ನವದೆಹಲಿ: ಪಶ್ಚಿಮ ಬಂಗಾಳದ ಚುನಾವಣಾ ಕಣ ದಿನದಿನಕ್ಕೂ ರಣಕಣವಾಗಿ ಮಾರ್ಪಟ್ಟು, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ರೋಡ್ ಶೋ ಮಾಡಿದ ಸಂದರ್ಭದಲ್ಲಿ ವ್ಯಾಪಕ ಹಿಂಸಾಚಾರ ನಡೆದ ಹಿನ್ನೆಲೆಯಲ್ಲಿ ಮತದಾನಕ್ಕೆ 48 ಗಂಟೆಗಳಿಗೆ ಮುಂಚಿತವಾಗಿಯೇ ಎಲ್ಲಾ ರೀತಿಯ ಚುನಾವಣಾ ಪ್ರಚಾರವನ್ನು ನಿಷೇಧಿಸಿ ಚುನಾವಣಾ ಆಯೋಗ ಆದೇಶ ಹೊರಡಿಸಿದೆ.
ನೆನ್ನೆ ಸಂಜೆ 4.30 ರ ಸಮಯದಲ್ಲಿ ಅಮಿತ್ ಶಾ ಅವರ ರೋಡ್ ಶೋ ಸಂದರ್ಭದಲ್ಲಿ ರಾಜ್ಯದ ಹೊರಗಿನಿಂದ ಬಂದ ನೂರಾರು ಗೂಂಡಾಗಳು ದಾಂಧಲೆ ನಡೆಸಿದ್ದರು. ಅದರಲ್ಲೂ ಮುಖ್ಯವಾಗಿ ಪ್ರತಿಷ್ಠಿತ ಈಶ್ವರ ಚಂದ್ರ ವಿದ್ಯಾಸಾಗರ ಕಾಲೇಜಿನ ಆವರಣದಲ್ಲಿರುವ ಪ್ರಖ್ಯಾತ ಸಮಾಜ ಸುಧಾರಕ ಈಶ್ವರ ಚಂದ್ರ ವಿದ್ಯಾಸಾಗರ ಅವರ ಪುತ್ಥಳಿಯನ್ನು ಒಡೆದು ಹಾಕಿದ್ದರು. ಈ ಕುರಿತು ವಿಡಿಯೋಗಳನ್ನು ಇಂದು ಟಿಎಂಸಿ ಬಿಡುಗಡೆ ಮಾಡಿದೆ. ಮಂಗಳವಾರ ವಿದ್ಯಾಸಾಗರ ಕಾಲೇಜಿನಲ್ಲಿ ನಡೆಸಿದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಕೊಲ್ಕತ ಪೊಲೀಸರು 30 ಜನರನ್ನು ಬಂಧಿಸಿದ್ದು ಅವರಲ್ಲಿ ಬಹುತೇಕರು ನೆರೆ ರಾಜ್ಯಗಳು ಹಾಗೂ ದೆಹಲಿಯ ಬಿಜೆಪಿ ಕಾರ್ಯಕರ್ತರು ಎನ್ನಲಾಗಿದೆ.
ಈ ಘಟನೆ ಪಶ್ಚಿಮ ಬಂಗಾಳದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದು ವ್ಯಾಪಕ ಹಿಂಸಾಚಾರ ಉಲ್ಬಣಗೊಳ್ಳುವ ಸಾಧ್ಯತೆ ಇದೆ.
ನಾಳೆ ರಾತ್ರಿ 10 ಗಂಟೆಯಿಂದ ಅನ್ವಯವಾಗುವಂತೆ ಎಲ್ಲಾ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ತಮ್ಮ ಎಲ್ಲಾ ಬಗೆಯ ಚುನಾವಣಾ ಪ್ರಚಾರ ಸಮಾಪ್ತಿಗೊಳಿಸುವಂತೆ ಚುನಾವಣಾ ಆಯೋಗ ತಾಕೀತು ಮಾಡಿದೆ.
ಸಾಮಾನ್ಯ ನಿಯಮದಂತೆ ಶುಕ್ರವಾರ ಸಂಜೆ 5 ಗಂಟೆಗೆ ಚುನಾವಣಾ ಪ್ರಚಾರ ಅಂತ್ಯಗೊಳ್ಳಬೇಕಿತ್ತು.
ಆದರೆ ರಾಜ್ಯದಲ್ಲಿ ಬಿಜೆಪಿ- ಟಿಎಂಸಿ ನಡುವೆ ಮಾರಾಮಾರಿ ನಿಯಂತ್ರಣ ತಪ್ಪಿದ್ದು ಹೆಚ್ಚಿನ ಹಿಂಸಾಚಾರ ತಪ್ಪಿಸಲು, ಚುನಾವಣೆಯನ್ನು ಶಾಂತ ರೀತಿಯಿಂದ ನಡೆಸು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಚುನಾವಣಾ ಆಯುಕ್ತರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಭಾರತದ ಸಂವಿಧಾನದ 324 ನೇ ವಿಧಿಯು ಚುನಾವಣಾ ಆಯೋಗದ ಸಂರಚನೆ, ಅದರ ಅಧಿಕಾರ ವ್ಯಾಪ್ತಿಯನ್ನು ವಿವರಿಸುತ್ತದೆ. ಭಾರತದ ಎಲ್ಲಾ ರಾಜ್ಯಗಳಲ್ಲಿ ಚುನಾವಣಾ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ನಿಯಂತ್ರಿಸುವ, ಪರಿಸ್ಥಿತಿಗೆ ಅನುಗುಣವಾಗಿ ಸೂಕ್ತ ಕ್ರಮ ಕೈಗೊಳ್ಳುವ ಅಧಿಕಾರವನ್ನು ಸಂವಿಧಾನವು 324 ನೇ ವಿಧಿಯ ಮುಖಾಂತರ ಚುನಾವಣಾ ಆಯೋಗಕ್ಕೆ ನೀಡಿತ್ತದೆ. ಇದರ ಬಲದಿಂದ ನಿಗದಿತ ಅವಧಿಗಿಂತಲೂ ಒಂದು ದಿನ ಮೊದಲೇ ಚುನಾವಣಾ ಪ್ರಚಾರವನ್ನು ಸ್ಥಗಿತಗೊಳಿಸಿ ಚುನಾವಣಾ ಆಯೋಗ ಆದೇಶ ಹೊರಡಿಸಿದ್ದು ದೇಶದ ಚುನಾವಣಾ ಇತಿಹಾಸದಲ್ಲಿ ಇದೇ ಮೊದಲು ಎನ್ನಲಾಗಿದೆ.
ಮೇ 19 ರಂದು ಪಶ್ಚಿಮ ಬಂಗಾಳದಲ್ಲಿ ಅಂತಿಮ ಹಂತದ ಮತದಾನ ಜರುಗಲಿದೆ.