ಕೋಲ್ಕತ್ತಾ: ಚುನಾವಣಾ ಆಯೋಗ (ಇಸಿ) ಬಿಜೆಪಿಗೆ ಮಾರಾಟವಾಗಿದೆ ಮತ್ತು ಮತಗಟ್ಟೆಗಳು ಬಿಜೆಪಿಯ ಸಹೋದರರಾಗಿವೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.
ಮಂದಿರ್ ಬಜಾರ್ (ಮಥುರಾಪುರ ಲೋಕಸಭಾ ಕ್ಷೇತ್ರ) ನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಮಮತಾ, “ಬಿಜೆಪಿ ನೀಡಿದ ದೂರನ್ನು ಆಧರಿಸಿ ಇಸಿ ಪಶ್ಚಿಮ ಬಂಗಾಳದಲ್ಲಿ ಒಂದು ದಿನ ಮುಂಚಿತವಾಗಿಯೇ ಪ. ಬಂಗಾಳದಲ್ಲಿ ಚುನಾವಣಾ ಪ್ರಚಾರಕ್ಕೆ ನಿಷೇಧ ಹೇರಿದೆ. ಇಸಿ ಬಿಜೆಪಿಯ ಸಹೋದರನಾಗಿದೆ. ಕೇವಲ ನಾನು ಮಾತ್ರವಲ್ಲ ಇಡೀ ದೇಶವೇ ಹೇಳುತ್ತಿದೆ ‘ಇಸಿ ಬಿಜೆಪಿಗೆ ಮಾರಾಟವಾಗಿದೆ’ ಎಂದು. ಅವರಿಗೆ ಅಗತ್ಯವಿದ್ದರೆ ನನ್ನನ್ನು ಬಂಧಿಸಲಿ, ಆದರೆ ಸತ್ಯವನ್ನು ಹೇಳಲು ನಾನು ಹಿಂಜರಿಯುವುದಿಲ್ಲ,” ಎಂದು ಆಕ್ರೋಶದ ಮಾತುಗಳನ್ನಾಡಿದ್ದಾರೆ.
“ಮಂದಿರ್ ಬಜಾರ್ ನಲ್ಲಿ ನಡೆಯುತ್ತಿರುವ ಸಭೆ ಶುಕ್ರವಾರ ನಿಗದಿಯಾಗಿತ್ತು. ಆದರೆ ಇಸಿ ಚುನಾವಣಾ ಪ್ರಚಾರಕ್ಕೆ ನಿಷೇಧ ಹೇರಿದೆ ಹಿನ್ನೆಲೆಯಲ್ಲಿ ಸಭೆಯನ್ನು ಹಿಂದೂಡಲಾಯಿತು. ನಾವು ಸಭೆಗಳನ್ನು ಅಧಿಕೃತವಾಗಿ ಅನುಮತಿ ಪಡೆದು ನಿಯಮದಂತೆ ನಡೆಸುತ್ತಿದ್ದೇವೆ. ಆದರೆ ಚಿಟ್ ಫಂಡ್ ಸಂಸ್ಥೆಯ ಮಾಲೀಕ ಕಪಿಲ್ ಮಂಡಲ್ ಭೂಮಿಯಲ್ಲಿ ಪ್ರಧಾನಿ ಮೋದಿ ತಮ್ಮ ಚುನಾವಣಾ ಪ್ರಚಾರವನ್ನು ನಡೆಸುತ್ತಿದ್ದಾರೆ. ಹಾಗಿದ್ದರೆ ಕಪಿಲ್ ತಮ್ಮ ಶೇರನ್ನು ಬಿಜೆಪಿಗೆ ನೀಡುತ್ತಿದ್ದಾರೆಯೇ?, ನಮ್ಮ ಬಳಿ ಎಲ್ಲಾ ದಾಖಲೆಗಳು ಇವೆ. ಎಲ್ಲಾ ಸಾಕ್ಷ್ಯಗಳನ್ನು ನಾವು ಪೊಲೀಸರಿಗೆ ನೀಡುತ್ತಿದ್ದೇವೆ. ಮೋದಿ ದರೋಡೆಕೋರರು ಹಾಗೂ ಕಳ್ಳರು ಆಯೋಜಿಸುತ್ತಿರುವ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ ಎಂದೂ ಮಮತಾ ಆರೋಪಿಸಿದ್ದಾರೆ.
“ಬಿಜೆಪಿ ಮತ್ತು ಇಸಿ ನನ್ನ ಪ್ರಚಾರಕ್ಕೆ ತಡೆಯೊಡ್ಡಬಹುದು ಆದರೆ ನಾನು ಹೇಳುವ ಸತ್ಯಗಳಿಗೆ ಅವರು ನಿಷೇಧ ಹೇರಲು ಸಾಧ್ಯವಿಲ್ಲ. ಬಿಜೆಪಿ ಮತಗಳಿಗಾಗಿ ಹಣವನ್ನು ಹಂಚುತ್ತಿದೆ, ಇಂತಹ ದುಷ್ಕೃತ್ಯಗಳು ಕಂಡುಬಂದರೆ ದಯವಿಟ್ಟು ಜನತೆ ಪೊಲೀಸರಿಗೆ ಮಾಹಿತಿ ನೀಡುವಂತೆ ನಿಮಗೆಲ್ಲಾ ನಾನು ಮನವಿ ಮಾಡುತ್ತೇನೆ. ದೇಶದ ಜನತೆ ಮೋದಿ ಸರ್ಕಾರವನ್ನು ಸೋಲಿಸಲಿದೆ,” ಎಂದಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಕಣ ದಿನದಿನಕ್ಕೂ ರಣಕಣವಾಗಿ ಮಾರ್ಪಟ್ಟು, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ರೋಡ್ ಶೋ ಮಾಡಿದ ಸಂದರ್ಭದಲ್ಲಿ ವ್ಯಾಪಕ ಹಿಂಸಾಚಾರ ನಡೆದ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ಸಂವಿಧಾನ 324ನೇ ವಿಧಿಯನ್ನು ಪ್ರಯೋಗಿಸಿ, ಮತದಾನಕ್ಕೆ ನಿಗದಿತ ನಿಗದಿತ ಅವಧಿಗಿಂಲೂ 19 ತಾಸು ಮುಂಚಿತವಾಗಿಯೇ ಎಲ್ಲಾ ರೀತಿಯ ಚುನಾವಣಾ ಪ್ರಚಾರವನ್ನು ನಿಷೇಧಿಸಿ ಚುನಾವಣಾ ಆಯೋಗ ಆದೇಶ ಹೊರಡಿಸಿತ್ತು. ಹಾಗೆಯೇ ಪಶ್ಚಿಮ ಬಂಗಾಳದ ಪ್ರಧಾನ ಕಾರ್ಯದರ್ಶಿ ಅತ್ರಿ ಭಟ್ಟಾಚಾರ್ಯ ಅವರನ್ನು ವಜಾಗೊಳಿಸಿತ್ತು.