ನವದೆಹಲಿ: ರಾಷ್ಟ್ರಪಿತ ಮಹಾತ್ಮ ಗಾಂಧಿಯನ್ನು ಕೊಂದ ನಾಥೂರಾಮ್ ಗೋಡ್ಸೆಯನ್ನು ದೇಶಭಕ್ತ ಎನ್ನುವ ಮೂಲಕ ಗಾಂಧಿಯನ್ನು ಅವಮಾನಿಸಿರುವ ಬಿಜೆಪಿ ನಾಯಕಿ ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್ರನ್ನು ಯಾವ ಕಾರಣಕ್ಕೂ ಕ್ಷಮಿಸುವುದಿಲ್ಲ ಎಂದು ಪ್ರಧಾನಿ ಮೋದಿ ಶುಕ್ರವಾರ ಹೇಳಿದ್ದಾರೆ.
ಮಧ್ಯ ಪ್ರದೇಶದ ಖರ್ಗೋನ್ನಲ್ಲಿ ಚುನಾವಣಾ ಪ್ರಚಾರ ಉದ್ದೇಶಿಸಿ ಮಾತನಾಡಿದ ಮೋದಿ ಪ್ರಗ್ಯಾ ಹೇಳಿಕೆಯು ಸಮಾಜಕ್ಕೇ ಹಾನಿಕಾರಕವಾದುದು. ಸುಸಂಸ್ಕೃತ ಸಮಾಜದಲ್ಲಿ ಇಂತಹ ಹೇಳಿಕೆಯನ್ನು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ. ಗಾಂಧಿ ಇಡೀ ದೇಶದ ಹೆಮ್ಮೆಯ ಪ್ರತೀಕ. ಅವರನ್ನು ಅಪಮಾನಿಸುವುದು ಅಕ್ಷ್ಯಮ್ಯ ಅಪರಾಧ. ಇಂತಹ ಆಲೋಚನೆಯನ್ನೇ ಒಪ್ಪಲು ಸಾಧ್ಯವಿಲ್ಲ. ಹೀಗೆ ಆಲೋಚಿಸುವವರು ನೂರು ಬಾರಿ ಆಲೋಚಿಸಬೇಕು. ಪ್ರಗ್ಯಾ ಸಿಂಗ್ ಕ್ಷಮೆ ಕೇಳಿರಬಹುದು. ಆದರೆ ಅವರನ್ನು ನಾನು ಕ್ಷಮಿಸಲಾರೆ,” ಎಂದು ಕಿಡಿಕಾರಿದ್ದಾರೆ.
ಗೋಡ್ಸೆ ಹೇಳಿಕೆ ಮೂಲಕ ವಿವಾದಕ್ಕೆ ಸಿಲುಕಿರುವ ಭೋಪಾಲ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಾಧ್ವಿ ಪ್ರಗ್ಯಾ ಅವರಿಗೆ ಲೋಕಸಭಾ ಚುನಾವಣೆಯ ಕೊನೆಯ ದಿನದ ಪ್ರಚಾರದ ಕಣದಿಂದ ದೂರ ಉಳಿಯುವಂತೆ ಪಕ್ಷದ ಹಿರಿಯ ನಾಯಕರು ಖಡಕ್ ಸೂಚನೆ ನೀಡಿದ್ದಾರೆ.
ಖಂಡ್ವಾ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಪಕ್ಷದ ಅಭ್ಯರ್ಥಿ ಕುಮಾರ್ ಚೌಹಾಣ್ ಪರವಾಗಿ ರೋಡ್ ಶೋ ನಡೆಸಲು ಸಾಧ್ವಿ ಅವರು ಬುರ್ಹಾನ್ಪುರಕ್ಕೆ ಬಂದಿದ್ದರು. ಆದರೆ, ಅಷ್ಟರಲ್ಲಿ ಗೋಡ್ಸೆ ವಿವಾದ ದೇಶಾದ್ಯಂತ ಭಾರಿ ವಿವಾದ ಸೃಷ್ಟಿಸಿದ್ದರಿಂದ ಯಾವುದೇ ಬಹಿರಂಗ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳದಂತೆ ಸಾಧ್ವಿ ಅವರಿಗೆ ಪಕ್ಷದ ಕಡೆಯಿಂದ ಸೂಚನೆ ನೀಡಲಾಗಿದೆ.’
ಇದೀಗ ಕರ್ನಾಟಕದ ಬಿಜೆಪಿ ನಾಯಕರಾದ ಅನಂತ್ ಕುಮಾರ್ ಹೆಗಡೆ ಮತ್ತು ನಳಿನ ಕುಮಾರ್ ಕಟೀಲ್ ಸಹ ಗೋಡ್ಸೆ ಪರವಾಗಿ ಮಾತನಾಡುವ ಮೂಲಕ ಬಿಜೆಪಿ ಹಾಗೂ ಪ್ರತಿಪಕ್ಷಗಳ ಟೀಕೆಗೆ ಗುರಿಯಾಗಿದ್ದಾರೆ. ಸಂಸದ ಅನಂತ್ ಕುಮಾರ್ ಹೆಗಡೆ ಅವರು, ಟ್ವೀಟ್ ನಲ್ಲಿ ಪ್ರಕಟಿಸಿದ್ದ ತಮ್ಮ ಹೇಳಿಕೆಯನ್ನು ಹಿಂಪಡೆದು, ಕ್ಷಮೆಯಾಚಿಸಿದ್ದಾರೆ.