ನವದೆಹಲಿ: 2014ರಲ್ಲಿ ದೇಶದ ಪ್ರಧಾನ ಮಂತ್ರಿಯಾಗಿ ಹುದ್ದೆ ಅಲಂಕರಿಸಿದ ನರೇಂದ್ರ ಮೋದಿ ಐದು ವರ್ಷಗಳಲ್ಲೇ ಮೊದಲ ಬಾರಿಗೆ ಪತ್ರಿಕಾ ಗೋಷ್ಠಿಯೊಂದರಲ್ಲಿ ಕಾಣಿಸಿಕೊಂಡ ಅಭೂತಪೂರ್ವ ಘಟನೆ ಇಂದು ನವದೆಹಲಿಯಲ್ಲಿ ನಡೆಯಿತು. ಪ್ರಧಾನ ಮಂತ್ರಿಗಳ ಸುದ್ದಿಗೋಷ್ಠಿ ಎಂದು ಕರೆಯಲಾಗಿದ್ದರೂ ಅಂತಿಮವಾಗಿ ಇದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಒಬ್ಬರೇ ಪತ್ರಕರ್ತರ ಎದುರು ಮಾತನಾಡಿದ ಸುದ್ದಿಗೋಷ್ಠಿಯಾಗಿತ್ತು.
ಇದೇ ಹೊತ್ತಿನಲ್ಲಿ ಮತ್ತೊಂದು ಕಡೆ ಕಾಂಗ್ರೆಸ್ ಕಚೇರಿಯಲ್ಲಿ ಕಾಂಗ್ರೆಸ್ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ ಸಹ ಸುದ್ದಿಗೋಷ್ಠಿ ನಡೆಸಿದರು.
ಮೋದಿಯೊಂದಿಗೆ ಅಮಿತ್ ಶಾ ಸುದ್ದಿಗೋಷ್ಠಿ ಅಧಿಕೃತವಾಗಿ ಆರಂಭಗೊಳ್ಳುವುದಕ್ಕೂ ಮೊದಲು ಪತ್ರಕರ್ತನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, ಎಲ್ಲರಿಗೂ ಕೃತಜ್ಞತೆ ಸಲ್ಲಿಸಲು ಬಂದಿದ್ದೇನೆಂದೂ ಪ್ರಸಕ್ತ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆದು ಸರ್ಕಾರ ರಚಿಸಲಿದೆ ಎಂದೂ ತಿಳಿಸಿದರು.
ಹಿಂದಿನ ಚುನಾವಣೆಗಳಲ್ಲಿ ಐಪಿಎಲ್ ಪಂದ್ಯಗಳನ್ನು ಚುನಾವಣೆ ಕಾರಣದಿಂದ ದಿನ ಬದಲಿಸಲಾಗಿತ್ತು, ಆದರೆ ಈ ಬಾರಿ ಐಪಿಎಲ್, ರಂಜಾನ್, ನವರಾತ್ರಿ ಹಾಗೂ ಶಾಲಾ ಪರೀಕ್ಷೆಗಳೊಂದಿಗೆ ಚುನಾವಣಾ ಪ್ರಕ್ರಿಯೆಯೂ ನಡೆದಿದೆ ಎಂದು ಮೋದಿ ಹೇಳಿದರು.
ಚುನಾವಣಾ ಪ್ರಚಾರದ ಅಂತ್ಯಕ್ಕೆ ಕೇವಲ 30 ನಿಮಿಷಗಳಿರುವಂತೆ ಈ ಸುದ್ದಿಗೋಷ್ಠಿ ಏರ್ಪಡಿಸಲಾಗಿತ್ತು.
ಇದಕ್ಕೆ ಕೆಲ ತಾಸುಗಳ ಮುಂಚೆ ಸುದ್ದಿವಾಹಿನಿಯೊಂದಕ್ಕೆ ಸಂದರ್ಶನ ನೀಡಿದ್ದ ನರೇಂದ್ರ ಮೋದಿ, ನಾಥೂರಾಮ್ ಗೋಡ್ಸೆಯನ್ನು ದೇಶಭಕ್ತ ಎಂದು ಕರೆದು ರಾಷ್ಟ್ರಪಿತ ಮಹಾತ್ಮಾ ಗಾಂಧಿಯನ್ನು ಅಪಮಾನಿಸಿದ್ದ ಸಾಧ್ವಿ ಪ್ರಜ್ಞಾ ಸಿಂಗ್ ಳನ್ನು ತೀವ್ರವಾಗಿ ಖಂಡಿಸಿ, ಪ್ರಜ್ಞಾ ಸಿಂಗಳ ಈ ಮಾತಿಗೆ ನಾನು ಅವಳನ್ನು ಕ್ಷಮಿಸಲು ಸಾಧ್ಯವಿಲ್ಲ ಎಂದು ಹೇಳಿದ್ದರು!
ಪ್ರಧಾನಿ ಮೋದಿಯೊಂದಿಗೆ ಮೊದಲ ಸುದ್ದಿಗೋಷ್ಠಿ ನಡೆಸಿ, ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, “ಲೋಕಸಭಾ ಚುನಾವಣೆಯಲ್ಲಿ 300 ಸೀಟುಗಳನ್ನು ಪಡೆಯುವ ಮೂಲಕ ಮೋದಿ ಸರ್ಕಾರವು ಭಾರೀ ಬಹುಮತದೊಂದಿಗೆ ಮತ್ತೆ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲಿದೆ” ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರು ನರೇಂದ್ರ ಮೋದಿಯವರನ್ನು ಉದ್ದೇಶಿಸಿ ಕೇಳಿದ ಯಾವುದೇ ಪ್ರಶ್ನೆಗಳಿಗೂ ಪ್ರಧಾನಿ ಮೋದಿ ಉತ್ತರಿಸಲಿಲ್ಲ. ಪತ್ರಕರ್ತರು ಯಾವ ರೀತಿಯಲ್ಲಿ ಪ್ರಶ್ನೆ ಕೇಳುತ್ತಾರೆ ಎಂಬುದನ್ನು ನೋಡುತ್ತಾ ಕುಳಿತಿದ್ದ ಮೋದಿ ತಮಗೆ ಕೇಳಲಾದ ಎಲ್ಲಾ ಪ್ರಶ್ನೆಗಳನ್ನು ಸೀದಾ ಅಮಿತ್ ಶಾ ಅವರಿಗೆ ವರ್ಗಾಯಿಸಿ ಸುಮ್ಮನೇ ತಲೆ ಅಲ್ಲಾಡಿಸುತ್ತಾ ಕುಳಿತಿದ್ದರು.
ಮಾಲೆಗಾಂವ್ ಬಾಂಬ್ ಸ್ಫೋಟದ ಆರೋಪಿ ಸಾಧ್ವಿ ಪ್ರಜ್ಞಾ ಸಿಂಗ್ ಕುರಿತು ಕೇಳಲಾದ ಪ್ರಶ್ನೆಗಳಿಗೆ ಉತ್ತರಿಸಿದ ಅಮಿತ್ ಶಾ, “ಕೇಸರಿ ಭಯೋತ್ಪಾದನೆ ಎಂಬುದು ಇಲ್ಲ. ಅದು ಕಾಂಗ್ರೆಸ್ ಉದ್ದೇಶಪೂರ್ವಕವಾಗಿ ಸೃಷ್ಟಿಸಿರುವುದು. ಈ ಕಾರಣದಿಂದಲೇ ಸತ್ಯಾಗ್ರಹದ ಸಂಕೇತವಾಗಿ ಬಿಜೆಪಿ ಪ್ರಜ್ಞಾ ಸಿಂಗ್ ಠಾಕೂರ್ ಅವರನ್ನು ಕಣದಲ್ಲಿ ಇಳಿಸಿದೆ ಎಂದು ಸಮರ್ಥಿಸಿಕೊಂಡರು.
ಚುನಾವಣಾ ಆಯೋಗ ಮೋದಿ ಪಕ್ಷಪಾತಿಯಾಗಿದೆ: ರಾಹುಲ್ ಗಾಂಧಿ
ಲೋಕಸಭಾ ಚುನಾವಣೆಯ ಕೊನೆಯ ಹಂತದ ಪ್ರಚಾರಕ್ಕೆ ಕೊನೆ ಕ್ಷಣಗಳಿರುವಂತೆ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, “ಚುನಾವಣಾ ಆಯೋಗವು ಇಡೀ ಚುನಾವಣಾ ಪ್ರಕ್ರಿಯೆಯುದ್ದಕ್ಕೂ ಮೋದಿ ಪಕ್ಷಪಾತಿಯಾಗಿ ವರ್ತಿಸಿದೆ, ನರೇಂದ್ರ ಮೋದಿಯ ವೇಳಾಪಟ್ಟಿಗೆ ತಕ್ಕಂತೆ ಚುನಾವಣೆಗಳನ್ನು ನಡೆಸಿದೆ ” ಎಂದು ಹರಿಹಾಯ್ದರು.
ಪ್ರಧಾನಿ ನರೇಂದ್ರ ಮೋದಿ ಎನ್ನುವ ಪರಿಕಲ್ಪನೆಯನ್ನೇ ಕಾಂಗ್ರೆಸ್ ಛಿದ್ರಗೊಳಿಸಿದೆ ಎಂದು ರಾಹುಲ್ ಗಾಂಧಿ ಹೇಳಿದರು.