ಭೋಪಾಲ್: ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರು ದೇಶದ ಪ್ರಧಾನಿ ಆಗಿದ್ದ ಸಂದರ್ಭದಲ್ಲಿ ಗುಜರಾತ್ ನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರನ್ನು ಉಚ್ಛಾಟಿಸಲು ತೀರ್ಮಾನಿಸಿದ್ದರು ಎಂಬ ಅಚ್ಚರಿಯ ವಿಷಯವನ್ನು ವಾಜಪೇಯಿ ಆಡಳಿತ ಅವಧಿಯಲ್ಲಿ ಹಣಕಾಸು ಸಚಿವರಾಗಿದ್ದ ಹಿರಿಯ ರಾಜಕಾರಣಿ, ಮಾಜಿ ಬಿಜೆಪಿ ಮುಖಂಡ ಯಶವಂತ್ ಸಿನ್ಹಾ ಬಹಿರಂಗಪಡಿಸಿದ್ದಾರೆ.
ಭೋಪಾಲ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿನ್ಹಾ, ಗೋದ್ರಾ ಗಲಭೆ ಘಟಿಸಿದ ನಂತರ 2002ರಲ್ಲಿ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಗುಜರಾತ್ ನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರನ್ನು ಉಚ್ಛಾಟಿಸಲು ತೀರ್ಮಾನಿಸಿದ್ದರು, ಅದರೆ ಅಂದಿನ ಕೇಂದ್ರ ಗೃಹ ಸಚಿವ ಎಲ್. ಕೆ ಅಡ್ವಾಣಿ ಅವರು ಈ ನಿರ್ಧಾರಕ್ಕೆ ಮುಂದಾದರೆ ಸಂಪುಟದಿಂದ ರಾಜಿನಾಮೆ ನೀಡುವುದಾಗಿ ಬೆದರಿಕೆ ಒಡ್ಡಿದ್ದರಿಂದ ನಿರ್ಧಾರವನ್ನು ತಡೆಹಿಡಿಯಲಾಯಿತು ಎಂದು ಹೇಳಿದ್ದಾರೆ.
“ಗುಜರಾತ್ ನಲ್ಲಿ ಕೋಮುಗಲಭೆ ನಡೆದ ನಂತರ ಅಲ್ಲಿನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ರಾಜಿನಾಮೆ ನೀಡಬೇಕೆಂದು ವಾಜಪೇಯಿ ನಿರ್ಧರಿಸಿದ್ದರು. ಅಲ್ಲದೇ, ಮೋದಿ ರಾಜಿನಾಮೆ ನೀಡಲು ನಿರಾಕರಿಸಿದರೆ ಗುಜರಾತ್ ಸರ್ಕಾರವನ್ನೇ ವಜಾಗೊಳಿಸುವ ನಿರ್ಧಾರ ಕೈಗೊಳ್ಳುವುದಾಗಿ 2002ರಲ್ಲಿ ಗೋವಾದಲ್ಲಿ ನಡೆದ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿ ಸಭೆ ವೇಳೆ ಅಟಲ್ ನಿರ್ಧರಿಸಿಕೊಂಡಿದ್ದರು,” ಎಂದು ಸಿನ್ಹಾ ವಿವರಿಸಿದ್ದಾರೆ.
ನಂತರ ಪಕ್ಷದಲ್ಲಿ ಈ ಬಗ್ಗೆ ಸಭೆ ನಡೆಸಲಾಯಿತು. ನನಗೆ ಲಭಿಸಿರುವ ಮಾಹಿತಿಯಂತೆ ಅಡ್ವಾಣಿ ಅವರು (ಮೋದಿ ಸರ್ಕಾರವನ್ನು ವಜಾಗೊಳಿಸುವುದನ್ನು) ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು ಮತ್ತು ಮೋದಿಯನ್ನು ವಜಾಗೊಳಿಸಿದರೆ ತಾನು ರಾಜಿನಾಮೆ ನೀಡುವುದಾಗಿ ಹೇಳಿದ್ದರು. ಆದ್ದರಿಂದಾಗಿ ವಾಜಪೇಯಿ ನಿರ್ಧಾರವನ್ನು ಹಿಂಪಡೆದರು ನಂತರ ಮೋದಿ ಸರ್ಕಾರವೇ ಗುಜರಾತ್ ನಲ್ಲಿ ಮತ್ತೆ ಮುಂದುವರೆಯಿತು ಎಂದಿದ್ದಾರೆ.
ಪ್ರಧಾನಿ ಮೋದಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ವಿರುದ್ಧ ಮಾಡಿರುವ ಆರೋಪದ ಸುದ್ದಿಗಾರರ ಪ್ರಶ್ನೆಗೆ ಮಾತನಾಡಿದ ಸಿನ್ಹಾ, “ಇದು ವಿಷವಲ್ಲದ ವಿಷಯವನ್ನು ವಿವಾದ ಮಾಡಿರುವುದು. ಈ ಬಗ್ಗೆ ಈಗಾಗಲೇ ನೌಕಾಪಡೆಯ ಅಂದಿನ ಮುಖ್ಯಸ್ಥರು, ಅಧಿಕಾರಿಗಳು ರಿ ಸ್ಪಷ್ಟೀಕರಣ ನೀಡಿದ್ದಾರೆ,” ಎಂದು ತಿಳಿಸಿದ್ದಾರೆ.
“ಈ ರೀತಿ ಸುಳ್ಳು ಹೇಳಿಕೆಗಳನ್ನು ನೀಡುವುದು ಒಬ್ಬ ಪ್ರಧಾನಿಯ ಘನತೆಗೆ ತಕ್ಕುದಲ್ಲ. ಪ್ರಧಾನಿ ಮೋದಿ ನೇತೃತ್ವದ ಸರ್ಕಾರದ ಆಡಳಿತ ಗುಣಮಟ್ಟದ ಮೇಲೆ ಲೋಕಸಭಾ ಚುನಾವಣೆ ನಡೆಯುತ್ತಿದೆಯೇ ಹೊರತು, ದೇಶದ ಇತಿಹಾಸ ಗಮನಿಸಿಯಲ್ಲ,” ಎಂದು ಬಿಜೆಪಿ ಸರ್ಕಾರವನ್ನು ಯಶವಂತ್ ಸಿನ್ಹಾ ಟೀಕಿಸಿದರು.
“ಚುನಾವಣೆ ವೇಳೆ ಪಾಕಿಸ್ತಾನದ ವಿಷಯವನ್ನು ಪ್ರಸ್ತಾಪಿಸುವುದು ಅಸಂಬದ್ಧ. ನಮ್ಮದು ಪಾಕಿಸ್ತಾನದಂಥ ದೇಶಗಳ ವರ್ಗಕ್ಕೆ ಸೇರುವ ದೇಶವೇ?. ಪಾಕಿಸ್ತಾನದ ಬಗ್ಗೆಯೇ ಯಾವಾಗಲೂ ಮಾತಾಡುವುದನ್ನು ಕೇಳಿ ಖುಷಿ ಒಳಗೊಳಗೇ ಪಟ್ಟುಕೊಳ್ಳುವ ಚೀನಾದ ಬಗ್ಗೆ ಯಾಕೆ ಉಸಿರೆತ್ತುವುದಿಲ್ಲ? ಎಂದು ಎಂದು ಸಿನ್ಹಾ ಕಿಡಿಕಾರಿದ್ದಾರೆ. “ಪಾಕಿಸ್ತಾನದ ಬಗ್ಗೆ ಮಾತಾಡಿದಾಗ ಸಿಗುವ ಶಬಾಸ್ ಗಿರಿ ಚೀನಾ ಬಗ್ಗೆ ಆಡಿದರೆ ಸಿಗುವುದಿಲ್ಲ. ಹಾಗಾಗಿ ಯಾವಾಗಲೂ ಪಾಕಿಸ್ತಾನದ ಬಗ್ಗೆ ಮಾತಾಡಿ ಜನರನ್ನು ಮರಳು ಮಾಡಲು ತೊಡಗಿದ್ದಾರೆ” ಎಂದು ಅವರು ಹೇಳಿದ್ದಾರೆ.
ದೇಶದ ಆರ್ಥಿಕತೆಗೆ ಸಂಬಂಧಿಸಿದ ಅಂಕಿ ಅಂಶಗಳೊಂದಿಗೆ “ಮೂರ್ಖತನದ’ ಆಟವಾಡುತ್ತಿರುವ ಪ್ರಧಾನಿ ಬಗ್ಗೆ ಕಿಡಿಕಾರಿರುವ ಮಾಜಿ ಹಣಕಾಸು ಸಚಿವ ಸಿನ್ಹಾ ಈಗಿನ ಮೋದಿ ಸರ್ಕಾರಕ್ಕೆ ಹೋಲಿಸಿದರೆ ಹಿಂದಿನ ಯುಪಿಎ ಸರ್ಕಾರದ ಅವಧಿಯಲ್ಲಿ ಜಿಡಿಪಿ ದತ್ತಾಂಶ ಏರಿಕೆಯಲ್ಲಿತ್ತು ಎಂದಿದ್ದಾರೆ. “
“ಮುಂದೆ ಬರಲಿರುವ ಸರ್ಕಾರಕ್ಕೆ ಹದಗೆಟ್ಟ ಆರ್ಥಿಕ ಪರಿಸ್ಥಿತಿ ಸಿಗಲಿದೆ” ಎಂದೂ ಈ ಅಧಿಕಾರಿಯಾಗಿದ್ದು ರಾಜಕಾರಣಿಯಾಗಿ ಬದಲಾಗಿದ್ದ ರಾಜಕಾರಣಿ ಎಚ್ಚರಿಸಿದ್ದಾರೆ.
ರಾಜಕೀಯ ವಾಗ್ವಾದದ ಭಾಷೆಯನ್ನು ಕೆಳಮಟ್ಟಕ್ಕೆ ಇಳಿಸಿರುವ ಕುರಿತು ಮೋದಿಯನ್ನು ತರಾಟೆಗೆ ತೆಗೆದುಕೊಂಡ ಸಿನ್ಹಾ “ಒಬ್ಬ ಪ್ರಧಾನಿಯಾದವರು ಗೌರವ ಘನತೆಯಿಂದ ಮಾತನಾಡಬೇಕು ಎಂದು ಎಲ್ಲರ ನಿರೀಕ್ಷೆ ಇರುತ್ತದೆ, ಆದರೆ ಅದು ಆಗುತ್ತಿಲ್ಲ” ಎಂದು ಹೇಳಿದ್ದಾರೆ.
ಶಂಕಿತ ಭಯೋತ್ಪಾದಕಿ ಸಾಧ್ವಿ ಪ್ರಗ್ಯಾ ಸಿಂಗ್ ಉಮೇದುವಾರಿಕೆಯನ್ನು ಉಲ್ಲೇಖಿಸಿ ಮಾತಾಡಿರುವ ಯಶವಂತ್ ಸಿನ್ಹಾ ಭೂಪಾಲ್ ಲೋಕಸಭಾ ಕ್ಷೇತ್ರದ ಚುನಾವಣೆ ದೇಶದ ಭವಿಷ್ಯವನ್ನು ನಿರ್ಧರಿಸಲಿದೆ. ಈ ದೇಶ ಸಾಮಾಜಿಕ ಸಹಬಾಳ್ವೆಯನ್ನು ಆಯ್ಕೆ ಮಾಡಿಕೊಳ್ಳಲಿದೆಯೇ ಅಥವಾ ಸಾಮಾಜಿಕ ವಿಭಜನೆಯನ್ನು ಆಯ್ಕೆ ಮಾಡಿಕೊಳ್ಳಲಿದೆಯೇ ಎಂದು ಅಲ್ಲಿ ತೀರ್ಮಾನವಾಗಲಿದೆ ಎಂದು ಅವರು ಹೇಳಿದ್ದಾರೆ.
ಭೂಪಾಲ್ ನಲ್ಲಿ ಕಾಂಗ್ರೆಸ್ ದಿಗ್ಗಜ ದಿಗ್ವಿಜಯ್ ಸಿಂಗ್ ವಿರುದ್ಧ ಬಿಜೆಪಿಯು 7 ಜನರನ್ನು ಕೊಂದು ನೂರು ಜನರನ್ನು ಗಾಯಗೊಳಿಸಿದ್ದ ಮಾಲೆಗಾಂವ್ ಬಾಂಬ್ ಸ್ಫೋಟದ ಪ್ರಮುಖ ಆರೋಪಿ ಬಿಜೆಪಿಯ ಅಭ್ಯರ್ಥಿಯಾಗಿ ಸಾಧ್ವಿಯನ್ನು ಕಣಕ್ಕಿಳಿಸಿದೆ. ಇಲ್ಲಿ ಮೇ 12ರಂದು ಮತದಾನ ನಡೆಯಲಿದೆ.
ಗಮನಿಸಿ: ವಾಟ್ಸಾಪ್ ಮೂಲಕ ಟ್ರೂಥ್ ಇಂಡಿಯಾ ಕನ್ನಡದ ಸುದ್ದಿ/ಅಪ್ಡೇಟ್ ಪಡೆಯಲು 9880456821 ಸಂಖ್ಯೆಗೆ ಸಂದೇಶ ಕಳಿಸಿ