ಸ್ವತಂತ್ರ ಭಾರತದ ಪ್ರಪ್ರಥಮ ಭಯೋತ್ಪಾದಕ ಮಹಾತ್ಮ ಗಾಂಧೀಜಿಯನ್ನು ಕೊಂದ ನಾಥೂರಾಮ್ ಗೋಡ್ಸೆ ಎಂದು ನಟ ಹಾಗೂ ಮಕ್ಕಳ್ ನೀದಿ ಮೈಯಾಮ್ (ಎಂಎನ್ಎಂ) ಪಕ್ಷದ ನಾಯಕ ಕಮಲ್ ಹಾಸನ್ ಹೇಳಿದ್ದಾರೆ.
ಮೇ 19ರಂದು ಅವರಕುರಿಚಿ ಕ್ಷೇತ್ರದಲ್ಲಿ ನಡೆಯಲಿರುವ ವಿಧಾನಸಭಾ ಉಪಚುನಾವಣೆ ಪ್ರಯುಕ್ತ ಎಂಎನ್ಎಂ ಪಕ್ಷದ ಅಭ್ಯರ್ಥಿ ಎಸ್ ಮೋಹನ್ ರಾಜ್ ಪರವಾಗಿ ಪ್ರಚಾರ ನಡೆಸಿದ ವೇಳೆ ಕಮಲ್ ಹಾಸನ್ ಗೋಡ್ಸೆ ವಿರುದ್ಧ ಆರೋಪಿಸಿದ್ದಾರೆ.
“ಸ್ವತಂತ್ರ ಭಾರತದ ಮೊದಲ ಭಯೋತ್ಪಾದಕ ಹಿಂದೂ. ಆತನ ಹೆಸರು ನಾಥೂರಾಮ್ ಗೂಡ್ಸೆ,. ಆತನಿಂದಲೇ ಭಯೋತ್ಪಾದನೆ ಆರಂಭವಾಯಿತು,’’ ಎಂದು ಕಮಲ್ ತೆರೆದ ವಾಹನದಲ್ಲಿ ಪ್ರಚಾರ ಮಾಡುವ ವೇಳೆ ಹೇಳಿಕೆ ನೀಡಿದ್ದಾರೆ.

ಅಲ್ಲದೇ, “ಇದು ಮುಸ್ಲಿಮರು ಹೆಚ್ಚಿರುವ ಪ್ರದೇಶ ಎಂಬ ಕಾರಣಕ್ಕೆ ನಾನು ಈ ಹೇಳಿಕೆ ನೀಡುತ್ತಿಲ್ಲ, ನಾನು ಈ ಹೇಳಿಕೆಯನ್ನು ಗಾಂಧಿ ಪ್ರತಿಮೆ ಎದುರು ಹೇಳಿತ್ತಿದ್ದೇನೆ,’’ ಎಂದೂ ಹೇಳಿದ್ದಾರೆ.
1948ರ ಜನವರಿ 30ರಂದು ನಾಥೂರಾಮ್ ವಿನಾಯಕ್ ಗೂಡ್ಸೆ ಗಾಂಧಿಯನ್ನು ನವದೆಹಲಿಯಲ್ಲಿ ಗುಂಡಿಕ್ಕಿ ಕೊಂದನು.
“ಗಾಂಧಿ ಕೊಲೆಗೆ ಉತ್ತರ ಬಯಸಿ ನಾನಿಲ್ಲಿ ಬಂದಿದ್ದೇನೆ,’’ ಎಂದ ಕಮಲ್ ಹಾಸನ್ “ಉತ್ತಮ ಭಾರತೀಯರು ಬಯಸುವುದು ಸಮಾನತೆ, ಶಾಂತಿ, ಅಖಂಡತೆ ಮತ್ತು ರಾಷ್ಟ್ರ ಧ್ವಜದ ಮೂರು ಬಣ್ಣಗಳು ಸಾರುವ ಸಂದೇಶವನ್ನು ಗಟ್ಟಿಗೊಳಿಸುವುದು. ನಾನು ಭಾರತದ ಉತ್ತಮ ಪ್ರಜೆ,’’ ಎಂದು ಹೇಳಿಕೊಂಡಿದ್ದಾರೆ.
ಕಮಲ್ ಹಾಸನ್ ಹೇಳಿಕೆಯನ್ನು ಖಂಡಿಸಿರುವ ಬಿಜೆಪಿ ಮುಖಂಡೆ ತಮಿಳಿಸೈ ಸುಂದರ್ ರಾಜನ್, ಅಲ್ಪಸಂಖ್ಯಾತರನ್ನು ಓಲೈಸುವುದಕ್ಕಾಗಿ ಈ ರೀತಿ ಹೇಳಿಕೆಯನ್ನು ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.
ಕಮಲ್ ಈ ಹೇಳಿಕೆ ನೀಡುತ್ತಿದ್ದಂತೆ ಬಿಜೆಪಿ ಇದನ್ನು ಒಂದು ವಿವಾದವಾಗಿಸಲು ಪ್ರಯತ್ನಿಸುತ್ತಿದೆ.
“ಅಲ್ಪಸಂಖ್ಯಾತರ ಪರವಾಗಿ ನಿಂತಿರುವ ಕಮಲ ಹಸನ್ ಮತಗಳನ್ನು ಗಳಿಸುವುದಕ್ಕಾಗಿ, ಅಪಾಯಕಾರಿ ಹೇಳಿಕೆಯನ್ನು ನೀಡುತ್ತಿದ್ದಾರೆ. ಇತ್ತೀಚೆಗೆ ಶ್ರೀಲಂಕಾ ನಡೆದ ಬಾಂಬ್ ಸ್ಫೋಟಕ್ಕೆ ಕಮಲ್ ಏಕೆ ಪ್ರತಿಕ್ರಿಯೆ ನೀಡಿರಲಿಲ್ಲ?, ದಶಗಳ ಕಾಲದ ಹಿಂದಿನ ಘಟನೆಯ ಬಗ್ಗೆ ಸರಿಯಾದ ತನಿಖೆ ನಡೆದು ಆರೋಪಿಗೆ ಶಿಕ್ಷೆಯಾಗಿದ್ದರೂ, ಈಗ ಇದರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಲು ಧೈರ್ಯವಿರಬೇಕು,’’ ಎಂದು ತಮಿಳಿಸೈ ಸುಂದರ್ ರಾಜನ್ ಟ್ವಿಟ್ಟರ್ ನಲ್ಲಿ ಟೀಕಿಸಿದ್ದಾರೆ.
ಆದರೆ ಕಮಲ್ ಹಾಸನ್ ಅವರು ಶ್ರೀಲಂಕಾ ದಾಳಿಯ ಬಗ್ಗೆ ಏಪ್ರಿಲ್ 21ರಂದು, ಇಸ್ಲಾಮಿಕ್ ಸ್ಟೇಟ್ ಗುಂಪು ನಡೆಸಿದ ಹೇಯ ದಾಳಿ ಇದಾಗಿದ್ದು, ಐಎಸ್ ನ ಇಬ್ಬರು ಉಗ್ರರು ಈ ಕೃತ್ಯವೆಸಗಿದ್ದಾರೆ, ಎಂದು ಟ್ವೀಟ್ ಮಾಡಿ ಉಗ್ರ ದಾಳಿಯನ್ನು ಖಂಡಿಸಿದ್ದರು.
ಮುಂಬರಲಿರುವ ಪಿಎಂ ನರೆಂದ್ರ ಮೋದಿ ಸಿನಿಮಾದ ನಟ ವಿವೇಕ್ ಒಬೆರಾಯ್ ಸಹ ಕಮಲ್ ವಿರುದ್ದ ಕಿಡಿಕಾಡಿದ್ದು, “ಪ್ರೀತಿಯ ಕಮಲ್ ಸರ್, ನೀವು ಅತ್ಯುತ್ತಮ ಕಲಾವಿದ. ಕಲೆಗೆ ಧರ್ಮವಿಲ್ಲ, ಅದರಂತೆ ಭಯೋತ್ಪಾದನೆಗೂ ಧರ್ಮವಿಲ್ಲ!. ನೀವು ಗೋಡ್ಸೆ ಒಬ್ಬ ಭಯೋತ್ಪಾದಕ ಎನ್ನಬಹುದು, ಆದರೆ ಹಿಂದೂ ಎಂದು ಏಕೆ ಉಲ್ಲೇಖಿಸುತ್ತಿದ್ದೀರಿ?. ಮುಸ್ಲಿಂ ಬಹುಸಂಖ್ಯಾತ ಕ್ಷೇತ್ರದಲ್ಲಿ ನೀವು ಚುನಾವಣೆ ಎದುರಿಸುತ್ತಿರುವುದು ಇದಕ್ಕೆ ಕಾರಣವೇ,?” ಎಂದು ಟ್ವೀಟ್ಟರ್ ನಲ್ಲಿ ಪ್ರಶ್ನಿಸಿದ್ದಾರೆ.
1946ರ ವರೆಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮತ್ತು ಹಿಂದೂ ಮಹಾಸಭಾಗಳ ಸದಸ್ಯನಾಗಿದ್ದ ನಾಥೂರಾಮ್ ಗೋಡ್ಸೆ 1948ರಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿಯವರನ್ನು ಹತ್ಯೆಗೈದಿದ್ದ. ನಂತರ ನ್ಯಾಯಾಲಯವ ಅವನಿಗೆ ಮರಣ ದಂಡನೆ ವಿಧಿಸಿತ್ತು. ಗಾಂಧೀಜಿಯ ಮಕ್ಕಳಿಬ್ಬರು ಶಿಕ್ಷೆ ಕಡಿಮೆ ಮಾಡಲು ಕೇಳಿಕೊಂಡಿದ್ದರೂ ಪ್ರಧಾನಿ ನೆಹರೂ ಮತ್ತು ಉಪ ಪ್ರಧಾನಿ ಸರ್ದಾರ್ ವಲ್ಲಭಬಾಯಿ ಪಟೇಲ್ ಗೋಡ್ಸೆಗೆ ಮರಣ ದಂಡನೆಯೇ ಸೂಕ್ತ ಎಂಬ ಅಭಿಪ್ರಾಯ ಹೊಂದಿದ್ದರು. ಅಂತಿಮವಾಗಿ 1949ರಲ್ಲಿ ಗಲ್ಲು ಶಿಕ್ಷೆಗೆ ಗೋಡ್ಸೆ ಒಳಗಾದ.
More Articles
By the same author
Related Articles
From the same category