ಪಾಟ್ನಾ: ಬಿಜೆಪಿಯು ತನ್ನ ಲೋಕಸಭಾ ಅಭ್ಯರ್ಥಿ ಸಾಧ್ವಿ ಪ್ರಜ್ಞಾ ಠಾಕೂರಳನ್ನು ಪಕ್ಷದಿಂದ ಹೊರ ಹಾಕುವ ಕುರಿತು ಪರಿಶೀಲಿಸಬೇಕು” ಎಂದು ಬಿಹಾರದ ಮುಖ್ಯಮಂತ್ರಿ ಹಾಗೂ ಎನ್ ಡಿ ಎ ಸಹಭಾಗಿ ಮುಖಂಡ ನಿತೀಶ್ ಕುಮಾರ್ ಹೇಳಿದ್ದಾರೆ.
ಭೋಪಾಲ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಾಧ್ವಿ ಪ್ರಜ್ಞಾ ಇತ್ತೀಚೆಗೆ ಗಾಂಧೀಜಿಯನ್ನು ಕೊಂದ ನಾಥೂರಾಮ್ ಗೋಡ್ಸೆ ಒಬ್ಬ ದೇಶಭಕ್ತ ಎಂಬ ಹೇಳಿಕೆ ನೀಡಿ ವಿವಾದವಾಗಿದ್ದರ ಹಿನ್ನೆಲೆಯಲ್ಲಿ ಮೇಲಿನಂತೆ ಹೇಳಿದ್ದಾರೆ.
ಇಂದು ಬಿಹಾರದಲ್ಲಿ ನಡೆದ ಅಂತಿಮ ಹಂತದ ಚುನಾವಣೆಯಲ್ಲಿ ತಮ್ಮ ಮತ ಚಾಲಾಯಿಸಿದ ನಂತರ ನಿತೀಶ್ ಕುಮಾರ್ ಸುದ್ದಿಗಾರೊಂದಿಗೆ ಮಾತಾಡುತ್ತಿದ್ದರು.
ಸಾಧ್ವಿ ಪ್ರಜ್ಞಾ ನೀಡಿರುವಂತಹ ಹೇಳಿಕೆಗಳನ್ನು ತಮ್ಮ ಪಕ್ಷ ಸಹಿಸುವುದಿಲ್ಲ ಎಂದೂ ಅವರು ಹೇಳಿದ್ದಾರೆ. “ಇದು ತೀರಾ ಖಂಡನೀಯ, (ಗೋಡ್ಸೆಯನ್ನು ದೇಶಭಕ್ತ ಎಂದ ಮಾತು). ಬಾಪು ರಾಷ್ಟ್ರಪಿತರಾಗಿದ್ದಾರೆ, ಗೋಡ್ಸೆಯ ಬಗ್ಗೆ ಈ ರೀತಿ ಹೇಳುವುದನ್ನು ಜನರು ಇಷ್ಟಪಡುವುದಿಲ್ಲ” ಎಂದು ನಿತೀಶ್ ಕುಮಾರ್ ಹೇಳಿದ್ದಾರೆ.
ಸಾಧ್ವಿಯನ್ನು ಬಿಜೆಪಿ ಹೊರಹಾಕಬೇಕೇ ಎಂದು ಕೇಳಿದ ಪ್ರಶ್ನೆಗೆ “ಇದನ್ನು ಬಿಜೆಪಿ ಪರಿಗಣಿಸಬೇಕು” ಎಂದ ಅವರು “ಇದು ಬಿಜೆಪಿಯ ಆಂತರಿಕ ವಿಷಯವಾದರೂ ದೇಶ ಮತ್ತು ಸಿದ್ಧಾಂತದ ವಿಷಯ ಬಂದಾಗ ಇಂತಹದ್ದೆನ್ನೆಲ್ಲಾ ಸಹಿಸಿಕೊಳ್ಳುವ ಪ್ರಶ್ನೆಯಿಲ್ಲ” ಎಂದು ಹೇಳಿದ ನಿತೀಶ್ ಇಂತಹ ವ್ಯಕ್ತಿಗಳ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳುವುದು ಅವರ ಪಕ್ಷಕ್ಕೆ ಸಂಬಂಧಿಸಿದ್ದರು ಎಂದರು.
“ನಾನು ‘3 C’ ಗಳ ವಿಷಯದಲ್ಲಿ ಎಂದೂ ರಾಜಿ ಮಾಡಿಕೊಂಡಿಲ್ಲ ಎಂದು ನಿತೀಶ್ ಹೇಳಿದ್ದಾರೆ (Crime, Corruption, Communalism- ಅಪರಾಧ, ಭ್ರಷ್ಟಾಚಾರ ಮತ್ತು ಕೋಮುವಾದ)
ಸಾಧ್ವಿ ಪ್ರಜ್ಞಾಳ ಹೇಳಿಕೆ ದೇಶದಾದ್ಯಂತ ತೀವ್ರ ಖಂಡನೆಗೆ ಒಳಗಾಗಿತ್ತು.