ರಾಜಸ್ತಾನದ ಕಾಂಗ್ರೆಸ್ ಸರ್ಕಾರವು ಭಾರತೀಯ ಜನತಾ ಪಾರ್ಟಿಯ ವಸುಂಧರ ರಾಜೇ ನೇತೃತ್ವದ ಸರ್ಕಾರ ರಾಜ್ಯದ ಪಠ್ಯಪುಸ್ತಕದಲ್ಲಿ ಮಾಡಿದ್ದ ಬದಲಾವಣೆಯನ್ನು ರದ್ದುಗೊಳಿಸಲು ಸಿದ್ಧವಾಗಿದೆ. ಆರೆಸ್ಸೆಸ್ ಐಕಾನ್ ವಿನಾಯಕ್ ಸಾವರ್ಕರ್ ಅವರನ್ನು ಪಠ್ಯಪುಸ್ತಕಗಳಲ್ಲಿ “ಕೆಚ್ಚೆದೆಯ ಕ್ರಾಂತಿಕಾರಿ” ಎಂದು ಉಲ್ಲೇಖಿಸಿರುವುದನ್ನು ಕಾಂಗ್ರೆಸ್ ಸರ್ಕಾರವು ತೆರವುಗೊಳಿಸಲು ನಿರ್ಧರಿಸಿದೆ ಮತ್ತು ಸಾವರ್ಕರ್ ಬ್ರಿಟಿಷರಿಗೆ ಬರೆದಿದ್ದ ಕ್ಷಮಾಪಣಾ ಪತ್ರವನ್ನು ಪಠ್ಯದಲ್ಲಿ ಸೇರಿಸಲು ನಿರ್ಣಯ ತೆಗೆದುಕೊಂಡಿದೆ.
2014ರಲ್ಲಿ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗ ವಸುಂಧರ ರಾಜೇ ಸರ್ಕಾರವು ನರೇಂದ್ರ ಮೋದಿ ಸರಕಾರದ ವೈಭವೀಕರಣ ಮತ್ತು ಪಕ್ಷದ ಹಿಂದುತ್ವ ಸಿದ್ಧಾಂತವನ್ನು ಪಠ್ಯಕ್ರಮದಲ್ಲಿ ಸೇರಿಸಿತ್ತು.
10 ನೇ ತರಗತಿಯ ಪಠ್ಯಪುಸ್ತಕದಲ್ಲಿ “ಭಾರತದಲ್ಲಿನ ಸ್ವಾತಂತ್ರ್ಯ ಹೋರಾಟ” ಎಂಬ ಅಧ್ಯಾಯದಲ್ಲಿ ಸಾವರ್ಕರ್ ಗೆ ಗಮನಾರ್ಹ ಸ್ಥಾನವನ್ನು ನೀಡಲಾಗಿತ್ತು. “ಜವಾಹರಲಾಲ್ ನೆಹರೂರರವರನ್ನು ಕಡೆಗಣಿಸಿ ಎರಡು ಬಾರಿ ಜೀವಾವಧಿ ಶಿಕ್ಷೆಗೆ ಗುರಿಯಾದ ಮತ್ತು ವಿಭಜನೆಯನ್ನು ತಡೆಯಲು ದಣಿವರಿಯದ ಪ್ರಯತ್ನಗಳನ್ನು ಮಾಡಿದ ಏಕೈಕ ಕೆಚ್ಚೆದೆಯ ಕ್ರಾಂತಿಕಾರಿ” ಎಂದು ಸಾವರ್ಕರನನ್ನು ಹೊಗಳಲಾಗಿತ್ತು.
ಇದರ ಜೊತೆಗೆ, ಮಹಾತ್ಮಾ ಗಾಂಧಿಯವರ ಹತ್ಯೆ ಮತ್ತು 2002 ರಲ್ಲಿ ನಡೆದ ಗುಜರಾತ್ ಗಲಭೆಗಳ ಬಗ್ಗೆ ಯಾವುದೇ ಉಲ್ಲೇಖವನ್ನು ಪಠ್ಯಪುಸ್ತಕದಲ್ಲಿ ನೀಡಿರಲಿಲ್ಲ. ಮೋದಿ ಸರಕಾರವನ್ನು ವೈಭವೀಕರಿಸಲಿಕ್ಕಾಗಿಯೆ ಪಠ್ಯಪುಸ್ತಕದಲ್ಲಿ ನೋಟು ಅಮಾನ್ಯಿಕರಣ ಮತ್ತು ಸರ್ಜಿಕಲ್ ಸ್ಟ್ರೈಕನ್ನು “ಐತಿಹಾಸಿಕ” ಎಂದು ಕರೆಯಲಾಗಿತ್ತು. ಯಾವುದೇ ಸರ್ಕಾರದ ನೀತಿಯ ಬಗ್ಗೆ ನಿರ್ಣಾಯಕ ವಿಶ್ಲೇಷಣೆಯನ್ನು ಪಠ್ಯಕ್ರಮದಲ್ಲಿ ನೀಡಿರಲಿಲ್ಲ.
ರಾಜಾಸ್ತಾನ್ ಸೆಕೆಂಡರಿ ಎಜುಕೇಶನ್ ಆಕ್ಟ್, 1957 ರ ಸೆಕ್ಷನ್ 22 ರಡಿಯಲ್ಲಿ, ರಾಜಸ್ಥಾನ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಆರ್ಬಿಎಸ್ಇ) ಪಠ್ಯಪುಸ್ತಕ ರಚನಾ ಸಮಿತಿಯನ್ನು ರಚಿಸುತ್ತದೆ ಮತ್ತು ಈ ಸಮೀತಿಯು ಪಠ್ಯಪುಸ್ತಕಗಳ ಪರಿಷ್ಕರಣೆ, ರಚನೆ ಮತ್ತು ಬದಲಾವಣೆಗೆ ಸಂಪೂರ್ಣ ಜವಬ್ಧಾರಿಯನ್ನು ಹೊಂದಿರುತ್ತದೆ.
ಕಾಂಗ್ರೇಸ್ ಸರ್ಕಾರ ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ಅಧಿಕಾರಕ್ಕೆ ಬಂದ ಬಳಿಕ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯನ್ನು ರಚಿಸಿದೆ. ಈ ಸಮೀತಿಯು ಪಠ್ಯಪುಸ್ತಕವನ್ನು ಪರಿಷ್ಕರಿಸಬೇಕೆಂದು ಶಿಫಾರಸು ಮಾಡುವ ಜೊತೆಗೆ ಸಾವರ್ಕರ್ ಹೇಗೆ ಮತ್ತು ಏಕೆ ಬ್ರಿಟೀಷರ ಬಳಿ ಕ್ಷಮೆಯಾಚಿಸಿದ ಎಂಬುದನ್ನು ಪಠ್ಯಕ್ರಮದಲ್ಲಿ ಸೇರಿಸಲು ಆಲೋಚಿಸಿತ್ತು.
ಹೊಸ ಶೈಕ್ಷಣಿಕ ವರ್ಷದಿಂದ ಪಠ್ಯಪುಸ್ತಕಗಳಲ್ಲಿ ಸಮಿತಿಯ ಶಿಫಾರಸುಗಳನ್ನು ಸೇರಿಸಲಾಗುವುದು ಎಂದು ರಾಜ್ಯ ಶಿಕ್ಷಣ ಸಚಿವ ಗೋವಿಂದ ಸಿಂಗ್ ದೋತಾಸರ ಸೋಮವಾರ ಹೇಳಿದ್ದಾರೆ.
ಹಿಂದಿನ ಬಿಜೆಪಿ ಸರ್ಕಾರ ತನ್ನ ರಾಜಕೀಯ ಲಾಭಕ್ಕಾಗಿ ಶಿಕ್ಷಣವನ್ನು ಆರೆಸ್ಸೆಸ್ಸಿನ ಪ್ರಯೋಗಾಲಯವಾಗಿ ಪರಿವರ್ತಿಸಿದೆ. ಸಾವರ್ಕರ್ ಮತ್ತು ದೀನದಯಾಳ್ ಉಪಾಧ್ಯಾಯರಂತಹ ಜನರನ್ನು ವೈಭವೀಕರಿಸುತ್ತಿದೆ ಆದರೆ ಬಲವಾದ ಸಾಕ್ಷ್ಯಾಧಾರಗಳು ಮತ್ತು ಸತ್ಯಗಳನ್ನು ಆಧರಿಸಿ ಸಾವರ್ಕರ್ ಬ್ರಿಟಿಷರಿಗೆ ಕ್ಷಮೆಗಾಗಿ ಅರ್ಜಿ ಸಲ್ಲಿಸಿದ್ದನ್ನು ಪಠ್ಯಕ್ರಮದಲ್ಲಿ ಸೇರಿಸಲೆಬೇಕೆಂದು ಸಮಿತಿ ನಿರ್ಧರಿಸಿದೆ.
ರಾಜಸ್ತಾನದ ಮಾಜಿ ಶಿಕ್ಷಣ ಸಚಿವ ಬಿ.ಜೆ.ಪಿಯ ವಾಸುದೇವ್ ದೇವನಾನಿ ಈ ನಡೆಯನ್ನು ಹಿಂದೂ ವಿರೋಧಿ ಹೋರಾಟವೆಂದು ಕರೆದಿದ್ದಾರೆ.
“ಮಹಾರಾಣ ಪ್ರತಾಪ್ ನಂತರ, ಕಾಂಗ್ರೆಸ್ ಸರ್ಕಾರ ತನ್ನ ಹಿಂದುತ್ವ ವಿರೋಧಿ ಮನಸ್ಥಿತಿ ಮೂಲಕ ಮಹಾನ್ ದೇಶಭಕ್ತ ಮತ್ತು ಸ್ವಾತಂತ್ರ್ಯ ಹೋರಾಟಗಾರ ಸಾವರ್ಕರ್ ಅವರನ್ನು ಅವಮಾನಿಸಿದೆ. ಕೇವಲ ಒಂದು ಕುಟುಂಬದವರನ್ನು ಆದರ್ಶವೆನ್ನುವ ಪಕ್ಷವು ಯಾವಾಗಲೂ ಇತರ ಶ್ರೇಷ್ಠ ವ್ಯಕ್ತಿಗಳ ಬಗ್ಗೆ ಇಂತಹ ವರ್ತನೆಯನ್ನು ತೋರಿಸುತ್ತದೆ. “ಎಂದು ಅವರು ಟ್ವೀಟ್ ಮಾಡಿದ್ದಾರೆ.