ದೇಶದಲ್ಲಿ ಒಂದು ಕಡೆ ಮತಧರ್ಮಗಳ ಮಧ್ಯೆ ಆಳವಾದ ಕಂದಕ ಸೃಷ್ಟಿಸಿ ಜನರ ಮನಸ್ಸುಗಳನ್ನು ಒಡೆಯಲು ಸಂಘಪರಿವಾರ ನಿರಂತರವಾಗಿ ಯತ್ನಿಸುತ್ತಿದ್ದರೆ ಮತ್ತೊಂದೆಡೆ ಈ ನೆಲದ ಸೌಹಾರ್ದ ಸಂಸ್ಕೃತಿಯನ್ನು ಜತನದಿಂದ ಕಾಪಾಡಿಕೊಳ್ಳುವ ಕಾಯಕವನ್ನೂ ಜನಸಾಮಾನ್ಯರೇ ಮುಂದುವರಿಸಿಕೊಂಡು ಬಂದಿದ್ದಾರೆ. ಅದು ಕರ್ನಾಟಕದ ಹಳ್ಳಿಯಲ್ಲಿರಲಿ, ದಿಲ್ಲಿಯ ಜೈಲಿನೊಳಗಿರಲಿ, ಮನುಷ್ಯತ್ವದ ನಂಟನ್ನು ಉಳಿಸಿ ಬೆಳೆಸಿ ಇನ್ನಷ್ಟು ಬೆಸೆಯುತ್ತಿದ್ದಾರೆ. ಪವಿತ್ರ ರಂಜಾನ್ ಮಾಸದ ಸಂದರ್ಭದಲ್ಲಿ ದೆಹಲಿಯ ಜೈಲುಗಳಲ್ಲಿ ಖೈದಿಗಳು ಮೆರೆಯುತ್ತಿರುವ ಕೋಮು ಸೌಹಾರ್ದತೆ ಇದಕ್ಕೆ ಜೀವಂತ ಸಾಕ್ಷಿಯಾಗಿದೆ.
ದೆಹಲಿಯ ಕಾರಾಗೃಹಗಳ ನೂರಾರು ಹಿಂದೂ ಖೈದಿಗಳು ಪವಿತ್ರ ರಂಜಾನ್ ಸಂದರ್ಭದಲ್ಲಿ ಮುಸಲ್ಮಾನ ಸಹ-ಖೈದಿಗಳ ಒಡಗೂಡಿ ಮುಂಜಾವಿನಿಂದ ಮುಸ್ಸಂಜೆಯ ವರೆಗೆ ರೋಜಾ (ಉಪವಾಸ) ಆಚರಿಸಿ ಕೋಮು ಸೌಹಾರ್ದತೆಯ ಬೆಳಕನ್ನು ಬೀರುತ್ತಿರುವುದರ ಬಗ್ಗೆ ಮಾಧ್ಯಮಗಳು ವರದಿ ಮಾಡಿವೆ. ದೆಹಲಿಯ 16 ಕೇಂದ್ರ ಕಾರಾಗೃಹಗಳಲ್ಲಿ ಬಂಧಿತರಾಗಿರುವ 16,665 ಖೈದಿಗಳ ಪೈಕಿ 2,658 ಖೈದಿಗಳು ರೋಜಾ ಆಚರಿಸುತ್ತಿರುವುದಾಗಿ ತಿಹಾರ್ ಕಾರಾಗೃಹ ಆಡಳಿತ ಬಿಡುಗಡೆಗೊಳಿಸಿರುವ ಹೇಳಿಕೆಯಲ್ಲಿ ತಿಳಿಸಲಾಗಿದೆ. ಅಲ್ಲದೆ ಪವಿತ್ರ ಉಪವಾಸ ಆಚರಣೆಯಲ್ಲಿ ತೊಡಗಿರುವ 2,658 ಖೈದಿಗಳಲ್ಲಿ 110 ಮಂದಿ ಹಿಂದೂಗಳಾಗಿದ್ದಾರೆಂದು ಹೇಳಲಾಗಿದೆ.
ಮುಸಲ್ಮಾನರು ಪವಿತ್ರವೆಂದು ಪರಿಗಣಿಸುವ ರಮಾದಾನ್ ಮಾಸದಲ್ಲಿ ಈ ವರ್ಷ 31 ಹಿಂದೂ ಮಹಿಳಾ ಖೈದಿಗಳು ಮತ್ತು 12 ಹಿಂದೂ ಯುವ ಖೈದಿಗಳು ಉಪವಾಸ ಆಚರಿಸುತ್ತಿದ್ದಾರೆಂದೂ ಸಹ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಮುಸ್ಲಿಮರಿಗೆ ಪವಿತ್ರ ಆಚರಣೆ ಎನಿಸಿರುವ ರಂಜಾನ್ ಅಥವಾ ರಮಾದಾನ್ ಈಗಷ್ಟೇ ಪ್ರಾರಂಭವಾಗಿದೆ. ಒಂದು ತಿಂಗಳ ಕಾಲ ಪ್ರತಿದಿನವೂ ಸೂರ್ಯೋದಯದಿಂದ ಸೂರ್ಯಾಸ್ತಮಾನದ ತನಕ ಇಸ್ಲಾಮ್ ಮತಧರ್ಮದ ಅನುಯಾಯಿಗಳು ಉಪವಾಸ ಆಚರಿಸುವುದು ಪದ್ಧತಿ.
ದೆಹಲಿ ಕಾರಾಗೃಹ ಇಲಾಖೆಯಡಿ ತಿಹಾರ್, ರೋಹಿಣಿ ಮತ್ತು ಮಂಡೋಲಿ ಎಂಬ ಮೂರು ಕಾರಾಗೃಹ ಸಂಕೀರ್ಣಗಳಿವೆ. ಕಾರಾಗೃಹ ಅಧಿಕಾರಿಗಳ ಪ್ರಕಾರ ‘ಲಂಗಾರ್’ (ಉಚಿತ ಊಟ) ವೇಳಾಪಟ್ಟಿಯನ್ನು ಕೊಂಚ ಬದಲಿಸಿ ಉಪವಾಸ ಆಚರಿಸುವವರಿಗೆ ‘ಸೆಹ್ರಿ’ ಮತ್ತಿತರ ಪ್ರಾರ್ಥನೆಗಳಿಗೆ ನಿಗದಿಪಡಿಸಲಾದ ಆಹಾರ ಲಭ್ಯವಾಗುವಂತೆ ಖಾತ್ರಿಪಡಿಸಲಾಗಿದೆ. ಹಾಗೂ ಪ್ರತಿದಿನ ಸೂರ್ಯೋದಯ ಮತ್ತು ಸೂರ್ಯಾಸ್ತದ ವೇಳಾಪಟ್ಟಿಯುಳ್ಳ ಫಲಕವನ್ನು ಕಾರಾಗೃಹಗಳಲ್ಲಿ ಪ್ರದರ್ಶಿಸಲಾಗಿದೆ ಎನ್ನಲಾಗಿದೆ.
ಮುಂಜಾನೆ ಸೂರ್ಯೋದಯದಲ್ಲಿ ಉಪವಾಸ ಪ್ರಾರಂಭಿಸುವಾಗ ಸಲ್ಲಿಸುವ ಪ್ರಾರ್ಥನೆಗೆ “ಸೆಹ್ರಿ” ಎನ್ನುತ್ತಾರೆ. ರಮಾದಾನ್ ಅಥವಾ ರಂಜಾನ್ ಉಪವಾಸ ಆರಂಭಿಸುವ ಒಂದು ಗಂಟೆ ಮುನ್ನ ಪ್ರಾರ್ಥನೆಗೆ ಮೊದಲು ಸೂರ್ಯೋದಯಪೂರ್ವದಲ್ಲಿ ಸೇವಿಸುವ ಖಾದ್ಯಕ್ಕೆ “ಸುಹೂರ್” ಎಂದು ಹೆಸರು. ಇಡೀ ದಿನ ಉಪವಾಸವಿರುವಂತೆ ದೇಹವನ್ನು ಸಿದ್ಧಗೊಳಿಸಲು ಈ ವಿಶೇಷ ತಿನಿಸನ್ನು ತಯಾರಿಸಲಾಗುತ್ತದೆ. ಬ್ರೆಡ್, ತರಕಾರಿ, ಹಣ್ಣು, ಮೊಸರು, ಚಹಾ, ಬೇಳೆಕಾಳುಗಳನ್ನೂ ಇದರಲ್ಲಿ ಸಾಮಾನ್ಯವಾಗಿ ಸೇರಿಸಲಾಗಿರುತ್ತದೆ.
“ಖೈದಿಗಳ ಕ್ಯಾಂಟೀನ್ ಗಳಲ್ಲಿ ರೂಹಫ್ಜಾ, ಖರ್ಜೂರ ಮತ್ತು ತಾಜಾ ಹಣ್ಣುಗಳನ್ನು ಮಾರಾಟಕ್ಕಿಡಲಾಗಿದೆ. ಅವುಗಳನ್ನು ಖೈದಿಗಳು ಕೊಳ್ಳಬಹುದು. ಎಲ್ಲಾ ಕೇಂದ್ರೀಯ ಕಾರಾಗೃಹಗಳಲ್ಲೂ ‘ರೋಜಾ ಇಫ್ತಾರ್’ ಗಾಗಿ ವ್ಯವಸ್ಥೆ ಮಾಡಲಾಗಿದೆ” ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಅಲ್ಲದೆ ಮತಧಾರ್ಮಿಕ ಮತ್ತು ದತ್ತಿ ಸಂಘಸಂಸ್ಥೆಗಳು ಖೈದಿಗಳೊಂದಿಗೆ ಪ್ರಾರ್ಥನೆಗಳನ್ನು ನಡೆಸಲು ಮತ್ತು ‘ರೋಜಾ ಇಫ್ತಾರ್’ ಏರ್ಪಡಿಸಲು ಅವಕಾಶ ಕಲ್ಪಿಸಲಾಗಿದ್ದು, ಇದಕ್ಕೆ ಸಾಮಾನ್ಯವಾದ ಭದ್ರತಾ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದೂ ಅಧಿಕಾರಿಗಳು ತಿಳಿಸಿದ್ದಾರೆ.
ದಿನದ ಅಂತ್ಯದಲ್ಲಿ ಸೂರ್ಯಾಸ್ತದ ವೇಳೆಯಲ್ಲಿ ರಮಾದಾನ್ ಉಪವಾಸ ಬಿಡುವಾಗ ಪ್ರಾರ್ಥನೆ ಮಾಡಿದ ನಂತರ ಸಂಜೆ ಬಂಧುಬಳಗವೆಲ್ಲಾ ಸೇರಿ ಒಟ್ಟಾಗಿ ಆಹಾರ ಸೇವಿಸುತ್ತಾರೆ. ಇದನ್ನು ‘ರೋಜಾ ಇಫ್ತಾರ್’ ಎನ್ನುವರು.
ಸುಮಾರು 1400 ವರ್ಷಗಳ ಹಿಂದೆ ಮುಹಮದ್ ಪೈಗಂಬರ್ ಖರ್ಜೂರವನ್ನು ತಿಂದು ನೀರು ಕುಡಿದು ಸೂರ್ಯಾಸ್ತದ ಪ್ರಾರ್ಥನೆ ಕೈಗೊಂಡ ರೀತಿಯಲ್ಲೇ ಮುಸಲ್ಮಾನರು ಇಂದಿಗೂ ಸಹ ಸಾಮಾನ್ಯವಾಗಿ ತಮ್ಮ ರಂಜಾನ್ ಉಪವಾಸಕ್ಕೆ ಅಂತ್ಯ ಹಾಡುತ್ತಾರೆ.
ದೇಶದಲ್ಲಿ ಹಿಂದೂ ಮುಸ್ಲಿಮರು ತಲತಲಾಂತರದಿಂದ ಕೂಡಿ ಬದುಕಿದ್ದಾರೆ, ಒಟ್ಟಾಗಿ ರೋಜಾ ಆಚರಿಸಿಕೊಂಡು ಬಂದಿದ್ದಾರೆ. ಹಲವು ಸಂಸ್ಕೃತಿಗಳು ಮೇಳೈಸಿವೆ. ಈ ಆಚರಣೆಯು ನಮ್ಮ ನಾಡಿನಲ್ಲಿ ರೂಢಿಯಲ್ಲಿರುವ ಕೋಮು ಸೌಹಾರ್ದತೆಗೆ ಸುಂದರ ನಿದರ್ಶನವಾಗಿದೆ. ಕಾರಾಗೃಹದಲ್ಲಿ ನಡೆಸಲಾಗುವ ಈ ಆಚರಣೆಯಿಂದ ಖೈದಿಗಳಲ್ಲಿ ಶಿಸ್ತು ಮೂಡಿಸಲು ಮತ್ತು ಸಮಯವನ್ನು ಹೆಚ್ಚು ಸಮರ್ಥವಾಗಿ ಸದ್ಬಳಕೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದೂ ಸಹ ಹೇಳಲಾಗುತ್ತದೆ.
ಅವರು ಖೈದಿಗಳಾಗಿದ್ದರೇನಂತೆ, ಈ ನೆಲದ ಭವ್ಯ ಸೌಹಾರ್ದ ಪರಂಪರೆಯ ವಾರಸುದಾರರಾಗಿದ್ದಾರೆ. ಕಳಚುತ್ತಿರುವ ಮನುಷ್ಯ ಸಂಬಂಧಗಳನ್ನು ಬೆಸೆಯುವ ಕೊಂಡಿಗಳಾಗಿದ್ದಾರೆ. ಬಹುತ್ವ ಭಾರತವನ್ನು ಉಳಿಸಿ ಬೆಳೆಸುವ ಬೆಳಕಿನ ಕಿಡಿಗಳಾಗಿದ್ದಾರೆ. ಜನರ ನಡುವೆ ದ್ವೇಷ ಹುಟ್ಟಿಸಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ರಾಜಕಾರಣಿಗಳಿಗೆ ಸೌಹಾರ್ದತೆಯ ಪಾಠ ಕಲಿಸಿದ್ದಾರೆ.