ಸಮ್ಮಿಶ್ರ ಸರ್ಕಾರದ ಭವಿಷ್ಯದ ಬಗ್ಗೆ ಇದೀಗ ಮತ್ತೊಮ್ಮೆ ಮಾಧ್ಯಮಗಳಲ್ಲಿ ದಿನಗಣನೆಯ ಸರ್ಕಸ್ ಆರಂಭವಾಗಿದೆ. ಮೇ 23ರ ಲೋಕಸಭಾ ಚುನಾವಣಾ ಫಲಿತಾಂಶದ ಮೇಲೆ ಸರ್ಕಾರದ ಭವಿಷ್ಯ ನಿಂತಿದೆ. “ಆ ಬಳಿಕ ತಮ್ಮದೇ ಸರ್ಕಾರ” ಎಂದು ಬಿಜೆಪಿ ನಾಯಕ ಬಿ ಎಸ್ ಯಡಿಯೂರಪ್ಪ ಅವರ ವಾಡಿಕೆಯ ಮುಹೂರ್ತ ನಿಗದಿಯ ಮಾತು ಒಂದು ಕಡೆಯಾದರೆ, ಮತ್ತೊಂದು ಕಡೆ ದೋಸ್ತಿ ಪಕ್ಷಗಳ ನಡುವಿನ ಬಹಿರಂಗ ಕೆಸರೆರಚಾಟ ಕೂಡ ತಾರಕ್ಕೇರಿದೆ.
ಅದರಲ್ಲೂ ಸಿಎಂ ಕುಮಾರಸ್ವಾಮಿ ಅವರ ‘ಸವಾರಿ ರಾಜಕೀಯ’ ವರಸೆಯ ವಿರುದ್ಧ ಕಾಂಗ್ರೆಸ್ಸಿನ ದೊಡ್ಡ ಬಣ ತಿರುಗಿಬಿದ್ದಿದೆ. ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರ್ಕಾರದ ಕುಂದುಕೊರತೆಗಳನ್ನು ಸರಿಪಡಿಸಿಕೊಂಡು, ಸೂಕ್ತ ಮಾರ್ಗದರ್ಶನದ ಮೂಲಕ ಸರ್ಕಾರವನ್ನು ಮುನ್ನಡೆಸಬೇಕಾದ ಸಮನ್ವಯ ಸಮಿತಿ ಅಧ್ಯಕ್ಷರಾದ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಹೆಸರಿನಲ್ಲಿಯೇ ಈ ಬಂಡಾಯ ಭುಗಿಲೆದ್ದಿರುವುದು ಈ ಬಾರಿಯ ವಿಶೇಷ. ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿಯಾಗಬೇಕು ಎಂಬ ಹಕ್ಕೊತ್ತಾಯದ ಮಾದರಿಯ ಹೇಳಿಕೆಗಳ ಮೂಲಕ ಆರಂಭವಾಗಿರುವ ಈ ಹೊಸ ರಾಜಕೀಯ ಚದುರಂಗದಾಟ ಕೂಡ ಬಹುತೇಕ ಮೇ 23ರ ಹೊತ್ತಿಗೆ ಒಂದು ಕ್ಲೈಮ್ಯಾಕ್ಸ್ ತಲುಪಲಿದೆ. ಇದು ದೋಸ್ತಿ ಸರ್ಕಾರದ ವಿರುದ್ಧದ ದಕ್ಷಿಣದ ದಂಡಯಾತ್ರೆಯ ಕಥೆ.
ಈ ನಡುವೆ, ಉತ್ತರದ ದಂಡಯಾತ್ರೆ ಕೂಡ ಮರಳಿ ಯತ್ನವನ್ನು ಮಾಡುತ್ತಲೇ ಇದೆ. ಈ ಸರ್ಕಾರ ರಚನೆಯಾದ ಆರಂಭದಲ್ಲಿ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ನಡೆದಿದ್ದ ಆ ದಂಡಯಾತ್ರೆ, ಇದೀಗ ಅವರ ಸಹೋದರ ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ಚಾಲನೆಯಲ್ಲಿದೆ ಮತ್ತು ಹಿಂದಿಗಿಂತ ಹೆಚ್ಚು ವ್ಯಾಪಕತೆಯನ್ನು ಪಡೆದುಕೊಂಡಿದೆ ಎಂಬುದು ವಿಶೇಷ.
ಉತ್ತರ ಮತ್ತು ದಕ್ಷಿಣ ದಂಡಯಾತ್ರೆಗಳೆರಡರ ಗುರಿ ಸಿಎಂ ಕುಮಾರಸ್ವಾಮಿಯವರೇ? ಎಂಬ ಪ್ರಶ್ನೆಗೆ ಸರಳ ಉತ್ತರವಿಲ್ಲ. ದಕ್ಷಿಣದ ದಂಡಯಾತ್ರೆಯ ನೇತೃತ್ವ ವಹಿಸಿರುವ ಕೆಲವು ಕಾಂಗ್ರೆಸ್ ಶಾಸಕರು, ಸಿಎಂ ಕುಮಾರಸ್ವಾಮಿ ಅವರು ತಮ್ಮನ್ನು ವಿಶ್ವಾಸಕ್ಕೆ ಪಡೆಯುತ್ತಿಲ್ಲ, ತಮ್ಮ ನಾಯಕ ಸಿದ್ದರಾಮಯ್ಯ ಅವರ ಹಿಂದಿನ ಜನಪರ ಕಾರ್ಯಕ್ರಮಗಳನ್ನು ದುರ್ಬಲಗೊಳಿಸಿದ್ದಾರೆ. ವರ್ಗಾವಣೆ ವಿಷಯದಲ್ಲಿ ತಮ್ಮ ಮಾತು ನಡೆಯುತ್ತಿಲ್ಲ. ತಮ್ಮ ಖಾತೆಗಳಲ್ಲಿ ಜೆಡಿಎಸ್ ನಾಯಕರು ಮೂಗು ತೂರಿಸುತ್ತಿದ್ದಾರೆ ಎಂಬ ಮಾತುಗಳನ್ನು ಆಡುತ್ತಿದ್ದಾರೆ. ಜೊತೆಗೆ ಪ್ರಮುಖವಾಗಿ ಮೈಸೂರು ಮತ್ತು ಮಂಡ್ಯ ಲೋಕಸಭಾ ಕ್ಷೇತ್ರಗಳ ಚುನಾವಣೆ ಈ ದಕ್ಷಿಣ ದಂಡಯಾತ್ರೆಗೆ ವೇಗ ನೀಡಿದೆ ಎಂಬುದು ಜಗಜ್ಜಾಹೀರು.
ಆದರೆ, ರಮೇಶ್ ಜಾರಕಿಹೊಳಿ ನೇತೃತ್ವದ ಉತ್ತರದ ದಂಡಯಾತ್ರೆ ಮಾತ್ರ ಕಾಂಗ್ರೆಸ್ ನಾಯಕತ್ವದ ವಿರುದ್ಧದ ಬಂಡಾಯದ ವಿಪರೀತ ರೂಪ ಎಂಬುದು ಗುಟ್ಟೇನಲ್ಲ. ಹಾಗಾದರೆ ಆ ಕಾಂಗ್ರೆಸ್ ನಾಯಕರು ಯಾರು? ಜಾರಕಿಹೊಳಿ ಸಹೋದರರ ಈ ಬಂಡಾಯಕ್ಕೆ ಮೂಲ ಕಾರಣವೇನು? ಕಾಂಗ್ರೆಸ್ ನಾಯಕತ್ವದ ಯಾವ ನಡೆಗಳು ಬೆಳಗಾವಿಯ ಪ್ರಭಾವಿ ಜಾರಕಿಹೊಳಿ ಕುಟುಂಬವನ್ನು ಸಿಡಿದೇಳುವಂತೆ ಮಾಡಿವೆ? ಎಂಬ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಕೆಲವು ತಿಂಗಳ ಹಿಂದಿನ ಬೆಳಗಾವಿ ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷರ ಚುನಾವಣೆ ಮತ್ತು ಆ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ನಡೆದ ರಾಜಕೀಯ ಸಂಘರ್ಷವನ್ನು ನೆನಪುಮಾಡಿಕೊಳ್ಳಬೇಕಿದೆ.
ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಜಾರಕಿಹೊಳಿ ಕುಟುಂಬಗಳ ನಡುವಿನ ಪ್ರತಿಷ್ಠೆಯ ಬಹಿರಂಗ ಕದನವಾಗಿ ಮಾರ್ಪಟ್ಟಿದ್ದ ಆ ಚುನಾವಣೆಯ ಸಂಘರ್ಷ ದೆಹಲಿಯ ಕಾಂಗ್ರೆಸ್ ಹೈಕಮಾಂಡ್ ವರೆಗೂ ತಲುಪಿತ್ತು. ಕಾಂಗ್ರೆಸ್ ಪ್ರಭಾವಿ ನಾಯಕ ಡಿ ಕೆ ಶಿವಕುಮಾರ್ ಅವರ ಬೆಂಬಲಿಗರಾಗಿರುವ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಸಿದ್ದರಾಮಯ್ಯ ಅವರ ಆಪ್ತರಾಗಿರುವ ಸತೀಶ್ ಜಾರಕಿಹೊಳಿ ನಡುವೆ ಆರಂಭವಾಗಿದ್ದ ಬೆಳಗಾವಿ ಜಿಲ್ಲೆಯ ರಾಜಕೀಯ ಪಾರುಪಥ್ಯದ ಸಂಘರ್ಷ ಕೆಲವು ತಿಂಗಳ ಬಹಿರಂಗ ಹೇಳಿಕೆ- ಪ್ರತಿ ಹೇಳಿಕೆಗಳ ಬಳಿಕ ಪಿಎಲ್ ಡಿ ಬ್ಯಾಂಕ್ ಚುನಾವಣೆಯಲ್ಲಿ ಬೀದಿ ಕಾಳಗವಾಗಿ ಮಾರ್ಪಟ್ಟಿತ್ತು. ತಿಂಗಳುಗಳ ಕಾಲ ರಾಜ್ಯದ ಗಮನಸೆಳೆದಿದ್ದ ಆ ಜಟಾಪಟಿ ವಾಸ್ತವವಾಗಿ ಜಾರಕಿಹೊಳಿ ಸಹೋದರರು ಮತ್ತು ಲಕ್ಷ್ಮೀ ಹೆಬ್ಬಾಳ್ಕರ್ ನಡುವಿನ ವೈಯಕ್ತಿಕ ವ್ಯಾವಹಾರಿಕ ಕಾರಣಗಳಿಂದ ಸ್ಫೋಟಗೊಂಡಿದೆ ಎಂಬ ಮಾತುಗಳಿದ್ದರೂ, ಅದರಾಚೆಗೂ ಅದು ರಾಜ್ಯದ ಕಾಂಗ್ರೆಸ್ ಪಕ್ಷದ ಆಂತರಿಕ ಪ್ರತಿಷ್ಠೆಯ ಮೇಲಾಟದ ಆಯಾಮವನ್ನೂ ಹೊಂದಿತ್ತು ಎಂಬುದು ಈಗ ಹಳೆಯ ಸಂಗತಿ.
ಪ್ರಮುಖವಾಗಿ ಆಗ ಜಾರಕಿಹೊಳಿ ಸಹೋದರರು ಬಹಿರಂಗವಾಗಿ ಕೆಂಡ ಕಾರಿದ್ದು ಸಚಿವ ಡಿ ಕೆ ಶಿವಕುಮಾರ್ ವಿರುದ್ಧವೇ. “ಡಿಕೆಶಿ ಅವರು ಬೆಳಗಾವಿ ರಾಜಕೀಯದಲ್ಲಿ ಕೈ ಹಾಕುತ್ತಿದ್ದಾರೆ. ಅದರಿಂದಾಗಿಯೇ ಈ ಸಂಘರ್ಷ ಉಂಟಾಗಿದೆ. ಅವರ ಕುಮ್ಮಕ್ಕಿನಿಂದಲೇ ಶಾಸಕಿ ಹೆಬ್ಬಾಳ್ಕರ್ ಅವರು ಬೆಳಗಾವಿ ರಾಜಕಾರಣವನ್ನು ತಮ್ಮ ಕೈವಶ ಮಾಡಿಕೊಳ್ಳಲು ಯತ್ನಿಸುತ್ತಿದ್ದಾರೆ. ಆದರೆ, ಅದು ಸಾಧ್ಯವಿಲ್ಲ” ಎಂಬ ಮಾತುಗಳನ್ನು ಸ್ವತಃ ರಮೇಶ್ ಜಾರಕಿಹೊಳಿ ಅವರೇ ಅಂದು ಹೇಳಿದ್ದರು. ಆ ಬಳಿಕ ಡಿ ಕೆ ಶಿವಕುಮಾರ್ ಕೂಡ ರಮೇಶ್ ಮತ್ತು ಸತೀಶ್ ಅವರಿಗೆ ತಿರುಗೇಟು ನೀಡಿದ್ದರು. “ಹೈಕಮಾಂಡ್ ನಿರ್ದೇಶನವಿಲ್ಲದೆ ನಾನು ಯಾರ ವಿಷಯದಲ್ಲೂ ತಲೆ ಹಾಕಲ್ಲ. ಅವರು ದೊಡ್ಡವರು, ಅವರ ವಿಷಯದಲ್ಲಿ ತಲೆ ಹಾಕುವಷ್ಟು ದೊಡ್ಡವನು ನಾನಲ್ಲ” ಎಂದಿದ್ದರು.
ಕೊನೆಗೂ ರಾಜ್ಯ ನಾಯಕರು ಮತ್ತು ದೆಹಲಿ ಮಟ್ಟದ ಮಧ್ಯಪ್ರವೇಶದ ಮೂಲಕ ಬೆಳಗಾವಿಯ ಮೊದಲ ಹಂತದ ಸಂಘರ್ಷ ತಣ್ಣಗಾಗಿತ್ತು.
ಆದರೆ, ಅಷ್ಟರಲ್ಲಿ ಉತ್ತರಕರ್ನಾಟಕದ ಮತ್ತೊಂದು ತುದಿ ಬಳ್ಳಾರಿಯಲ್ಲಿ ಬಂಡಾಯ ಭುಗಿಲೆದ್ದಿತ್ತು. ಅದು ಬಿಡದಿಯ ಈಗಲ್ಟನ್ ರೆಸಾರ್ಟಿನಲ್ಲಿ ಶಾಸಕ ಆನಂದ್ ಸಿಂಗ್ ಮೇಲಿನ ಹಲ್ಲೆ ಘಟನೆ ಮೂಲಕ ಸ್ಫೋಟಗೊಂಡಿತ್ತು. ಬಿಜೆಪಿಯ ಆಪರೇಷನ್ ಕಮಲದಿಂದ ಕಾಂಗ್ರೆಸ್ ಶಾಸಕರನ್ನು ಬಚಾವು ಮಾಡಲು ಸ್ವತಃ ಡಿ ಕೆ ಶಿವಕುಮಾರ್ ಅವರ ನೇತೃತ್ವದಲ್ಲಿ ರೆಸಾರ್ಟ್ ಯಾತ್ರೆಗೆ ಹೋಗಿದ್ದ ಶಾಸಕರಲ್ಲಿ ಬಳ್ಳಾರಿಯ ಆನಂದ್ ಸಿಂಗ್ ಮತ್ತು ಕಂಪ್ಲಿಯ ಗಣೇಶ್ ನಡುವೆ ಹೊಡೆದಾಟದಲ್ಲಿ ಯಾತ್ರೆ ಪರ್ಯಾವಸಾನಗೊಂಡಿತ್ತು. ಆ ಬಳಿಕ ಬಳ್ಳಾರಿ ರಾಜಕಾರಣದಲ್ಲಿ ಡಿ ಕೆ ಶಿವಕುಮಾರ್ ಅವರು ಮೂಗು ತೂರಿಸುತ್ತಿದ್ದಾರೆ ಎಂಬ ದೂರು ಸ್ವತಃ ಬಳ್ಳಾರಿಯ ಕಾಂಗ್ರೆಸ್ ಶಾಸಕರಿಂದಲೇ ಕೇಳಿಬಂದಿತ್ತು. ಅದಾದ ಬಳಿಕ ಬಳ್ಳಾರಿಯ ನಾಗೇಂದ್ರ ಕಾಂಗ್ರೆಸ್ ತೊರೆದು ಬಿಜೆಪಿ ಸೇರಲಿದ್ದಾರೆ ಎಂಬ ವದಂತಿ ದಟ್ಟವಾಗಿತ್ತು.
ಡಿ ಕೆ ಶಿವಕುಮಾರ್ ವಿರುದ್ಧದ ತಮ್ಮ ಸೇಡನ್ನೇ ಮುಂದಿಟ್ಟುಕೊಂಡು ರಮೇಶ್ ಜಾರಕಿಹೊಳಿ, ತಮ್ಮ ಜಿಲ್ಲೆ ಬೆಳಗಾವಿ, ರಾಯಚೂರು, ಬಳ್ಳಾರಿ, ಕೊಪ್ಪಳ ಜಿಲ್ಲೆಗಳ ಕೆಲವು 10ಕ್ಕೂ ಹೆಚ್ಚು ಮಂದಿ ಶಾಸಕರ ಬಣ ಕಟ್ಟಿಕೊಂಡು ಕಾಂಗ್ರೆಸ್ಗೆ ರಾಜೀನಾಮೆ ನೀಡಿ ಬಿಜೆಪಿ ಸೇರುವ ‘ಆಪರೇಷನ್ ಕಮಲ’ದ ನೇತೃತ್ವ ವಹಿಸಿದ್ದರು. ತಮ್ಮೊಂದಿಗೆ ಹತ್ತಕ್ಕೂ ಹೆಚ್ಚು ಶಾಸಕರು ಇದ್ದಾರೆ ಎಂದು ಸ್ವತಃ ರಮೇಶ್ ಜಾರಕಿಹೊಳಿ ಕಾಂಗ್ರೆಸ್ ನಾಯಕತ್ವಕ್ಕೆ ಸವಾಲು ಹಾಕಿದ್ದರು. ಆದರೆ, ಯಡಿಯೂರಪ್ಪ ಅವರ ಆಪರೇಷನ್ ಕಮಲ ಆಮಿಷದ ಆಡಿಯೋ ಬಹಿರಂಗ, ಲೋಕಸಭಾ ಚುನಾವಣಾ ಟಿಕೆಟ್ ಹಂಚಿಕೆ ವಿಷಯದಲ್ಲಿ ಉಂಟಾದ ಗೊಂದಲ ಮತ್ತು ಚುನಾವಣಾ ಫಲಿತಾಂಶದ ವಿಷಯದಲ್ಲಿ ಹುಟ್ಟಿಕೊಂಡ ಹೊಸ ಲೆಕ್ಕಾಚಾರಗಳು ಜಾರಕಿಹೊಳಿ ಆಪ್ತ ಶಾಸಕರಲ್ಲಿ ಕೆಲವರು ಹಿಂಜರಿಯುವಂತೆ ಮಾಡಿದ್ದವು. ಆ ಹಿನ್ನೆಲೆಯಲ್ಲಿ ಲೋಕಸಭಾ ಮತದಾನದ ಮರುದಿನವೇ ಆರಂಭವಾಗಬೇಕಿದ್ದ ರಾಜೀನಾಮೆ ಪ್ರಹಸನಕ್ಕೆ ಸದ್ಯಕ್ಕೆ ಬ್ರೇಕ್ ಬಿದ್ದಿದೆ.
ಬೆಳಗಾವಿ ಮತ್ತು ಬಳ್ಳಾರಿ ಎರಡೂ ಬಂಡಾಯಗಳ ಹಿಂದೆ ಜಾರಕಿಹೊಳಿ ನಾಯಕರೇ ಇದ್ದರೂ, ಅವರು ಕಾಂಗ್ರೆಸ್ ನಾಯಕತ್ವದ ವಿರುದ್ಧದ ಆಕ್ರೋಶದ ಕುದಿಯ ಕೆಂಡವಾಗಿರುವುದು ಡಿ ಕೆ ಶಿವಕುಮಾರ್ ಅವರೇ. ತಮ್ಮ ನುಗ್ಗುವ ಛಾತಿ ಮತ್ತು ಎದೆಗಾರಿಕೆ ಮೂಲಕವೇ ರಾಜಕಾರಣದಲ್ಲಿ ಪ್ರವರ್ಧಮಾನಕ್ಕೆ ಬಂದಿರುವ ಶಿವಕುಮಾರ್, ಕಾಂಗ್ರೆಸ್ ಶಾಸಕರು ಮತ್ತು ಇತರ ನಾಯಕರ ನಡುವಿನ ಪೈಪೋಟಿ, ಪ್ರತಿಸ್ಪರ್ಧೆ ಮತ್ತು ಸಂಷರ್ಘದ ಸಂದರ್ಭದಲ್ಲಿಯೂ ಅದೇ ಛಾತಿಯಿಂದ ‘ಟ್ರಬಲ್ ಶೂಟರ್’ ಆಗಿ ನಿಲ್ಲುತ್ತಿದ್ದಾರೆ. ‘ಹೈಕಮಾಂಡ್ ಆದೇಶದಂತೆ ತಾವು ಪಕ್ಷದ ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷದ ಹಿತದೃಷ್ಟಿಯಿಂದ ಆ ಕೆಲಸ ಮಾಡಿದೆ’ ಎಂದು ಕೂಡ ಅವರು ತಮ್ಮನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ.
ಆದರೆ, ನಿಜವಾಗಿಯೂ ಅವರು ಇತ್ತೀಚಿನ ದಿನಗಳಲ್ಲಿ ಪ್ರಮುಖ ಪಾತ್ರ ವಹಿಸಿರುವ ಬೆಳಗಾವಿ ಮತ್ತು ಬಳ್ಳಾರಿ ರಾಜಕಾರಣದ ವಿಷಯದಲ್ಲಿ ಕಾಂಗ್ರೆಸ್ ಪಾಲಿಗೆ ‘ಟ್ರಬಲ್ ಶೂಟರ್’ ಆಗಿದ್ದಾರೆಯೇ? ಎಂಬ ಪ್ರಶ್ನೆ ಈಗ ಪಕ್ಷದ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಹಾಗೆ, ಲಿಂಗಾಯತ ಪ್ರತ್ಯೇಕ ಧರ್ಮದ ವಿಷಯದಲ್ಲಿ ಕಾಂಗ್ರೆಸ್ ಸರ್ಕಾರದ ನಿಲುವಿನ ವಿಷಯದಲ್ಲಿ ಕಳೆದ ವಿಧಾನಸಭಾ ಚುನಾವಣೆಯ ಬಳಿಕ ಮತ್ತೆ ಚರ್ಚೆಗೆ ಚಾಲನೆ ನೀಡಿದ್ದು ಡಿ ಕೆ ಶಿವಕುಮಾರ್ ಅವರು ಬಳ್ಳಾರಿ ಲೋಕಸಭಾ ಉಪಚುನಾವಣೆಯ ವೇಳೆ ಕ್ಷಮಾಪಣೆ ಕೇಳಿದ ಸಂಗತಿ. ‘ಧರ್ಮ ಒಡೆಯುವ ಕೆಲಸಕ್ಕೆ ಕೈಹಾಕಿದ್ದಕ್ಕಾಗಿ ಪಕ್ಷದ ಪರವಾಗಿ ಮತ್ತು ವೈಯಕ್ತಿಕವಾಗಿ ಕ್ಷಮೆ ಯಾಚಿಸುವುದಾಗಿ’ ಅವರು ನೀಡಿದ ಹೇಳಿಕೆಗೆ ಆಗಲೇ ಉತ್ತರಕರ್ನಾಟಕದ ಪ್ರಭಾವಿ ನಾಯಕ ಹಾಗೂ ಸಚಿವ ಡಾ ಎಂ ಬಿ ಪಾಟೀಲ್ ಹಾಗೂ ಇತರ ನಾಯಕರು ಆಕ್ಷೇಪವೆತ್ತಿದ್ದರು. ಕೆಲ ದಿನಗಳ ಮಟ್ಟಿಗೆ ತಣ್ಣಗಾಗಿದ್ದ ಡಿ ಕೆ ಶಿವಕುಮಾರ್ ಮತ್ತು ಎಂ ಬಿ ಪಾಟೀಲ್ ನಡುವಿನ ಆ ಮುಸುಕಿನ ಗುದ್ದಾಟ, ಇದೀಗ ಲೋಕಸಭಾ ಸಭಾ ಚುನಾವಣಾ ಹೊತ್ತಲ್ಲಿ ಮತ್ತೆ ಸ್ಫೋಟಗೊಂಡಿದೆ. ಪರಸ್ಪರ ಏಕವಚನದಲ್ಲಿ ಮಾಧ್ಯಮಗಳ ಮುಂದೆ ಆಡಿಕೊಳ್ಳುವ ಮಟ್ಟಿಗೆ ಹಿರಿಯ ನಾಯಕರಿಬ್ಬರ ನಡುವಿನ ರಾಜಕೀಯ ಸಂಘರ್ಷ ಬೆಳೆದುನಿಂತಿದೆ.
“ಲಿಂಗಾಯತ ಧರ್ಮದ ವಿಷಯದಲ್ಲಿ ಪಕ್ಷದ ಪರವಾಗಿ ಕ್ಷಮೆ ಯಾಚಿಸಲು ಶಿವಕುಮಾರ್ ಯಾರು” ಎಂಬ ಪಾಟೀಲ್ ಪ್ರಶ್ನೆಯಲ್ಲಿ ಹುರುಳಿಲ್ಲದೇ ಇಲ್ಲ. ಅದೊಂದು ಚುನಾವಣಾ ಹೊತ್ತಿನ ರಾಜಕೀಯ ಅಸ್ತ್ರವೇ ಅಥವಾ ನಿಜವಾಗಿಯೂ ಕಾಂಗ್ರೆಸ್ ಆ ಬಗ್ಗೆ ಪಶ್ಚಾತ್ತಾಪ ಪಟ್ಟಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆ ಹಿನ್ನೆಲೆಯಲ್ಲಿ ಎಂ ಬಿ ಪಾಟೀಲರ ಪ್ರಶ್ನೆಯಲ್ಲೇ, ಡಿ ಕೆ ಶಿವಕುಮಾರ್ ಅವರು ಈ ವಿಷಯದಲ್ಲಿಯೂ ತಮ್ಮ ಎಂದಿನ ಎಗ್ಗಿಲ್ಲದೆ ನುಗ್ಗುವ ವರಸೆ ಪ್ರದರ್ಶಿಸಿದ್ದಾರೆ ಎಂಬ ಸುಳಿವಿದೆ.
ಹಾಗೇ, ಶಿವಕುಮಾರ್ ಅವರು ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಅವರ ಸಚಿವ ಸಂಪುಟದ ಸಹೋದ್ಯೋಗಿಗಳೂ ಸೇರಿದಂತೆ ಹಲವು ಲಿಂಗಾಯತ ನಾಯಕರ ಮುಂದಾಳತ್ವದಲ್ಲಿ ನಡೆದ ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟದ ವಿಷಯದಲ್ಲಿ ಸರ್ಕಾರದ ಮತ್ತು ಕಾಂಗ್ರೆಸ್ ಪಕ್ಷದ ಪರವಾಗಿ ಕ್ಷಮೆ ಕೇಳುವ ಮೂಲಕ, ನೇರವಾಗಿ ಎಂ ಬಿ ಪಾಟೀಲರನ್ನು ಮತ್ತು ಪರೋಕ್ಷವಾಗಿ ಅವರ ನಾಯಕ ಸಿದ್ದರಾಮಯ್ಯ ಅವರನ್ನು ತಪ್ಪಿತಸ್ಥರೆಂದು ಬಿಂಬಿಸುವ ಪ್ರಯತ್ನ ಮಾಡುತ್ತಿದ್ದಾರೆಯೇ? ಎಂಬ ಪ್ರಶ್ನೆಯೂ ಕಾಂಗ್ರೆಸ್ ವಲಯದಲ್ಲಿ ಕೇಳಿಬರತೊಡಗಿದೆ.
ಇದಕ್ಕೆ ಪೂರಕವೆಂಬಂತೆ, ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಡಿ ಕೆ ಶಿವಕುಮಾರ್ ಅವರು, ಸಿಎಂ ಕುಮಾರಸ್ವಾಮಿ ಅವರಿಗೆ ಹೆಚ್ಚು ಆಪ್ತರಾಗಿದ್ದು, ಸಿದ್ದರಾಮಯ್ಯ ಅವರನ್ನು ಮೀರಿಸಿ ಕಾಂಗ್ರೆಸ್ ವಲಯದಲ್ಲಿ ತಮ್ಮ ಪ್ರಭಾವ ವಿಸ್ತರಿಸಿಕೊಳ್ಳುವ ನಿಟ್ಟಿನಲ್ಲಿ ಅವಕಾಶಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಅಂತಹ ಮಹತ್ವಾಕಾಂಕ್ಷೆಯ ಪರಿಣಾಮವಾಗಿಯೇ ಬೆಳಗಾವಿ ಮತ್ತು ಬಳ್ಳಾರಿ ವಿಷಯದಲ್ಲಿ ಸ್ಥಳೀಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ, ಅವರನ್ನು ನಿರ್ಲಕ್ಷಿಸಿ ಮುನ್ನುಗ್ಗಿದರು. ಅಂತಹ ‘ಎಡವಟ್ಟಿನ ಪರಿಣಾಮ’ವೇ ಈಗ ಕಾಂಗ್ರೆಸ್ ಎದುರಿಸುತ್ತಿರುವ ಶಾಸಕರ ಬಂಡಾಯದ ಬಿಕ್ಕಟ್ಟು ಎಂಬ ಅಭಿಪ್ರಾಯಗಳೂ ರಾಜಕೀಯ ಚಿಂತಕರ ನಡುವೆ ಇವೆ.
ಅಲ್ಲದೆ, ಕಳೆದ ಒಂದೆರಡು ವರ್ಷಗಳಿಂದ, ಸ್ವತಃ ಅವರ ಮೇಲಿನ ಇಡಿ ಮತ್ತು ಐಟಿ ದಾಳಿ, ಆ ವೇಳೆ ಸಿಕ್ಕ ಯಡಿಯೂರಪ್ಪ ಅವರದ್ದೆಂದು ಹೇಳಲಾದ ಡೈರಿಯಲ್ಲಿನ ಮಾಹಿತಿ ವಿಷಯದಲ್ಲಿ ಕೂಡ ಡಿ ಕೆ ಶಿವಕುಮಾರ್ ಅವರು ಕಾಂಗ್ರೆಸ್ ಪಕ್ಷದ ಪಾಲಿಗೆ ರಾಷ್ಟ್ರಮಟ್ಟದಲ್ಲಿ ಮುಜುಗರಕ್ಕೆ ಕಾರಣರಾದರು. ಐಟಿ ದಾಳಿ ಮತ್ತು ಅಕ್ರಮ ಆಸ್ತಿಯ ಕುರಿತ ಪ್ರಕರಣದ ಹೊರತಾಗಿಯೂ, ಇಡೀ ದೇಶದ ತುಂಬಾ ಬಿಜೆಪಿಯ ‘ಭ್ರಷ್ಟ ಮುಖ್ಯಮಂತ್ರಿ’ ಎಂದು ಯಡಿಯೂರಪ್ಪ ಅವರ ಹೆಸರು ಹೇಳಿಕೊಂಡು ಕಾಂಗ್ರೆಸ್ ಪ್ರಚಾರ ಮಾಡುತ್ತಿದ್ದರೂ, ಅವರಿಗೆ ಸೇರಿದ್ದು ಎನ್ನಲಾದ ಡೈರಿಯನ್ನು ತಮ್ಮ ಮನೆಯಲ್ಲೇ ಇಟ್ಟುಕೊಂಡಿದ್ದರೂ ಅದನ್ನು ಬಹಿರಂಗಪಡಿಸದೇ ಗುಪ್ತವಾಗಿ ಇಟ್ಟಿದ್ದರು. ಐಟಿ ಇಲಾಖೆ ಬಹಿರಂಗಪಡಿಸಿದ ಬಳಿಕ ಡೈರಿ ವಿಷಯ ಸುದ್ದಿಯಾಯ್ತು. ಆಗ ಯಡಿಯೂರಪ್ಪ ಅದನ್ನು ನಿರಾಕರಿಸಿದರೆ, ತಮ್ಮದೇ ನಾಯಕರು ಅದನ್ನು ಇಷ್ಟು ದಿನ ಮುಚ್ಚಿಟ್ಟದ್ದು ಸ್ವತಃ ಕಾಂಗ್ರೆಸ್ಸಿಗೆ ಇರಿಸುಮುರಿಸು ತರಿಸಿತು.
ಒಟ್ಟಾರೆ, ಬೆಳಗಾವಿ, ಬಳ್ಳಾರಿ ಬಂಡಾಯ, ಲಿಂಗಾಯತ ಪ್ರತ್ಯೇಕ ಧರ್ಮ, ಇಡಿ- ಐಟಿ ದಾಳಿಯಲ್ಲಿ ಸಿಕ್ಕ ಡೈರಿ ವಿಷಯ ಸೇರಿದಂತೆ ಇತ್ತೀಚಿನ ದಿನಗಳಲ್ಲಿ ರಾಜ್ಯ ಕಾಂಗ್ರೆಸ್ ಪಾಲಿಗೆ ಸಾಕಷ್ಟು ತಲೆನೋವಾಗಿರುವ ಮತ್ತು ಆ ಮೂಲಕ ಇದೀಗ ಮೈತ್ರಿ ಸರ್ಕಾರದ ಅಸ್ತಿತ್ವಕ್ಕೇ ಸಂಚಕಾರ ತಂದಿರುವ ಪ್ರಮುಖ ಬಿಕ್ಕಟ್ಟುಗಳ ಹಿಂದೆ ಡಿ ಕೆ ಶಿವಕುಮಾರ್ ಅವರ ಛಾಯೆ ಇದೆ.
ವಿಪರ್ಯಾಸವೆಂದರೆ, ತಾವೇ ಕಾರಣವಾದ ಶಾಸಕರ ಬಂಡಾಯದ ವಿಷಯದಲ್ಲಿ ಶಿವಕುಮಾರ್ ಅವರೇ ಸಂಧಾನಕಾರರಾಗಿ, ಸಂಘರ್ಷ ಶಮನದ ಹೊಣೆಗಾರಿಕೆಯನ್ನೂ ಹೊತ್ತಿದ್ದಾರೆ. ಆ ಮೂಲಕ ‘ಟ್ರಬಲ್ ಶೂಟರ್’ ಎಂಬ ಹೆಗ್ಗಳಿಕೆ ಹೊತ್ತಿದ್ದಾರೆ! ಹಾಗಾಗಿ, ಇದೀಗ ಡಿ ಕೆ ಶಿವಕುಮಾರ್ ಅವರ ವೈಯಕ್ತಿಕ ವರ್ಚಸ್ಸು ವೃದ್ಧಿಸಿರುವ ಅವರ ‘ಟ್ರಬಲ್ ಶೂಟರ್’ ಸಾಹಸಗಳು ನಿಜವಾಗಿಯೂ ರಾಜ್ಯ ಕಾಂಗ್ರೆಸ್ ವರ್ಚಸ್ಸು ವೃದ್ಧಿಸಿವೆಯೇ? ಮತ್ತು ಡಿ ಕೆ ಶಿ ಅವರು ಬಿಂಬಿಸಿಕೊಳ್ಳುತ್ತಿರುವಂತೆ ಅವರು ನಿಜಕ್ಕೂ ಕಾಂಗ್ರೆಸ್ ಪಾಲಿಗೆ ಟ್ರಬಲ್ ಶೂಟರ? ಅಥವಾ ಟ್ರಬಲ್ ಮೇಕರ್ ಆಗಿದ್ದಾರೆಯೇ? ಎಂಬ ಪ್ರಶ್ನೆ ಕೂಡ ಪಕ್ಷದ ಒಂದು ವಲಯದಲ್ಲಿ ಚರ್ಚೆಗೆ ಬಂದಿದೆ.