ಲೋಕಸಭಾ ಚುನಾವಣೆ 2019ರ ಅಂತಿಮ ಹಂತದ ಮತದಾನ ಮುಕ್ತಾಯವಾಗುತ್ತಿದ್ದಂತೆ ದೇಶದ ಹಲವಾರು ಸಮೀಕ್ಷಾ ಸಂಸ್ಥೆಗಳು ಹಾಗೂ ಮಾಧ್ಯಮಗಳು ತಂತಮ್ಮ ಮತಗಟ್ಟೆ ಸಮೀಕ್ಷೆಯ ಫಲಿತಾಂಶಗಳನ್ನು ಪ್ರಕಟಿಸಿವೆ. ಮೇಲ್ನೋಟಕ್ಕೇ ಸ್ಪಷ್ಟವಾಗುವಂತೆ ಬಹುತೇಕ ಮತಗಟ್ಟೆ ಸಮೀಕ್ಷೆಗಳು 2019ರ ಲೋಕಸಭಾ ಚುನವಾಣೆಯಲ್ಲಿ ಬಿಜೆಪಿ ನೇತೃತ್ವದ ಎನ್ ಡಿ ಎ ಮೈತ್ರಿಕೂಟವು ಮೂರನೇ ಬಾರಿಗೆ ದೇಶದ ಅಧಿಕಾರದ ಚುಕ್ಕಾಣಿ ಹಿಡಿಯುವಷ್ಟು ಸರಳ ಬಹುಮತ ಪಡೆಯುತ್ತದೆ ಎಂದು ತಿಳಿಸಿವೆ. ವಿವಿಧ ಸಮೀಕ್ಷೆಗಳನ್ನು ನೋಡಿದಾಗ ಎನ್ ಡಿ ಎ ಮೈತ್ರಿಕೂಟವು 242ರಿಂದ 339-368ರ ವರೆಗೂ ಲೋಕಸಭಾ ಸ್ಥಾನಗಳನ್ನು ಗಳಿಸಿಕೊಳ್ಳುತ್ತದೆ ಎಂದು ಸಮೀಕ್ಷೆಗಳು ತಿಳಿಸಿವೆ. ಅಂತೆಯೇ ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟವು 14 ರಿಂದ 164 ಸೀಟುಗಳನ್ನು ಗಳಿಸಿಕೊಳ್ಳಲಿದೆ ಎಂದು ಈ ಸಮೀಕ್ಷೆ ತಿಳಿಸಿವೆ. ನ್ಯೂಸ್ 18 ಸಮೀಕ್ಷೆಯಂತೂ ಕಾಂಗ್ರೆಸ್ ಪಕ್ಷಕ್ಕೆ ಕೇವಲ 32-37 ಸೀಟುಗಳು ಮಾತ್ರವೇ ಲಭ್ಯವಾಗಲಿವೆ ಎಂದು ತಿಳಿಸಿದೆ.
ಹಲವು ಮತಗಟ್ಟೆ ಸಮೀಕ್ಷೆಗಳು ಉತ್ತರ ಪ್ರದೇಶದಲ್ಲಿ SP-BSP ಮೈತ್ರಿಕೂಟವು ಉತ್ತಮ ಸಾಧನೆ ಮಾಡಿಲ್ಲ ಎಂದು ತಿಳಿಸಿವೆ. ಅಲ್ಲಿ ಬಿಜೆಪಿ 58 ಸೀಟು ಗಳಿಸುತ್ತದೆ ಎಂದಿರುವ ಟೈಮ್ಸ್ ನೌ-ವಿಎಂಆರ್ ಸಮೀಕ್ಷೆ ಮೈತ್ರಿಕೋಟುಕ್ಕೆ 20 ಸೀಟುಗಳು ಮಾತ್ರ ಲಭ್ಯವಾಗುತ್ತವೆ ಎಂದಿದೆ. ಯುಪಿಎ ಕೇವಲ 2 ಸೀಟು ಪಡೆಯುತ್ತದೆ ಎಂದು ಈ ಸಮೀಕ್ಷೆ ಹೇಳಿದೆ.
ಕರ್ನಾಟಕದಲ್ಲಿ ಬಿಜೆಪಿ 20 ಸೀಟು ಪಡೆಯಲಿದೆ, ಕಾಂಗ್ರೆಸ್- ಜೆ ಡಿಎಸ್ 3-6 ಸೀಟು ಪಡೆಯಲಿದೆ ಎಂದೂ ಮತಗಟ್ಟೆ ಸಮೀಕ್ಷೆಗಳು ಹೇಳಿವೆ. ದೇಶದ ರಾಜಧಾನಿ ದೆಹಲಿಯಲ್ಲಿ ಏಳಕ್ಕೆ ಏಳು ಸೀಟುಗಳನ್ನೂ ಬಿಜೆಪಿಯೇ ಪಡೆಯಲಿದೆ ಎಂದು ಇಂಡಿಯಾ ಟುಡೆ-ಆಕ್ಸಿಸ್ ಸಮೀಕ್ಷೆ ಹೇಳಿದೆ. ಗುಜರಾತ್, ಉತ್ತರಾಖಂಡ್, ಬಿಹಾರ್ ಮತ್ತು ಹಿಮಾಚಲ ಪ್ರದೇಶಗಳಲ್ಲಿ ಎನ್ ಡಿ ಎಗೇ ಬಹುತಮ ಎಂದು ಎಲ್ಲಾ ಮತಗಟ್ಟೆ ಸಮೀಕ್ಷೆಗಳು ತಿಳಿಸಿವೆ. ಪಶ್ಚಿಮ ಬಂಗಾಳದಲ್ಲಿ ಟಿಎಂಸಿ 24 ಸೀಟು ಪಡೆದು ಬಿಜೆಪಿ ಪ್ರಥಮ ಬಾರಿಗೆ ಎರಡಂಕಿ ದಾಟಿ 14 ಸೀಟು ಪಡೆಯಲಿದೆ ಎಂದು ಸಮೀಕ್ಷೆಗಳು ಹೇಳುತ್ತಿವೆ.
ದೇಶದ ಎಲ್ಲಾ ಹಂತಗಳ ಎಲ್ಲಾ ಕ್ಷೇತ್ರಗಳಲ್ಲಿ ಒಟ್ಟು 7,42,187 ಜನರನ್ನು ಸಮೀಕ್ಷೆಗೆ ಒಳಪಡಿಸಿ ಫಲಿತಾಂಶ ಪ್ರಕಟಿಸಿರುವುದಾಗಿ ಹೇಳಿಕೊಂಡಿರುವ ಇಂಡಿಯಾ ಟುಡೆ-ಆಕ್ಸಿಸ್ ಸಮೀಕ್ಷೆ ಪ್ರಕಾರ ಎನ್ ಡಿಎಗೆ 339ರಿಂದ 368 ಸೀಟುಗಳು ಲಭ್ಯವಾಗಲಿವೆ; ಕಾಂಗ್ರೆಸ್ ಗೆ 77-108 ಸೀಟುಗಳು ಸಿಗಲಿವೆ, ಮಿಕ್ಕ ಪಕ್ಷಗಳು 69-95 ಸೀಟುಗಳನ್ನು ಪಡೆಯಲಿದ್ದಾರೆ.

ಈ ಗಾಸಿಪ್ ನಾನು ನಂಬುವುದಿಲ್ಲ ಎಂದ ಮಮತಾ ‘ದೀದಿ’
ಮತಗಟ್ಟೆ ಸಮೀಕ್ಷೆಗಳು ಪ್ರಕಟವಾಗುತ್ತಿದ್ದಂತೆ ರಾಜಕೀಯ ರಂಗದಲ್ಲಿ ಹಲವು ಬಗೆಯ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಹಾಗೂ ಟಿಎಂಸಿ ವರಿಷ್ಠೆ ಮಮತಾ ಬ್ಯಾನರ್ಜಿ “ನಾನು ಮತಗಟ್ಟೆ ಸಮೀಕ್ಷೆ ಗಾಸಿಪ್ ನಂಬುವುದಿಲ್ಲ. ಈ ಗಾಸಿಪ್ ಮೂಲಕ ಸಾವಿರಾರು ಇವಿಎಂ ಯಂತ್ರಗಳಲ್ಲಿ ಫಲಿತಾಂಶ ತಿರುಚುವ ಇಲ್ಲವೇ ಸ್ಥಳಾಂತರಿಸುವ ಹುನ್ನಾರ ಅಡಗಿದೆ. ಎಲ್ಲಾ ವಿಪಕ್ಷಗಳು ಒಗ್ಗಟ್ಟು ತೋರಲು, ಗಟ್ಟಿತನದಿಂದ ದಿಟ್ಟವಾಗಿ ಪರಿಸ್ಥಿತಿ ಎದುರಿಸಲು ನಾನು ಕೇಳಿಕೊಳ್ಳುತ್ತೇನೆ” ಎಂದು ಟ್ವೀಟ್ ಮಾಡಿದ್ದಾರೆ.
I don’t trust Exit Poll gossip. The game plan is to manipulate or replace thousands of EVMs through this gossip. I appeal to all Opposition parties to be united, strong and bold. We will fight this battle together
— Mamata Banerjee (@MamataOfficial) May 19, 2019
ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿ ಸುನಿಲ್ ದಿಯೋಧರ್ ಅವರ, “ಈ ಮತಗಟ್ಟೆ ಸಮೀಕ್ಷೆಗಳನ್ನು ನಾನು ಸಹ ನಂಬುವುದಿಲ್ಲ. ಬಿಜೆಪಿ ತಾನೇ ಏಕಾಂಗಿಯಾಗಿ 300+ ಸೀಟುಗಳನ್ನು ಪಡೆಯಲಿದೆ, ಎನ್ ಡಿ ಎ 360 + ಸೀಟು ಗಳಿಸಲಿದೆ, ನಾವು ಮಜಬೂತ್ ಸರ್ಕಾರ ರಚಿಸುವೆಡೆ ಮುಂದಾಗಲಿದ್ದೇವೆ, ಜೈಶ್ರೀರಾಮ್” ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ
ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, “ಪ್ರತಿಯೊಂದು ಮತಗಟ್ಟೆ ಸಮೀಕ್ಷೆಯೂ ತಪ್ಪಾಗುವುದಿಲ್ಲ. ಟೀವಿ ಸ್ವಿಚಾಫ್ ಮಾಡಿ, ಸೋಷಲ್ ಮೀಡಿಯಾದಿಂದ ಹೊರಬಂದು ಮೇ 23ರಂದು ಭೂಮಿ ತನ್ನ ಅಕ್ಷದ ಮೇಲೆ ಸುತ್ತುತ್ತಿದೆಯಾ ಎಂದು ನೋಡಲು ಕಾಯುವುದು ಸೂಕ್ತ” ಎಂದಿದ್ದಾರೆ.
Every single exit poll can’t be wrong! Time to switch off the TV, log out of social media & wait to see if the world is still spinning on its axis on the 23rd.
— Omar Abdullah (@OmarAbdullah) May 19, 2019
ಮತಗಟ್ಟೆ ಸಮೀಕ್ಷೆಗಳು ಸಂಪೂರ್ಣ ಬುಡಮೇಲಾಗಿರುವ ಉದಾಹರಣೆಗಳು ಸಹ ಇವೆ. ಉದಾಹರಣೆಗೆ 2004ರಲ್ಲಿ ಎಲ್ಲಾ ಸಮೀಕ್ಷೆಗೆಳು ಈಗಿನಂತೆಯೇ ಬಿಜೆಪಿಗೆ ಬಹುಮತ ಎಂದೇ ತಿಳಿಸಿದ್ದವು. ಆದರೆ ಅಂತಿಮವಾಗಿ ಎಡಪಕ್ಷಗಳ ಬೆಂಬಲದಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತ್ತು.
2014ರಲ್ಲಿ ಕೆಲವು ಮತಗಟ್ಟೆ ಸಮೀಕ್ಷೆಗಳು ತಿಳಿಸಿದಂತೆಯೇ ಅಂತಿಮ ಫಲಿತಾಂಶ ಬಿಜೆಪಿ ಪರವಾಗಿ ಬಂದಿತ್ತು.
ಮತಗಟ್ಟೆಯಲ್ಲಿ ಜನರು ನೀಡುವ ಅಂತಿಮ ಜನಾದೇಶದಕ್ಕೂ ಮತಗಟ್ಟೆ ಸಮೀಕ್ಷೆಗಳು ನೀಡಿರುವ ಫಲಿತಾಂಶಕ್ಕೂ ತಾಳಮೇಳ ಇದೆಯೇ ಇಲ್ಲವೇ ಎಂಬುದನ್ನು ತಿಳಿಯಲು ಇನ್ನೂ ನಾಲ್ಕು ದಿನ ಎಲ್ಲರೂ ಕಾಯಲೇಬೇಕು.