2019ರ ಲೋಕಸಭಾ ಚುನಾವಣೆ ಅನೇಕ ಕುತೂಹಲಕಾರಿ ಸಂಗತಿಗಳಿಗೆ ಸಾಕ್ಷಿಯಾಗಿದೆ. ಇದರಲ್ಲಿ ಎಷ್ಟೋ ಹಿರಿಯ ರಾಜಕಾರಣಿಗಳು ತೆರೆಯ ಹಿಂದೆ ಸರಿದಿದ್ದಾರೆ, ಕೆಲವರನ್ನು ನಾಪತ್ತೆ ಮಾಡಲಾಗಿದೆ, ಇನ್ನೆಷ್ಟೋ ಅನಿರೀಕ್ಷಿತ ವ್ಯಕ್ತಿಗಳು ಹೊಸದಾಗಿ ಕಾಣಿಸಿಕೊಂಡಿದ್ದಾರೆ. ನಾವಿಲ್ಲಿ ಪರಿಚಯಿಸುತ್ತಿರುವುದು ಇಡೀ ದೇಶದಲ್ಲೇ ಅತ್ಯಂತ ವಿಶಿಷ್ಟ ವ್ಯಕ್ತಿತ್ವದ ವ್ಯಕ್ತಿಯೊಬ್ಬರು ಲೋಕಸಭಾ ಚುನಾವಣೆಯ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಸಂಗತಿ.
ಇವರ ಹೆಸರು ಪ್ರಹ್ಲಾದ್ ಸಿಂಗ್ ತಿಪಾಣಿಯಾ. ಮಧ್ಯಪ್ರದೇಶದ ದೇವಾಸ್ ಲೋಕಸಭಾ ಕ್ಷೇತ್ರದ ಮೀಸಲು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ.
ದೇಶದ ಸೂಫಿ ಸಂಗೀತ ಪರಂಪರೆಯ ಬಗೆಗೆ ಪರಿಚಯ ಇರುವವರಿಗೆ ಪ್ರಹ್ಲಾದ್ ಸಿಂಗ್ ತಿಪಾಣಿಯಾ ಚಿರಪರಿಚಿತ. ವಾಸ್ತವದಲ್ಲಿ ಮಧ್ಯಪ್ರದೇಶದ ಮಾಳವಾ ಪ್ರದೇಶದಲ್ಲಿ ತಿಪಾಣಿಯಾ ನಡೆಸುವ ಕಬೀರ ಭಜನೆ ಕಾರ್ಯಕ್ರಮಗಳಲ್ಲಿ ಸಹಸ್ರ ಸಹಸ್ರ ಜನ ನೆರೆಯುತ್ತಾರೆ, ರಾತ್ರಿಯಿಡೀ ಇವರ ಅದ್ಭುತ ಕಂಠದ ಗಾಯನ ಕೇಳುತ್ತಾರೆ. ಆದರೆ ಈ ಜನಪ್ರಿಯತೆ ಇವರನ್ನು ರಾಜಕೀಯವಾಗಿ ಗೆಲ್ಲುವಂತೆ ಮಾಡುತ್ತದೆಯೇ ಎಂಬುದನ್ನು ಖಚಿತವಾಗಿ ಹೇಳಲು ಸಾಧ್ಯವಿಲ್ಲ.
ಇಡೀ ರಾಷ್ಟ್ರದ ರಾಜಕಾರಣ ನೋಡಿದರೆ ದ್ವೇಷ ಕಾರುವ ಮಾತು, ಭಾಷಣ, ಆರೋಪ ಪ್ರತ್ಯಾರೋಪಗಳದ್ದೇ ಸುದ್ದಿ. ಜಾತಿ, ಮತ, ಧರ್ಮದ ಆಧಾರದಲ್ಲಿ ಓಟು ಕೇಳದ ಅಭ್ಯರ್ಥಿಗಳೇ ಇಲ್ಲ ಎನ್ನಬಹುದು. ಇದಕ್ಕೆಲ್ಲ ಅಪವಾದವಾಗಿ ನಿಂತಿರುವುದು ಮಾತ್ರ ನಮ್ಮ ಪ್ರಹ್ಲಾದ್ ಸಿಂಗ್ ತಿಪಾಣಿಯಾ. ಇವರು ವೀರಾವೇಶದ ಮಾತಾಡುತ್ತಿಲ್ಲ, ಸುಳ್ಳು ಪೊಳ್ಳು ಭರವಸೆ ನೀಡುತ್ತಿಲ್ಲ. ಇವರು ತಮ್ಮ ಪ್ರಚಾರ ಭಾಷಣದ ಬದಲು ಪ್ರಚಾರ ಭಜನೆ ಮಾಡುತ್ತಿದ್ದಾರೆ. ಕಬೀರನ ಭಜನೆ.

ನಿಜ ಹೇಳಬೇಕೆಂದರೆ ತಿಪಾಣಿಯಾ ಹಾಡುತ್ತಿರುವ ಈ ಭಜನೆಗಳು ಮೋದಿಯ ದ್ವೇಷದ ಭಾಷಣವನ್ನೂ ಸೋಲಿಸುವಷ್ಟು ತಾಕತ್ತು ಹೊಂದಿವೆ, ಈ ದೇಶದ ಅತ್ಯಂತ ಕಲುಷಿತ ವಾತಾವರಣಕ್ಕೆ ಪರಿಹಾರ ಎನ್ನುವಷ್ಟರ ಮಟ್ಟಿಗೆ ಅವು ಪರಿಣಾಮಕಾರಿಯಾಗಿವೆ.
“ಸದ್ಗುರು (ಸಂತ ಕಬೀರ) ನನಗೆ ರಾಜಕಾರಣದ ಮೂಲಕ ಜನಸೇವೆ ಮಾಡಲು ಅವಕಾಶ ಕಲ್ಪಿಸಿದರೆ ನಾನು ಅದನ್ನು ಮಾಡುತ್ತೇನೆ” ಎನ್ನುವ ತಿಪಾಣಿಯಾ “ಜಾತಿ-ಮತದ ಹೆಸರಲ್ಲಿ ಬಡಿದಾಡುವವರಿಗೆ ಉತ್ತರವಾಗಿ ನಾನು ಕಬೀರನ ದೋಹೆಗಳನ್ನು ನೀಡಲು ಬಯಸುತ್ತೇನೆ” ಎನ್ನುತ್ತಾರೆ.
ಪ್ರಹ್ಲಾದ್ ತಿಪಾಣಿಯಾ ಯಾರು?
ಪದ್ಮವಿಭೂಷಣ ಪ್ರಶಸ್ತಿ ವಿಜೇತ ಪ್ರಹ್ಲಾದ್ ತಿಪಾಣಿಯಾ ದೇಶದ ಒಬ್ಬ ಮಾಂತ್ರಿಕ ಸೂಫಿ ಜಾನಪದ ಗಾಯಕ. 1978ರಲ್ಲಿ ತಮ್ಮ 24ನೇ ವಯಸ್ಸಿನಲ್ಲಿ ಶಾಲಾ ಶಿಕ್ಷಕರಾಗಿದ್ದ ತಿಪಾಣಿಯಾ ತಾವು ಕೇಳಿದ ತಂಬೂರಿ ನಾದ ಮತ್ತು ಕಬೀರನ ದ್ವಿಪದಿಗಳಿಗೆ ಮರುಳಾಗಿ ತಮ್ಮ ಬದುಕನ್ನೇ ಅವುಗಳಲ್ಲಿ ಕಂಡುಕೊಂಡರು. ಇಂದು ಅವರೊಬ್ಬ ಪ್ರಸಿದ್ಧ ಸೂಫಿ ಹಾಡುಗಾರ. ಮಧ್ಯಪ್ರದೇಶದ ಪ್ರಾದೇಶಿಕ ಮಾಳವಿ ಜಾನಪದ ಶೈಲಿಯಲ್ಲಿ ಅವರು ಅನೇಕ ದಶಕಗಳಿಂದ ಹಾಡುವ ಕಬೀರ ದೋಹೆಗಳನ್ನು ಕೇಳಲು ಜನ ಮುಗಿಬೀಳುತ್ತಾರೆ. ಇದುವರೆಗೆ ನೂರಾರು ಕಬೀರನ ಉತ್ಸವಗಳನ್ನು ಅವರು ನಡೆಸಿದ್ದಾರೆ. ಸಾವಿರಾರು ಪ್ರವಚನ ನೀಡಿದ್ದಾರೆ. ಲಕ್ಷಾಂತರ ಜನರಿಗೆ ಜಾತಿ, ಮತ, ದ್ವೇಷ ಮೀರಿ ಬದುಕುವುದನ್ನು ಹೇಳಿಕೊಟ್ಟಿದ್ದಾರೆ.

ಮಾಳ್ವಾದ ಹೊರಗಿನ ಜಗತ್ತಿಗೆ ತಿಪಾಣಿಯಾ ಅವರನ್ನು 2011ರ ಸುಮಾರಿಗೆ ಮತ್ತೊಬ್ಬ ಸೂಫಿ ಗಾಯಕಿ ಹಾಗೂ ಸಾಕ್ಷ್ಯ ಚಿತ್ರ ನಿರ್ಮಾಪಕಿ ಶಬ್ನಂ ವೀರ್ಮಾನಿ ಪರಿಚಯಿಸಿದರು. ಅಯೋಧ್ಯೆಯ ರಾಜಕೀಯ ರಾಮನಿಗೆ ಪರ್ಯಾಯವಾಗಿ ಕಬೀರನ ರಾಮನನ್ನು ಹುಡುಕುತ್ತಾ ಕಬೀರ್ ಪ್ರಾಜೆಕ್ಟ್ ಭಾಗವಾಗಿ ಭಾರತ-ಪಾಕಿಸ್ತಾನಗಳಲ್ಲಿ ಓಡಾಡುವ ಸಂದರ್ಭದಲ್ಲಿ ಶಬ್ನಂಗೆ ತಿಪಾಣಿಯಾ ಪರಿಯವಾಗಿದ್ದರು. ಅವರು ನಿರ್ಮಿಸಿದ ಮೂರು ಸಾಕ್ಷ್ಯಚಿತ್ರಗಳಲ್ಲಿ ತಿಪಾಣಿಯಾ ಮುಖ್ಯವಾಗಿ ಕಾಣಿಸಿಕೊಂಡಿದ್ದಾರೆ. (ಹದ್ ಅನ್ ಹದ್, ಖಡಾ ಕಬೀರ್, ಹಾಗೂ ಅಜಬ್ ಶಹರ್) ಈ ಯೋಜನೆಯ ಭಾಗವಾಗಿಯೇ ತಿಪಾಣಿಯಾ ಅಮೆರಿಕ, ಇಂಗ್ಲೆಂಡ್, ಪಾಕಿಸ್ತಾನಗಳಲ್ಲೆಲ್ಲ ತಮ್ಮ ಕಬೀರ ಯಾತ್ರೆ ನಡೆಸಿದ್ದಾರೆ. ಅವರ ಕೈಯಲ್ಲೊಂದು ತಂಬೂರಿ, ಹಾಗೂ ಜೊತೆಯಲ್ಲಿ ಡೋಲಕ್, ಹಾರ್ಮೊನಿಯಂ, ಟಿಮ್ಕಿ ಮತ್ತು ವಯೊಲಿನ್ ಬಾರಿಸುವ ನಾಲ್ಕು ಜನರ ಒಂದು ಕೋರಸ್ ತಂಡ ಯಾವಾಗಲೂ ಇರುತ್ತದೆ.
ರಾಹುಲ್ ಗಾಂಧಿ ಹಂಚಿಕೊಂಡ ಗಾಯನ
ಮೇ 11ರಂದು ದೇವಾಸ್ ಕ್ಷೇತ್ರದಲ್ಲಿ ಕಾಂಗ್ರೆಸ್ ಮತಪ್ರಚಾರ ಸಭೆಯಲ್ಲಿ ರಾಹುಲ್ ಗಾಂಧಿ ಭಾಗವಹಿಸಿದ್ದರು. ಅಲ್ಲಿ ವೇದಿಕೆಯ ಮೇಲೆ ಪ್ರಹ್ಲಾದ್ ತಿಪಾಣಿಯಾ ಅವರು ಹಾಡಿದ್ದನ್ನು ಸ್ವತಃ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿಡಿಯೋ ಮಾಡಿಕೊಂಡು ಅದನ್ನು ಟ್ವೀಟ್ ಮಾಡಿದ್ದು ವಿಶೇಷವಾಗಿತ್ತು.
I shot this little video of Shri Prahlad Tipaniya, more familiarly known as Sahab Bandgi, our candidate in Devas, MP…
He uses folk songs to connect with the audience and his campaigning style is a treat to watch! pic.twitter.com/BgeMg4BLCm
— Rahul Gandhi (@RahulGandhi) May 11, 2019
ಯೂಟ್ಯೂಬ್ ನಲ್ಲಿ 2016ರಲ್ಲಿ ಭಾರತೀಯ ಚುನಾವಣಾ ಆಯೋಗವು ಮತದಾರರ ಜಾಗೃತಿಗೆ ಪ್ರಹ್ಲಾದ್ ಸಿಂಗ್ ತಿಪಾಣಿಯಾ ಅವರನ್ನು ಬಳಸಿಕೊಂಡಿತ್ತು.
ಪ್ರಹ್ಲಾದ್ ಸಿಂಗ್ ತಿಪಾಣಿಯಾ ಅವರು ಚುನಾವಣೆಯಲ್ಲಿ ವಿಜಯಿಯಾಗುತ್ತಾರೋ ಬಿಡುತ್ತಾರೋ ನಂತರದ ಪ್ರಶ್ನೆ. ಆದರೆ ತಮ್ಮ ಸಾಂಪ್ರದಾಯಿಕ ಹಾಡುಗಾರಿಕೆಯಿಂದ ಹೊರಕ್ಕೆ ನಿಂತು ಸಮಾಜದಲ್ಲಿ ರಾಜಕೀಯ ಹೊಣೆ ಹೊರಲು ಸಿದ್ಧರಾಗಿರುವ ಅವರ ಮಾನಸಿಕ ಸಿದ್ಧತೆ ಶ್ಲಾಘನೀಯ, ಹಾಗೆಯೇ ಇಂತಹ ಸಾಂಸ್ಕೃತಿಕ ವ್ಯಕ್ತಿಯನ್ನು ತಮ್ಮ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿಸಿರುವ ರಾಹುಲ್ ಗಾಂಧಿಯೂ ಈ ಸಂದರ್ಭದಲ್ಲಿ ಅಭಿನಂದನೆಗೆ ಅರ್ಹರು.