ತಮ್ಮ ಮಕ್ಕಳ ಭವಿಷ್ಯ ಹೇಗಿರಬೇಕೆಂದು ನೀವು ಯಾರೇ ಪೋಷಕರನ್ನೂ ಒಮ್ಮೆ ಕೇಳಿ ನೋಡಿ. “ನನ್ನ ಮಗು ಸಂತೋಷವಾಗಿರಬೇಕು”, “ನನ್ನ ಮಗು ಜಯಶಾಲಿಯಾಗಬೇಕು” ಇಲ್ಲವೇ “ನನ್ನ ಮಗು ತನ್ನ ಕಾಲ ಮೇಲೆ ತಾನು ನಿಲ್ಲಬೇಕು”, ಹೀಗೆ ಅನೇಕ ಪ್ರತಿಕ್ರಿಯೆಗಳು ನಿಮಗೆ ಸಿಗಲು ಸಾಧ್ಯವಿದೆ. ಆದರೆ “ನನ್ನ ಮಗು ಒಳ್ಳೆಯ ಮನುಷ್ಯನಾಗಿ ಬೆಳೆಯಬೇಕು” ಎಂಬ ಒಂದು ಉತ್ತರವಂತೂ ಸರ್ವೇಸಾಮಾನ್ಯವಾಗಿ ಸಿಕ್ಕೇ ಸಿಗುತ್ತದೆ.
ತಮ್ಮ ಮಕ್ಕಳು ಒಳ್ಳೆಯ ಮನುಷ್ಯರಾಗಿ ಬೆಳೆಯಬಾರದೆಂದು ಯೋಚಿಸುವ ಪೋಷಕರನ್ನು ನಾನು ಈವರೆಗೂ ಭೇಟಿಯಾಗೇ ಇಲ್ಲ. ತಮಗೆ ತಾವೇ ಸಂಪೂರ್ಣ ಮಾದರಿ ಎಂದುಕೊಳ್ಳದ ಮತ್ತು ತಾವು ತಮ್ಮ ಮಕ್ಕಳಿಗೆ ಅಷ್ಟೊಂದು ಉತ್ತಮ ಉದಾಹರಣೆ ಅಲ್ಲ ಎಂದುಕೊಳ್ಳುವ ತಾಯಿತಂದೆಯರೂ ಸಹ ಈ ರೀತಿ ಯೋಚಿಸುವುದಿಲ್ಲ.
ನೀವು ಚಿಕ್ಕವರಿದ್ದಾಗ ಯಾವುದನ್ನೆಲ್ಲಾ ನೀವು ಮಾಡಬಾರದು ಅಂತ ನಿಮ್ಮ ನಿಮಗೆ ಹೇಳಿಕೊಡಲಾಗಿತ್ತೋ, ಈಗ ನಿಮ್ಮ ಮಕ್ಕಳೂ ಸಹ ಅದನ್ನು ಮಾಡಬಾರದೆಂದು ಬಯಸುವುದು ತೀರಾ ಸ್ವಾಭಾವಿಕವೇ. ನಾನು ಬೆಳೆಯುವಾಗ ನನ್ನ ಅಪ್ಪ ಅಮ್ಮ ಈ ಕೆಳಕಂಡಂತೆ ನಡೆದುಕೊಳ್ಳಬೇಕೆಂದು ನನ್ನಿಂದ ಅಪೇಕ್ಷಿಸಿದ್ದರು. ನೀವೂ ಸಹ ಬೆಳೆದು ದೊಡ್ಡವರಾಗುವಾಗ ಅದನ್ನೇ ಬಯಸಲಾಗಿತ್ತು ಎಂದುಕೊಳ್ಳುತ್ತೇನೆ.
- ಸುಳ್ಳು ಹೇಳಬೇಡ
- ದುಷ್ಟರ ಸಹವಾಸ ಮಾಡಬೇಡ
- ಕೆಟ್ಟ ಮಾತಾಡಬೇಡ
- ನಿನ್ನ ತಪ್ಪಿಗೆ ನೀನೇ ಹೊಣೆಯಾಗುವೆ
- ಇತರರಿಗೆ ನೋವುಂಟು ಮಾಡಿದಾಗ ಕ್ಷಮೆ ಕೇಳು
- ನಿನ್ನ ಹೋಮ್ ವರ್ಕ್ ನೀನೇ ಮಾಡಿಕೊಂಡು, ಪರೀಕ್ಷೆಗೆ ಓದಿಕೊ, ಮೋಸ ಮಾಡಬೇಡ
- ಇತರರ ಜೊತೆ ನಾಗರಿಕ ನಡವಳಿಕೆ ತೋರು, ಸೌಜನ್ಯದಿಂದ ವರ್ತಿಸು
ಈ ಪಟ್ಟಿಯನ್ನು ‘ನೈತಿಕತೆಯ ಮೂಲಪಾಠಗಳು’ ಅಥವಾ ‘101 ನಡವಳಿಕೆಗಳು’ ಎಂದು ಕರೆಯಬಹುದೇನೋ. ಏಕೆಂದರೆ ನಮ್ಮಿಂದ ನಿರೀಕ್ಷಿಸಲಾದ ಅತಿ ಕನಿಷ್ಟ ನಡವಳಿಕೆಗಳಿವು. ಇದಕ್ಕೆ ಪ್ರತಿಯಾಗಿ ಇತರರಿಂದ ನಾವು ಬಯಸುವ ಅತಿ ಕನಿಷ್ಟ ಎನ್ನಬಹುದಾದ ನೈತಿಕತೆಯೂ ಇದೇ ಆಗಿದೆ. ನಾವು ಇಂತಹ ನಡವಳಿಕೆಯನ್ನು ಬಯಸುವವರ ಪೈಕಿ ನಮ್ಮ ನಾಯಕರೂ ಸೇರಿದ್ದಾರೆ.
ಸಮಾಜದಲ್ಲಿ ನೈತಿಕತೆಯ ಪ್ರಶ್ನೆ ಎದುರಾದಾಗ ನಾವು ಅಂತಿಮ ಘಟ್ಟದಲ್ಲಿ ನಮ್ಮ ರಾಜಕೀಯ ನಾಯಕತ್ವದ ನೈತಿಕತೆಗಾಗಿ ತಡಕಾಡುತ್ತೇವೆ. ಇದು ನಮ್ಮ ದಿನಮಾನಗಳಲ್ಲಿ ತೀರಾ ನೋವಿನ ಸಂಗತಿಯಾಗಿದೆ. ಆಗಲೂ ಕೂಡ ಅವರಲ್ಲಿ ಕಿಂಚಿತ್ತಾದರೂ ಒಳ್ಳೆಯತನವನ್ನು ಅಪೇಕ್ಷಿಸುತ್ತೇವೆ. ಆದ್ದರಿಂದಲೇ ಸಾರ್ವಜನಿಕ ಜೀವನ ನಡೆಸುತ್ತಿರುವ ವ್ಯಕ್ತಿಗಳು ಒಳ್ಳೆಯ ಗುಣ ಹೊಂದಿದ್ದರೆ ಮತ್ತು ತಕ್ಕ ಮಟ್ಟಿಗೆ ಪ್ರಾಮಾಣಿಕವಾಗಿದ್ದರೂ ಸಹ, ಅಂತಹ ಸಂಗತಿಗಳು ನಮಗೆ ಸ್ಫೂರ್ತಿ ನೀಡುತ್ತವೆ. ಅವುಗಳು ಅಪರೂಪ ಎನಿಸಿದರೂ ನಮ್ಮ ಗಮನ ಸೆಳೆಯುತ್ತವೆ.
ಆದ್ದರಿಂದಲೇ ಗೌರವಾನ್ವಿತ ನಾಯಕರು, ಉದಾಹರಣೆಗೆ, ಸೆರೆಮನೆಯಲ್ಲಿ 27 ವರ್ಷ ಕಳೆದ ನೆಲ್ಸನ್ ಮಂಡೇಲಾ ಅವರಂತಹವರು ದಕ್ಷಿಣ ಆಫ್ರಿಕಾದ ಬಿಳಿಯರ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲಿಲ್ಲ ಅಥವಾ ಬೇರೆಯವರಿಗೂ ಅದನ್ನು ಪ್ರಚೋದಿಸಲಿಲ್ಲ. ಇದೇ ಕಾರಣದಿಂದಲೇ ನ್ಯೂಜಿಲ್ಯಾಂಡಿನ ಮಸೀದಿಯಲ್ಲಿ ಇತ್ತೀಚೆಗೆ ಘೋರವಾದ ಮಾರಣಾಂತಿಕ ಗುಂಡಿನ ದಾಳಿಗಳಾದಾಗ, ತನ್ನ ಶಕ್ತಿಮೀರಿ ಮುಸ್ಲಿಮ್ ಸಮುದಾಯಕ್ಕೆ ಸಹಾಯಹಸ್ತ ಚಾಚಿದ ಅಲ್ಲಿನ ಪ್ರಧಾನಿ ಜಸಿಂಡಾ ಆರ್ಡರ್ನ್ ಅವರನ್ನು ನಾವು ಗೌರವಿಸುತ್ತೇವೆ.
ಭಾರತದ ಇಂದಿನ ವಸ್ತುಸ್ಥಿತಿ ಬೇಸರ ಮೂಡಿಸುವಂತಿದೆ. ಯಾವ ಮೌಲ್ಯಗಳನ್ನು ಹೇಳಿಕೊಟ್ಟು ನಮ್ಮನ್ನು ನಮ್ಮ ತಾಯಿತಂದೆಯರು ಬೆಳೆಸಿದರೋ ಅವುಗಳ ತದ್ವಿರುದ್ಧದ ಗುಣಗಳಿಗೆ ನಮ್ಮ ದೇಶದ ಪ್ರಧಾನಮಂತ್ರಿ ಜೀವಂತ ಮಾದರಿಯಾಗಿದ್ದಾರೆ. ಈ ಪಟ್ಟಿಯನ್ನು ಗಮನಿಸೋಣ:
ಸುಳ್ಳು ಹೇಳಬೇಡ
ನಮ್ಮ ಪ್ರಧಾನಮಂತ್ರಿಗಳು ಸುಳ್ಳು ಹೇಳುವುದಿಲ್ಲ ಎಂದರೆ ನಂಬುವುದು ಎಂತವರಿಗೂ ಕಷ್ಟ. ಒಂದೆಡೆ ಭಾರತದಲ್ಲಿ ಭಯೋತ್ಪಾದನೆ ನಿರ್ಮೂಲನೆಯಾಗಿದೆ ಎಂದು ಅವರು ಹೇಳುತ್ತಾರೆ, ಇನ್ನೊಂದೆಡೆ ಅವರದ್ದೇ ಆದ ಸರ್ಕಾರದ ಅಂಕಿ ಅಂಶಗಳು ಅವರ ಹೇಳಿಕೆ ಸುಳ್ಳೆಂದು ಸಾಬೀತುಪಡಿಸುತ್ತದೆ. 2014ರಿಂದೀಚೆಗೆ ಭಾರತದಲ್ಲಿ ಭಯೋತ್ಪಾದನಾ ಕೃತ್ಯಗಳು ನಡೆದಿರುವುದಾಗಿ ಸರ್ಕಾರವೇ ನೀಡಿರುವ ಮಾಹಿತಿಗಳು ಬಹಿರಂಗಪಡಿಸಿವೆ. ನೋಟ್ ಅಮಾನ್ಯೀಕರಣ ನಿರುದ್ಯೋಗವನ್ನು ಹೆಚ್ಚಿಸಲಿಲ್ಲ ಎಂದು ಅವರು ಹೇಳುತ್ತಿರುವಾಗಲೇ ಅದರಿಂದಾಗಿ 50 ಲಕ್ಷ ಜನ ಕೆಲಸ ಕಳೆದುಕೊಂಡರೆಂದು ಅಂಕಿಅಂಶಗಳು ಹೇಳುತ್ತವೆ. ಈ ವ್ಯಕ್ತಿಯನ್ನು ನಂಬುವುದು ಕಷ್ಟವೆಂದು ನಮ್ಮೆಲ್ಲರಿಗೂ ಈಗಾಗಲೇ ಅರ್ಥವಾಗಿದೆ.
ದುಷ್ಟರ ಸಹವಾಸ ಮಾಡಬೇಡ
ಜನತೆ ಹಲವಾರು ಬಾರಿ ಸಾರ್ವಜನಿಕವಾಗಿ ಛೀಮಾರಿ ಹಾಕಿ ಟೀಕಿಸಿದರೂ ಮೋದಿ ಇನ್ನೂ ಟ್ವಿಟ್ಟರ್ ನಲ್ಲಿ ನಿಂದನಾತ್ಮಕ ಟ್ರೋಲ್ ಗಳನ್ನು ಅನುಸರಿಸುವುದು ಬಿಟ್ಟಿಲ್ಲ. ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ಅವನ ಸಹವಾಸ ನಿರ್ಧರಿಸುತ್ತದೆ. ಮೋದಿಯ ಆನ್ಲೈನ್ ಸ್ನೇಹಿತರ ಆಯ್ಕೆ ತೀರಾ ಶೋಚನೀಯವಾಗಿದೆ. ಅವರ ಸಚಿವರು ಮತ್ತು ಅಭ್ಯರ್ಥಿಗಳ ಆಯ್ಕೆಯ ಬಗ್ಗೆಯಂತೂ ಮಾತನಾಡದಿರುವುದೇ ಒಳ್ಳೆಯದು, ಅಷ್ಟೊಂದು ಕೆಟ್ಟದಾಗಿದೆ.
ಕೆಟ್ಟ ಮಾತಾಡಬೇಡ
ನಂ.1 ಭ್ರಷ್ಟಾಚಾರಿಯಾಗಿ ಅವರ ಬದುಕು ಅಂತ್ಯಗೊಂಡಿತೆಂದು ಒಬ್ಬ ದಿವಂಗತ ಪ್ರಧಾನಮಂತ್ರಿಯನ್ನು ಕುರಿತು ಮಾತನಾಡಿರುವ ಭಾರತದ ಪ್ರಧಾನಮಂತ್ರಿ, ಸಾರ್ವಜನಿಕ ಚರ್ಚೆಗಳನ್ನು ತೀರಾ ನಿಕೃಷ್ಟವಾಗಿಸಿದ್ದಾರೆ. ದಿವಂಗತ ರಾಜೀವ್ ಗಾಂಧಿಯವರ ಕುರಿತ ಪ್ರಧಾನಿ ಮೋದಿಯವರ ಹೇಳಿಕೆಗಳ ಬಗ್ಗೆ ವಿಷಾದ ವ್ಯಕ್ತಪಡಿಸುತ್ತ, ಹಿಂದೊಮ್ಮೆ ರಾಜೀವ್ ವಿರುದ್ಧ ಅಮೇಥಿಯಿಂದ ಸ್ಪರ್ಧಿಸಿದ್ದ ರಾಜಮೋಹನ್ ಗಾಂಧಿ, “ಅಂದು ರಾಜೀವ್ ಭ್ರಷ್ಟಾಚಾರ ಸಹಿಸಿದರೆಂದು ನಂಬಿದ್ದೇ ಆದರೂ ಸಹ ಅದನ್ನು 28 ವರ್ಷಗಳ ಬಳಿಕ ಅವರ ಮಗನಿಗೆ ‘ನಿನ್ನ ತಂದೆ ಅತ್ಯಂತ ಭ್ರಷ್ಟ ವ್ಯಕ್ತಿಯಾಗಿ ಸತ್ತ’ ಎಂದು ಯಾರಾದರೂ ಹೇಳುತ್ತಾರೇನು?” ಎಂದು ಕೇಳುತ್ತಾರೆ.
ನಿನ್ನ ತಪ್ಪಿಗೆ ನೀನೇ ಹೊಣೆಯಾಗುವೆ
ಈ ಕ್ಷಣದ ವರೆಗೂ ಪ್ರಧಾನಿಯು ಭಾರತದ ಜನತೆಗೆ ನೋಟ್ ಅಮಾನ್ಯೀಕರಣ ಉಂಟುಮಾಡಿದ ಆಘಾತಕ್ಕೆ ಕ್ಷಮೆ ಯಾಚಿಸಿಲ್ಲ. ಕ್ಷಮೆ ಯಾಚಿಸುವುದು ಹಾಗಿರಲಿ, ನೋಟ್ ನಿಷೇಧ ಒಂದು ಮಹಾಪರಾಧ ಮತ್ತು ಇನ್ನೂ ಪರಿಹಾರ ಕಂಡಿರದ ಆಪತ್ತು ಎಂಬುದನ್ನೂ ಸಹ ಅವರು ಒಪ್ಪಿಕೊಂಡಿಲ್ಲ.
ಇತರರಿಗೆ ನೋವುಂಟು ಮಾಡಿದಾಗ ಕ್ಷಮೆ ಕೇಳು
ಮಾನವ ಘನತೆ ವೃದ್ಧಿಸುವ ನೆಲದಲ್ಲಿ ನಮ್ರತೆ ಇರುತ್ತದೆ ಎಂದು ಹೇಳಲಾಗುತ್ತದೆ. ಮನಸಾರೆ ಕ್ಷಮೆ ಯಾಚಿಸುವ ಸಾಮರ್ಥ್ಯವಿದ್ದರೆ ನಮ್ರತೆ ಕಾಣಿಸುತ್ತದೆ. ಆದ್ದರಿಂದ ತನ್ನ ತಪ್ಪು ಹೆಜ್ಜೆಗಳನ್ನು ಗುರುತಿಸಿ ಒಪ್ಪಿಕೊಳ್ಳುವ ಗುಣವಿಲ್ಲದ ಮೋದಿಯವರಲ್ಲಿ ಇಂತಹ ಯಾವ ಘನತೆಯೂ ಕಾಣಿಸದು ಎಂಬ ಸಂಗತಿ ಸ್ಪಷ್ಟವಾಗಿ ಅರ್ಥವಾಗುತ್ತದೆ.
ನಿನ್ನ ಹೋಮ್ ವರ್ಕ್ ನೀನೇ ಮಾಡಿಕೊಂಡು, ಪರೀಕ್ಷೆಗೆ ಓದಿಕೊ, ಮೋಸ ಮಾಡಬೇಡ
ಪ್ರಧಾನಮಂತ್ರಿಯವರ ಶೈಕ್ಷಣಿಕ ಅರ್ಹತೆಗಳು ಮತ್ತು ಸಾಧನೆಗಳೇ ರಹಸ್ಯವಾಗಿ ಅಡಗಿ ವಿವಾದದ ಸುಳಿಯಲ್ಲಿ ಸಿಲುಕಿರುವಾಗ, ಅವರನ್ನು ಭಾರತದ ಪುಟಾಣಿಗಳಿಗೆ ಮತ್ತು ಯುವಜನತೆಗೆ ಆದರ್ಶದ ವ್ಯಕ್ತಿಯಾಗಿರಬೇಕೆಂದು ಬಯಸುವುದು ಹೇಗೆ? ಇಂತಹ ಸನ್ನಿವೇಶದಲ್ಲಿ ಪ್ರಧಾನಿಯವರು ಬರೆದರೆಂದು ಹೇಳಲಾದ ‘Exam Warriors’ ಪುಸ್ತಕ ಮತ್ತು ರಾಷ್ಟ್ರಮಟ್ಟದಲ್ಲಿ ಟಿವಿ ಚಾನೆಲ್ ಗಳ ಮೂಲಕ ಪ್ರಸಾರವಾದ ಶಾಲಾ ಮಕ್ಕಳ ಜೊತೆಯ ನಡೆಸಿದ ‘ಪರೀಕ್ಷಾ ಪೆ ಚರ್ಚಾ’ ಕಾರ್ಯಕ್ರಮಗಳು ಯಾವ ಒಳ್ಳೆಯ ಸಂದೇಶವನ್ನೂ ರವಾನಿಸಲಾರವು.
ಇತರರ ಜೊತೆ ನಾಗರಿಕ ನಡವಳಿಕೆ ತೋರು, ಸೌಜನ್ಯದಿಂದ ವರ್ತಿಸು
ಮಮತಾ ಬ್ಯಾನರ್ಜಿಯನ್ನು ‘ಸ್ಪೀಡ್ ಬ್ರೇಕರ್ ದೀದಿ’ ಎಂದು, ಸೋನಿಯಾ ಗಾಂಧಿಯನ್ನು ‘ಜರ್ಸಿ ಆಕಳು’ ಎಂದೂ ಹಾಗು ರಾಹುಲ್ ಗಾಂಧಿಯನ್ನು ‘ಹೈಬ್ರಿಡ್ ಕರು’ ಎಂದು ಕರೆದ ಮೋದಿ, ಸೌಜನ್ಯ ಮತ್ತು ನಾಗರಿಕ ವರ್ತನೆ ತನ್ನಲ್ಲಿ ಹುದುಗಿರುವ ಮೌಲ್ಯಗಳಲ್ಲ ಎಂದು ದೇಶಕ್ಕೆ ಸಾರಿ ಹೇಳಿದ್ದಾರೆ. ಡಿಸ್ ಲೆಕ್ಸಿಯಾದಂತಹ ವಿಷಯವನ್ನು ವ್ಯಂಗ್ಯಕ್ಕೆ ಬಳಸಿಕೊಂಡಿದ್ದ ಮೋದಿಯವರ ವರ್ತನೆಯಂತೂ ಅವರು ತೀರಾ ಕೆಳಮಟ್ಟದ ನೈತಿಕತೆ ಹೊಂದಿರುವುದನ್ನು ತೋರಿಸಿತು.
4ನೇ ಶತಮಾನದ ಗ್ರೀಕ್ ತತ್ವಜ್ಞಾನಿ ಅರಿಸ್ಟಾಟಲ್ ಮನವೊಲಿಕೆ ಕಲೆಯ ಕುರಿತು Rhetoric ಎಂಬ ಮಹಾಪ್ರಬಂಧ ಬರೆದಿದ್ದ. ಅದರಲ್ಲಿ ಜನರ ಮೇಲೆ ಪ್ರಭಾವ ಬೀರುವ ಮೂರು ಮೂಲ ವಿಧಾನಗಳ ಬಗ್ಗೆ ಹೇಳುತ್ತಾನೆ – logos (ತರ್ಕ), pathos (ಭಾವನೆ) ಮತ್ತು ethos (ಸ್ವನಡತೆ). ಇವುಗಳ ಪೈಕಿ ethos ಅಂದರೆ ವ್ಯಕ್ತಿಯ ನಡತೆಯು ಅತಿ ಪರಿಣಾಮಕಾರಿಯಾಗಿ ಮತ್ತು ಸಮರ್ಥವಾಗಿ ಸಂವಹನ ಮಾಡಲು ಸಾಧ್ಯವಾಗುತ್ತದೆ ಎಂದು ಅವನು ನಂಬಿದ್ದ.
ದುರದೃಷ್ಟವಶಾತ್, ದುರ್ನಡತೆ ಕೂಡಾ ಸ್ಪಷ್ಟವಾಗಿ ಮತ್ತು ಪ್ರಭಾವಶಾಲಿಯಾಗಿಯೇ ಸಂವಹನ ಮಾಡಬಲ್ಲದು. ಅದರಲ್ಲೂ ಒಂದು ದೇಶದ ಅತ್ಯುನ್ನತ ಹುದ್ದೆಯನ್ನು ಅಲಂಕರಿಸಿದ ವ್ಯಕ್ತಿ ದುರ್ನಡತೆ ತೋರಿದಾಗ, ಸಭ್ಯತೆ, ಸೌಜನ್ಯ ಮತ್ತು ನಾಗರಿಕ ವರ್ತನೆಗಳು ಇನ್ನು ಕೆಲಸಕ್ಕೆ ಬಾರದ ವಿಚಾರಗಳೆಂಬ ಸೂಚನೆಯನ್ನು ಅದು ರವಾನಿಸುತ್ತದೆ.
ನಿಮ್ಮ ತಾಯಿ ನಿಮಗೆ ದೂರವಿರಲು ಹೇಳಿಕೊಟ್ಟಿದ್ದ ಆ ಕೆಟ್ಟ ಮಗುವಿನ ವಯಸ್ಕ ರೂಪವೇ ಈ ಮೋದಿ. ನಿಮ್ಮಮ್ಮ ಹೇಗೆಲ್ಲಾ ಇರಬಾರದೆಂದು ನಿಮಗೆ ಕಲಿಸಿಕೊಟ್ಟಿದ್ದರೋ ಅದರ ಜೀವಂತ ಉದಾಹರಣೆಯೇ ಈ ಮೋದಿ.
ನಮ್ಮ ಮಕ್ಕಳು ಸ್ವಲ್ಪವಾದರೂ ಅನುಕರಿಸಬಹುದಾದ ವ್ಯಕ್ತಿಯನ್ನು ಅವರ ಬದಲಿಗೆ ತರುವ ಕಾಲವೀಗ ಬಂದಿದೆ.
(ಪಾಸಿಟಿವ್ ಸೈಕಾಲಜಿ ಮತ್ತು ಸೈಕೋಮೆಟ್ರಿಕ್ಸ್ ಹಿನ್ನೆಲೆಯುಳ್ಳ ರೋಹಿತ್ ಕುಮಾರ್ ಶೈಕ್ಷಣಿಕ ತರಬೇತುದಾರರಾಗಿದ್ದಾರೆ. ಎಮೋಶನಲ್ ಕೋಶಿಯೆಂಟ್ ಮತ್ತು ಹರೆಯದ ಸಮಸ್ಯೆಗಳ ಬಗ್ಗೆ ಪ್ರೌಢಶಾಲಾ ವಿದ್ಯಾರ್ಥಿಗಳ ಜೊತೆ ಕೆಲಸ ಮಾಡುತ್ತಿದ್ದಾರೆ. ದೌರ್ಜನ್ಯಮುಕ್ತ ಶಾಲೆಗಳನ್ನು ನಿರ್ಮಿಸಲು ನೆರವಾಗುವ ಕಾರ್ಯಗಳನ್ನು ಇವರು ಕೈಗೆತ್ತಿಕೊಂಡಿದ್ದಾರೆ.)
ಮೂಲ: ದ ವೈರ್
ಹೇಳಿಕೆ: ಲೇಖನದಲ್ಲಿ ವ್ಯಕ್ತವಾಗಿರುವ ಅಭಿಪ್ರಾಯ ಮತ್ತು ನಿಲುವುಗಳು ಲೇಖಕರ ವೈಯಕ್ತಿಕ ನಿಲುವುಗಳಾಗಿವೆ