ಹವಾಮಾನದ ಏರುಪೇರಿನಿಂದಾಗಿ ಬಹುಜನ ಉಪಯೋಗಿ ಬಾಳೆಹಣ್ಣು ಕೆಲವೇ ವರ್ಷಗಳಲ್ಲಿ ಜಗತ್ತಿನಿಂದಲೇ ಕಣ್ಮರೆಯಾದರೂ ಅಚ್ಚರಿಯಿಲ್ಲ!
ಹೌದು. ಇಂತಹ ಒಂದು ಆಘಾತಕಾರಿ ವಿಷಯವನ್ನು ಸಂಶೋಧನೆಗಳು ಬಹಿರಂಗಪಡಿಸಿವೆ!
ಇತ್ತೀಚೆಗೆ ಯುನೆಸ್ಕೋನಲ್ಲಿ ಚರ್ಚೆಯಾದ ವರದಿ ಹವಾಮಾನದಲ್ಲಿನ ಏರುಪೇರಿನಿಂದಾಗಿ ಭೂಮಿ ಮೇಲಿನ ನಾಲ್ಕರಲ್ಲಿ ಒಂದು ಜೀವ ಪ್ರಬೇಧಗಳು ಅಳಿಯಲಿವೆ ಎಂಬ ಆಘಾತಕಾರಿ ಸಂಗತಿಯನ್ನು ಹೊರಗೆಡಹಿತ್ತು. ಇದರ ಬೆನ್ನಲ್ಲೇ ಈಗ ಬಾಳೆಹಣ್ಣಿನ ಕುರಿತು ಈ ವಿಷಯ ಬಂದಿದೆ.
ಜಗತ್ತಿನ ಕೋಟ್ಯಂತರ ಮಂದಿ ಪ್ರತಿನಿತ್ಯ ಸೇವಿಸುವ ಆರೋಗ್ಯಕರ, ಪೌಷ್ಠಿಕಾಂಶಯುಕ್ತ ಹಣ್ಣು ಬಾಳೆಹಣ್ಣು ಎಲ್ಲಾ ಕಾಲಮಾನದಲ್ಲೂ ಈ ಹಣ್ಣು ಲಭ್ಯವಿರುತ್ತದೆ. ಆದರೆ ಹವಾಮಾನದಲ್ಲಾಗುತ್ತಿರುವ ಬದಲಾವಣೆಯಿಂದಾಗಿ ಇನ್ನೇನು ಕೆಲವೇ ವರ್ಷಗಳಲ್ಲಿ ಈ ಪ್ರಬೇಧ ಅಳಿಯಬಹುದು ಎಂದು ಹೊಸ ಸಂಶೋಧನೆಯೊಂದು ಬಹಿರಂಗಪಡಿಸಿದೆ.
ಇದು ಅಚ್ಚರಿ ಎನಿಸಿದರೂ ಸತ್ಯ. ವಾತಾವರಣದ ಬದಲಾವಣೆಯಿಂದಾಗಿ ಬ್ಲಾಕ್ ಸಿಗಟೋಕಾ ಎಂಬ ಶಿಲೀಂಧ್ರ ವ್ಯಾಪಕವಾಗಿ ಹೆಚ್ಚುತ್ತಿದ್ದು, ಇದು ಬಾಳೆಗಿಡದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿದೆ ಹಾಗೂ ಈ ಶಿಲೀಂಧ್ರ ಗಿಡ ಫಲ ನೀಡದಂತೆ ಮಾಡುತ್ತಿದೆ ಎನ್ನಲಾಗಿದೆ.
ಎಕ್ಸ್ ಟರ್ ವಿಶ್ವವಿದ್ಯಾಲಯ ನಡೆಸಿದ ಸಂಶೋಧನೆಯು ಫಿಲೋಸಾಫಿಕಲ್ ಟ್ರಾನ್ಸಾಕ್ಷನ್ ಆಫ್ ದಿ ರಾಯಲ್ ಸೊಸೈಟಿ ನಿಯತಕಾಲಿಕೆಯಲ್ಲಿ ಪ್ರಕಟವಾಗಿದೆ. ಈ ವರದಿಯನ್ವಯ ವಾತಾವರಣದಲ್ಲಿ ತೇವಾಂಶ ಹಾಗೂ ತಾಪಮಾನದ ಬದಲಾವಣೆಯು ಬ್ಲಾಕ್ ಸಿಗಟೋಕಾ ಎಂಬ ಶೀಲೀಂಧ್ರವನ್ನು ಹೆಚ್ಚುತ್ತಿದೆ. ಲ್ಯಾಟಿನ್ ಅಮೆರಿಕ ಮತ್ತು ಕೆರಿಬಿಯನ್ ಪ್ರದೇಶಗಳಲ್ಲಿ 1960ರಿಂದ ಶೇಕಡಾ 44%ರಷ್ಟು ಬ್ಲಾಕ್ ಸಿಗಟೋಕಾ ಶೀಲಿಂಧ್ರ ಆವರಿಸಿದೆ.
“ಬ್ಲಾಕ್ ಸಿಗಟೋಕಾದ ಇರುವಿಕೆ ಅಥವಾ ಜೀವಾವಧಿಯು ವಾತಾವರಣದ ಮೇಲೆ ನಿರ್ಧರಿತವಾಗಿದೆ. ವಾತಾವರಣದ ಬದಲಾವಣೆಯಿಂದಾಗಿ ತಾಪಮಾನ ಏರಿಕೆಯಾದರೆ, ಇದು ಬೀಜ ಚಿಗುರುವುದು, ಬೆಳೆ ಮತ್ತು ಬೆಳೆದ ಬೀಜಗಳನ್ನು ತೇವಾಂಶಗೊಳಿಸುತ್ತದೆ,’’ ಎಂದು ಸಂಶೋಧಕ ಡೇನಿಯಲ್ ಬೆಬ್ಬರ್ ತಿಳಿಸಿದ್ದಾರೆ.
ಕಳೆದ 60 ವರ್ಷಗಳ ಹಿಂದಿನಿಂದ ಬ್ಲಾಕ್ ಸಿಗಟೋಕಾ ಮೇಲೆ ಪ್ರಯೋಗಾತ್ಮಕ ಸಂಶೋಧನೆ ನಡೆಸಲಾಗಿದೆ. ಬ್ಲಾಕ್ ಸಿಗಟೋಕಾ ಬಾಳೆ ಗಿಡಕ್ಕೆ ಮಾರಕವಾದ ಶಿಲಿಂಧ್ರವಾಗಿದೆ. ಈ ಬಗ್ಗೆ 1972ರಲ್ಲೇ ಹಾಂಡ್ರಸ್ ಎಂಬುವರು ವರದಿ ಮಾಡಿದ್ದರು.
ಲ್ಯಾಟಿನ್ ಭಾಷೆಯಲ್ಲಿ ‘ಪ್ಸ್ಯೂಡೊಸೆರ್ಕೊಸ್ಪೊರಾ ‘ ಎಂಬ ಶಿಲೀಂಧ್ರ ಗಾಳಿಯ ಮೂಲಕ ಪ್ರಸಾರವಾಗುತ್ತಾ ಬಾಳೆ ಎಲೆಗೆ ತಗುಲಿ ನಂತರ ಅದರ ಎಲೆಗಳ ಮೇಲೆ ಗೆರೆಗಳಂಥ ಕಲೆಗಳನ್ನು ಮೂಡಿಸಿ ಘಾಸಿಗೊಳಿಸುತ್ತದೆ. ಶಿಲೀಂಧ್ರದ ಮೇಲೆ ಯಾವಾಗ ಬೆಳಕು ಪ್ರತಿಫಲಿಸುತ್ತದೆಯೋ ಆಗ ಅದು ಸಾವನ್ನಪ್ಪುತ್ತದೆ ಎಂದು ವರದಿ ತಿಳಿಸಿದೆ.
ಆದರೆ, ಬಾಳೆಯ ಎಲ್ಲಾ ಪ್ರಬೇಧಗಳೂ ಅಂತ್ಯವಾಗುತ್ತದೆ ಎಂದು ಈ ವರದಿ ತಿಳಿಸಿಲ್ಲ, ಕೆಲವು ಪ್ರಬೇಧಗಳು ಮಾತ್ರ ಅಳಿವಿನಂಚಿನಲ್ಲಿದೆ ಎಂದಿದೆ.