2014ರ ಚುನಾವಣಾ ಪ್ರಚಾರದಲ್ಲಿ ವಿದೇಶದಲ್ಲಿರುವ ಕಪ್ಪುಹಣವನ್ನು ವಾಪಾಸು ತಂದು ದೇಶದಲ್ಲಿರುವ ಜನರೆಲ್ಲರ ಖಾತೆಗಳಿಗೆ ತಲಾ 15 ಲಕ್ಷ ರೂಪಾಯಿ ಹಾಕುವುದಾಗಿ ಹೇಳಿದ್ದ ಪ್ರಧಾನಿ ನರೇಂದ್ರ ಮೋದಿ ಈಗ ನಡೆಯುತ್ತಿರುವ ಲೋಕಸಭಾ ಚುನಾವಣಾ ಪ್ರಚಾರದಲ್ಲಿ ಕಪ್ಪು ಹಣದ ಬಗ್ಗೆ ಚಕಾರ ಎತ್ತುತ್ತಿಲ್ಲ. ಈ ಐದು ವರ್ಷದಲ್ಲಿ ಸ್ವಿಡ್ಜರ್ಲ್ಯಾಂಡ್ ನಿಂದ ಅದೆಷ್ಟು ಲಕ್ಷ ಕೋಟಿ ಕಪ್ಪು ಹಣ ತಂದಿದ್ದೀರಪ್ಪಾ ಅಂತಾ ಕೇಳಿದ್ರೆ ಆ ಬಗ್ಗೆ ಮಾಹಿತಿ ನೀಡಲು ಸಿದ್ದವಿಲ್ಲ. ಮಾಹಿತಿ ನೀಡದೇ ಇರಲು ಕಾನೂನು ತೊಡಕಿನ ನೆಪವನ್ನು ಮೋದಿ ಸರ್ಕಾರ ನೀಡುತ್ತಿದೆ. ಕಪ್ಪುಹಣದ ಬಗ್ಗೆ ಮಾತನಾಡುವ ಬರದಲ್ಲಿ ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರುಪಾಯಿ ಹಾಕುವುದಾಗಿ ಹೇಳಿದ್ದ ನರೇಂದ್ರಮೋದಿಗೆ ಅದು ಒಟ್ಟು ಎಷ್ಟು ಮೊತ್ತವಾಗುತ್ತದೆಂಬ ಕಲ್ಪನೆಯೂ ಇದ್ದಿರಲಿಕ್ಕಿಲ್ಲ.
ಈಗ ಸದ್ಯಕ್ಕೆ ಹಣಕಾಸು ಸಚಿವಾಲಯವು ಮಾಹಿತಿ ಹಕ್ಕು ಕಾಯ್ದೆಯಡಿ ನೀಡಿರುವ ಮಾಹಿತಿ ಪ್ರಕಾರ ಪತ್ತೆ ಹಚ್ಚಲಾದ ಕಪ್ಪುಹಣದ ಮೊತ್ತವು 8,465 ಕೋಟಿ ರುಪಾಯಿಗಳು. ನರೇಂದ್ರಮೋದಿ 2014ರ ಚುನಾವಣಾ ವೇಳೆಯಲ್ಲಿ ವಿದೇಶದಲ್ಲಿರುವ ಕಪ್ಪುಹಣ ವಾಪಾಸು ತಂದು ದೇಶದ ಪ್ರತಿಯೊಬ್ಬರ ಖಾತೆಗೂ 15 ಲಕ್ಷ ಹಾಕುವುದಾಗಿ ಹೇಳಿದ್ದರಲ್ಲಾ? ಈಗ ವಿತ್ತ ಸಚಿವಾಲಯವು ಅಧಿಕೃತವಾಗಿ ನೀಡಿರುವ ಮಾಹಿತಿ ಪ್ರಕಾರ ಪತ್ತೆ ಹಚ್ಚಲಾಗಿರುವ 8465 ಕೋಟಿ ಕಪ್ಪುಹಣವನ್ನು ಇಡೀದೇಶದಲ್ಲಿರುವ 130 ಕೋಟಿ ಜನರ ಖಾತೆಗೆ ವರ್ಗಾಹಿಸಿದರೆ ಹೇಗೆ? ಅಷ್ಟಕ್ಕೂ ಪ್ರತಿಯೊಬ್ಬರ ಖಾತೆಗೂ ಬರುವ ಮೊತ್ತ ಎಷ್ಟು ಗೊತ್ತೆ? 15 ಲಕ್ಷ ರುಪಾಯಿಗಳಲ್ಲಾ ಕೇವಲ 65 ರುಪಾಯಿ ಮತ್ತು 11 ಪೈಸೆ ಮಾತ್ರ! 15 ಲಕ್ಷ ರುಪಾಯಿ ಎಲ್ಲಿ? 65.11 ರುಪಾಯಿ ಎಲ್ಲಿ?
ಅದೇನೇ ಇರಲಿ, ಸ್ವಿಡ್ಜರ್ಲ್ಯಾಂಡ್ ನಿಂದ ಬಂದಿರುವ ಕಪ್ಪುಹಣ ಎಷ್ಟೆಂಬುದು ಗೊತ್ತಾದ ಮೇಲೆ ಈ ಮೊತ್ತ ಕೊಂಚ ಹೆಚ್ಚಾಗಬಹುದು. ಆದರೆ, ಸ್ವಿಡ್ಜರ್ಲ್ಯಾಂಡ್ ನಿಂದ ಎಷ್ಟು ಕಪ್ಪುಹಣವನ್ನು ದೇಶಕ್ಕೆ ವಾಪಾಸು ತರಲಾಗಿದೆ ಎಂಬ ಮಾಹಿತಿಯನ್ನು ನೀಡಲು ನರೇಂದ್ರಮೋದಿ ಸರ್ಕಾರ ನಿರಾಕರಿಸಿದೆ. ಪಿಟಿಐ ಸುದ್ದಿಸಂಸ್ಥೆಯು ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಿದ್ದ ಅರ್ಜಿಯನ್ನು ಭಾಗಷಃ ಪುರಸ್ಕರಿಸಿರುವ ಕೇಂದ್ರ ಹಣಕಾಸು ಸಚಿವಾಲಯವು ಸ್ವಿಡ್ಜರ್ಲ್ಯಾಂಡ್ ನಿಂದ ವಾಪಾಸು ಪಡೆದಿರುವ ಕಪ್ಪುಹಣದ ಬಗ್ಗೆ ಮಾಹಿತಿ ನೀಡಲು ನಿರಾಕರಿಸಿದೆ. ಅದಕ್ಕೆ ನೀಡಿರುವ ಕಾರಣ ಎಂದರೆ- ಸ್ವಿಡ್ಜರ್ಲ್ಯಾಂಡ್ ದೇಶವು ಕಪ್ಪುಹಣ ಕುರಿತಂತೆ ಭಾರತ ಸರ್ಕಾರದೊಂದಿಗೆ ಹಂಚಿಕೊಳ್ಳುವ ಮಾಹಿತಿಗೆ ಗೌಪ್ಯತೆಯ ರಕ್ಷಣೆ ಇದೆ. ಆದ್ದರಿಂದ ಮಾಹಿತಿ ಹಂಚಿಕೊಳ್ಳಲು ಸಾಧ್ಯವಿಲ್ಲ ಎಂದು ತಿಳಿಸಿದೆ.
ಸ್ವಿರ್ಡರ್ಲ್ಯಾಂಡ್ ನಿಂದ ವಾಪಾಸು ಪಡೆದ ಕಪ್ಪುಹಣ ಎಷ್ಟು? ಯಾವ ವ್ಯಕ್ತಿ ಮತ್ತು ಯಾವ ಸಂಸ್ಥೆಯ ಹೆಸರಿನಲ್ಲಿ ಕಪ್ಪುಹಣ ಇಡಲಾಗಿತ್ತು ಎಂಬಿತ್ಯಾದಿ ವಿವರ ನೀಡುವಂತೆ ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಲಾಗಿತ್ತು.
2017ರಲ್ಲಿ ಭಾರತ ಮತ್ತು ಸ್ವಿರ್ಡರ್ಲ್ಯಾಂಡ್ ತೆರಿಗೆ ವಿಷಯಗಳಲ್ಲಿ ಪರಸ್ವರ ಆಡಳಿತಾತ್ಮಕ ನೆರವು ನೀಡುವುದು ಮತ್ತು ಮಾಹಿತಿ ವಿನಿಮಯ ಮಾಡಿಕೊಳ್ಳುವ ನಿಟ್ಟಿನಲ್ಲಿ ಬಹುಪಕ್ಷೀಯ ಒಪ್ಪಂದಗಳನ್ನು ಮಾಡಿಕೊಂಡಿವೆ. ಈ ಒಪ್ಪಂದಗಳ ಅನ್ವಯ ಉಭಯ ದೇಶಗಳು ತನ್ನಿಂತಾನೆ ಕಪ್ಪುಹಣ, ತೆರಿಗೆ ವಂಚನೆ ಕುರಿತಾದ ಮಾಹಿತಿಗಳನ್ನು ವಿನಿಮಯ ಮಾಡಿಕೊಳ್ಳುತ್ತವೆ.
ಒಪ್ಪಂದಗಳು 2019ರಿಂದ ಜಾರಿಗೆ ಬಂದಿದ್ದು, ಭಾರತೀಯ ನಾಗರಿಕರು 2018 ಮತ್ತು ನಂತರದ ವರ್ಷಗಳಲ್ಲಿ ಸ್ವಿಡ್ಜರ್ಲ್ಯಾಂಡ್ ನಲ್ಲಿ ಹೊಂದಿರುವ ಬ್ಯಾಂಕ್ ಖಾತೆಗಳ ವಿವರಗಳನ್ನು ಭಾರತ ಸರ್ಕಾರಕ್ಕೆ ಅಲ್ಲಿನ ಸರ್ಕಾರ ಒದಗಿಸಲಿದೆ ಎಂದು ಹಣಕಾಸು ಸಚಿವಾಲಯವು ತಿಳಿಸಿದೆ. ಆದರೆ, ಸ್ವಿಡ್ಜರ್ಲ್ಯಾಂಡ್ ಹಂಚಿಕೊಳ್ಳುವ ಮಾಹಿತಿಗೆ ಗೌಪ್ಯತೆ ರಕ್ಷಣೆ ಇರುವುದರಿಂದ ಮಾಹಿತಿ ಹಂಚಿಕೊಳ್ಳಲು ಸಾಧ್ಯವಿಲ್ಲ ಎಂದು ಹಣಕಾಸು ಸಚಿವಾಲಯ ಸಮರ್ಥಿಸಿಕೊಂಡಿದೆ.