ಚೌಕಿದಾರ್ ಮೋದಿ ಅಭಿವೃದ್ಧಿ ವಿಷಯ ಬಿಟ್ಟು ಮಾಜಿ ಪ್ರಧಾನಿಗಳ ಸಮಾಧಿಗಳ ಉತ್ಕನನ ಮಾಡಲು ಮುಖ್ಯ ಕಾರಣವೇನು ಗೊತ್ತೆ? ನರೇಂದ್ರ ಮೋದಿ ಕಳೆದ ಐದು ವರ್ಷಗಳಲ್ಲಿ ಜಾರಿಗೆ ತಂದ ಬಹುತೇಕ ಯೋಜನೆಗಳೆಲ್ಲ ಫ್ಲಾಪ್ ಆಗಿವೆ. ಯೋಜನೆಗಳೆಲ್ಲ ಫ್ಲಾಪ್ ಆಗಿದ್ದರಿಂದ ನರೇಂದ್ರಮೋದಿಗೆ ಏನೂ ನಷ್ಟ ಆಗಿಲ್ಲದಿರಬಹುದು. ಆದರೆ, ದೇಶದ ಆರ್ಥಿಕತೆಗೆ ನಷ್ಟವಾಗಿದೆ. ದೇಶದಲ್ಲಿದ್ದ ಉದ್ಯೋಗಿಗಳು ನಿರುದ್ಯೋಗಿಗಳಾಗಿದ್ದಾರೆ.
ಮೋದಿ ಆರ್ಥಿಕ ನೀತಿಯಿಂದ ಸಾವಿರಾರು ಜನರಿಗೆ ಉದ್ಯೋಗ ನೀಡಿದ್ದ ಕಂಪನಿ ಮುಚ್ಚಿಕೊಂಡ ನಿದರ್ಶನ ಇಲ್ಲಿದೆ. ಇದು ಮೋದಿ ಜಾರಿಗೆ ತಂದ ತರ್ಕರಹಿತ ಆರ್ಥಿಕ ನೀತಿಗಳಿಂದಾದ ಅನಾಹುತಗಳನ್ನು ಸಂಕೇತಿಸುವ ಕಂಪನಿ.
ಜಗತ್ತಿನಲ್ಲೇ ಅತಿ ಕಡಿಮೆ ಬೆಲೆ ಟ್ಯಾಬ್ಲೆಟ್ ನೀಡುತ್ತಿದ್ದ ಕಂಪನಿ ಡೇಟಾವಿಂಡ್. ಆಂಡ್ರಾಯ್ ಆಧಾರಿತ ಆಕಾಶ್ ಟ್ಯಾಬ್ಲೆಟ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಅತಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿತ್ತು. ಕಾಂಗ್ರೆಸ್ ಸರ್ಕಾರದ ಆರ್ಥಿಕ ನೀತಿಗಳು ಇಂತಹ ಅತಿ ಕಡಿಮೆ ಬೆಲೆಯ ವಿದ್ಯುನ್ಮಾನ ಉಪಕರಣಗಳ ತಯಾರಿಸಿ ಮಾರಾಟ ಮಾಡಲು ಅನುಕೂಲವಾಗಿತ್ತು. ಆದರೆ, ನರೇಂದ್ರಮೋದಿ ಅಧಿಕಾರಕ್ಕೆ ಬಂದ ನಂತರ ಜಾರಿಗೆ ತಂದ ಅಪನಗದೀಕರಣ ಮತ್ತು ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ)ಯಿಂದ ಏನೆನೆಲ್ಲಾ ಅನಾಹುತಗಳಾಗಿವೆ. ಅಂತಹ ಅನುಹುತಗಳ ಪೈಕಿ ಡೇಟಾ ವಿಂಡ್ ಕಂಪನಿ ಬಂದ್ ಆಗಿರುವುದು ಸೇರಿದೆ.
ಹೈದರಾಬಾದ್ ಮತ್ತು ಅಮೃತಸರದಲ್ಲಿ ಆಕಾಶ್ ಟ್ಯಾಬ್ಲೆಟ್ ಉತ್ಪಾದನಾ ಘಟಕಗಳನ್ನು ಡೇಟಾವಿಂಡ್ ಕಂಪನಿ ಸ್ಥಗಿತಗೊಳಿಸಿದೆ. ಕೇವಲ 35 ಡಾಲರ್ ಗಳಿಗೆ (ಆಗ ಪ್ರತಿ ಡಾಲರ್ ಗೆ ರುಪಾಯಿ ವಿನಿಮಯ ಮೌಲ್ಯ 60 ಇತ್ತು) 2100 ರುಪಾಯಿಗಳಿಗೆ ಟ್ಯಾಬ್ಲೆಟ್ ಒದಗಿಸುತ್ತಿತ್ತು. ಇದು ಹೆಚ್ಚಿನ ವಿದ್ಯಾರ್ಥಿಗಳಿಗೆ ಅದರಲ್ಲೂ ಕೆಳಮಧ್ಯಮ ಮತ್ತು ಕೆಳವರ್ಗದ ವಿದ್ಯಾರ್ಥಿಗಳಿಗೆ ಅನುಕೂಲವಾಗಿತ್ತು. ಮಾರುಕಟ್ಟೆಯಲ್ಲಿ ಸುಮಾರು 18,000 ರುಪಾಯಿಗೆ ಸಿಗುತ್ತಿದ್ದ ಟ್ಯಾಬ್ಲೆಟ್ ಅನ್ನು ಡೇಟಾವಿಂಡ್ 2100 ರುಪಾಯಿಗೆ ನೀಡುತ್ತಿತ್ತು.
ಎಕನಾಮಿಕ್ ಟೈಮ್ಸ್ ವರದಿ ಪ್ರಕಾರ, 2016ರಲ್ಲಿ ಜಾರಿಗೆ ಬಂದ ಅಪನಗದೀಕರಣ, 2017ರಲ್ಲಿ ಜಾರಿಗೆ ಬಂದ ಸರಕು ಮತ್ತು ಸೇವಾ ತೆರಿಗೆ ಹಾಗೂ ಇತರ ಮಾರ್ಪಾಡಿತ ತೆರಿಗೆ ವ್ಯವಸ್ಥೆಯಿಂದಾಗಿ ಡೇಟಾವಿಂಡ್ ತನ್ನ ಉತ್ಪಾದನೆ ಸ್ಥಗಿತಗೊಳಿಸಿದೆ ಎಂದು ಡೇಟಾವಿಂಡ್ ಕಂಪನಿಯ ಚೀಫ್ ಎಕ್ಸಿಕ್ಯೂಟಿವ್ ಆಫೀಸರ್ ಸುನೀತ್ ಸಿಂಗ್ ಟುಲಿ ಹೇಳಿದ್ದಾರೆ.
ಅಪನಗದೀಕರಣ ಯೋಜನೆ ಜಾರಿ ನಂತರ ನಮ್ಮ ಪ್ರಮುಖ ಗ್ರಾಹಕರಿದ್ದ ಕೆಳವರ್ಗದ ಮೇಲೆ ತೀವ್ರ ವ್ಯತಿರಿಕ್ತ ಪರಿಣಾಮ ಬೀರಿತು. ಆಗ ನಮ್ಮ ಆಕಾಶ್ ಟ್ಯಾಬ್ಲೆಟ್ ಮಾರಾಟ ತಗ್ಗುತ್ತಾ ಬಂದಿದ್ದು ನಂತರ ಚೇತರಿಸಿಕೊಳ್ಳಲೇ ಇಲ್ಲ ಎಂದೂ ಸುನೀತ್ ಸಿಂಗ್ ಟುಲಿ ಹೇಳಿದ್ದಾರೆ.
ಅತಿಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದ ಏಳು ಇಂಚಿನ ಆಕಾಶ್ ಟ್ಯಾಬ್ಲೆಟ್ ಗೆ ಸರ್ಕಾರ ಶೇ.18ರಷ್ಟು ಜಿಎಸ್ಟಿ ಹೇರಿದೆ. ಆದರೆ, ಆಪಲ್, ಸ್ಯಾಮ್ಸಂಗ್ ಸೇರಿದಂತೆ ಬಹುರಾಷ್ಟ್ರೀಯ ಕಂಪನಿಗಳು ಮಾರಾಟ ಮಾಡುವ ಆರು ಇಂಚಿನ ಸ್ಮಾರ್ಟ್ ಫೋನ್ ಗಳಿಗೆ ಶೇ.12ರಷ್ಟು ಮಾತ್ರ ಜಿಎಸ್ಟಿ ಹಾಕಲಾಗಿದೆ. ಈ ತೆರಿಗೆ ತಾರತಮ್ಯವು ಆಕಾಶ್ ಟ್ಯಾಬ್ಲೆಟ್ ಮಾರುಕಟ್ಟೆ ಕುಸಿಯಲು ಕಾರಣವಾಯಿತು ಎನ್ನುತ್ತಾರೆ ಸುನೀತ್ ಸಿಂಗ್ ಟುಲಿ.
ಡೇಟಾವಿಂಡ್ ಬ್ರಿಟಿಷ್-ಕೆನಡಿಯನ್ ಕಂಪನಿಯಾಗಿದ್ದು, ಭಾರತದಲ್ಲಿ ಪೂರ್ಣ ಪ್ರಮಾಣದಲ್ಲೇ ಕಡಿಮೆ ದರದಲ್ಲಿ ಟ್ಯಾಬ್ಲೆಟ್ ಉತ್ಪಾದಿಸಿ ಮಾರಾಟ ಮಾಡಲು ಉಪಕಂಪನಿಯನ್ನು ತೆರೆದಿತ್ತು. ಜಗತ್ತಿನ ಅತಿ ಕಡಿಮೆ ಬೆಲೆಯ ಟ್ಯಾಬ್ಲೆಟ್ ಎಂಬ ಕಾರಣಕ್ಕೆ ಆಕಾಶ್ ಟ್ಯಾಬ್ಲೆಟ್ ಹೆಚ್ಚಿನ ಪ್ರಚಾರ ಪಡೆದಿತ್ತು. ಆರಂಭದಲ್ಲಿದ್ದ ತಾಂತ್ರಿಕ ಲೋಪಗಳನ್ನು ತ್ವರಿತವಾಗಿ ಸರಿಪಡಿಸಿಕೊಂಡು ಮಾರುಕಟ್ಟೆ ವಿಸ್ತರಿಸಿಕೊಂಡಿದ್ದ ಡೇಟಾವಿಂಡ್ ಕಂಪನಿ ದುಬಾರಿ ಆಪಲ್, ಸ್ಯಾಮ್ಸಂಗ್ ಸೇರಿದಂತೆ ಬಹುರಾಷ್ಟ್ರೀಯ ಕಂಪನಿಗಳ ದುಬಾರಿ ಟ್ಯಾಬ್ಲೆಟ್ ಗಳಿಗೆ ತೀವ್ರಸ್ಪರ್ಧೆ ನೀಡಿತ್ತು.
ಈ ಟ್ಯಾಬ್ಲೆಟ್ ಕೊಳ್ಳುತ್ತಿದ್ದುದೇ ಕೆಳಮಧ್ಯಮ ಮತ್ತು ಕೆಳವರ್ಗದ ಗ್ರಾಹಕರು, ಅದರಲ್ಲೂ ನಾನಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧಗೊಳ್ಳುತ್ತಿದ್ದ ವಿದ್ಯಾರ್ಥಿಗಳು. ಅಪನಗದೀಕರಣ ಜಾರಿಗೆ ಬಂದ ನಂತರ ಕೆಳಮಧ್ಯಮ ವರ್ಗ ಮತ್ತು ಕೆಳವರ್ಗದ ಆರ್ಥಿಕ ಸ್ಥಿತಿ ಹದಗೆಟ್ಟಿತು. ಹೀಗಾಗಿ 2016 ನವೆಂಬರ್ ನಂತರ ಆಕಾಶ್ ಟ್ಯಾಬ್ಲೆಟ್ ಮಾರಾಟ ತೀವ್ರವಾಗಿ ಕುಸಿಯಿತು. 2017ರಿಂದಲೇ ಡೇಟಾವಿಂಡ್ ಉತ್ಪಾದನೆಯನ್ನು ಗಣನೀಯವಾಗಿ ತಗ್ಗಿಸಿತ್ತು. ಸರಕು ಮತ್ತು ಸೇವಾ ತೆರಿಗೆ ಜಾರಿಗೆ ಬಂದ ನಂತರ ಉಪಉತ್ಪನ್ನಗಳ ಮೇಲಿನ ತೆರಿಗೆ ಪ್ರಮಾಣ ಹೆಚ್ಚಳವಾಗಿದ್ದರಿಂದ ಮತ್ತು ಮಾರಾಟ ತಗ್ಗಿದ್ದರಿಂದ ಉತ್ಪಾದನಾ ವೆಚ್ಚ ಗಣನೀಯವಾಗಿ ಏರಿತು. ಇತ್ತೀಚೆಗೆ ಕಂಪನಿ ಎರಡೂ ಘಟಕಗಳಲ್ಲೂ ಉತ್ಪಾದನೆ ಸ್ಥಗಿತಗೊಳಿಸಿದೆ. ಮಾರುಕಟ್ಟೆಗೆ ಬಂದ 6 ಇಂಚಿನ ಮೊಬೈಲ್ ಗಳು ಆಕಾಶ್ ಗೆ ಪ್ರತಿಸ್ಪರ್ಧಿಯಾಗಿದ್ದು ಮತ್ತೊಂದು ತೊಡಕಾಯಿತು. ಅಲ್ಲದೇ ಭಾರತೀಯ ಅಂಚೆಯಲ್ಲಿ ರವಾನಿಸಿದ್ದ 30,000 ಟ್ಯಾಬ್ಲೆಟ್ ಕಳವಾಗಿದ್ದರಿಂದ ಸಂಸ್ಥೆಗೆ ಹೆಚ್ಚಿನ ನಷ್ಟವಾಗಿದೆ.
ಡೇಟಾವಿಂಡ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಸುಮಾರು 1,000 ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ದೇಶದಲ್ಲಿ ನಿರುದ್ಯೋಗ ಸಂಖ್ಯೆ ಹೆಚ್ಚುತ್ತಿರುವ ಹೊತ್ತಿಗೆ ಡೇಟಾ ವಿಂಡ್ ಕಂಪನಿ ಮುಚ್ಚಿ, 1,000 ಮಂದಿ ಉದ್ಯೋಗ ಕಳೆದುಕೊಂಡಿರುವ ಸುದ್ದಿ ಬಂದಿದೆ. ಅಪನಗದೀಕರಣ ಮತ್ತು ಜಿಎಸ್ಟಿ ಜಾರಿಯಿಂದಾಗಿ ಡೇಟಾವಿಂಡ್ ನಂತಹ ನೂರಾರು ಕಂಪನಿಗಳು ಮುಚ್ಚಿಹೋಗಿವೆ. ಒಂದೊಂದು ಕಂಪನಿ ಮುಚ್ಚಿದಾಗಲೂ ಸಾವಿರಾರು ಜನರು ಉದ್ಯೋಗ ಕಳೆದುಕೊಂಡಿದ್ದಾರೆ.
ಮೋದಿಸರ್ಕಾರ ಜಾರಿಗೆ ತಂದ ತರ್ಕರಹಿತ ಆರ್ಥಿಕ ಯೋಜನೆಗಳು ಹೇಗೆ ಜನೋಪಯೋಗಿ ಕಂಪನಿಗಳನ್ನು ಕೊಲ್ಲುತ್ತವೆ ಎಂಬುದಕ್ಕೆ ಡೇಟಾವಿಂಡ್ ಒಂದು ಉದಾಹರಣೆ ಅಷ್ಟೇ.