ಒಡಿಶಾದಲ್ಲಿ ಫಣಿ ಚಂಡಮಾರುತಕ್ಕೆ ಸಿಲುಕಿ ನಲುಗಿರುವ ದಲಿತ ಕುಟುಂಬಗಳಿಗೆ ನಿರಾಶ್ರಿತರ ತಾಣಗಳಲ್ಲಿ ನೆಲೆ ಇಲ್ಲ. ಈ ನಡುವೆ ಜಾತಿ ಎಂಬ ಮತ್ತೊಂದು ಹೇಯ ಚಂಡಮಾರುತ ದಲಿತರ ಮೇಲೆ ಅಪ್ಪಳಿಸಿದ್ದು, ಮೇಲ್ಜಾತಿಯ ಅಮಾನವೀಯ ಕೃತ್ಯಕ್ಕೆ 25 ದಲಿತ ಕುಟುಂಬಗಳು ಬೀದಿಪಾಲಾಗಿದೆ.
ಮೇ 3ರಂದು ಒಡಿಶಾದ ಬಹುತೇಕ ಪ್ರದೇಶಗಳಲ್ಲಿ ಫಣಿ ಚಂಡಮಾಡುದಿಂದ ಭೂಕುಸಿತ ಉಂಟಾಗಿ ಮನೆಗಳು ನೆಲಸಮಗೊಂಡಿದ್ದವು. ಇಡೀ ಪ್ರದೇಶದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಈ ವೇಳೆ ಸರ್ಕಾರ ನಿರ್ಮಿಸಿದ್ದ ನಿರಾಶ್ರಿತರ ಶಿಬಿರಗಳಲ್ಲಿ ನೆಲೆಸಿದ್ದ ಮೇಲ್ಜಾತಿಯ ಜನರು 25 ದಲಿತ ಕುಟುಂಬದ ಒಟ್ಟು 85 ದಲಿತರನ್ನು ಸುರಿಯುವ ಮಳೆಗಾಳಿಯ ನಡುವೆಯೇ ನಿರಾಶ್ರಿತರ ತಾಣದಿಂದ ಅಮಾನವೀಯವಾಗಿ ಹೊರಹಾಕಿದ್ದಾರೆ ಎನ್ನಲಾಗಿದೆ.
ಮೇಲ್ಜಾತಿಯ ದಮನಕ್ಕೆ ಒಳಗಾದ ದಲಿತ ಕುಟುಂಬಗಳು ನಂತರ ಚಂಡಮಾರುತರ ಅಬ್ಬರಕ್ಕೆ ಬುಡಸಮೇತ ಉರುಳಿದ್ದ ಆಲದ ಮರದ ಕೆಳಗೆ ಆಶ್ರಯ ಪಡೆದಿದೆ. ಸುತ್ತಮುತ್ತ 4 ಕಿ.ಮೀ. ಅಂತರದಲ್ಲೇ ಮೂರು ನಿರಾಶ್ರಿತರ ತಾಣಗಳಿದ್ದರೂ ಎಲ್ಲೂ ಆಶ್ರಯ ಸಿಗದೇ ಇರುವುದು ದುರಂತವೇ ಸರಿ!.
ಒಡಿಶಾದ ಬಿರಿಪಡಿಯಾ ಗ್ರಾಮದಲ್ಲಿ ನಡೆದ ಈ ಘಟನೆ ಬಗ್ಗೆ ಇತ್ತೀಚೆಗೆ ಒಡಿಶಾದ ಸಂವಾದ ಪತ್ರಿಕೆಯಲ್ಲಿ ಫಣಿ ಅಪ್ಪಳಿಸಿದ ನಂತರದ ದಿನ ಮೇ 8ರಂದು ವರದಿ ಪ್ರಕಟವಾಗಿತ್ತು. ವರದಿಯಂತೆ ಈ ಪ್ರದೇಶದಲ್ಲಿ ಒಟ್ಟು 8 ದಲಿತ ಕುಟುಂಬಗಳು ಚಂಡಮಾರುತದಿಂದ ಬೀದಿಪಾಲಾಗಿದ್ದರು.
ಆದರೆ ಈ ಘಟನೆ ಬಗ್ಗೆ ಗ್ರಾಮಕ್ಕೆ ಭೇಟಿ ನೀಡಿ ಬಹುಜನ ವಿದ್ಯಾರ್ಥಿ ಸಂಘಟನೆಯ ಯುವ ನಾಯಕ ಅನಿಲ್ ಕುಮಾರ್ ಮಲ್ಲಿಕ್ ಮಾಡಿರುವ ವರದಿ ಇದೀಗ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ದೇಶಾದ್ಯಂತ ವಿರೋಧದ ಅಲೆ ಎದ್ದಿದೆ. ಒಟ್ಟು 25 ಕುಟುಂಬಗಳ 85 ಜನರಿಗೆ ಆಶ್ರಯ ನೀಡದೇ ಬೀದಿಪಾಲು ಮಾಡಿದ್ದಾರೆ ಎಂದು ವರದಿ ತಿಳಿಸಿದೆ.
“ನಾವು ದೋಮ್ ಜಾತಿಗೆ ಸೇರಿದ್ದರಿಂದ ಗ್ರಾಮದಲ್ಲಿರುವ ಮೇಲ್ಜಾತಿಯ ಜನರು ನಮ್ಮನ್ನು ಹರಿಜನ ದೋಮ ಎಂದು (ನಿರಾಶ್ರಿತರ ಶಿಬಿರದಿಂದ) ಹೊರಹಾಕಿದ್ದಾರೆ. ಇಲ್ಲೇ ಸಮೀಪದಲ್ಲಿ ಉರುಳಿಬಿದ್ದಿರುವ ಮರದ ಬುಡದಲ್ಲಿ ಆಶ್ರಯ ಪಡೆದಿದ್ದೇವೆ. ಹಿರಿಯರು, ಮಕ್ಕಳು ಮಹಿಳೆಯರೂ ಸೇರಿದಂತೆ 25 ಕುಟುಂಬದ ಎಲ್ಲಾ ಸದಸ್ಯರು ಇಲ್ಲೇ ವಾಸವಿದ್ದೇವೆ’’ ಎಂದು ಬರಿಪಡಿಯಾ ಗ್ರಾಮದ ದಲಿತಸಂತ್ರಸ್ತೆ ಶೈಲ್ ಜೆನಾ ಆರೋಪಿಸಿದ್ದಾರೆ.
ಮಾಧ್ಯಮಗಳ ಮೂಲಕ ಘಟನೆ ಬಗ್ಗೆ ಮಾಹಿತಿ ಲಭಿಸಿದ್ದು ಈ ಬಗ್ಗೆ ಜಿಲ್ಲಾಧಿಕಾರಿಗಳು ವರದಿಗಾಗಿ ಕಾಯುತ್ತಿದ್ದೇವೆ. ಈ ಘಟನೆಯು ಸತ್ಯಾಂಶವನ್ನು ಒಳಗೊಂಡಿದೆ ಎಂದು ಒಡಿಶಾದ ವಿಶೇಷ ನೆರವು ಆಯುಕ್ತ ಬಿಶ್ನುಪದ ಸೇಥಿ ಸ್ಪಷ್ಟನೆ ನೀಡಿದ್ದಾರೆ.
ಸಾಮಾಜಿಕವಾಗಿ ಸಬಲವಾದ ಕುಟುಂಬಗಳು ಹಾಗೂ ಜಾತಿಗಳು ಈ ಪ್ರದೇಶದಲ್ಲಿ ಇಂತಹ ಅಮಾನವೀಯ ಕೃತ್ಯವನ್ನು ಮೊದಲಿನಿಂದಲೂ ರೂಢಿಸಿಕೊಂಡು ಬಂದಿದ್ದಾರೆ ಎನ್ನುವ ಸೇಥಿ ಅವರು, ಇದೊಂದು ದುರದೃಷ್ಟಕರ, ನೀಚ ಘಟನೆ. ಸರ್ಕಾರ ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕು. ಮಾನವೀಯ ಗುಣಗಳನ್ನು ಹೊಂದಿರುವವರು ಮಾನವರಂತೆ ನಡೆದುಕೊಳ್ಳಿ ಎಂದು ಮನವಿ ಮಾಡಬೇಕಿದೆ. ಕನಿಷ್ಠ ಅವರು ಅನಾರೋಗ್ಯದಿಂದ ಬಳಲುತ್ತಿರುವವರು, ಮಕ್ಕಳು, ಮಹಿಳೆಯರು, ಅಂಗವಿಕಲರು, ವಯಸ್ಕರಿಗಾದರೂ ಆಶ್ರಯ ನೀಡಬೇಕಿತ್ತು ಎಂದಿದ್ದಾರೆ.
ಹೀಗೆ ಬೀದಿಪಾಲಾಗಿದ್ದ ದಲಿತ ಕುಟುಂಬಗಳಿಗೆ ಮೊದಲಿಗೆ ಬರಿಪಡಿಯಾದ ಶಾಲೆಯ ಎರಡು ಸಣ್ಣ ಕೊಠಡಿಗಳಲ್ಲಿರಲು ಸೂಚಿಸಿದರು. ಇಲ್ಲೂ ಇದ್ದ ಮೇಲ್ಜಾತಿಯ ಜನರು ಇವರನ್ನು ಒಳಗೆ ಬರಲು ಅನುಮತಿ ನೀಡಲಿಲ್ಲ ಎನ್ನಲಾಗಿದೆ.
ಸೈಕ್ಲೋನ್ ನಿಂದಾಗಿ ಜೋರು ಮಳೆ ಬರುತ್ತಿದ್ದ ವೇಳೆ ದಲಿತ ಕುಟುಂಬಗಳು ಸಮೀಪದಲ್ಲೇ ಇದ್ದ ಶಾಲೆಗೆ ಓಡಿಹೋಗಿದ್ದಾರೆ. ಆದರೆ ಮೇಲ್ಜಾತಿಯ ಜನರು ಅವರನ್ನು ಒಳಗೆ ಸೇರಿಸಲೇ ಇಲ್ಲ, ಮಳೆಯ ನಡುವೆಯೇ ಹೊರಹಾಕಿದರು. “ಈ ಭೂಮಿ ಉಳ್ಳವರದ್ದು, ದಲಿತರು ಏನೂ ಮಾಡಲು ಸಾಧ್ಯವಿಲ್ಲ” ಎಂದು ವರದಿ ಮಾಡಿದ ಯುವಕ ಅನಿಲ್ ಕುಮಾರ್ ಮಲ್ಲಿಕ್ ದಲಿತರ ಅಸಹಾಯಕತೆಯನ್ನು ವಿವರಿಸಿದ್ದಾನೆ.
ಮಲ್ಲಿಕ್ ಹೇಳುವಂತೆ, “ತಾನು ಆ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದಾಗ ಅಲ್ಲಿ 85 ಜನ ತಂಗಲು ಅಗತ್ಯವಾದ ಸ್ಥಳವೇ ಇರಲಿಲ್ಲ. ಹೆಚ್ಚು ಜನ ತುಂಬಿಕೊಂಡಿದ್ದರು. ಎರಡನೇ ಶೀಬಿರದಲ್ಲೂ ಜನ ತುಂಬಿಕೊಂಡಿದ್ದರು ಮತ್ತು ಮೂರನೇ ಶಿಬಿರ ಪಾಟಲಿಯಿಂದ54 ಕಿ. ಮೀ. ದೂರದಲ್ಲಿದೆ. ಅಲ್ಲಿಯೂ ಮೊದಲು ಪ್ರವೇಶಕ್ಕೆ ಅನುಮತಿ ಕೊಟ್ಟರೂ ಒಂದು ಗಂಟೆಯ ನಂತರ ಅವರನ್ನು ಮತ್ತೆ ಹೊರಹಾಕಿದರು” ಎಂದು ನೈಜ ಚಿತ್ರಣವನ್ನು ವಿವರಿಸಿದ್ದಾರೆ.
ಇಡೀ ಗ್ರಾಮದ ಜನರು ಶಿಬಿರಗಳಲ್ಲಿ ನೆಲೆಸಬೇಕಿದೆ. ಈ ಗ್ರಾಮಕ್ಕೆಂದೇ ವಿಶೇಷವಾದ ನಿರಾಶ್ರಿತರ ಶಿಬಿರ ಇಲ್ಲ, ಹಾಗಾಗಿ ಈ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಮಲ್ಲಿಕ್ ಆರೋಪಿಸಿದ್ದಾರೆ.
ಫಣಿ ಸಂತ್ರಸ್ತ ಪ್ರದೇಶಗಳಲ್ಲಿ ವಿದ್ಯುತ್ ಹಾಗೂ ಮೊಬೈಲ್ ಸಂಪರ್ಕ ಸಹ ಇರಲಿಲ್ಲ. ಆದ್ದರಿಂದ ಪುರಿ ಹಾಗೂ ಜಗತ್ಸಿಂಘಪುರಗಳಲ್ಲಿ ಪರಿಹಾರ ಕಾರ್ಯಗಳನ್ನು ಮಾಡಲು ಗುಂಪಿನೊಂದಿಗೆ ಮಲ್ಲಿಕ್ ಸಹ ಹೊರಟಿದ್ದ. ಆದ್ದರಿಂದ ಮಲ್ಲಿಕ್ ಮತ್ತೆ ಮರಳುವವರೆಗೂ ಇಲ್ಲಿನ ಘಟನೆ ಬಗ್ಗೆ ಮಾಹಿತಿಯೇ ಇರಲಿಲ್ಲ ಎಂದು ಹೇಳಿದ್ದಾರೆ.
ಮಲ್ಲಿಕ್ ಮರಳಿದ ಕೂಡಲೇ ಪುರಿಯಲ್ಲಿರುವ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ದೂರು ದಾಖಲಿಸಿದ್ದಾರೆ. ಜಿಲ್ಲಾಧಿಕಾರಿಗಳು ಸಂತ್ರಸ್ತ ದಲಿತ ಕುಟುಂಬಗಳಿಗೆ ಪಾಲಿಥಿನ್ ಶೀಟ್, ಒಂದು ಕೆಜಿ ಅಕ್ಕಿಯನ್ನು ನೀಡಿದ್ದಾರೆ. ಆದರೆ ಈವರೆಗೂ ಜಿಲ್ಲಾಧಿಕಾರಿ ಕಚೇರಿಯಿಂದ ಯಾವೊಬ್ಬ ಅಧಿಕಾರಿಯು ಗ್ರಾಮಕ್ಕೆ ಬಂದು ಪರಿಶೀಲಿಸಿಲ್ಲ ಎಂದು ಕಿಡಿಕಾರಿದ್ದಾರೆ.
ಬರಿಪಡಿಯಾ ಗ್ರಾಮದ ಇತರ ಪರಿಶಿಷ್ಟ ಜಾತಿಯ ಜನರಿಗೆ ಸೈಕ್ಲೋನ್ ನಿಂದ ಯಾವುದೇ ಅಪಾಯ ಸಂಭವಿಸಿಲ್ಲ. “ ಈ ಸಮುದಾಯದ ಜನರು ಕಳೆದ 60 ವರ್ಷಗಳಿಂದ ಇದೇ ಗ್ರಾಮದಲ್ಲಿ ವಾಸಿಸುತ್ತಿದ್ದಾರೆ. ಆದರೆ ಯಾರಿಗೂ ಈವರೆಗೂ ಭೂಮಿಯ ಹಕ್ಕು ನೀಡಿಲ್ಲ, ಅಷ್ಟೇ ಅಲ್ಲದೇ ಸರ್ಕಾರದಿಂದ ನಮ್ಮ ಜಾತಿಗೆ ದೊರೆಯುವ ಸೌಲಭ್ಯಗಳನ್ನು ಪಡೆಯಲು ತಮ್ಮದೇ ಜಾತಿಯ ಪ್ರಮಾಣ ಪತ್ರವನ್ನೂ ಮಾಡಿಸಿಕೊಳ್ಳಲು ಸಾಧ್ಯವಾಗಿಲ್ಲ,’’ ಎಂದು ಅಸಹಾಯಕತೆಯನ್ನು ಪ್ರದರ್ಶಿಸಿದರು.
ಈ ಗ್ರಾಮದ ಕೇವಲ 25 ಕುಟುಂಬಗಳು ಮಾತ್ರ ಸಣ್ಣ ಮನೆಗಳನ್ನು ನಿರ್ಮಿಸಿಕೊಂಡಿದೆ. ಉಳಿದ ಕುಟುಂಬಗಳು ನೆಲೆಸಿದ್ದ ಮಣ್ಣಿನ ಮನೆಗಳು ನಾಶವಾಗಿದೆ ಎಂದು ಮಲ್ಲಿಕ್ ಹೇಳಿದ್ದಾನೆ.
ಸೈಕ್ಲೋನ್ ಅಪ್ಪಳಿಸಿದ ಕರಾವಳಿಯ ಎಲ್ಲಾ ಪ್ರದೇಶಗಳಲ್ಲೂ ನಿರಾಶ್ರಿತರ ಶಿಬಿರಗಳನ್ನು ಮಾಡಿಲ್ಲ. ಸರ್ಕಾರ ಮೂರು ಕಿ.ಮೀ. ಅಂತರದಲ್ಲಿ 879 ತಾತ್ಕಾಲಿಕ ಸೈಕ್ಲೋನ್ ಶಿಬಿರಗಳನ್ನು ನಿರ್ಮಿಸಿದೆ ಮತ್ತು 4 ಸಾವಿರ ಕಟ್ಟಡಗಳನ್ನು ಗುರುತಿಸಿದೆ ಎಂದು ಸೇಥಿ ಮಾಹಿತಿ ನೀಡಿದ್ದಾರೆ.
ಅಲ್ಲದೇ, ಪುರಿಯಲ್ಲಿ ಇನ್ನೂ ಮೊಬೈಲ್ ನೆಟ್ ವರ್ಕ್ ಮತ್ತು ವಿದ್ಯುತ್ ಸಂಪರ್ಕ ಲಭ್ಯವಿಲ್ಲ. ಆದರೆ ಸರ್ಕಾರ ಪರಿಹಾರ ಸಾಮಗ್ರಿಗಳನ್ನು ವಿತರಿಸುತ್ತಿದೆ ಮತ್ತು 5 ಲಕ್ಷ ಮನೆಗಳನ್ನು ನಿರ್ಮಿಸಲು ಅನುಮತಿಗಾಗಿ ಕಾಯುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಹೇಸಿಗೆ ತಿನ್ನೋ ಹೂಲಸು ಜಾತಿ ಅನ್ನಿ , ಮೇಲ್ಜಾತಿ ಅನ್ನ ಬೇಡಿ