ಬೆಂಗಳೂರು: ಕಾದಂಬರಿಕಾರ, ನಾಟಕಕಾರ ಹಾಗೂ ಪ್ರಜಾವಾಣಿ ದಿನಪತ್ರಿಕೆಯ ಪ್ರಥಮ ಸಂಪಾದಕರಾದ ಬಿ. ಪುಟ್ಟಸ್ವಾಮಯ್ಯ ಅವರ ಬದುಕು ಮತ್ತು ಬರೆಹ ಕುರಿತಂತೆ ಶುಕ್ರವಾರ (17-05-19) ವಿಚಾರ ಸಂಕಿರಣ ನಡೆಯಲಿದೆ.
ಬೆಂಗಳೂರಿನ ಕನ್ನಡ ಭವನದ ನಯನ ಸಭಾಂಗಣದಲ್ಲಿ ಬೆಳಿಗ್ಗೆ 10.30ಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಹಾಗೂ ಪಂಪ ಸಾಂಸ್ಕೃತಿಕ ಮತ್ತು ಸಾಮಾಜಿಕ ಕೇಂದ್ರ ಜಂಟಿಯಾಗಿ ಹಮ್ಮಿಕೊಂಡಿರುವ ಈ ಕಾರ್ಯಕ್ರಮಕ್ಕೆ ಹಿರಿಯ ಸಾಹಿತಿಗಳೂ, ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರೂ ಆಗಿರುವ ಚಂದ್ರಶೇಖರ ಕಂಬಾರ ಚಾಲನೆ ನೀಡಲಿದ್ದಾರೆ. ರಂಗ ಹಾಗೂ ಸಿನಿಮಾ ನಿರ್ದೇಶಕರಾದ ಟಿ ಎಸ್ ನಾಗಾಭರಣ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೆ ಎಂ ಜಾನಕಿ ಭಾಗವಹಿಸಲಿದ್ದಾರೆ. ನಾಗೆಂದ್ರ ಪ್ರಸಾದ್, ಉಗಮ ಶ್ರೀನಿವಾಸ್, ಎಲ್ ಎನ್ ಮುಕುಂದರಾಜು ಗೌರವ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಂಜೆಯವರೆಗೂ ವಿವಿಧ ಗೋಷ್ಠಿಗಳನ್ನು ಹಮ್ಮಿಕೊಳ್ಳಲಾಗಿದೆ. ಸಂಜೆ 6.15ಕ್ಕೆ ಬಿ. ಪುಟ್ಟಸ್ವಾಮಯ್ಯ ವಿರಚಿತ ‘ಕುರುಕ್ಷೇತ್ರ’ ನಾಟಕದ ದೃಶ್ಯ ಪ್ರದರ್ಶನವಿದೆ.
ಮದ್ಯಾಹ್ನ 12.30ಕ್ಕೆ ಆರಂಭಗೊಳ್ಳುವ ಮೊದಲ ವಿಚಾರ ಗೋಷ್ಠಿಯಲ್ಲಿ “ಪತ್ರಕರ್ತರಾಗಿ ಬಿ.ಪುಟ್ಟಸ್ವಾಮಯ್ಯ” ವಿಷಯದ ಕುರಿತು ಹಿರಿಯ ಪತ್ರಕರ್ತೆ ಆರ್ ಪೂರ್ಣಿಮಾ ವಿಚಾರ ಮಂಡಿಸಲಿದ್ದಾರೆ. ಕನ್ನಡ ರಂಗಭೂಮಿಗೆ ಬಿ.ಪುಟ್ಟಸ್ವಾಮಯ್ಯ ಅವರ ಕೊಡುಗೆ ವಿಷಯದ ಕುರಿತು ಎಚ್. ಪಾರ್ಶ್ವನಾಥ್ ವಿಷಯ ಮಂಡಿಸಲಿದ್ದಾರೆ.
ಮದ್ಯಾಹ್ನ 2.30ಕ್ಕೆ ಆರಂಭಗೊಳ್ಳುವ ಎರಡನೇ ಗೋಷ್ಠಿಯಲ್ಲಿ ಬಿ.ಪುಟ್ಟಸ್ವಾಮಯ್ಯ ಅವರ ಬದುಕು ಮತ್ತು ಚಿಂತನೆಗಳ ಕುರಿತು ಪಿ.ಜಯಲಕ್ಷ್ಮಿ ಅಭಯಕುಮಾರ್ ವಿಷಯ ಮಂಡಿಸಲಿದ್ದಾರೆ. ಪುಟ್ಟಸ್ವಾಮಯ್ಯ ಅವರ ಕಾದಂಬರಿಗಳು ವಿಷಯದ ಕುರಿತು ಬೇಲೂರು ರಘುನಂದನ್ ಮತ್ತು ಬಿ.ಪುಟ್ಟಸ್ವಾಮಯ್ಯ ಅವರ ಸಾಮಾಜಿಕ ಚಿಂತನೆಗಳು ಕುರಿತು ಆರ್. ವೆಂಕಟರಾಜು ವಿಷಯ ಮಂಡಿಸಲಿದ್ದಾರೆ.
ಸಮಾರೋಪ ಸಮಾರಂಭದ ಉದ್ಘಾಟನೆಯನ್ನು ಹಿರಿಯ ಕವಿ ಹಾಗೂ ಸಾಹಿತ್ಯ ಅಕಾಡೆಮಿಯ ಸಲಹಾ ಮಂಡಳಿಯ ಸಂಯೋಜನಕರಾಗಿರುವ ಸಿದ್ದಲಿಂಗಯ್ಯ ನಡೆಸಲಿದ್ದಾರೆ. ಕಸಾಪದ ಕಾರ್ಯದರ್ಶಿಗಳಾಗಿರುವ ರಾಜಶೇಖರ ಹತಗುಂದಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಶಶಿಧರ ಅಡಪ, ಬಿಕೆ ಶ್ರೀನಿವಾಸ, ಎಂ ವಿಶ್ವನಾಥ್ ಹಾಗೂ ಸಿಕೆ ಗುಂಡಣ್ಣ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಸಾಹಿತ್ಯ ಅಕಾಡೆಮಿ ಪ್ರಕಟಣೆ ತಿಳಿಸಿದೆ.