ಸೀಟು ಹೊಂದಾಣಿಕೆಯಿಂದ ದೂರ ಸರಿದ ಕಾಂಗ್ರೆಸ್ ಮತ್ತು ಆಪ್ ದೆಹಲಿಯಲ್ಲಿ ಬಿಜೆಪಿಯ ಗೆಲುವಿನ ಹಾದಿಯನ್ನು ಸಲೀಸು ಮಾಡಿವೆಯೇ?
ಹೌದು ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು.ಮಾತುಕತೆಗಳು ಮುರಿದು ಬಿದ್ದ ಕಾರಣ ದೇಶದ ರಾಜಧಾನಿಯ ಲೋಕಸಭಾ ಚುನಾವಣೆಗಳಲ್ಲಿ ತ್ರಿಕೋಣ ಸ್ಪರ್ಧೆ ಏರ್ಪಟ್ಟಿದೆ.ಬಿಜೆಪಿ ವಿರೋಧಿ ಮತಗಳು ವಿಭಜನೆಯಾದರೆ ಅದರ ಲಾಭ ಬಿಜೆಪಿಗಲ್ಲದೆ ಇನ್ಯಾರಿಗೆ ಸಿಕ್ಕೀತು? ಆಪ್ ಮತ್ತು ಕಾಂಗ್ರೆಸ್ ಪಕ್ಷದ ಮತಗಳ ಬುಟ್ಟಿ ಒಂದೇ. ಮುಸಲ್ಮಾನರು, ದಲಿತರು, ಕೊಳೆಗೇರಿ ವಾಸಿಗಳು ಹಾಗೂ ಮಧ್ಯಮವರ್ಗ ಮತ್ತು ಕೆಳಮಧ್ಯಮವರ್ಗದ ಒಂದು ಗಣನೀಯ ಭಾಗ ಈ ಎರಡೂ ಪಕ್ಷಗಳ ಬೆಂಬಲ ನೆಲೆ..
ದೆಹಲಿ ಚುನಾವಣೆಯ ಕಣವನ್ನು 2013ರಲ್ಲಿ ಆಪ್ ಪ್ರವೇಶಿಸಿದ ನಂತರ ಕಾಂಗ್ರೆಸ್ ಬೆಂಬಲ ನೆಲೆ ಧ್ವಸ್ತಗೊಂಡಿತ್ತು. ಮೂರು ಅವಧಿಗಳ ಕಾಲ ದೆಹಲಿಯನ್ನು ಆಳಿದ ಕಾಂಗ್ರೆಸ್ 2013ರಲ್ಲಿ ಚುನಾವಣಾ ರಾಜಕಾರಣದ ಗಂಧ ಗಾಳಿಯೇ ಇಲ್ಲದಿದ್ದ ಹೊಸ ಪಕ್ಷವೊಂದಕ್ಕೆ ಸೋತು ಗಂಟು ಮೂಟೆ ಕಟ್ಟಬೇಕಾಯಿತು.
ದೆಹಲಿ ಒಂದು ನಗರ ರಾಜ್ಯ. ಕರಾರುವಾಕ್ಕಾಗಿ ಹೇಳಬೇಕೆಂದರೆ ಮಹಾನಗರ ರಾಜ್ಯ. ಏಳು ಲೋಕಸಭಾ ಸೀಟುಗಳು, ಎಪ್ಪತ್ತು ವಿಧಾನಸಭಾ ಸೀಟುಗಳ ಈ ರಾಜ್ಯ ಅರೆರಾಜ್ಯವೇ ವಿನಾ ಪೂರ್ಣ ರಾಜ್ಯವಲ್ಲ. ಇಲ್ಲಿನ ಪೊಲೀಸ್ ವ್ಯವಸ್ಥೆ ಮತ್ತು ನೆಲದ ಮೇಲಿನ ಅಧಿಕಾರ ಕೇಂದ್ರ ಸರ್ಕಾರದ್ದು. ಉಪರಾಜ್ಯಪಾಲರು ಮುಖ್ಯಮಂತ್ರಿಗಿಂತ ಹೆಚ್ಚು ಅಧಿಕಾರ ಉಳ್ಳ ಪ್ರಭಾವಿ. ರಾಷ್ಟ್ರೀಯ ಸಮೂಹ ಮಾಧ್ಯಮಗಳ ಮುಖ್ಯ ನೆಲೆ ಮತ್ತು ಭಾರತ ಸರ್ಕಾರದ ಶಕ್ತಿಪೀಠ. ಹೀಗಾಗಿ ಇಲ್ಲಿನ ಎಲ್ಲ ವಿದ್ಯಮಾನಗಳೂ ರಾಷ್ಟ್ರೀಯ ಮಹತ್ವ ಪಡೆದು ದೇಶದ ಮೂಲೆ ಮೂಲೆಯನ್ನು ಮುಟ್ಟುತ್ತವೆ. ಹೀಗಾಗಿಯೇ 2013ರಲ್ಲಿ ಆಮ್ ಆದ್ಮಿ ಪಾರ್ಟಿಯ ಉದಯವನ್ನು ಮತ್ತು 2015ರ ಭರ್ಜರಿ ಗೆಲುವನ್ನು ಇಡಿ ದೇಶ ನಿಬ್ಬೆರಗಿನಿಂದ ನೋಡಿತು. ನರೇಂದ್ರ ಮೋದಿಯವರಿಗೆ ಸವಾಲು ಎಸೆಯಬಲ್ಲ ಸಾಮರ್ಥ್ಯವನ್ನೂ ಆರಂಭದಲ್ಲಿ ಕಾಣಲಾಗಿತ್ತು.
2013ರಲ್ಲಿ ಸರಳ ಬಹುತ ಸಿಗದೆ ಕಾಂಗ್ರೆಸ್ ಪಕ್ಷದ ಬಾಹ್ಯ ಬೆಂಬಲದಿಂದ ಆಪ್ ಸರ್ಕಾರ ರಚಿಸಿದ್ದರು ಕೇಜ್ರೀವಾಲ್. ಲೋಕಪಾಲ ಮಸೂದೆಯ ವಿಷಯದಲ್ಲಿ ಕಾಂಗ್ರೆಸ್ ಅಡ್ಡಗಾಲು ಹಾಕುತ್ತಿದೆಯೆಂದು ಆಪಾದಿಸಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊಸ ಜನಾದೇಶ ಕೋರಿದರು. 2014ರ ಲೋಕಸಭಾ ಚುನಾವಣೆಗಳಲ್ಲಿ ದೆಹಲಿಯ ಏಳೂ ಲೋಕಸಭಾ ಸೀಟುಗಳು ಬಿಜೆಪಿಯ ಪಾಲಾಗಿದ್ದವು. ಆಮ್ ಆದ್ಮಿ ಪಾರ್ಟಿಗೆ ಶೇ.33ರಷ್ಟು ವೋಟುಗಳು ಸಿಕ್ಕರೂ ಸೀಟುಗಳು ಕೈ ತಪ್ಪಿದ್ದವು. ಏಳೂ ಕ್ಷೇತ್ರಗಳಲ್ಲಿ ಆಪ್ ಎರಡನೆಯ ಸ್ಥಾನದಲ್ಲಿದ್ದರೆ, ಕಾಂಗ್ರೆಸ್ ದೂರದ ಮೂರನೆಯ ಸ್ಥಾನದ ಅವಹೇಳನವನ್ನು ಸಹಿಸಬೇಕಾಯಿತು.
2015ರ ವಿಧಾನಸಭಾ ಚುನಾವಣೆಯಲ್ಲಿ ಪರಿಸ್ಥಿತಿ ಮತ್ತೆ ತಾರು ಮಾರಾಗಿತ್ತು. ಆಮ್ ಆದ್ಮೀ ಪಾರ್ಟಿ ಭರ್ಜರಿ ಗೆಲುವು ಪಡೆದಿತ್ತು. ಒಟ್ಟು 70 ವಿಧಾನಸಭಾ ಸೀಟುಗಳ ಪೈಕಿ 67ನ್ನು ಗೆದ್ದುಕೊಂಡಿತ್ತು. ಮೋದಿ-ಅಮಿತ್ ಶಾ ಜೋಡಿ ಮೂರೇ ಸೀಟುಗಳ ಅವಮಾನವನ್ನು ನುಂಗಿಕೊಳ್ಳುವಂತಾಯಿತು. 2014ರಲ್ಲಿ ದೆಹಲಿ ಮುಖ್ಯಮಂತ್ರಿ ಕೇಜ್ರೀವಾಲ್ ವಾರಾಣಸಿಯಲ್ಲಿ ಮೋದಿ ವಿರುದ್ಧ ಸ್ಪರ್ಧಿಸಿದ್ದರು. ಅಧಿಕಾರಕ್ಕೆ ಬಂದ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಆಮ್ ಆದ್ಮೀ ಪಾರ್ಟಿಯ ಸರ್ಕಾರದ ವಿರುದ್ಧ ಹಲ್ಲು ಮಸೆಯಿತು. ರಾಗದ್ವೇಷಗಳು ಹದ್ದು ಮೀರಿ ಪರಸ್ಪರರನ್ನು ತಾಕಿ ಘಾಸಿಗೊಳಿಸಿದ್ದವು. ಕೇಜ್ರೀವಾಲ್ ಸರ್ಕಾರದ ಕೈ ಕಾಲು ಕಟ್ಟಿ ಹಾಕಲು ಉಪರಾಜ್ಯಪಾಲರನ್ನು ಎತ್ತಿಕಟ್ಟಿತ್ತು ಮೋದಿ-ಶಾ ಜೋಡಿ. ಘನಘೋರ ಕಾಳಗಗಳು ನ್ಯಾಯಾಲಯದ ಮೆಟ್ಟಿಲು ಹತ್ತಿದ್ದವು. 2013ರಲ್ಲಿ ಪ್ರಧಾನಿ ಹುದ್ದೆಗೆ ಮೋದಿ- ಮುಖ್ಯಮಂತ್ರಿ ಹುದ್ದೆಗೆ ಕೇಜ್ರೀವಾಲ್ ಎಂಬ ಗೋಪ್ಯ ಪ್ರಚಾರ ನಡೆಸಿ ಸೀಟು ಗಳಿಸಿದರೆಂಬ ಆಪಾದನೆಯನ್ನು ಆ ಕಾಲಕ್ಕೆ ಆಪ್ ಹೊತ್ತಿತ್ತು. ಅಂತಹ ಪಕ್ಷ ಇಂದು ಮೋದಿ-ಅಮಿತ್ ಶಾ-ಬಿಜೆಪಿಯ ಕೋಮುವಾದಿ ವಿಭಜಕ ರಾಜಕಾರಣದ ಕಡು ವಿರೋಧಿ.
ತಾನು ಒಂದೊಮ್ಮೆ ಮಹಾನ್ ಭ್ರಷ್ಟ ಪಕ್ಷ ಎಂದು ಕಾಂಗ್ರೆಸ್ಸನ್ನು ಜರೆದು, ಶೀಲಾ ದೀಕ್ಷಿತ್ ಕಡು ಭ್ರಷ್ಟ ಮುಖ್ಯಮಂತ್ರಿ ಎಂದು ಕರೆದಿದ್ದರೂ 2019ರ ಲೋಕಸಭಾ ಚುನಾವಣೆಗಳಲ್ಲಿ ಅದೇ ಪಕ್ಷದ ಜೊತೆಗೆ ಮೈತ್ರಿ ಮಾಡಿಕೊಳ್ಳಲು ಆಪ್ ಹೆಚ್ಚು ಉತ್ಸುಕವಾಗಿತ್ತು. ಸೀಟು ಹೊಂದಾಣಿಕೆಯನ್ನು ದೆಹಲಿಗೆ ಸೀಮಿತಗೊಳಿಸಬೇಕು ಎಂಬುದು ಕಾಂಗ್ರೆಸ್ ಇರಾದೆಯಾಗಿತ್ತು. ಪಂಜಾಬ್-ಹರಿಯಾಣ-ಚಂಡೀಗಢ-ಗೋವಾ ರಾಜ್ಯಗಳಿಗೂ ಹೊಂದಾಣಿಕೆಯನ್ನು ವಿಸ್ತರಿಸಬೇಕು ಎಂಬುದು ಆಪ್ ನಿಲುವಾಗಿತ್ತು. ಎರಡೂ ಪಕ್ಷಗಳು ತಮ್ಮ ಪಟ್ಟುಗಳನ್ನು ಸಡಿಲಿಸಲಿಲ್ಲ. ಮೈತ್ರಿ ಪ್ರಯತ್ನ ಮಣ್ಣುಗೂಡಿತು. ದೆಹಲಿ-ಪಂಜಾಬ್-ಹರಿಯಾಣ-ಚಂಡೀಗಢ- ಗೋವಾದ ಒಟ್ಟು ಲೋಕಸಭಾ ಸೀಟುಗಳು 33. ಮೋದಿ-ಶಾ ಜೋಡಿಯನ್ನು ಹಣಿಯಬೇಕಿದ್ದರೆ ಈ 33 ಸೀಟುಗಳಲ್ಲಿ ಕಾಂಗ್ರೆಸ್- ಆಪ್ ಸೀಟು ಹೊಂದಾಣಿಕೆ ಮಾಡಿಕೊಳ್ಳುವುದು ಅತ್ಯಗತ್ಯ ಎಂಬುದು ಕೇಜ್ರೀವಾಲ್ ಲೆಕ್ಕಾಚಾರವಾಗಿತ್ತು. 2014ರಲ್ಲಿ ಆಪ್ ಗಳಿಸಿದ ಶೇ. 32.9 ಮತ್ತು ಕಾಂಗ್ರೆಸ್ ಗಳಿಸಿದ ಶೇ.15.1ನ್ನು ಕೂಡಿದರೆ ದೊರೆಯುವ ಮೊತ್ತ ಶೇ.48. ಮೋದಿ ಗಾಳಿಯಲ್ಲಿ ಬಿಜೆಪಿ ಗಳಿಸಿದ್ದ ಶೇ.46ಕ್ಕಿಂತ ಶೇ.ಎರಡರಷ್ಟು ಹೆಚ್ಚು.
ದೆಹಲಿಯಲ್ಲಿ ಆಪ್- ಕಾಂಗ್ರೆಸ್ ನಡುವೆ ಸೀಟು ಹೊಂದಾಣಿಕೆಯಾಗಿದ್ದರೆ ಎರಡೂ ಪಕ್ಷಗಳು ಹೆಚ್ಚು ಸೀಟುಗಳನ್ನು ಗೆಲ್ಲಬಹುದಿತ್ತು. ಆದರೆ ದೂರ ಭವಿಷ್ಯದಲ್ಲಿ ಕಾಂಗ್ರೆಸ್ ಮತ್ತಷ್ಟು ಮೂಲೆ ಗುಂಪಾಗಲಿತ್ತು. ಉತ್ತರಪ್ರದೇಶ ಮತ್ತು ಬಿಹಾರದಲ್ಲಿ ಆಗಿರುವಂತೆಯೇ ಅಪ್ರಸ್ತುತ ಆಗಲಿತ್ತು ಎಂಬುದು ದೆಹಲಿಯ ವಿಕಾಸಶೀಲ ಸಮಾಜಗಳ ಅಧ್ಯಯನ ಕೇಂದ್ರದ (ಸಿ.ಎಸ್.ಡಿ.ಎಸ್.) ನಿರ್ದೇಶಕ ಸಂಜಯಕುಮಾರ್ ಅನಿಸಿಕೆ.
ಈ ಬಾರಿ ಆಪ್ ಮೈತ್ರಿಯನ್ನು ಒಪ್ಪಿಕೊಂಡರೆ ತಾನು ದೆಹಲಿಯಲ್ಲಿ ಈಗಾಗಲೆ ಕುಸಿದಿರುವ ಮೂರನೆಯ ಸ್ಥಾನವನ್ನು ಸದಾ ಕಾಲಕ್ಕೆ ಒಪ್ಪಿಕೊಂಡಂತೆ. ಅದರ ಬದಲು ಸ್ವತಂತ್ರ ಅಸ್ತಿತ್ವ ಉಳಿಸಿಕೊಂಡು, ಆಪ್ ಪ್ರವೇಶಕ್ಕೆ ಮುನ್ನ ತಾನು ಗಳಿಸಿದ್ದ ಬಲಾಢ್ಯ ಸ್ಥಾನವನ್ನು ಪುನಃ ಕೈವಶ ಮಾಡಿಕೊಳ್ಳಬೇಕು ಎಂಬುದು ಕಾಂಗ್ರೆಸ್ ಇರಾದೆ. 2017ರಲ್ಲಿ ದೆಹಲಿಯ ನಗರ ನಿಗಮ ಚುನಾವಣೆಗಳಲ್ಲಿ ತಾನು ಕಂಡ ಚೇತರಿಕೆ ಮತ್ತು 2018ರಲ್ಲಿ ಮಧ್ಯಪ್ರದೇಶ, ರಾಜಸ್ತಾನ ಹಾಗೂ ಛತ್ತೀಸಗಢ ವಿಧಾನಸಭಾ ಚುನಾವಣೆಗಳಲ್ಲಿ ಗಳಿಸಿದ ಗೆಲುವು ಹಾಗೂ 2020ರಲ್ಲಿ ನಡೆಯುವ ದೆಹಲಿ ವಿಧಾನಸಭಾ ಚುನಾವಣೆಯು ಈ ಇರಾದೆಯನ್ನು ಮತ್ತಷ್ಟು ಗಟ್ಟಿಗೊಳಿಸಿದಂತಿದೆ. ಹೀಗಾಗಿಯೇ ದೆಹಲಿಯ ಲೋಕಸಭಾ ಚುನಾವಣೆಯನ್ನು ಕಾಂಗ್ರೆಸ್ ಗಂಭೀರವಾಗಿ ಪರಿಗಣಿಸಿದೆ. ತನ್ನ ಹೇಮಾಹೇಮಿ ಉಮೇದುವಾರರನ್ನು ಕಣಕ್ಕೆ ಇಳಿಸಿದೆ. ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್, ದೊಡ್ಡ ಕುಳ ಅಜಯ್ ಮಾಕನ್, ದೆಹಲಿ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಜೆ.ಪಿ.ಅಗರವಾಲ್, ವಿಖ್ಯಾತ ಬಾಕ್ಸಿಂಗ್ ಪಟು ವಿಜೇಂದರ್ ಸಿಂಗ್ ಹಾಗೂ ಮಾಜಿ ಮಂತ್ರಿ ಅರವಿಂದರ್ ಸಿಂಗ್ ಲವ್ಲೀ ಅವರನ್ನು ಹೂಡಿದೆ. ಬಿಜೆಪಿ, ತನ್ನ ಏಳು ಮಂದಿ ಸಂಸದರ ಪೈಕಿ ಐವರನ್ನು ಪುನಃ ಕಣಕ್ಕೆ ಇಳಿಸಿದೆ. ಮಾಜಿ ಕ್ರಿಕೆಟ್ ತಾರೆ ಗೌತಮ್ ಗಂಭೀರ್ ಮತ್ತು ಪ್ರಸಿದ್ಧ ಪಂಜಾಬಿ ಗಾಯಕ ಹನ್ಸ್ ರಾಜ್ ಹನ್ಸ್ ಈ ಪಕ್ಷದ ಹೊಸ ಮುಖಗಳು. ಇತ್ತ ಮಾಯಾವತಿ ಅವರೂ ಬಹುಜನ ಸಮಾಜ ಪಕ್ಷದ ಅಭ್ಯರ್ಥಿಗಳನ್ನು ಎಲ್ಲ ಕ್ಷೇತ್ರಗಳಲ್ಲಿಯೂ ಹೂಡಿದ್ದಾರೆ. ಪರಿಣಾಮವಾಗಿ ಬಿಜೆಪಿ ವಿರೋಧಿ ಮತಗಳು ಹಂಚಿ ಹೋಗುವ ವ್ಯಾಪ್ತಿ ಮತ್ತಷ್ಟು ವಿಸ್ತರಿಸಿದೆ. ಈ ಎಲ್ಲ ವಿದ್ಯಮಾನವನ್ನು ಮೀರಿ ಆಪ್ ಮತ್ತು ಕಾಂಗ್ರೆಸ್ ಸೀಟುಗಳನ್ನು ಗೆಲ್ಲಬೇಕಿದ್ದರೆ ಮೋದಿ ಜನಪ್ರಿಯತೆ ಮತ್ತು ಮತಗಳಿಕೆ ಸಾಮರ್ಥ್ಯ ಗಣನೀಯವಾಗಿ ಕುಸಿಯಬೇಕು. 1999 ಮತ್ತು 2004ರ ನಡುವೆ ದೆಹಲಿಯಲ್ಲಿ ಬಿಜೆಪಿಯ ಮತಗಳಿಕೆ ಪ್ರಮಾಣದಲ್ಲಿ ಶೇ.10ರಷ್ಟು ಕುಸಿತ ಕಂಡು ಬಂದಿದೆ. ಅಂತಹ ವಿದ್ಯಮಾನ ಮತ್ತೊಮ್ಮೆ ಈ ಬಾರಿ ಜರುಗುವ ಬಹಿರಂಗ ಸೂಚನೆ ಈವರೆಗೆ ಗೋಚರ ಆಗಿಲ್ಲ. ಒಳಸುಳಿಯೇನಾದರೂ ಇದ್ದರೆ ತಿಳಿದುಕೊಳ್ಳಲು ಮೇ 23ರ ತನಕ ಕಾಯದೆ ವಿಧಿಯಿಲ್ಲ.
ಕಳೆದ ಒಂದೆರಡು ದಶಕಗಳಲ್ಲಿ ದೆಹಲಿಯ ಮತದಾರ ಸಮೂಹದಲ್ಲಿ ಕೆಲವು ಬದಲಾವಣೆಗಳು ಜರುಗಿವೆ. ಬನಿಯಾಗಳು ಎಂದು ಕರೆಯಲಾಗುವ ವ್ಯಾಪಾರಿ ವರ್ಗ ಮತ್ತು ಬಹುಪಾಲು ಪಂಜಾಬಿಗಳು ಅನೂಚಾನವಾಗಿ ಬಿಜೆಪಿ ಬೆಂಬಲಿಗರು. ಪೂರ್ವ ಉತ್ತರಪ್ರದೇಶ ಮತ್ತು ಪಶ್ಚಿಮ ಬಿಹಾರ ಸೇರಿ ರೂಪುಗೊಳ್ಳುವ ‘ಪೂರ್ವಾಂಚಲ’ ಸೀಮೆಯಿಂದ ವಲಸೆ ಬಂದು ನೆಲೆಸಿರುವ ಪೂರ್ವಾಂಚಲಿಗಳು ದೆಹಲಿ ಚುನಾವಣೆಯ ಸೋಲು ಗೆಲುವಿನ ತಕ್ಕಡಿಯನ್ನು ತಮಗೆ ಬೇಕಾದ ಕಡೆ ತೂಗಿಸುವ ನಿರ್ಣಾಯಕ ಶಕ್ತಿಯಾಗಿ ಹೊರಹೊಮ್ಮಿದ್ದಾರೆ. ದೆಹಲಿಯ ಜನಸಂಖ್ಯೆ ಎರಡು ಕೋಟಿ. ಈ ಪೈಕಿ ಮೂರನೆಯ ಒಂದರಷ್ಟು ಜನ ಪೂರ್ವಾಂಚಲಿಗಳು. ಹೀಗಾಗಿಯೇ ಬಿಜೆಪಿ ಪೂರ್ವಾಂಚಲಿಯೂ ಆಗಿರುವ ತನ್ನ ಸಂಸದ-ಚಿತ್ರನಟ- ಹಾಡುಗಾರ ಮನೋಜ್ ತಿವಾರಿಯನ್ನು ದೆಹಲಿ ಪ್ರದೇಶ ಅಧ್ಯಕ್ಷನನ್ನಾಗಿ ಮುಂದೆ ಮಾಡಿದೆ.
ಹೊಂದಾಣಿಕೆಯಿಂದ ಹಿಂದೆ ಸರಿದು ಬಿಜೆಪಿಯ ಗೆಲುವನ್ನು ಬಯಸಿದೆ ಎಂಬ ಆಪಾದನೆಯನ್ನು ಆಮ್ ಆದ್ಮಿ ಪಾರ್ಟಿಯು ಕಾಂಗ್ರೆಸ್ ಮೇಲೆ ಹೊರಿಸಿದೆ. ಶಿಕ್ಷಣ, ಆರೋಗ್ಯ ಹಾಗೂ ನೀರು ಪೂರೈಕೆಯಲ್ಲಿ ಉತ್ತಮ ಸಾಧನೆ ಮಾಡಿರುವ ಆಪ್ ಸರ್ಕಾರ ಈ ಬಾರಿ ದೆಹಲಿಗೆ ಸಂಪೂರ್ಣ ರಾಜ್ಯದ ಸ್ಥಾನಮಾನ ನೀಡಬೇಕೆಂಬುದನ್ನು ಮುಖ್ಯ ವಿಷಯವಾಗಿ ಮುಂದಿಟ್ಟು ಜನಾದೇಶ ಕೋರಿದೆ. 2014ರಲ್ಲಿ ಏಳೂ ಕ್ಷೇತ್ರಗಳಲ್ಲಿ ಎರಡನೆಯ ಸ್ಥಾನದಲ್ಲಿದ್ದ ಸಂಗತಿ ಈ ಪಕ್ಷದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ.
ಈ ನಡುವೆ ದೆಹಲಿ ಉತ್ತರ ಕ್ಷೇತ್ರದಲ್ಲಿ ಆಮ್ ಆದ್ಮಿ ಪಾರ್ಟಿಯ ಪ್ರತಿಭಾವಂತ ಯುವ ಚಹರೆ ಆತಿಶಿ ಮಾರ್ಲೇನ ಮತ್ತು ಬಿಜೆಪಿಯ ಗೌತಮ್ ಗಂಭೀರ್ ನಡುವಣ ಪೈಪೋಟಿ ಮೊನ್ನೆ ವಿಕೃತ ತಿರುವು ಪಡೆಯಿತು ಚುನಾವಣಾ ರಾಜಕೀಯದ ಹೊಸ ಪಾತಾಳಕ್ಕೆ ಕುಸಿಯಿತು.. ಪುರುಷಾಧಿಪತ್ಯದ ಮನುವಾದಿ ಮನಸ್ಥಿತಿಗೆ ಕನ್ನಡಿ ಹಿಡಿದಂತಿರುವ ಅನಾಮಧೇಯ ಪತ್ರವೊಂದರಲ್ಲಿ ಆತಿಶಿ ಅವರನ್ನು ವೇಶ್ಯೆ, ಗೋಮಾಂಸ ಭಕ್ಷಕ ಕ್ರೈಸ್ತನ ಪತ್ನಿ, ಕೇಜ್ರೀವಾಲ್ ಮತ್ತು ಮನೀಶ್ ಸಿಸೋಡಿಯಾ ಅವರ ಪರ ಲಂಚದ ಹಣ ಸಂಗ್ರಹಿಸುವಾಕೆ, ತಂದೆ ಜಾಟ್ (ಒಕ್ಕಲಿಗ), ತಾಯಿ ಪಂಜಾಬಿ ಹಾಗೂ ಗಂಡ ಕ್ರೈಸ್ತನಾಗಿರುವ ಮಿಶ್ರತಳಿಯ ಮಾದರಿ ಎಂದೆಲ್ಲ ಕೀಳು ಆಪಾದನೆಗಳನ್ನು ಮಾಡಲಾಗಿದೆ. ಸಿಸೋಡಿಯ ಇಟ್ಟುಕೊಂಡಿರುವ ಈ ವೇಶ್ಯೆಗೆ ಮತ ನೀಡದಿರಿ ಎಂದು ಮತದಾರರನ್ನು ಕೋರಿರುವ ಕರಪತ್ರವಿದು. ಸಿಸೋಡಿಯಾ ಕಂಜರ್ ಪರಿಶಿಷ್ಟ ಜಾತಿಯವರಾಗಿದ್ದರೂ ಸುಂದರವಾಗಿದ್ದಾರೆ. ಅದರ ಅರ್ಥ ಅವರ ತಾಯಿ ಮೇಲ್ಜಾತಿಯ ಗಂಡಸಿನೊಂದಿಗೆ ಕೂಡಿ ಹುಟ್ಟಿಸಿರಬೇಕು. ಇಲ್ಲವಾದರೆ ಪರಿಶಿಷ್ಟ ಜಾತಿಯವರು ಸುಂದರವಾಗಿರುವುದು ಹೇಗೆ ಸಾಧ್ಯ ಎಂದೂ ಈ ಪತ್ರದಲ್ಲಿ ಬರೆಯಲಾಗಿದೆ. ಈ ಪತ್ರದ ಹಿಂದೆ ಗೌತಮ್ ಗಂಭೀರ್ ಕೈವಾಡ ಇದೆಯೆಂಬುದು ಆಪ್ ಆರೋಪ. ತಮ್ಮ ಕೈವಾಡ ಇರುವುದು ನಿಜವಾದಲ್ಲಿ ಸಾರ್ವಜನಿಕವಾಗಿ ನೇಣುಗಂಬ ಏರಲು ತಾವು ತಯಾರು ಎಂದಿರುವ ಗಂಭೀರ್, ಆಪಾದನೆ ಸುಳ್ಳಾದರೆ ಕೇಜ್ರೀವಾಲ್ ರಾಜಕೀಯ ತೊರೆಯುವರೇ ಎಂದು ಸವಾಲು ಹಾಕಿದ್ದಾರೆ.
ಗಮನಿಸಿ: ವಾಟ್ಸಾಪ್ ಮೂಲಕ ಟ್ರೂಥ್ ಇಂಡಿಯಾ ಕನ್ನಡದ ಸುದ್ದಿ/ಅಪ್ಡೇಟ್ ಪಡೆಯಲು 9880456821 ಸಂಖ್ಯೆಗೆ ಸಂದೇಶ ಕಳಿಸಿ