ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಆರ್ಥಿಕ ಹಗರಣಗಳು ಮತ್ತು ಬ್ಯಾಂಕುಗಳಿಗೆ ವಂಚಿಸಿ ಪರಾರಿಯಾಗುವ ಪ್ರಕರಣಗಳು ಹೆಚ್ಚಿವೆ. ಇತ್ತೀಚೆಗೆ 32 ಮಂದಿ ಬ್ಯಾಂಕು ಮತ್ತು ಸಂಸ್ಥೆಗಳಿಗೆ ವಂಚಿಸಿ ವಿದೇಶಕ್ಕೆ ಪರಾರಿಯಾಗಿದ್ದಾರೆ ಎಂದು ಜಾರಿ ನಿರ್ದೇಶನಾಲಯವು ವಿಶೇಷ ನ್ಯಾಯಾಲಯಕ್ಕೆ ಮಾಹಿತಿ ನೀಡಿತ್ತು. ಭಾರತೀಯ ಬ್ಯಾಂಕಿಂಗ್ ಇತಿಹಾಸದಲ್ಲೇ ಅತಿದೊಡ್ಡ ಪ್ರಕರಣವಾದ ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಹಗರಣದ ಪ್ರಮುಖ ಆರೋಪಿಗಳು ನೀರವ್ ಮೋದಿ ಮತ್ತು ಆತನ ಸೋದರ ಸಂಬಂಧಿ ಮೆಹುಲ್ ಚೊಕ್ಸಿ. ಈ ಇಬ್ಬರು ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ವಂಚಿಸಿರುವ ಮೊತ್ತವೇ 14,000 ಕೋಟಿ ರುಪಾಯಿಗಳು.
ದೇಶದ ಹಣಕಾಸು ಮಾರುಕಟ್ಟೆಗೆ ಸುನಾಮಿಯಂತೆ ಬಂದು ಅಪ್ಪಳಿಸಿದ IL&FS ಹಗರಣದ ಬೇರುಗಳನ್ನು ಪತ್ತೆ ಹಚ್ಚುವ ಕಾರ್ಯ ನಡೆದಿದೆ. IL&FS ಸಕಾಲದಲ್ಲಿ ಸಾಲ ಪಾವತಿ ಮಾಡದೇ ಸುಸ್ತಿಯಾದ ನಂತರ ಸೃಷ್ಟಿಯಾದ ಹಣಕಾಸು ಮಾರುಕಟ್ಟೆಯಲ್ಲಿನ ನಗದು ಕೊರತೆ ಇನ್ನೂ ಬ್ಯಾಂಕೇತರ ಹಣಕಾಸು ಸಂಸ್ಥೆಗಳನ್ನು ಕಾಡುತ್ತಲೇ ಇದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣದ ನಂತರ ಮೋದಿ ಸರ್ಕಾರ ಎಚ್ಚೆತ್ತುಕೊಂಡಿದ್ದರೆ ಐಎಲ್ಅಂಡ್ಎಫ್ ಹಗರಣವನ್ನು ಮುಂಚಿತವಾಗಿಯೇ ಪತ್ತೆ ಹಚ್ಚಬಹುದಿತ್ತು. ಆದರೆ, ಮೋದಿ ಸರ್ಕಾರ ಆ ನಿಟ್ಟಿನಲ್ಲಿ ಆಸಕ್ತಿಯನ್ನೇ ತೋರಿಸಲಿಲ್ಲ.
ಈ ನಡುವೆ ಐಎಲ್ಅಂಡ್ಎಫ್ಎಸ್ ಹಗರಣದ ಬಗ್ಗೆ ತಳಸ್ಪರ್ಶಿ ಲೆಕ್ಕಪರಿಶೋಧನೆ ನಡೆಸಿದ ಗ್ರಾಂಡ್ ಥಾರ್ನ್ಟನ್ ತನ್ನ ವರದಿಯನ್ನು ಹೊಸ ಆಡಳಿತ ಮಂಡಳಿಗೆ ಸಲ್ಲಿಸಿದೆ. ಲೆಕ್ಕಪರಿಶೋಧನೆ ವೇಳೆ 107 ಪ್ರಕರಣಗಳಲ್ಲಿ ಸಾಲ ವಿತರಣೆ ಮಾಡುವಾಗ ನಿಯಮಗಳನ್ನು ಪಾಲಿಸದೇ ಇರುವುದು ಬೆಳಕಿಗೆ ಬಂದಿದೆ ಎಂದು ಮನಿಕಂಟ್ರೋಲ್ ಡಾಟ್ಕಾಮ್ ವರದಿ ಮಾಡಿದೆ. ಯಾವುದೇ ಗ್ಯಾರಂಟಿ ಪಡೆಯದೇ ಸಾಲ ವಿತರಿಸಲಾಗಿದೆ. ಸಾಲವಿತರಿಸುವ ವೇಳೆ ಆಡಳಿತ ಮಂಡಳಿಯ ಪೂರ್ವಾಪರ ತಿಳಿದಿಲ್ಲ. ಮನಸೋ ಇಚ್ಛೆ ಸಾಲ ನೀಡಲಾಗಿದೆ ಎಂಬುದು ಲೆಕ್ಕಪರಿಶೋಧನೆ ವೇಳೆ ಪತ್ತೆಯಾಗಿದೆ.
ಈಗ ಬಂಧನಕ್ಕೆ ಒಳಗಾಗಿರುವ ಐಎಲ್ಅಂಡ್ಎಫ್ಎಸ್ ಫೈನಾನ್ಷಿಯಲ್ ಸರ್ವೀಸಸ್ ಮಾಜಿ ಮ್ಯಾನೆಜಿಂಗ್ ಡೈರೆಕ್ಟರ್ ರಮೇಶ್ ಭವ ತಾವು ಎಎಎ ಇನ್ಫೊಸಿಸ್ಟಮ್ಸ್ ಮತ್ತು ಎಎಎಬಿ ಇನ್ಫ್ರಾಸ್ಟ್ರಕ್ಚರ್ ನಲ್ಲಿ ಹೂಡಿಕೆ ಮಾಡಿರುವ ಮಾಹಿತಿಯನ್ನು ಬಹಿರಂಗ ಪಡಿಸಿರಲಿಲ್ಲ. ಕಂಪನಿ ಕಾನೂನು ಪ್ರಕಾರ ಕಂಪನಿ ನಿರ್ದೇಶಕರು ಮತ್ತು ಉನ್ನತ ಹುದ್ದೆಯಲ್ಲಿರುವವರು ಹೂಡಿಕೆ ಮಾಹಿತಿ ಬಹಿರಂಗ ಪಡಿಸುವುದು ಕಡ್ಡಾಯ.
ಗ್ರಾಂಟ್ ಥಾರ್ನ್ಟನ್ ಲೆಕ್ಕಪರಿಶೋಧನೆ ವೇಳೆ ರಮೇಶ್ ಭವ ಸಿಲ್ವರ್ ಗ್ಲೇಡ್ಸ್ ಮತ್ತು ಅನ್ಸಲ್ ಗ್ರೂಪ್ ಜತೆ ಸಂಪರ್ಕಹೊಂದಿದ್ದು, ಈ ಎರಡು ಕಂಪನಿಗಳಿಗೆ 487 ಕೋಟಿ ಸಾಲ ನೀಡಿದ್ದಾರೆ. ಈ ಕಂಪನಿಗೆ ಯಾವುದೇ ಗ್ಯಾರಂಟಿ ಪಡೆಯದೇ ಸಾಲ ನೀಡಲಾಗಿದೆ. ಒಟ್ಟಾರೆ 3,768 ಕೋಟಿ ರುಪಾಯಿಗಳನ್ನು ಯಾವುದೇ ಗ್ಯಾರಂಟಿ ಪಡೆಯದೇ ವಿತರಿಸಲಾಗಿದೆ ಎಂದು ಮನಿಕಂಟ್ರೋಲ್ ಡಾಟ್ಕಾಮ್ ಲೆಕ್ಕಪರಿಶೋಧನೆ ಉಲ್ಲೇಖಿಸಿ ವರದಿ ಮಾಡಿದೆ.
ಒಟ್ಟು 10,264 ಕೋಟಿ ರುಪಾಯಿ ಮೌಲ್ಯದ 107 ಸಾಲ ವಿತರಣೆ ಪ್ರಕರಣಗಳಲ್ಲಿ ನಿಯಮಗಳ ಪಾಲನೆಯಾಗಿಲ್ಲ. ಪ್ರಮುಖ ಕಂಪನಿಗಳಾದ ಎಸ್ಸಾರ್, ಡಿಬಿ ರಿಯಾಲ್ಟಿ, ಎಸ್ಕೆಐಎಲ್, ಗಾಯತ್ರಿ ಗ್ರೂಪ್, ಶಿವಾ, ಎಸ್ಆರ್ಇಐ, ಪಾರ್ಶ್ವನಾಥ್, ಕೋಹೀನೂರ್, ಎಚ್ಡಿಐಎಲ್ ಕಂಪನಿಗಳ ಹೆಸರನ್ನು ಉಲ್ಲೇಖಿಸಲಾಗಿದೆ. ಏಪ್ರಿಲ್ ತಿಂಗಳಲ್ಲಿ ಎಸ್ಎಫ್ಐಒ (ಗಂಭೀರ ವಂಚನೆ ಪ್ರಕರಣಗಳ ತನಿಖಾ ಸಂಸ್ಥೆ) ರಮೇಶ್ ಭವ ಅವರನ್ನು ಬಂಧಿಸಿದೆ. ಮೇಲೆ ಉಲ್ಲೇಖಿಸಿರುವ ಬಹುತೇಕ ಕಂಪನಿಗಳ ನಷ್ಟದಲ್ಲಿವೆ, ಸಕಾಲದಲ್ಲಿ ಸಾಲ ಪಾವತಿ ಮಾಡುವ ಸಾಮರ್ಥ್ಯಹೊಂದಿಲ್ಲ. ಆದರೂ ಆ ಕಂಪನಿಗಳಿಗೆ ಸಾಲವನ್ನು ಒದಗಿಸಲಾಗಿದೆ. ಉಲ್ಲೇಖಿತ 107 ಪ್ರಕರಣಗಳ ಪೈಕಿ 73 ಪ್ರಕರಣಗಳಲ್ಲಿ ಕಂಪನಿಗಳ ನಷ್ಟದ ಹಂತದಲ್ಲಿ ಇದ್ದರೂ ಸಾಲವನ್ನು ಮಂಜೂರು ಮಾಡಲಾಗಿದೆ. 2017 ನವೆಂಬರ್ 1ರಂದೇ ಭಾರತೀಯ ರಿಸರ್ವ್ ಬ್ಯಾಂಕ್ ನಷ್ಟದಲ್ಲಿರುವ ಕಂಪನಿಗಳಿಗೆ ಸಾಲ ವಿಸ್ತರಣೆ ಮಾಡಬಾರದು ಮತ್ತು ಹೊಸದಾಗಿ ಸಾಲ ಮಂಜೂರು ಮಾಡಬಾರದು ಎಂದು ತಾಕೀತು ಮಾಡಿತ್ತು. ಆರ್ಬಿಐ ಆದೇಶವನ್ನು ಮೀರಿ ಸಾಲ ಮಂಜೂರು ಮಾಡಲಾಗಿದೆ. ಎಸ್ಆರ್ ಇ ಐ ಮೂರುಬಾರಿ ಸಾಲ ಪಡೆದು ನಂತರ ಐಎಲ್ಅಂಡ್ಎಫ್ಎಸ್ ಸಮೂಹದ ಕಂಪನಿಗಳಿಗೆ ವರ್ಗಾಯಿಸಿದೆ. ಸಂಗಮ್ ಗ್ರೂಪ್ ಸಹ ಎರಡು ಬಾರಿ ಸಾಲ ಮಾಡಿ ಐಎಲ್ಅಂಡ್ಎಫ್ಎಸ್ ಗೆ ವರ್ಗಾಯಿಸಿದೆ. ಐಎಫ್ಐಎಸ್ 261 ಕೋಟಿ ಮೌಲ್ಯದ ಐಟಿಐಎನ್ ಷೇರುಗಳನ್ನು, ಐಎಲ್ಅಂಡ್ಎಫ್ಎಸ್ ಎನರ್ಜಿ ಡೆವಲಪ್ಮೆಂಟ್ ಕಂಪನಿಯ 360 ಕೋಟಿ ಮೌಲ್ಯದ ಷೇರುಗಳನ್ನು ಐಎಲ್ಅಂಡ್ಎಫ್ಎಸ್ ಐರ್ಪೋರ್ಟ್ಸ್ ಕಂಪನಿಯ 112 ಕೋಟಿ ಮೌಲ್ಯದ ಷೇರುಗಳು ಸೇರಿದಂತೆ ಒಟ್ಟು 733 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಲಾಗಿದೆ. ಲೆಕ್ಕ ಪರಿಶೋಧನೆ ವೇಳೆ 20 ಪ್ರಕರಣಗಳಲ್ಲಿ 1,827 ಕೋಟಿ ಮೌಲ್ಯದ ಸಾಲವನ್ನು ನೀಡುವಾಗ ಯಾವುದೇ ಗ್ಯಾರಂಟಿ ಪಡೆಯದಿರುವುದು ಪತ್ತೆಯಾಗಿದೆ. 19 ಪ್ರಕರಣಗಳಲ್ಲಿ ಕಂಪನಿಗಳು ಪಡೆದ ಸಾಲಕ್ಕೆ ನೀಡಿದ ಗ್ಯಾರಂಟಿ ಮೊತ್ತವು ಕಡಮೆ ಇರುವುದು ಪತ್ತೆಯಾಗಿದೆ.
ಏನಿದು ಐಎಲ್ಅಂಡ್ಎಫ್ಎಸ್ ಹಗರಣ?
ಪಂಜಾಬ್ ನ್ಯಾಷನಲ್ ಬ್ಯಾಂಕ್ ನಂತರ ದೇಶದಲ್ಲಿ ನಗದು ಕೊರತೆಗೆ ಕಾರಣವಾಗಿ ಬ್ಯಾಂಕುಗಳು ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ ದುಃಸ್ವಪ್ನವಾಗಿ ಕಾಡಿದ ಮತ್ತೊಂದು ಬೃಹತ್ ಹಗರಣ ಎಂದರೆ ಐಎಲ್ಅಂಡ್ಎಫ್ಎಸ್. ಐಎಲ್ಅಂಡ್ಎಫ್ಎಸ್ ಮೂಲಭೂತ ಸೌಲಭ್ಯ ಯೋಜನೆಗಳಿಗೆ ದೀರ್ಘಾವಧಿ ಸಾಲ ನೀಡಲು ರೂಪುಗೊಂಡಿರುವ ಸಂಸ್ಥೆ. ವಿವಿಧ ವಲಯಗಳ ಯೋಜನೆಗಳಿಗೆ ಉಪಸಂಸ್ಥೆಗಳ ಮೂಲಕ ಹಣಕಾಸು ೧ಒದಗಿಸುತ್ತಾ ಬಂದಿದೆ. ಐಎಲ್ಅಂಡ್ಎಫ್ಎಸ್ ನಲ್ಲಿ ಮೊದಲು ಸಮಸ್ಯೆ ಪ್ರಾರಂಭವಾಗಿದ್ದು 2018ರ ಸೆಪ್ಟಂಬರ್ ತಿಂಗಳಲ್ಲಿ. ಐಎಲ್ಅಂಡ್ಎಫ್ಎಸ್ ಸಿಡ್ಬಿಯಿಂದ ಪಡೆದಿದ್ದ 1000 ಕೋಟಿ ರುಪಾಯಿ ಸಾಲ ಮರುಪಾವತಿ ಮಾಡಲು ಸಾಧ್ಯವಾಗದೇ ಸುಸ್ತಿಯಾಯಿತು. ವಿಶ್ವಾಸಾರ್ಹತೆ ಮತ್ತು ಸಕಾಲದಲ್ಲಿ ಸಾಲ ಮರುಪಾವತಿಗೆ ಹೆಸರಾಗಿದ್ದ ಐಎಲ್ಅಂಡ್ಎಫ್ಎಸ್ ಸುಸ್ತಿಯಾಗಿದ್ದು ಭಾರತೀಯ ಹಣಕಾಸು ಮಾರುಕಟ್ಟೆಗೆ ಆಘಾತವನ್ನು ನೀಡಿತು. ಇದೇ ವೇಳೆ ಐಎಲ್ಅಂಡ್ಎಫ್ಎಸ್ ಉಪಸಂಸ್ಥೆಯೊಂದು ಡೆವಲಪ್ಮೆಂಟ್ ಫೈನಾನ್ಸ್ ಕಂಪನಿಗೆ 500 ರುಪಾಯಿ ಸಾಲ ಮರುಪಾವತಿ ಮಾಡದೇ ಸುಸ್ತಿಯಾಗಿತು. ಈ ಎರಡು ಸುಸ್ತಿ ಪ್ರಕರಣಗಳು ಸುಮಾರು 1 ಲಕ್ಷ ಕೋಟಿ ರುಪಾಯಿ ಸಾಲ ವಿತರಿಸಿದ್ದ ಐಎಲ್ಅಂಡ್ಎಫ್ಎಸ್ ನಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನು ತೋರಿಸಿದ್ದವು. ದೇಶದ ಪ್ರಮುಖ ಮ್ಯೂಚುವಲ್ ಫಂಡ್ ಹೌಸ್ ಗಳು, ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಒಟ್ಟು 11 ಲಕ್ಷ ಕೋಟಿ ರುಪಾಯಿ ಮೌಲ್ಯ ಬಾಂಡ್ ಗಳನ್ನು ಹೊಂದಿವೆ. ಐಎಲ್ಅಂಡ್ಎಫ್ಎಸ್ ಗೆ ಕ್ರೆಡಿಟ್ ರೇಟಿಂಗ್ ಏಜೆನ್ಸಿಗಳು ಅತಿ ಗರಿಷ್ಠ ಮಟ್ಟದ ರೇಟಿಂಗ್ ಆದ ಎಎ+ ರೇಟಿಂಗ್ ನೀಡಿದ್ದರಿಂದ ಮ್ಯುಚುವಲ್ ಫಂಡ್ ಹೌಸ್ ಗಳು ಬಾಂಡ್ ಗಳ ಮೇಲೆ ಹೂಡಿಕೆ ಮಾಡಿವೆ.
ಸುಸ್ತಿ ಪ್ರಕರಣಗಳು ಹೊರಬಿದ್ದ ನಂತರ ಐಎಲ್ಅಂಡ್ಎಫ್ಎಸ್ ಕ್ರೆಡಿಟ್ ರೇಟಿಂಗ್ ಅನ್ನು ಗಣನೀಯವಾಗಿ ತಗ್ಗಿಸಲಾಯಿತು. ಹೀಗಾಗಿ ಐಎಲ್ಅಂಡ್ಎಫ್ಎಸ್ ಜತೆ ವ್ಯವಹಾರ ಹೊಂದಿದ್ದ ಬಹುತೇಕ ಬ್ಯಾಂಕುಗಳು ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳು ನಷ್ಟಕ್ಕೀಡಾಗುವ ಆತಂಕದಲ್ಲಿವೆ. ಐಎಲ್ಅಂಡ್ಎಫ್ಎಸ್ ವಿವಿಧ ಬ್ಯಾಂಕುಗಳು ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಂದ ಅಲ್ಪಾವಧಿ ಮಧ್ಯಮಾವಧಿ ಸಾಲ ಪಡೆದು ಮೂಲಭೂತ ಸೌಲಭ್ಯ ಯೋಜನೆಗಳಿಗೆ ದೀರ್ಘಾವಧಿ ಸಾಲ ನೀಡುತ್ತದೆ. ಮೂಲಭೂತ ಸೌಲಭ್ಯ ಯೋಜನೆಗಳ ಅನುಷ್ಠಾನ ವಿಳಂಬವಾದಂತೆ ಸಾಲ ಮರುಪಾವತಿಯೂ ವಿಳಂಬವಾಗುತ್ತದೆ. ವಿಳಂಬವಾದ ಪ್ರಕರಣಗಳಲ್ಲಿ ಸಾಲವನ್ನು ಮರುಹೊಂದಾಣಿಕೆ ಮಾಡಲಾಗುತ್ತದೆ. ಆದರೆ, ಮರುಹೊಂದಾಣಿಕೆಯನ್ನು ಮನಸೋ ಇಚ್ಛೆ ಮಾಡಿದ್ದರಿಂದಾಗಿ ಪಡೆದ ಸಾಲವನ್ನು ಮರುಪಾವತಿಸಲಾಗದ ಹಂತಕ್ಕೆ ಐಎಲ್ಅಂಡ್ಎಫ್ಎಸ್ ಮುಟ್ಟಿದೆ. ಇದು ಭಾರತದ ಹಣಕಾಸು ಮಾರುಕಟ್ಟೆಯಲ್ಲಿ ನಗದು ಕೊರತೆಗೆ ಕಾರಣವಾಗಿದ್ದು, ಸೆಪ್ಟಂಬರ್ ತಿಂಗಳಿಂದೀಚೆಗೆ ಬಹುತೇಕ ಬ್ಯಾಂಕೇತರ ಹಣಕಾಸು ಸಂಸ್ಥೆಗಳ ಷೇರುಗಳು ಕುಸಿದಿವೆ. ಐಎಲ್ಅಂಡ್ಎಫ್ಎಸ್ ಗೆ ನೀಡಿರುವ ಸಾಲವು ನಿಷ್ಕ್ರಿಯ ಸಾಲವಾಗಿ ಪರಿಣಮಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ಸಂಭವನೀಯ ನಷ್ಟವನ್ನು ಘೋಷಿಸಿವೆ. ಹೀಗಾಗಿ ನಾಲ್ಕನೇ ತ್ರೈಮಾಸಿಕದಲ್ಲಿ ಬಹುತೇಕ ನಷ್ಟ ಅನುಭವಿಸಿವೆ. ಐಎಲ್ಅಂಡ್ಎಫ್ಎಸ್ ಹೊಸ ಆಡಳಿತ ಮಂಡಳಿ ಹಳೆಯ ಹಗರಣವನ್ನು ಸ್ವಚ್ಛಗೊಳಿಸಬೇಕಿದೆ. ಪಂಜಾಬ್ ನ್ಯಾಷನಲ್ ಹಗರಣದ ನಂತರ ಎಚ್ಚೆತ್ತಿದ್ದರೆ, ಐಎಲ್ಅಂಡ್ಎಫ್ಎಸ್ ಹಗರಣವನ್ನು ಮೋದಿ ಸರ್ಕಾರವು ಮುಂಚಿತವಾಗಿ ಪತ್ತೆ ಹಚ್ಚಬಹುದಿತ್ತು. ಆದರೆ, ಮೋದಿ ಸರ್ಕಾರ ಆ ನಿಟ್ಟಿನಲ್ಲಿ ವಿಫಲವಾಗಿದೆ.