ರಾಜ್ಯದ ದಕ್ಷಿಣದ ತುದಿ ಬೆಂಗಳೂರಿನಲ್ಲಿ ದೋಸ್ತಿ ಸರ್ಕಾರದ ಪ್ರಮುಖ ನಾಯಕರ ನಡುವೆ ಪರಸ್ಪರ ಮುಷ್ಟಿಯುದ್ಧ ನಡೆಯುತ್ತಿದ್ದರೆ, ಉತ್ತರದ ತುದಿಯ ಚಿಂಚೋಳಿ ಮತ್ತು ಕುಂದಗೋಳದಲ್ಲಿ ದೋಸ್ತಿ ನಾಯಕರ ಕುಚುಕು ಒಗ್ಗಟ್ಟು ಪ್ರತಿಪಕ್ಷ ಬಿಜೆಪಿಗೆ ಬೆವರಿಳಿಸತೊಡಗಿದೆ.
ಲೋಕಸಭಾ ಚುನಾವಣೆಯ ಎರಡು ಸುತ್ತಿನ ಮತದಾನ ಮುಗಿದು ಇನ್ನೇನು ಎಲ್ಲವೂ ನಿರಾಳ ಎಂದುಕೊಳ್ಳುವ ಹೊತ್ತಿಗೇ ಧಾರವಾಡ ಜಿಲ್ಲೆಯ ಕುಂದಗೋಳ ಹಾಗೂ ಕಲಬುರಗಿ ಜಿಲ್ಲೆಯ ಚಿಂಚೋಳಿ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಘೋಷಣೆಯಾಗಿತ್ತು. ಪೌರಾಡಳಿತ ಸಚಿವ ಸಿ ಎಸ್ ಶಿವಳ್ಳಿ ಅವರ ಅಕಾಲಿಕ ನಿಧನದಿಂದ ತೆರವಾದ ಕುಂದುಗೋಳದಲ್ಲಿ ಉಪ ಚುನಾವಣೆ ಬಂದೊದಗಿದ್ದು ಆಕಸ್ಮಿಕ. ಆದರೆ, ಕಲಬುರಗಿಯ ಚಿಂಚೋಳಿಯಲ್ಲಿ; ಕೇವಲ ಹತ್ತು ತಿಂಗಳ ಹಿಂದೆ ಕಾಂಗ್ರೆಸ್ ಶಾಸಕರಾಗಿ ಆಯ್ಕೆಯಾಗಿದ್ದ ಡಾ ಉಮೇಶ್ ಜಾಧವ್ ಆಪರೇಷನ್ ಕಮಲದ ಆಮಿಶಕ್ಕೆ ಬಿದ್ದು ಪಕ್ಷ ತೊರೆದು ಬಿಜೆಪಿ ಸೇರಿದ್ದ ಪರಿಣಾಮವಾಗಿ ಉಪ ಚುನಾವಣೆಯಲ್ಲಿ ಜನರ ಮೇಲೆ ಹೇರಲಾಗಿದೆ. ಹಾಗಾಗಿ ಒಂದು ಕ್ಷೇತ್ರದಲ್ಲಿ ಅನುಕಂಪದ ಅಲೆಯ ಪ್ರಭಾವವಿದ್ದರೆ, ಮತ್ತೊಂದು ಕಡೆ ಅಸಹನೆ ಬೂದಿಮುಚ್ಚಿದ ಕೆಂಡವಾಗಿದೆ.
ಲೋಕಸಭಾ ಚುನಾವಣಾ ಪ್ರಚಾರದ ದಣಿವು ಆರಿಸಿಕೊಳ್ಳುವ ಮುನ್ನವೇ ಪ್ರತಿಷ್ಠೆಯ ಪ್ರಶ್ನೆಯಾಗಿ ಎರಡು ಕ್ಷೇತ್ರಗಳ ಉಪಚುನಾವಣೆ ಬಂದೇ ಬಿಟ್ಟಿತು ಎಂಬುದು ದೋಸ್ತಿ ಪಕ್ಷಗಳ ವಲಯದಲ್ಲಿದ್ದರೆ, ಲೋಕಸಭಾ ಚುನಾವಣೆ ಮುಗಿಯುತ್ತಲೇ ಮತ್ತೊಂದು ಸುತ್ತಿನ ಆಪರೇಷನ್ ಕಮಲಕ್ಕೆ ಚಾಲನೆ ನೀಡಿ, ದೋಸ್ತಿ ಸರ್ಕಾರ ಪತನಕ್ಕೆ ಮತ್ತೊಂದು ಮುಹೂರ್ತ ಫಿಕ್ಸ್ ಮಾಡೋಣ ಅನ್ನೋದ್ರೊಳಗೆ ಇದೊಳ್ಳೆ ಉಪಚುನಾವಣೆ ಬಂತಲ್ಲಾ ಅನ್ನೋದು ಬಿಜೆಪಿ ಪಾಳೆಯದ ಗುನುಗು.
ಆದರೆ, ಈ ಉಪಚುನಾವಣೆಯನ್ನು ತಮ್ಮ ಬಲವೃದ್ಧಿಗೆ ಹೇಗೆ ಬಳಸಿಕೊಳ್ಳುವುದು ಎಂಬ ಬಗ್ಗೆ ಎರಡೂ ಕಡೆಯವರು ಅತ್ಯಂತ ಲೆಕ್ಕಾಚಾರದ ತಂತ್ರಗಾರಿಕೆಗಳನ್ನು ಹೆಣೆಯುತ್ತಿದ್ದಾರೆ. ಕಾಂಗ್ರೆಸ್ ಪಾಲಿಗೆ ತನ್ನ ಎರಡೂ ಸ್ಥಾನಗಳನ್ನು ಉಳಿಸಿಕೊಳ್ಳುವ ಮೂಲಕ ಸಮ್ಮಿಶ್ರ ಸರ್ಕಾರದ ಸಂಖ್ಯಾಬಲ ಕಾಯ್ದುಕೊಳ್ಳುವ ಅನಿವಾರ್ಯತೆ ಇದ್ದರೆ, ಬಿಜೆಪಿಗೆ ತನ್ನ ಸ್ಥಾನ ಬಲವನ್ನು 104ರಿಂದ 106ಕ್ಕೆ ಏರಿಸಿಕೊಳ್ಳುವ ಸವಾಲು. ಹಾಗಾಗಿ ದಕ್ಷಿಣ ಕರ್ನಾಟಕದ ಪಾಲಿಗೆ ರಾಜಧಾನಿಯ ರಾಜಕೀಯ ಕೆಸರೆರಚಾಟವೇ ದೊಡ್ಡದಾಗಿ ಕಾಣುತ್ತಿದ್ದರೂ, ರಾಜಧಾನಿಯ ಗದ್ದುಗೆಯ ಗಟ್ಟಿಗೊಳಿಸಿಕೊಳ್ಳುವ ಮತ್ತು ಉರುಳಿಸುವ ಹಾವುಏಣಿ ಆಟದಲ್ಲಿ ನಿರತರಾಗಿರುವವರ ಪಾಲಿಗೆ ಉತ್ತರದ ಈ ವಿದ್ಯಮಾನಗಳೇ ಮುಖ್ಯವಾಗಿವೆ.
ಮೇ 19ರಂದು ಮತದಾನ ನಡೆಯಲಿರುವ ಕ್ಷೇತ್ರಗಳಲ್ಲಿ ಬಹಿರಂಗ ಪ್ರಚಾರ ಅಂತ್ಯಕ್ಕೆ ಇನ್ನೆರಡು ದಿನ ಬಾಕಿ ಇದೆ. ಪ್ರಚಾರದ ಭರಾಟೆ ತೀವ್ರಗೊಂಡಿರುವ ಈ ಹೊತ್ತಿನಲ್ಲಿ ಎರಡೂ ಕ್ಷೇತ್ರಗಳ ಚಿತ್ರಣದತ್ತ ಕಣ್ಣು ಹಾಯಿಸಿದರೆ, ಸದ್ಯಕ್ಕೆ ಎರಡೂ ಕಡೆ ಮೈತ್ರಿ ಪಕ್ಷಗಳು ಮತ್ತು ಬಿಜೆಪಿ ನಡುವೆ ಬಿರುಸಿನ ನೇರ ಹಣಾಹಣಿ ಎದ್ದುಕಾಣುವ ಸಮಾನ ಅಂಶ.
ಕುಂದಗೋಳ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮತ್ತು ಬಿಜೆಪಿಯ ಸಾಂಪ್ರದಾಯಿಕ ಪ್ರತಿಸ್ಪರ್ಧೆಯ ಕಣ. ಕಳೆದ ಒಂದು ದಶಕದಿಂದಲೂ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ನೇರ ಹಣಾಹಣಿಯೇ ವಿಶೇಷ. 2008ರಲ್ಲಿ ಬಿಜೆಪಿಯಿಂದ ಕಣಕ್ಕಿಳಿದು ಗೆಲುವು ಪಡೆದಿದ್ದ ಎಸ್ ಐ ಚಿಕ್ಕನಗೌಡರ್, 2013ರಲ್ಲಿ ಕೆಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದು ಸೋಲು ಕಂಡಿದ್ದರು. ಆ ಬಳಿಕ 2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಸಿ ಎಸ್ ಶಿವಳ್ಳಿ ವಿರುದ್ಧ ಮತ್ತೆ ಬಿಜೆಪಿ ಅಭ್ಯರ್ಥಿಯಾಗಿ ತೊಡೆತಟ್ಟಿದ್ದರು. ಆದರೆ, ಶಿವಳ್ಳಿ ಅವರು 634 ಮತಗಳ ಅಂತರದ ಜಯ ಗಳಿಸುವ ಮೂಲಕ ಕ್ಷೇತ್ರವನ್ನು ಕಾಂಗ್ರೆಸ್ಸಿಗೆ ಉಳಿಸಿಕೊಂಡಿದ್ದರು.
ಉತ್ತಮ ಶಾಸಕರಾಗಿ, ಸಚಿವರಾಗಿ ಕ್ಷೇತ್ರದಲ್ಲಿ ಜನಸಾಮಾನ್ಯರ ಅಭಿಮಾನಕ್ಕೆ ಪಾತ್ರರಾಗಿದ್ದ ಶಿವಳ್ಳಿ ಸಭ್ಯ ಮತ್ತು ಸಜ್ಜನಿಕೆ ಹಾಗೂ ಸರಳತೆ ಕಾರಣಕ್ಕೆ ಪಕ್ಷಾತೀತವಾಗಿ ತಮ್ಮ ವರ್ಚಸ್ಸು ವೃದ್ಧಿಸಿಕೊಂಡಿದ್ದರು. ಅವರ ಅಕಾಲಿಕ ನಿಧನದ ಹಿನ್ನೆಲೆಯಲ್ಲಿ ಇದೀಗ ಕಾಂಗ್ರೆಸ್ ಇದೀಗ ಶಿವಳ್ಳಿ ಅವರ ಪರವಾದ ಜನಸಾಮಾನ್ಯರ ಆ ಅಭಿಮಾನ ಮತ್ತು ಅನುಕಂಪವನ್ನೇ ನೆಚ್ಚಿ ಅವರ ಪತ್ನಿ ಕುಸುಮಾವತಿ ಶಿವಳ್ಳಿ ಅವರನ್ನೇ ಕಣಕ್ಕಿಳಿಸಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರ ಆಪ್ತರಾಗಿ ಗುರುತಿಸಿಕೊಂಡಿದ್ದ ಕುರುಬ ಸಮುದಾಯಕ್ಕೆ ಸೇರಿದ ಶಿವಳ್ಳಿ ಅವರ ಬಳಿಕ ಇದೀಗ ಅವರ ಪತ್ನಿಗೆ ಟಿಕೆಟ್ ನೀಡಿರುವುದು ಪಕ್ಷದ ಟಿಕೆಟ್ ಆಕಾಂಕ್ಷಿಗಳಾಗಿದ್ದ ಸ್ಥಳೀಯ ನಾಯಕರಲ್ಲಿ ಹಲವರ ಅಸಮಾಧಾನಕ್ಕೆ ಕಾರಣವಾಗಿತ್ತು. ಹಾಗಾಗಿಯೇ ಬರೋಬ್ಬರಿ ಒಂಭತ್ತು ಮಂದಿ ಬಂಡಾಯ ಕಾಂಗ್ರೆಸ್ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದರು. ಆದರೆ, ಕ್ಷೇತ್ರದ ಚುನಾವಣಾ ಉಸ್ತುವಾರಿ ಹೊತ್ತುಕೊಂಡಿರುವ ಡಿ ಕೆ ಶಿವಕುಮಾರ್ ಅವರ ಸಂಧಾನದ ಫಲವಾಗಿ ಇದೀಗ ಎಲ್ಲಾ ಬಂಡಾಯ ಅಭ್ಯರ್ಥಿಗಳೂ ನಾಮಪತ್ರ ವಾಪಸು ಪಡೆದಿದ್ದು, ಕುಸುಮಾವತಿ ಅವರ ದಾರಿ ಸುಗಮವಾಗಿದೆ.
ಅತ್ತ ಬಿಜೆಪಿ ಕೂಡ, ಈ ಬಾರಿ ಮತ್ತೆ ಎಸ್ ಐ ಚಿಕ್ಕನಗೌಡರ್ ಅವರನ್ನೇ ಕಣಕ್ಕಿಳಿಸಿದ್ದು, ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಸೇರಿದಂತೆ ಕಮಲ ಪಾಳೆಯದ ಅತಿರಥ ಮಹಾರಥರೆಲ್ಲ ಕ್ಷೇತ್ರದಲ್ಲಿ ಠಿಕಾಣಿ ಹೂಡಿ ಹಗಲಿರುಳೆನ್ನದೆ ಪ್ರಚಾರದಲ್ಲಿ ನಿರತರಾಗಿದ್ದಾರೆ. ಬಿಜೆಪಿಯಲ್ಲಿಯೂ ಯಡಿಯೂರಪ್ಪ ಸಂಬಂಧಿಗೇ ಮತ್ತೆ ಟಿಕೆಟ್ ನೀಡಲಾಗಿದೆ ಎಂಬ ಅಸಮಾಧಾನ ಕೆಲವರಲ್ಲಿದೆ. ಆ ಕಾರಣಕ್ಕೇ ಈಗಾಗಲೇ ಧಾರವಾಡ ಹಾಲು ಒಕ್ಕೂಟದ ಮಾಜಿ ಅಧ್ಯಕ್ಷ ಬಸವರಾಜ ಅಬರಗೊಂಡ ಸೇರಿದಂತೆ ಸಾಕಷ್ಟು ಮಂದಿ ಸ್ಥಳೀಯ ಪ್ರಭಾವಿ ನಾಯಕರು ಪಕ್ಷ ತೊರೆದು ಕಾಂಗ್ರೆಸ್ ಸೇರಿದ್ದಾರೆ. ಡಿಕೆ ಶಿವಕುಮಾರ್ ಅವರ ತಂತ್ರಗಾರಿಕೆಯ ಮುಂದೆ ಬಿಜೆಪಿ ನಾಯಕರು ಕಂಗೆಟ್ಟಿದ್ದು, ಆ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕರಿಗೆ ಎದುರೇಟು ನೀಡುವ ತಂತ್ರದ ಭಾಗವಾಗಿಯೇ ಐಟಿ ದಾಳಿ ಕೂಡ ನಡೆದಿದೆ ಎನ್ನಲಾಗುತ್ತಿದೆ.
ಒಟ್ಟು 1.90 ಲಕ್ಷ ಮತದಾರರಿರುವ ಕ್ಷೇತ್ರದಲ್ಲಿ ಲಿಂಗಾಯತ ಸಮುದಾಯ ಮೇಲುಗೈ ಹೊಂದಿದ್ದರೂ, ಕುರುಬ ಸಮುದಾಯದ ಮತಗಳು ನಿರ್ಣಾಯಕ. ಅಲ್ಲದೆ, ಮುಸ್ಲಿಂ ಮತ್ತು ಇತರ ಹಿಂದುಳಿದ ಮತ್ತು ದಲಿತ ಮತಗಳೂ ಸಾಕಷ್ಟು ಪ್ರಮಾಣದಲ್ಲಿದ್ದು, ಬಿಜೆಪಿ ಸದ್ಯಕ್ಕೆ ಹಿಂದುತ್ವ ಮತ್ತು ಮೋದಿ ಹೆಸರಿನಲ್ಲಿ ಮತ ಯಾಚಿಸುತ್ತಿದ್ದರೆ, ದೋಸ್ತಿ ಪಕ್ಷಗಳು ದೋಸ್ತಿ ಸರ್ಕಾರದ ರೈತ ಪರ ನೀತಿ, ಸಿದ್ದರಾಮಯ್ಯ ಸರ್ಕಾರದ ಯೋಜನೆಗಳು ಹಾಗೂ ಸ್ವತಃ ಶಿವಳ್ಳಿ ಅವರ ಒಳ್ಳೆತನವನ್ನೇ ಕಣದಲ್ಲಿ ಬಂಡವಾಳ ಮಾಡಿಕೊಂಡಿವೆ.
ಸಿದ್ದರಾಮಯ್ಯ ಅವರು ಈ ಚುನಾವಣೆಯಲ್ಲಿ ತಮ್ಮ ವೈಯಕ್ತಿಕ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದು ಖುದ್ದು ಪ್ರಚಾರದ ನೇತೃತ್ವ ವಹಿಸಿದ್ದರೆ, ಸಚಿವ ಡಿ ಕೆ ಶಿವಕುಮಾರ್, ಜಮೀರ್ ಅಹಮದ್, ಎಚ್ ಕೆ ಪಾಟೀಲ್, ಆರ್ ವಿ ದೇಶಪಾಂಡೆ ಮುಂತಾದ ನಾಯಕರು ಪಕ್ಷದ ಪರ ಗಟ್ಟಿಯಾಗಿ ನಿಂತಿದ್ದಾರೆ. ಅತ್ತ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಕೂಡ ತಮ್ಮ ಪ್ರತಿಷ್ಠೆಯ ಪಣವಾಗಿ ಕ್ಷೇತ್ರವನ್ನು ಪರಿಗಣಿಸಿದ್ದು, ಜಗದೀಶ್ ಶೆಟ್ಟರ್, ಪ್ರಹ್ಲಾದ್ ಜೋಷಿ, ಸೋಮಣ್ಣ, ಶ್ರೀರಾಮುಲು ಮುಂತಾದ ನಾಯಕರ ಪಡೆಯೊಂದಿಗೆ ಗೆಲುವಿಗೆ ಶ್ರಮಿಸುತ್ತಿದ್ದಾರೆ. ಹಾಗಾಗಿ ಸದ್ಯಕ್ಕೆ ಕುಂದಗೋಳದಲ್ಲಿ ಭಾರೀ ಪೈಪೋಟಿಯ ನೇರ ಹಣಾಹಣಿ ಏರ್ಪಟ್ಟಿದೆ.
ಇನ್ನು ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ತವರು ಜಿಲ್ಲೆಯ ಚಿಂಚೋಳಿ ಉಪ ಚುನಾವಣೆ ಕೂಡ ಅವರ ಪಾಲಿಗೆ ವೈಯಕ್ತಿಕ ಪ್ರತಿಷ್ಠೆಯ ಪ್ರಶ್ನೆಯಾಗಿದೆ.
ತಮ್ಮದೇ ನೆರಳಿನಲ್ಲಿ ಬೆಳೆದ ಡಾ ಉಮೇಶ್ ಜಾಧವ್, ಆಪರೇಷನ್ ಕಮಲದ ಆಮಿಶಕ್ಕೆ ಒಳಗಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿ, ತಮ್ಮ ವಿರುದ್ಧವೇ ಲೋಕಸಭಾ ಕಣದಲ್ಲಿ ತೊಡೆತಟ್ಟಿದ್ದಾರೆ ಎಂಬುದು ಅವರು ಪ್ರತಿಷ್ಠೆಯನ್ನು ಕೆಣಕಿದ ಸಂಗತಿ. ತಮ್ಮ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ನಡೆಯುತ್ತಿರುವ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಪುತ್ರ ಅವಿನಾಶ್ ಜಾಧವ್ ಅವರನ್ನು ಕಣಕ್ಕಿಳಿಸುವಲ್ಲಿ ಉಮೇಶ್ ಜಾಧವ್ ಯಶಸ್ವಿಯಾಗಿದ್ದಾರೆ. ಪಕ್ಷದ ಸ್ಥಳೀಯ ನಾಯಕರ ವಿರೋಧದ ನಡುವೆಯೂ ಅವರು ಪುತ್ರನಿಗೆ ಟಿಕೆಟ್ ದಕ್ಕಿಸಿಕೊಟ್ಟಿದ್ದಾರೆ. ರಾಜಕೀಯವಾಗಿ ಅನನುಭವಿ ಅವಿನಾಶ್ ಎದುರು ಕಾಂಗ್ರೆಸ್ಸಿನಿಂದ ಲೋಕಸಭಾ ಚುನಾವಣೆ ಹೊತ್ತಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿರುವ ಸುಭಾಶ್ ರಾಥೋಡ್ ಕಣಕ್ಕಿಳಿದಿದ್ದಾರೆ. ಒಂದರ್ಥದಲ್ಲಿ ಇದು ಅದಲು ಬದಲಿನ ಆಟ.
ಕಣದಲ್ಲಿರುವುದು ರಾಥೋಡ್ ಆದರೂ, ಆ ಹಣಾಹಣಿ ತಮ್ಮ ಮತ್ತು ಉಮೇಶ್ ಜಾಧವ್ ನಡುವಿನ ಸಮರವೆಂದೇ ಮಲ್ಲಿಕಾರ್ಜುನ ಖರ್ಗೆ ಮತ್ತು ಪ್ರಿಯಾಂಕ್ ಖರ್ಗೆ ಭಾವಿಸಿದ್ದು, ಅದರಂತೆಯೇ ತಂದೆ ಮಕ್ಕಳಿಬ್ಬರೂ ಹಗಲಿರುಳೆನ್ನದೆ ಶ್ರಮಿಸುತ್ತಿದ್ದಾರೆ. ಲೋಕಸಭೆಯಲ್ಲಿ ತಂದೆಯನ್ನು, ವಿಧಾನಸಭೆಯಲ್ಲಿ ಮಗನನ್ನು ಮಣಿಸುವ ಮೂಲಕ ಅವರ ರಾಜಕೀಯಕ್ಕೆ ವಿರಾಮ ಹಾಕುವ ಜಿದ್ದು ಖರ್ಗೆಯವರದ್ದು ಎನ್ನಲಾಗುತ್ತಿದೆ. ಬಿಜೆಪಿಯಲ್ಲಿ ಸ್ಥಳೀಯವಾಗಿ ಸಾಕಷ್ಟು ಆಂತರಿಕ ಬಂಡಾಯದ ಸವಾಲುಗಳಿದ್ದರೂ, ಅಂತಿಮವಾಗಿ ಪಕ್ಷದ ದೃಷ್ಟಿಯಿಂದ ಈ ಸ್ಥಾನ ಗೆಲ್ಲುವುದು ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಆಪರೇಷನ್ ಕಮಲವನ್ನು ಸಮರ್ಥಿಸಿಕೊಳ್ಳಲು ಈ ಗೆಲುವು ಅವರಿಗೆ ಅನಿವಾರ್ಯ ಕೂಡ.
1.93 ಲಕ್ಷ ಮತದಾರರಿರುವ ಕ್ಷೇತ್ರದಲ್ಲಿ ಬಹುಸಂಖ್ಯಾತರಾಗಿರುವ ಲಂಬಾಣಿ ಸಮುದಾಯಕ್ಕೇ ಇಬ್ಬರೂ ಅಭ್ಯರ್ಥಿಗಳು ಸೇರಿದ್ದು, ಇನ್ನುಳಿದಂತೆ ನಿರ್ಣಾಯಕ ಸಂಖ್ಯೆಯಲ್ಲಿರುವ ಮುಸ್ಲಿಂ, ಲಿಂಗಾಯತ ಮತ್ತು ಇತರ ದಲಿತ ಮತಗಳು ಫಲಿತಾಂಶ ನಿರ್ಧರಿಸಲಿವೆ. ಲೋಕಸಭಾ ಚುನಾವಣೆಯಲ್ಲಿ ಜಾಧವ್ ಪರ ಗಟ್ಟಿಯಾಗಿ ನಿಂತಿದ್ದ ಲಂಬಾಣಿ ಸಮುದಾಯ, ಈ ಬಾರಿಯೂ ಅದೇ ಒಗ್ಗಟ್ಟು ಪ್ರದರ್ಶಿಸಲಾರದು ಎಂಬುದು ಗಮನಾರ್ಹ. 2018ರ ಚುನಾವಣೆಯಲ್ಲಿ ಬಿಜೆಪಿಯ ಸುನಿಲ್ ವಲ್ಕಾಪುರೆ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಉಮೇಶ್ ಜಾಧವ್ ಸುಮಾರು 20 ಸಾವಿರ ಮತಗಳ ಅಂತರದ ಜಯ ದಾಖಲಿಸಿದ್ದರು.
ಒಟ್ಟಾರೆ ಸದ್ಯದ ಸ್ಥಿತಿಯಲ್ಲಿ ಚಿಂಚೋಳಿಯಲ್ಲಿ ಕೂಡ ಮೈತ್ರಿ ಅಭ್ಯರ್ಥಿ ರಾಥೋಡ್ ಮತ್ತು ಬಿಜೆಪಿ ಅಭ್ಯರ್ಥಿ ಅವಿನಾಶ್ ಜಾಧವ್ ನಡುವೆ ನೇರ ಹಣಾಹಣಿಯ ವಾತಾವರಣವಿದ್ದು, ಮತದಾನ ಸಮೀಪಿಸುತ್ತಿದ್ದಂತೆ ನಡೆಯಬಹುದಾದ ಕ್ಷಿಪ್ರ ರಾಜಕೀಯ ಬೆಳವಣಿಗೆಗಳ ಮೇಲೆ ಅಂತಿಮ ಫಲಿತಾಂಶ ನಿಂತಿದೆ.
ಮೇ 19ರಂದು ಮತದಾನ ನಡೆಯುವ ಎರಡೂ ಕ್ಷೇತ್ರಗಳ ಮತ ಎಣಿಕೆ ಕೂಡ ಲೋಕಸಭಾ ಚುನಾವಣೆಯ ಮತ ಎಣಿಕೆಯ ದಿನ; ಮೇ 23ರಂದೇ ನಡೆಯಲಿದೆ. ಹಾಗಾಗಿ ಈ ಕ್ಷೇತ್ರಗಳ ಮತದಾರರಿಗೆ ಅಂದು ಈ ಬಾರಿ ಎರಡೆರಡು ಕುತೂಹಲ!