ಈ ಬಾರಿಯ ಲೋಕಸಭಾ ಚುನಾವಣೆಯ ಉದ್ದಕ್ಕೂ ತೀವ್ರ ಟೀಕೆ ಮತ್ತು ಮುಜಗರಕ್ಕೆ ಒಳಗಾಗಿರುವ ಭಾರತೀಯ ಚುನಾವಣಾ ಆಯೋಗ, ಇದೀಗ ಅಂತಿಮ ಹಂತದ ಮತದಾನಕ್ಕೆ ಮುನ್ನ ಮಂಗಳವಾರ ಪಶ್ಚಿಮ ಬಂಗಾಳದಲ್ಲಿ ನಡೆದ ಹಿಂಸಾಚಾರದ ಹಿನ್ನೆಲೆಯಲ್ಲಿ ತೆಗೆದುಕೊಂಡಿರುವ ಕ್ರಮಕ್ಕಾಗಿ ಮತ್ತೊಮ್ಮೆ ತೀವ್ರ ಟೀಕೆಗೆ ಒಳಗಾಗಿದೆ.
ಈ ಬಾರಿ ದಕ್ಷಿಣ ಭಾರತ ಮತ್ತು ಸ್ವತಃ ತನ್ನ ಭದ್ರಕೋಟೆ ಹಿಂದಿ ಭಾಷಿಗ ರಾಜ್ಯಗಳಲ್ಲಿ ಭಾರೀ ಹಿನ್ನಡೆ ಕಟ್ಟಿಟ್ಟಬುತ್ತಿ ಎಂಬುದು ಗೊತ್ತಾಗುತ್ತಿದ್ದಂತೆ ಭಾರತೀಯ ಜನತಾ ಪಕ್ಷ, ಆ ನಷ್ಟವನ್ನು ತುಂಬಿಕೊಳ್ಳಲು ಕಂಡುಕೊಂಡಿದ್ದು ಕಮ್ಯುನಿಸ್ಟರ ಬಹುಕಾಲದ ಆಡಳಿತದಿಂದ ವಿಮುಖರಾಗಿರುವ ಮತದಾರರು ಆಡಳಿತರೂಢ ತೃಣಮೂಲ ಕಾಂಗ್ರೆಸ್ಸಿಗೆ ಪ್ರಬಲ ಪರ್ಯಾಯ ಹುಡುಕುತ್ತಿದ್ದ ಪಶ್ಚಿಮಬಂಗಾಳ ಹಾಗೂ ಬಿಜು ಜನತಾದಳದ ಏಕ ಚಕ್ರಾಧಿಪತ್ಯದ ವಿರುದ್ಧದ ಆಡಳಿತ ವಿರೋಧಿ ಅಲೆ ಪ್ರಬಲವಾಗಿರುವ ಒಡಿಶಾವನ್ನು. ಆ ಎರಡೂ ರಾಜ್ಯಗಳಲ್ಲಿ ತನಗಿರುವ ಅವಕಾಶವನ್ನು ಏನಾದರೂ ಮಾಡಿ ಎಷ್ಟು ಸಾಧ್ಯವೋ ಅಷ್ಟು ಬಳಸಿಕೊಳ್ಳಬೇಕು ಎಂಬ ಹಠಕ್ಕೆ ಬಿದ್ದಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮತ್ತು ಪ್ರಧಾನಿ ಮೋದಿ ಜೋಡಿ, ತಮ್ಮ ಪ್ರತಿಷ್ಠೆಗೆ ಒದಗಿರುವ ಅಪಾಯದಿಂದ ಪಾರಾಗಲು ಎಲ್ಲಾ ರಾಜಕೀಯ ತಂತ್ರಗಾರಿಕೆಯ ಮೊರೆಹೋಗಿದ್ದರು.
ಹಾಗಾಗಿ, ಮಂಗಳವಾರ ರಾಜಧಾನಿ ಕೊಲ್ಕತ್ತಾದಲ್ಲಿ ನಡೆದ ಅಮಿತ್ ಶಾ ಪ್ರಚಾರ ಸಭೆ ಮೆರವಣಿಗೆ ಭಾರೀ ಹಿಂಸಾಚಾರ ಮತ್ತು ಅಂತಿಮವಾಗಿ ಬಂಗಾಳದ ಪುನರುಜ್ಜೀವನ ಹಾಗೂ ಸಾಮಾಜಿಕ ಸುಧಾರಣೆಯ ಹರಿಕಾರ ಈಶ್ವರ ಚಂದ್ರ ವಿದ್ಯಾಸಾಗರ್ ಅವರ ಪ್ರತಿಮೆಯ ನೆಲಸಮದೊಂದಿಗೆ ಪರ್ಯಾವಸಾನ ಕಂಡಿತು. ಬಿಜೆಪಿ ಮತ್ತು ತೃಣಮೂಲ ಕಾರ್ಯಕರ್ತರ ನಡುವಿನ ಹಿಂಸಾಚಾರದಲ್ಲಿ ವಿದ್ಯಾಸಾಗರ ಕಾಲೇಜಿನ ಒಳಗಿದ್ದ ವಿದ್ಯಾಸಾಗರರ ಪ್ರತಿಮೆಯನ್ನು ಪುಡಿಗಟ್ಟಿರುವುದೇ ಅಲ್ಲದೆ, ಕಾಲೇಜಿನ ಕಿಟಕಿ-ಬಾಗಿಲು, ಪೀಠೋಪಕರಣ, ಕಂಪ್ಯೂಟರಗಳನ್ನು ದ್ವಂಸ ಮಾಡಲಾಗಿದೆ. ಪೊಲೀಸರು ಈವರೆಗೆ ಘಟನೆಗೆ ಸಂಬಂಧಿಸಿದಂತೆ 50ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿದ್ದು, ತನಿಖೆ ಕೈಗೊಂಡಿದ್ದಾರೆ.
ಘಟನೆಯ ಕುರಿತು ಬಿಜೆಪಿ ಮತ್ತು ತೃಣಮೂಲ ಕಾಂಗ್ರೆಸ್ ನಡುವೆ ಪರಸ್ಪರ ದೋಷಾರೋಪಣೆ ಆರಂಭವಾಯಿತು. ಬಿಜೆಪಿ ಶಾ ಪ್ರಚಾರ ಸಭೆಗಾಗಿ ರಾಜ್ಯದ ಹೊರಗಿನಿಂದ ಗೂಂಡಾಗಳನ್ನು ಕರೆಸಿತ್ತು. ಆ ಗೂಂಡಾಗಳೇ ಬಂಗಾಳಿಗರ ಸ್ವಾಭಿಮಾನದ ಸಂಕೇತವಾಗಿರುವ ವಿದ್ಯಾಸಾಗರ ಅವರ ಪ್ರತಿಮೆಯನ್ನು ನಾಶಪಡಿಸಿರುವುದು. ಇದು ಬಿಜೆಪಿ ಬಂಗಾಳಿಗರ ಅಸ್ಮಿತೆಯನ್ನು ಎಷ್ಟು ಗೌರವಿಸುತ್ತದೆ ಎಂಬುದನ್ನು ತೋರಿಸುತ್ತದೆ. ಬಿಜೆಪಿಯ ಸಂಸ್ಕೃತಿಗೆ ಇದು ಕನ್ನಡಿ ಎಂದು ತೃಣಮೂಲ ನಾಯಕ ಡೆರೆಕ್ ಒಬ್ರಿಯಾನ್ ಹೇಳಿದ್ದರೆ, ತೃಣಮೂಲ ಕಾಂಗ್ರೆಸ್ಸಿನ ಗೂಂಡಾಗಿರಿಯಲ್ಲಿ ತಾವು ಬದುಕಿ ಬಂದಿದ್ದೇ ದೊಡ್ಡದು, ಕೇಂದ್ರ ಮೀಸಲು ಪಡೆಯ ಪೊಲೀಸರು ಇಲ್ಲದೇ ಇದ್ದಿದ್ದರೆ ನಾನು ವಾಪಸು ಬರುವುದೇ ಸಾಧ್ಯವಿರಲಿಲ್ಲ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.
ಈ ನಡುವೆ, ಘಟನೆಯ ಕುರಿತು ವರದಿ ಮಾಡಿರುವ ‘ದ ಇಂಡಿಯನ್ ಎಕ್ಸ್ ಪ್ರೆಸ್’ ಪತ್ರಿಕೆ, “ಕಾಲೇಜಿನ ಬಳಿ ಅಮಿತ್ ಶಾ ಮೆರವಣಿಗೆ ಬಂದಾಗ, ಬೀಗ ಹಾಕಿದ್ದ ಕಾಲೇಜಿನ ಗೇಟು ಮುರಿದು ಒಳನುಗ್ಗಿದ ಕೇಸರಿ ಶಾಲು, ಪಟ್ಟಿ ಕಟ್ಟಿಕೊಂಡಿದ್ದ ದೊಡ್ಡ ಗುಂಪು, ಕಾಲೇಜಿನ ಒಳನುಗ್ಗಿ ಕಣ್ಣಿಗೆ ಕಂಡದ್ದನ್ನೆಲ್ಲಾ ಧ್ವಂಸಗೊಳಿಸಿರುವುದು ಘಟನೆಯನ್ನು ಚಿತ್ರೀಕರಿಸಿದ ಅಕ್ಕಪಕ್ಕದವರ ವಿಡೀಯೋಗಳಲ್ಲಿ ದಾಖಲಾಗಿದೆ” ಎಂದಿದೆ. ಅಲ್ಲದೆ, “ಜೈ ಶ್ರೀರಾಮ್” ಎಂದು ಕೂಗುತ್ತಾ ದೊಡ್ಡ ಗುಂಪು ಗೇಟು ಮುರಿದುಕೊಂಡು ಒಳಬಂದು, ಪ್ರತಿಮೆಯನ್ನು ಒಡೆದುಹಾಕಿದ್ದಲ್ಲದೆ, ಕಾಲೇಜಿನ ಪೀಠೋಪಕರಣ ಮತ್ತು ಕಂಪ್ಯೂಟರುಗಳನ್ನೂ ಪುಡಿಮಾಡಿದೆ” ಎಂಬ ಕಾಲೇಜಿನ ಹಾಸ್ಟಲ್ ವಿದ್ಯಾರ್ಥಿನಿಯೊಬ್ಬರು ಮತ್ತು ಕಾವಲುಗಾರರ ಹೇಳಿಕೆ ಉಲ್ಲೇಖಿಸಿದೆ. ಕಾಕತಾಳೀಯವೆಂದರೆ, ಕೊಲ್ಕತ್ತಾ ಪೊಲೀಸರು ಘಟನೆ ಸಂಬಂಧ ಬಂಧಿಸಿರುವ ಎಲ್ಲರೂ ಬಿಜೆಪಿ ಕಾರ್ಯಕರ್ತರೇ ಎಂಬ ವರದಿಗಳೂ ಇವೆ!
ಈಗ ಮಹಾನ್ ವ್ಯಕ್ತಿಯ ಪ್ರತಿಮೆ ಧ್ವಂಸ ಮತ್ತು ಹಿಂಸಾಚಾರ ಘಟನೆಯನ್ನು ತೃಣಮೂಲ ಮತ್ತು ಬಿಜೆಪಿಗಳೆರಡೂ ತಮ್ಮ ರಾಜಕೀಯ ಲಾಭಕ್ಕೆ ಬಳಸಿಕೊಳ್ಳಲು ಹೆಣಗಾಡುತ್ತಿವೆ. ಆದರೆ, ಈ ನಡುವೆ ಚುನಾವಣಾ ಆಯೋಗ ಈ ವಿಷಯದಲ್ಲಿ ತೆಗೆದುಕೊಂಡಿರುವ ಕ್ರಮ ಎಲ್ಲರ ಹುಬ್ಬೇರಿಸಿದೆ!
ಮಂಗಳವಾರದ ಹಿಂಸಾಚಾರ ಘಟನೆಯ ಬಳಿಕ ಬರೋಬ್ಬರಿ 24 ತಾಸುಗಳ ನಂತರ ಎಚ್ಚೆತ್ತುಕೊಂಡ ಆಯೋಗ, ಪಶ್ಚಿಮಬಂಗಾಳದ ಅಂತಿಮ ಸುತ್ತಿನ ಮತದಾನ ನಡೆಯುವ 9 ಕ್ಷೇತ್ರಗಳ ಬಹಿರಂಗ ಪ್ರಚಾರ ಕಾಲಾವಕಾಶವನ್ನು ಒಂದು ದಿನ ಕಡಿತ ಮಾಡಿ ಆದೇಶ ಹೊರಡಿಸಿದೆ. ಮೇ 19ರಂದು ಮತದಾನ ನಡೆಯುವ ಕ್ಷೇತ್ರಗಳಲ್ಲಿ ವಾಸ್ತವವಾಗಿ ಮೇ 17ರ ಶುಕ್ರವಾರ ಸಂಜೆ 5ಕ್ಕೆ ಬಹಿರಂಗ ಪ್ರಚಾರಕ್ಕೆ ತೆರೆ ಬೀಳಬೇಕಿತ್ತು. ಆದರೆ, ಆಯೋಗದ ಹೊಸ ಆದೇಶದಿಂದಾಗಿ 16ರ ಗುರುವಾರ(ಇಂದು) ರಾತ್ರಿ 10ಕ್ಕೆ ಬಹಿರಂಗ ಪ್ರಚಾರ ಅಂತ್ಯವಾಗಲಿದೆ. ಅಂದರೆ, ನಿಗದಿತ ಕಾಲಾವಕಾಶಕ್ಕಿಂತ 19 ತಾಸು ಮುಂಚೆಯೇ ಪಕ್ಷಗಳು ತಮ್ಮ ಬಹಿರಂಗ ಪ್ರಚಾರಕ್ಕೆ ವಿದಾಯ ಹೇಳಬೇಕಿದೆ.
ಅಮಿತ್ ಶಾ ಮೆರವಣಿಗೆಯ ವೇಳೆಯ ಹಿಂಸಾಚಾರ ಮತ್ತು ಮಹಾಪುರುಷರ ಪುತ್ತಳಿ ಧ್ವಂಸ ಪ್ರಕರಣದ ಹಿನ್ನೆಲೆಯಲ್ಲಿ ಶಿಸ್ತು ಕ್ರಮವಾಗಿ, ಸಂವಿಧಾನದ 324 ವಿಧಿಯನ್ವಯ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಆಯೋಗ ಹೇಳಿದೆ. ಆದರೆ, ಘಟನೆ ನಡೆದ ಬರೋಬ್ಬರಿ 24 ತಾಸುಗಳ ಬಳಿಕ ಇಂತಹದ್ದೊಂದು ಕ್ರಮ ಕೈಗೊಂಡಿರುವ ಆಯೋಗದ ಈ ಕ್ರಮದ ಬಗ್ಗೆಯೇ ಹಲವು ಅನುಮಾನಗಳು ಎದ್ದಿದ್ದು, “ಅದು ಆಡಳಿತರೂಢ ಬಿಜೆಪಿಗೆ ಅನುಕೂಲಕರವಾಗಿ ನಡೆದುಕೊಳ್ಳುತ್ತಿದೆ. ಪ್ರಧಾನಿ ಮೋದಿಯವರ ಕೈಗೊಂಬೆಯಂತೆ ವರ್ತಿಸುತ್ತಿದೆ” ಎಂದು ಗಂಭೀರ ಆರೋಪಗಳು ಪ್ರತಿಪಕ್ಷಗಳ ಪಾಳೆಯದಿಂದ ಕೇಳಿಬಂದಿವೆ.
ಗುರುವಾರ ಪ್ರಧಾನಿ ಮೋದಿಯವರು ಪಶ್ಚಿಮಬಂಗಾಳದಲ್ಲಿ ಎರಡು ಬಹಿರಂಗ ಪ್ರಚಾರ ಸಭೆಗಳನ್ನು ಹಮ್ಮಿಕೊಂಡಿದ್ದಾರೆ. ಆ ಹಿನ್ನೆಲೆಯಲ್ಲಿ ಆಯೋಗ, ಅವರ ಸಭೆಗಳು ಮುಗಿದ ಬಳಿಕ ಬಹಿರಂಗ ಪ್ರಚಾರಕ್ಕೆ ಕಡಿವಾಣ ಹಾಕಿದೆ. ನಿಜಕ್ಕೂ ಆಯೋಗಕ್ಕೆ ಶಿಸ್ತುಕ್ರಮವಾಗಿ ಈ ಕಡಿತವನ್ನು ಜಾರಿ ಮಾಡುವ ಉದ್ದೇಶವಿದ್ದಿದ್ದರೆ ಮತ್ತು ಅದು ಪಕ್ಷಾತೀತವಾಗಿ ಯೋಚಿಸಿದ್ದರೆ ಘಟನೆ ನಡೆದ ಮಾರನೇ ದಿನ, ಬುಧವಾರ ಬೆಳಗ್ಗೆಯಿಂದಲೇ ಜಾರಿಗೆ ತರಬೇಕಿತ್ತು. ಇಲ್ಲವೇ ಕನಿಷ್ಠ ಗುರುವಾರ ಬೆಳಗ್ಗೆಯಿಂದಲೇ ಜಾರಿಮಾಡಬಹುದಿತ್ತು. ಆದರೆ, ಆಯೋಗ ಪ್ರಧಾನಿ ಸಭೆಗಳನ್ನೇ ಮುಂದಿಟ್ಟುಕೊಂಡು ಇಂತಹದ್ದೊಂದು ತಾರತಮ್ಯದ ಕ್ರಮ ಅನುಸರಿಸಿದೆ ಎಂಬ ಟೀಕೆಗಳು ಕೇಳಿಬಂದಿವೆ.
ಅಲ್ಲದೆ, ಇತಿಹಾಸದಲ್ಲೇ ಮೊದಲ ಬಾರಿಗೆ ಸಂವಿಧಾನದ 324 ನೇ ವಿಧಿಯನ್ನು ಬಳಸಿ ಬಹಿರಂಗ ಪ್ರಚಾರ ಸಮಯವನ್ನು ಕಡಿತ ಮಾಡಲಾಗಿರುವುದು, ಆಯೋಗ ಹೇಳಿಕೊಂಡಂತೆ ನಿಜವಾಗಿಯೂ ಶಿಸ್ತುಕ್ರಮವೇ ಆಗಿದ್ದರೆ, ತಪ್ಪು ಮಾಡಿದವರಿಗೆ ಮಾತ್ರ ಅದು ಅನ್ವಯವಾಗಬೇಕಿತ್ತು. ಆದರೆ, ಈ ಗಲಭೆಗೆ ಸಂಬಂಧವೇ ಇರದ ಎಡಪಕ್ಷಗಳು ಮತ್ತು ಕಾಂಗ್ರೆಸ್ ಪಕ್ಷಗಳಿಗೂ ಈಗ ಬಹಿರಂಗ ಪ್ರಚಾರ ಅವಧಿ ಕಡಿತವಾಗಿದೆ. ಇದು ಎಷ್ಟು ಸರಿ? ಎಂಬ ಪ್ರಶ್ನೆಯೂ ಎದ್ದಿದೆ. ಅದೇ ಹೊತ್ತಿಗೆ, ಮಂಗಳವಾರದ ಘಟನೆಯಲ್ಲಿ ಮೇರು ವ್ಯಕ್ತಿಯ ಪ್ರತಿಮೆ ಧ್ವಂಸ ನಡೆದಿದೆ ಮತ್ತು ಅದು ಹೇಯ ಘಟನೆ ಎಂಬುದನ್ನು ಹೊರತುಪಡಿಸಿದರೆ, ಯಾವುದೇ ಸಾವು ನೋವು ಸಂಭವಿಸಿಲ್ಲ. ಹಾಗಿದ್ದರೂ ಆಯೋಗದ ಇತಿಹಾಸದಲ್ಲೇ ಅತ್ಯಂತ ಕಠಿಣ ಎನ್ನಲಾಗುವ ತೀವ್ರ ಕ್ರಮ ಜಾರಿಗೊಳಿಸಲಾಗಿದೆ. ಆದರೆ, ಇದೇ ಪಶ್ಚಿಮಬಂಗಾಳದಲ್ಲಿ ಎರಡನೇ ಹಂತದ ಚುನಾವಣೆಗೂ ಮುನ್ನ ನಡೆದ ಹಿಂಸಾಚಾರದಲ್ಲಿ ನಾಲ್ವರು ಸಾವನ್ನಪ್ಪಿ ಹಲವರು ಗಾಯಗೊಂಡಿದ್ದರು. ಅಲ್ಲದೆ, ಒಡಿಶಾದಲ್ಲಿ ಕೂಡ ಭಾರೀ ಹಿಂಸಾಚಾರ ಘಟನೆಗಳು ನಡೆದಿದ್ದವು. ಆಗ ಯಾಕೆ ಆಯೋಗ ಇಂತಹ ಗಂಭೀರ ಕ್ರಮ ಜರುಗಿಸಲಿಲ್ಲ. ಹಿಂಸೆಯ ತೀವ್ರತೆ ಮತ್ತು ಸ್ವರೂಪದಲ್ಲಿ ಹಲವು ಪಟ್ಟು ಹೆಚ್ಚಿದ್ದ ಘಟನೆಗಳಲ್ಲಿ ಮೌನ ವಹಿಸಿದ ಆಯೋಗ ಈಗ ಯಾಕೆ ಇಂತಹ ಐತಿಹಾಸಿಕ ಕ್ರಮಕ್ಕೆ ಮುಂದಾಗಿದೆ? ಎಂಬ ಪ್ರಶ್ನೆಗಳೂ ಇವೆ.
ಸ್ಥಾನ ಗಳಿಕೆಯಲ್ಲಿ ತೀವ್ರ ಹಿನ್ನಡೆಯ ಮುನ್ಸೂಚನೆ ಸಿಕ್ಕಿರುವ ಹಿನ್ನೆಲೆಯಲ್ಲಿ ಒತ್ತಡಕ್ಕೆ ಸಿಲುಕಿರುವ, ಸರ್ಕಾರ ಉಳಿಸಿಕೊಳ್ಳುವ ಅನಿವಾರ್ಯತೆಗೆ ಸಿಲುಕಿರುವ ಬಿಜೆಪಿ ಮತ್ತು ಅದರ ನಾಯಕದ್ವಯರಿಗೆ ಈ ಬಾರಿ ಬಂಗಾಳದ ನೆಲದಲ್ಲಿ ಸ್ಥಾನ ಗಳಿಕೆ ಮಾಡು ಇಲ್ಲವೆ ಮಡಿ ಪ್ರಶ್ನೆಯಾಗಿದೆ. ಆ ಹಿನ್ನೆಲೆಯಲ್ಲಿ, ಆಯೋಗ ಇದೀಗ ಕೊನೆಯ ಹಂತದ 9 ಕ್ಷೇತ್ರಗಳ ಬಹಿರಂಗ ಪ್ರಚಾರಕ್ಕೆ ದಿಢೀರ್ ತೆರೆ ಎಳೆಯುವ ಮೂಲಕ ಯಾರಿಗೆ ನೆರವಾಗುತ್ತಿದೆ? ಯಾವ ಪಕ್ಷ ಮತ್ತು ವ್ಯಕ್ತಿಯ ಪರ ಇಂತಹ ಕ್ರಮ ಒದಗಿಬರಲಿದೆ? ಎಂಬ ಪ್ರಶ್ನೆಗಳ ಹಿನ್ನೆಲೆಯಲ್ಲಿ ಇಡೀ ಚುನಾವಣಾ ಆಯೋಗದ ಘನತೆ ಮತ್ತೊಮ್ಮೆ ಪಣಕ್ಕೆ ಬಿದ್ದಿದೆ. ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ಎಂಬ ಆಯೋಗದ ಘೋಷವಾಕ್ಯವೇ ಇದೀಗ ಪರಿಹಾಸ್ಯಕ್ಕೆ ಒಳಗಾಗತೊಡಗಿದೆ. ಬಹುಶಃ ಸ್ವತಂತ್ರ ಭಾರತದ ಇತಿಹಾಸದಲ್ಲೇ ಚುನಾವಣಾ ಆಯೋಗ, ತನ್ನ ವಿಶ್ವಾಸಾರ್ಹತೆಯ ವಿಷಯದಲ್ಲಿ ಇಷ್ಟೊಂದು ವ್ಯಾಪಕ ಟೀಕೆಗೆ ಒಳಗಾಗಿರಲಿಲ್ಲ!
(ವ್ಯಂಗ್ಯಚಿತ್ರ ಕೃಪೆ: ಸತೀಶ್ ಆಚಾರ್ಯ /ನ್ಯೂಸ್ ಸ್ಟಿಂಗ್ .ಇನ್ )