ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಲಿದೆ ಎಂಬುದಾಗಿ ‘ಎಕ್ಸಿಟ್ ಪೋಲ್’ ಫಲಿತಾಂಶಗಳು ಮುನ್ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಷೇರುಪೇಟೆ ಸಂಭ್ರಮಿಸಿದೆ. ಹತ್ತುವರ್ಷಗಳಲ್ಲೇ ಒಂದೇ ದಿನ ವಿವಿಧ ಸೂಚ್ಯಂಕಗಳು ಅತಿಗರಿಷ್ಠ ಪ್ರಮಾಣದಲ್ಲಿ ಏರಿಕೆ ದಾಖಲಿಸಿವೆ. ಸೆನ್ಸೆಕ್ಸ್ 1421.90 ಅಂಶ ಏರಿ 40,000 ಗಡಿದಾಟುವತ್ತ ಸಾಗಿದ್ದರೆ, ನಿಫ್ಟಿ ಸೂಚ್ಯಂಕ 421 ಅಂಶ ಏರಿಕೆ ಕಂಡು 12,000 ಅಂಶಗಳನ್ನು ಮುಟ್ಟುವತ್ತ ದಾಪುಗಾಲು ಹಾಕಿದೆ. ಇದಲ್ಲದೆ, ಬ್ಯಾಂಕೆಕ್ಸ್ ಸೇರಿದಂತೆ ವಿಸ್ತೃತ ಮಾರುಕಟ್ಟೆಯ ಬಹುತೇಕ ಸೂಚ್ಯಂಕಗಳು ಜಿಗಿದಿವೆ.
ಫಲಿತಾಂಶ ಪ್ರಕಟವಾಗುವವರೆಗೂ ಮಾರುಕಟ್ಟೆಯಲ್ಲಿ ಈ ಉತ್ಸಾಹ ಚಿಮ್ಮುತ್ತಲೇ ಇರುತ್ತದೆ. ಆದರೆ, ಎಕ್ಸಿಟ್ ಪೋಲ್ ಗಳು ಉಲ್ಟಾಹೊಡೆದಿರುವ ಹಲವು ನಿದರ್ಶನಗಳಿವೆ. ಅಲ್ಲದೇ ಎಬಿಪಿ ನೀಲ್ಸನ್ ಮತ್ತು ನ್ಯೂಸ್ ಎಕ್ಸ್ ಎಕ್ಸಿಟ್ ಪೋಲ್ ಫಲಿತಾಂಶಗಳು ಎನ್ಡಿಎಗೆ ಸರಳ ಬಹುಮತ ಕೂಡಾ ಬರುವುದಿಲ್ಲ ಎಂಬ ಮುನ್ಸೂಚನೆ ನೀಡಿವೆ. 23 ರಂದು ಫಲಿತಾಂಶ ಪ್ರಕಟವಾದಾಗ ಜನರ ಮನದಲ್ಲೇನಿದೆ ಎಂಬುದು ಗೊತ್ತಾಗುತ್ತದೆ. ಒಂದು ವೇಳೆ ಎನ್ಡಿಎ ಸರ್ಕಾರವೇ ಅಧಿಕಾರದಲ್ಲಿ ಮುಂದುವರೆದರೆ ಪೇಟೆಯಲ್ಲಿ ಮತ್ತಷ್ಟು ದಿನ ಉತ್ಸಾಹ ಇರುತ್ತದೆ.
ಈಗ ನಮ್ಮ ಮುಂದಿರುವ ಮುಖ್ಯ ಪ್ರಶ್ನೆ ಎಂದರೆ- ಷೇರುಪೇಟೆ ಜಿಗಿತವು ಸ್ಥಿರವಾಗಿ ನಿಲ್ಲುವುದೇ ಎಂಬುದು. ಎನ್ಡಿಎ ಸರ್ಕಾರವೇ ಅಧಿಕಾರಕ್ಕೆ ಬಂದರೆ ಕಳೆದ ಐದು ವರ್ಷಗಳಲ್ಲಿ ಸಾಧಿಸದೇ ಇದ್ದುದನ್ನು ಮುಂದಿನ ದಿನಗಳಲ್ಲಿ ಸಾಧಿಸುವುದು ಸಾಧ್ಯವೇ? ದೇಶದಲ್ಲಿ ನಿರುದ್ಯೋಗ ಸಮಸ್ಯೆ ತಾರಕಕ್ಕೇರಿದೆ. ಕೃಷಿಕರ ಸಂಕಷ್ಟಗಳು ಹೆಚ್ಚಿವೆ. ಗ್ರಾಮೀಣ ಪ್ರದೇಶದಲ್ಲಿನ ಉಪಭೋಗವು ಕನಿಷ್ಠ ಮಟ್ಟಕ್ಕೆ ಇಳಿದಿದೆ. ಜನರ ಖರೀದಿ ಶಕ್ತಿ ಕುಸಿದಿದೆ. ಜಿಡಿಪಿ ಸಹ ಶೇ.7ಕ್ಕಿಂತ ಕೆಳಕ್ಕೆ ಇಳಿದಿದೆ. ಅದನ್ನು ಅಧಿಕೃತವಾಗಿ ಪ್ರಕಟಿಸಬೇಕಷ್ಟೇ. ಸೇವಾವಲಯ, ಉತ್ಪಾದನಾ ವಲಯ ಸೇರಿದಂತೆ ಬಹುತೇಕ ವಲಯಗಳಲ್ಲಿ ಹಿಂಜರಿತ ನಿಚ್ಚಳವಾಗಿದೆ. ತತ್ಪರಿಣಾಮ ದೇಶದ ಆರ್ಥಿಕತೆಯೂ ಹಿಂಜರಿತದತ್ತ ಸಾಗಿದೆ.
ಹೀಗಿರುವಾಗ ಎನ್ಡಿಎ ಸರ್ಕಾರ ಅಧಿಕಾರಕ್ಕೆ ಮರಳುತ್ತದೆ ಎಂಬ ಒಂದೇ ಕಾರಣಕ್ಕೆ ಷೇರುಪೇಟೆ ಜಿಗಿದರೆ ಅದು ಸ್ಥಿರವಾಗಿ ನಿಲ್ಲಲಾರದು.
ಷೇರುಪೇಟೆಯೇ ಹಾಗೆ. ಯಾವುದಾದರೊಂದು ಸುದ್ದಿಗಾಗಿ ಹಪಹಪಿಸುತ್ತಿರುತ್ತದೆ. ಸರಾಕಾತ್ಮಕವಾಗಲೀ, ನಕಾರಾತ್ಮಕವಾಗಲೀ ಸುದ್ದಿ ಉದಯಿಸಬೇಕು. ಮತ್ತು ಅದಕ್ಕೆ ತ್ವರಿತವಾಗಿ ಸ್ಪಂದಿಸಿ ಏರಿಳಿಯಬೇಕು. ಸೋಮವಾರ ಷೇರುಪೇಟೆಯಲ್ಲಿ ಕಂಡಿರುವ ಭಾರಿ ಏರಿಕೆಯು ಷೇರುಪೇಟೆಯ ಸ್ವಭಾವಜನ್ಯ ಸಹಜ ನಡವಳಿಕೆ ಅಷ್ಟೇ ಹೊರತು ಅದನ್ನು ಮೋದಿ ಸರ್ಕಾರ ಸದೃಢತೆಯ ಸಂಕೇತವೆಂದು ಪ್ರತಿಬಿಂಬಿಸುತ್ತಿದೆ ಎಂದು ಪರಿಭಾವಿಸಬೇಕಿಲ್ಲ.
ಈಗಾಗಲೇ ಬಹುತೇಕ ಕಂಪನಿಗಳ ಮಾರಾಟ, ವಹಿವಾಟು, ಲಾಭ, ನಿವ್ವಳ ಲಾಭ ತಗ್ಗುತ್ತಾ ಬಂದಿವೆ. ಪ್ರಸ್ತುತ ದೇಶದಲ್ಲಿ ಆರ್ಥಿಕ ಹಿಂಜರಿತ ಇರುವುದರಿಂದ ಪ್ರಸಕ್ತ ವಿತ್ತೀಯ ವರ್ಷದಲ್ಲಿ ಆಟೋಮೊಬೈಲ್, ಎಫ್ಎಂಸಿಜಿ, ಫಾರ್ಮ, ರಿಯಾಲ್ಟಿ ಸೇರಿದಂತೆ ಪ್ರಮುಖ ವಲಯಗಳಲ್ಲಿ ಲಾಭದ ಪ್ರಮಾಣ ತಗ್ಗುವ ಮುನ್ನಂದಾಜನ್ನು ಬಹುತೇಕ ಕಂಪನಿಗಳೇ ಘೋಷಿಸಿವೆ.
ಪ್ರಸ್ತುತ ಮೋದಿ ಸರ್ಕಾರ ಅಧಿಕಾರಕ್ಕೆ ಬಂದರೂ ಅಥವಾ ಯುಪಿಎ ಅಥವಾ ತೃತೀಯ ರಂಗದ ಸರ್ಕಾರ ಬಂದರೂ ದೇಶದಲ್ಲಿನ ನಿರುದ್ಯೋಗ ತಗ್ಗಿಸುವ, ಕೃಷಿವಲಯದ ಸಂಕಷ್ಟ ನಿವಾರಿಸುವ ಮತ್ತು ಜನರ ಖರೀದಿಸುವ ಶಕ್ತಿ ಹೆಚ್ಚಿಸುವ ನಿಟ್ಟಿನಲ್ಲಿ ರಚನಾತ್ಮಕ ಕಾರ್ಯಕ್ರಮಗಳನ್ನು ತ್ವರಿತವಾಗಿ ರೂಪಿಸದೇ ಇದ್ದರೆ ಏನೂ ಉಪಯೋಗ ಆಗಲಾರದು.
ಈಗ ದೇಶದ ಮುಂದಿರುವ ಸಮಸ್ಯೆ ಎಂದರೆ ನರೇಂದ್ರ ಮೋದಿ ನೇತೃತ್ವದಲ್ಲಿ ಎನ್ಡಿಎ ಸರ್ಕಾರ ಅಧಿಕಾರಕ್ಕೆ ಬಂದರೆ, ದೇಶ ಮತ್ತೆ ಅಭಿವೃದ್ಧಿ ಪಥದಲ್ಲಿ ಮತ್ತೆ ಐದು ವರ್ಷ ಹಿಮ್ಮುಖವಾಗಿ ಚಲಿಸುವ ಅಪಾಯ ಇದೆ. ಯಾಕೆಂದರೆ, ಪ್ರಧಾನಿ ನರೇಂದ್ರ ಮೋದಿ ಮುಂದೆ ದೇಶದಲ್ಲಿನ ನಿರುದ್ಯೋಗ ನಿವಾರಿಸುವ, ಆರ್ಥಿಕ ಹಿಂಜರಿತ ಹಿಮ್ಮೆಟ್ಟಿಸುವ ಯಾವ ‘ಮಂತ್ರದಂಡ’ವೂ ಇಲ್ಲ. ದೇಶಭಕ್ತಿ ಮತ್ತು ರಾಷ್ಟ್ರೀಯ ಸುರಕ್ಷತೆಯ ಪೊಳ್ಳು ಘೋಷಣೆಗಳ ಮೂಲಕ ಚುನಾವಣೆ ಗೆದ್ದಷ್ಟು ದೇಶದ ಆರ್ಥಿಕತೆಯನ್ನು ಸುಧಾರಿಸುವುದು ಸುಲಭವಲ್ಲ.
ಹೀಗಾಗಿ ಷೇರುಪೇಟೆಯ ತೀಕ್ಷ್ಣ ನಡವಳಿಕೆ ಏನೇ ಇರಲಿ ಅದು ಇಡೀ ನಮ್ಮ ದೇಶದ ಆರ್ಥಿಕತೆಯ ದಿಕ್ಸೂಚಿಯಲ್ಲ. ದೇಶದ ಬೃಹದಾರ್ಥಿಕತೆ ಹಿಂಜರಿತದತ್ತ ಸಾಗಿದೆ. ನಿರುದ್ಯೋಗ ಗರಿಷ್ಟ ಪ್ರಮಾಣದಲ್ಲಿದೆ. ಉತ್ಪಾದನಾ ವಲಯ, ಸೇವಾವಲಯಗಳೆಲ್ಲವೂ ಹಿಂಜರಿತದ ತೆಕ್ಕೆಗೆ ಸಿಲುಕಿವೆ. ಇಷ್ಟಾದರೂ ಷೇರುಪೇಟೆ ವಿಸ್ತೃತ ಸೂಚ್ಯಂಕಗಳಾದ ನಿಫ್ಟಿ, ಸೆನ್ಸೆಕ್ಸ್ ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿವೆ.
ಇಲ್ಲಿ ಗಮನಿಸಬೇಕಾಗ ಮತ್ತೊಂದು ಸಂಗತಿ ಎಂದರೆ ಕಾರ್ಪೊರೆಟ್ ಲಾಬಿ ಯಾವಾಗಲೂ ಮೋದಿ ಸರ್ಕಾರದ ಏಳಿಗೆಯನ್ನು ಸಂಭ್ರಮಿಸುತ್ತಲೇ ಬಂದಿದೆ. ಮೋದಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಬೇಕೆಂದು ಬಯಸಿ, ಅದಕ್ಕೆ ಆರ್ಥಿಕ ನೆರವು ಸೇರಿದಂತೆ ಎಲ್ಲಾ ಪೂರಕ ನೆರವುಗಳನ್ನು ಕಾರ್ಪೊರೆಟ್ ಲಾಬಿ ಒದಗಿಸಿದೆ. ಮೋದಿ ಸರ್ಕಾರ ಕಾರ್ಪೊರೆಟ್ ತೆರಿಗೆಯನ್ನು ಗಣನೀಯ ಪ್ರಮಾಣದಲ್ಲಿ ತಗ್ಗಿಸಿದೆ. ಬೃಹತ್ ಕಾರ್ಪೊರೆಟ್ ಗಳ ಸಾಲವನ್ನು ಮನ್ನಾ ಮಾಡಿದೆ. ಬೃಹತ್ ಕಂಪನಿಗಳ ಸಾಲ ಮರುಪಾವತಿ ಮಾಡದ ಲಕ್ಷಾಂತರ ಕೋಟಿ ರುಪಾಯಿ ನಿಷ್ಕ್ರಿಯ ಸಾಲವಾಗಿ ಪರಿಣಮಿಸಿ ಸಾರ್ವಜನಿಕ ವಲಯದ ಬ್ಯಾಂಕುಗಳು ನಷ್ಟದಲ್ಲಿವೆ. ಭಾರತ ಸಂಚಾರ ನಿಗಮ ನಿಯಮಿತ (ಬಿಎಸ್ಎನ್ಎಲ್) ಬಲಿಕೊಟ್ಟು ರಿಲಯನ್ಸ್ ಜಿಯೋಗೆ ಜೀವದಾನ ನೀಡಿದ “ಉದಾತ್ತ” ಮನೋಭಾವ ಮೋದಿ ಸರ್ಕಾರದ್ದು. ಎಚ್ಎಎಲ್ ಗೆ ದಕ್ಕಬೇಕಾದ ರಫೇಲ್ ಯುದ್ಧವಿಮಾನ ನಿರ್ಮಾಣ ಗುತ್ತಿಗೆಯನ್ನು ಅನಿಲ್ ಅಂಬಾನಿ ಒಡೆತನದ ರಿಲಯನ್ಸ್ ಡಿಫೆನ್ಸ್ ಕಂಪನಿಗೆ ಬಿಟ್ಟುಕೊಟ್ಟ ಮಹಾಕಾರ್ಯವನ್ನು ಮೋದಿ ಸರ್ಕಾರ ಮಾಡಿದೆ. ಹೀಗಾಗಿ ಷೇರುಪೇಟೆಯಲ್ಲಿನ ಸಂಭ್ರಮಕ್ಕೆ ಕಾರ್ಪೊರೆಟ್ ಲಾಬಿಯೂ ಕಾರಣ.
ವಾಸ್ತವವಾಗಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದರೆ ಒಂದು ವರ್ಗದ ಜನರು ಸಂಭ್ರಮಿಸಬಹುದು. ಆದರೆ, ಮೋದಿ ಸರ್ಕಾರ ಮರಳಿ ಅಧಿಕಾರಕ್ಕೆ ಬರುವುದೆಂದರೆ ಭಾರತದ ಆರ್ಥಿಕತೆ ಮತ್ತಷ್ಟು ಹಿಂಜರಿತ ಅನುಭವಿಸಿದಂತೆ ಮತ್ತು ಪ್ರಗತಿಯ ಹಾದಿಯಲ್ಲಿ ಒಂದು ದಶಕದಷ್ಟು ಹಿಮ್ಮುಖ ಚಲಿಸಿದಂತೆ!!