ಆತನ ಸ್ನೇಹಿತ ಹೀಗೆ ಹೇಳಿದ್ದ, ‘ ಎಂತಹಾ ಮೂರ್ಖ! ನಾನು ಅವನಲ್ಲಿ ಹೇಳುತ್ತಲೆ ಇದ್ದೆ, ಆ ಉದ್ದನೆಯ ಗಡ್ಡವನ್ನು ಬೋಳಿಸಿ, ಕೂದಲಿಗೆ ಕತ್ತರಿ ಹಾಕಿದ ಕೂಡಲೇ ಆತನೇನು ಧರ್ಮಭ್ರಷ್ಟನಾಗೋದಿಲ್ಲ. ನಮ್ಮ ಸಚ್ಚೇ ಗುರುವಿಗೆ ಶರಣಾಗಿ ಆತನ ಅನುಗ್ರಹವಿದ್ದರೆ ಆತ ತನ್ನ ಮೊದಲ ಸ್ವರೂಪಕ್ಕೆ ಬದಲಾಗಿ ಬಿಡುತ್ತಿದ್ದ’.
ಧೃಡತೆ
‘ಯಾವ ಕಾರಣಕ್ಕೂ ನಾನು ಸಿಖ್ ಆಗಿ ಮತಾಂತರವಾಗಲಾರೆ, ಮರ್ಯಾದೆಯಿಂದ ನನ್ನ ಕ್ಷೌರಕತ್ತಿ ವಾಪಾಸ್ ಕೊಡಿ’
ಮಾನವೀಯತೆ
‘ ಅಯ್ಯೋ ದಯವಿಟ್ಟು ನನ್ನ ಮಗಳನ್ನು ನನ್ನ ಕಣ್ಣೆದುರಿನಲ್ಲೇ ಕೊಲ್ಲದಿರಿ’.
‘ಸರಿ, ಸರಿ, ಆಕೆಯ ಬಟ್ಟೆ ಬಿಚ್ಚಿ ಓಡಿಸಿ’.
ದೇವರು ದೊಡ್ಡವನು !
ಆ ಸಂಜೆ ಕೊನೆಗೂ ಮುಗಿಯಿತು ಮತ್ತು ಆ ಮುಜ್ರಾ ನರ್ತಕಿಯ ಗಿರಾಕಿಗಳು ಒಬ್ಬೊಬ್ಬರೇ ಮನೆಗೆ ತೆರಳಿದರು.
ಮುಜ್ರಾವನ್ನು ವ್ಯವಸ್ಥೆ ಮಾಡಿದ್ದ ಮುದುಕ ನಿಟ್ಟುಸಿರುಬಿಟ್ಟ, ‘ ಆ ದೇಶದಲ್ಲಿ ಎಲ್ಲವನ್ನೂ ಕಳೆದುಕೊಂಡು ಇಲ್ಲಿಗೆ ಬಂದೆವು, ಆದರೂ ಅಲ್ಲಾಹ್ ಕೈ ಬಿಡಲಿಲ್ಲ. ಕೆಲವೇ ದಿನಗಳಲ್ಲಿ ನಮಗೆ ಒಳ್ಳೆಯ ದಿನಗಳು ಲಭಿಸಿದವು’.
ವಿಶ್ರಾಂತಿ.
‘ನೋಡು ಅವನಿನ್ನೂ ಸತ್ತಿಲ್ಲ. ಜೀವ ಇದ್ದ ಹಾಗೆ ಕಾಣ್ತಾ ಇದೆ’.
‘ ಏಯ್ ಇರ್ಲಿ ಬಿಡೊ, ನನಗೂ ಕೈ ನೋಯ್ತಾ ಇದೆ’.
ನ್ಯಾಯ
‘ನೋಡು ಇದು ಅನ್ಯಾಯ. ಕಾಳಸಂತೆ ಬೆಲೆಯಲ್ಲಿ ಕಳಪೆ ಪೆಟ್ರೋಲ್ ಮಾರಾಟ ಮಾಡಿದ್ದೀಯ ನೀನು, ಒಂದೇ ಒಂದು ಅಂಗಡಿಯನ್ನು ಸುಡೋಕಾಗಿಲ್ಲ’.
ಅದೃಷ್ಟ
‘ಏನ್ ದುರಾದೃಷ್ಟ ನೋಡೋ ನಂದು, ಅಷ್ಟೆಲ್ಲಾ ಕಷ್ಟಪಟ್ಟು ನನಗೆ ಸಿಕ್ಕಿದ್ದು ಈ ಒಂದು ಪೆಟ್ಟಿಗೆ ಮಾತ್ರ…. ಅದರಲ್ಲಿ ಕೂಡಾ ಸಿಕ್ಕಿದ್ದು ಹಂದಿ ಮಾಂಸ’.
ಕೇಳೋರೇ ಇಲ್ಲ
‘ಎಂತಹಾ ದರಿದ್ರ ಜನಗಳಪ್ಪಾ ಇವ್ರು, ಮಸೀದಿಯೊಳಗೆ ಬಿಸಾಡೋಕೆ ಅಂತ ಕಷ್ಟ ಪಟ್ಟು ಒಂದೈವತ್ತು ಹಂದಿಗಳನ್ನು ಕಡ್ದು ಕಾಯ್ತಾ ಇದ್ದೀನಿ, ಒಂದೇ ಒಂದು ಗಿರಾಕಿ ಸಿಗ್ತಾ ಇಲ್ಲ, ಗಡಿಯಾಚೆ ನೋಡು, ಅಲ್ಲಿನ ಜನ ದನದ ಮಾಂಸಕ್ಕೊಸ್ಕರ ಕ್ಯೂ ನಿಂತಿದ್ದಾರೆ, ಇಲ್ಲಿ ಹಂದಿ ಮಾಂಸನ ಕೇಳೋರೇ ಇಲ್ಲ’.
ತಪ್ಪನ್ನು ತಿದ್ದಲಾಯಿತು.
‘ಯಾರಯ್ಯ ನೀನು’
‘ಹರ್ ಹರ್ ಮಹಾದೇವ್, ಹರ್ ಹರ್ ಮಹದೇವ್, ಹರ್ ಹರ್ ಮಹಾದೇವ್’!
‘ನೀನು ಅದೇ ಎಂದು ಹೇಳೋದಕ್ಕೆ ಸಾಕ್ಷಿ ಏನಿದೆ’
‘ನನ್ನ ಹೆಸರು ಧರಮ್ ಚಂದ್’
‘ಅದು ಸಾಕ್ಷಿಯಾಗೋದಿಲ್ಲ’
‘ಸರಿ ಸರಿ, ನನಗೆ ನಾಲಕ್ಕು ವೇದಗಳೂ ಬಾಯಿಪಾಠ ಬರುತ್ತವೆ, ಬೇಕಿದ್ದರೆ ಪರೀಕ್ಷಿಸಿ’
‘ನಮಗೆ ವೇದ ಗೀದ ಎಲ್ಲಾ ಬರೋದಿಲ್ಲ, ಸಾಕ್ಷಿ ಕೊಡು’
‘ಏನೂ?!’
‘ನಿನ್ನ ಪೈಜಾಮ ಕೆಳಗೆ ಮಾಡು’
ಆತ ತನ್ನ ಪೈಜಾಮ ಕೆಳಗೆ ಜಾರಿಸಿದ ತಕ್ಷಣ ಅಲ್ಲೊಂದು ಬೊಬ್ಬೆ ಕೇಳಿಸಿತು,’ಕೊಲ್ಲಿ ಕೊಲ್ಲಿ ಆತನನ್ನು’.
‘ಅಯ್ಯೋ ದಯವಿಟ್ಟು ನಿಲ್ಲಿ, ನಾನು ನಿಮ್ಮ ಸಹೋದರ, ದೇವರಾಣೆಗೂ..’
‘ಹಾಗಾದರೆ ಇದೇನು?’
‘ನಾನು ಹಾದು ಬರಬೇಕಾಗಿದ್ದ ಆ ದಾರಿ ಶತ್ರುಗಳ ನಿಯಂತ್ರಣದಲ್ಲಿತ್ತು, ನಾನು ಮುನ್ನೆಚ್ಚರಿಕೆ ವಹಿಸಬೇಕಾಗಿತ್ತು ಅದಿಕ್ಕೆ ಇದೊಂದೇ ತಪ್ಪು ನಾನು ಮಾಡಿದ್ದು ನಮ್ಮ ಜೀವ ಉಳಿಸುವುದಕ್ಕೋಸ್ಕರ, ಮತ್ತೆಲ್ಲವೂ ಸರಿ ಇದೆ, ಇದೊಂದೇ ತಪ್ಪು ನಾನು ಮಾಡಿದ್ದು’.
‘ಸರಿ, ತಪ್ಪನ್ನು ತಿದ್ದಿ ಬಿಡಿ’.
ಹಾಗೆ, ತಪ್ಪು ನಿವಾರಿಸಲ್ಪಟ್ಟಿತು, ಜೊತೆಗೆ ಧರಮ್ ಚಂದನು ಕೂಡಾ.
— ಮಾಂಟೋನ ‘ಕಹಿ ಹಣ್ಣು‘ ಸಂಕಲನದಿಂದ
ಪುನೀತ್ ಅಪ್ಪು
ಗಮನಿಸಿ: ವಾಟ್ಸಾಪ್ ಮೂಲಕ ಟ್ರೂಥ್ ಇಂಡಿಯಾ ಕನ್ನಡದ ಸುದ್ದಿ/ಅಪ್ಡೇಟ್ ಪಡೆಯಲು 9880456821 ಸಂಖ್ಯೆಗೆ ಸಂದೇಶ ಕಳಿಸಿ