ಭಾನುವಾರ ಲೋಕಸಭಾ ಚುನಾವಣೆಯ ಕೊನೆಯ ಮತ್ತು ಏಳನೇ ಸುತ್ತಿನ ಮತದಾನ ಮುಕ್ತಾಯಗೊಳ್ಳುತ್ತಿದ್ದಂತೆ ಬಹುನಿರೀಕ್ಷಿತ ಚುನಾವಣೋತ್ತರ ಮತಗಟ್ಟೆ ಸಮೀಕ್ಷೆಗಳು ಹೊರಬಿದ್ದಿವೆ ಮತ್ತು ನಿರೀಕ್ಷೆಯಂತೆ ಬಿಜೆಪಿ ನೇತೃತ್ವದ ಎನ್ ಡಿಎ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದಿವೆ.
ಆ ಪೈಕಿ ಬಹುತೇಕ ಸಮೀಕ್ಷೆಗಳು ನರೇಂದ್ರ ಮೋದಿ ನೇತೃತ್ವದ ಎನ್ ಡಿಎಗೆ ಭಾರೀ ಬಹುಮತ ಬರಲಿದ್ದು, ಸರಿಸುಮಾರು ಕಳೆದ ಲೋಕಸಭಾ ಚುನಾವಣೆಯಲ್ಲಿ ಪಡೆದಷ್ಟೇ ಸ್ಥಾನಗಳನ್ನು ಬಿಜೆಪಿ ನೇತೃತ್ವದ ಮೈತ್ರಿಕೂಟ ಪಡೆಯಲಿದೆ ಎಂದು ಹೇಳಿವೆ. ಇನ್ನು ಒಂದೆರಡು ಸಮೀಕ್ಷೆಗಳು ಮಾತ್ರ ಬಿಜೆಪಿ ಸರಳ ಬಹುಮತದ ಸಮೀಪ ಬರಲಿದೆ. ಕಾಂಗ್ರೆಸ್ ತನ್ನ ಬಲವನ್ನು ದುಪ್ಪಟ್ಟುಗೊಳಿಸಿಕೊಳ್ಳಲಿದೆ ಎಂದಿವೆ.
ನ್ಯೂಸ್ 18, ಟುಡೇಸ್ ಚಾಣಕ್ಯ, ಸಿ ವೋಟರ್, ಟೈಮ್ಸ್ ನೌ, ಜನ್ ಕೀ ಬಾತ್ ಮುಂತಾದ ಮಾಧ್ಯಮಗಳು ನಡೆಸಿದ ಸಮೀಕ್ಷೆಗಳು ಎನ್ ಡಿಎಗೆ 300ಕ್ಕೂ ಹೆಚ್ಚು ಸ್ಥಾನ ಪಡೆದು ಭಾರೀ ಜನಾದೇಶದೊಂದಿಗೆ ಅಧಿಕಾರದಲ್ಲಿ ಮುಂದುವರಿಯಲಿದೆ ಎಂದಿವೆ. ಎಬಿಪಿ, ನ್ಯೂಸ್ ಎಕ್ಸ್, ನ್ಯೂಸ್ ನೇಷನ್ ಸಮೀಕ್ಷೆಗಳು ಕೂಡ ಎನ್ ಡಿಎಯೇ ಅತಿದೊಡ್ಡ ಮೈತ್ರಿಯಾಗಿ ಹೊರಹೊಮ್ಮಲಿವೆ ಎಂದಿದ್ದು, ಆ ಪೈಕಿ ನ್ಯೂಸ್ ನೇಷನ್ ಹೊರತುಪಡಿಸಿ ಉಳಿದವು, ಎನ್ ಡಿಎಗೆ ಸರಳ ಬಹುಮತ ಲಭಿಸಲಾರದು ಎಂದಿವೆ. ಒಟ್ಟಾರೆ ಸಮೀಕ್ಷೆಗಳ ಸರಾಸರಿ ಪ್ರಕಾರ, ಚುನಾವಣೆ ನಡೆದ ಒಟ್ಟು 542 ಲೋಕಸಭಾ ಸ್ಥಾನಗಳ ಪೈಕಿ ಎನ್ ಡಿಎ ಮೈತ್ರಿಕೂಟ 303 ಸ್ಥಾನ ಪಡೆಯಲಿದ್ದು, ಕಾಂಗ್ರೆಸ್ ನೇತೃತ್ವದ ಯುಪಿಎ 126 ಸ್ಥಾನ ಹಾಗೂ ಇತರರು 113 ಸ್ಥಾನ ಪಡೆಯಲಿದ್ದಾರೆ.
ಈ ಸಮೀಕ್ಷೆಗಳು ಹೊರಬೀಳುತ್ತಿದ್ದಂತೆ ಸಹಜವಾಗೇ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು ಭಾರೀ ಉಮೇದಿನಲ್ಲಿ ಸಮೀಕ್ಷೆಗಳೇ ಅಂತಿಮ ಫಲಿತಾಂಶ ಎಂಬಂತೆ ಪ್ರತಿಕ್ರಿಯಿಸಿದ್ದರೆ, ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ಸಮೀಕ್ಷೆಗಳು ನಿಜವಾದ ನಿದರ್ಶನಗಳೇ ವಿರಳ. ಹಾಗಾಗಿ ಈ ಸಮೀಕ್ಷೆಗಳನ್ನು ನಂಬುವುದಿಲ್ಲ. ಬದಲಾಗಿ ಮೇ 23ರ ವರೆಗೆ ಕಾಯಲು ನಾವು ಸಿದ್ಧ ಎಂದಿವೆ.
ಈ ನಡುವೆ, ಪಶ್ಚಿಮಬಂಗಾಳದ ಮುಖ್ಯಮಂತ್ರಿ ಹಾಗೂ ಪ್ರಧಾನಿ ಹುದ್ದೆಯ ಆಕಾಂಕ್ಷಿಗಳಲ್ಲಿ ಒಬ್ಬರಾಗಿರುವ ಮಮತಾ ಬ್ಯಾನರ್ಜಿ ಅವರು “ಮತಗಟ್ಟೆ ಸಮೀಕ್ಷೆಗಳೆಲ್ಲಾ ಗಾಸಿಪ್. ಆ ಬಗ್ಗೆ ತಲೆಕೆಡಿಸಿಕೊಳ್ಳದೆ ಪ್ರತಿಪಕ್ಷಗಳು ಒಗ್ಗಟ್ಟಾಗಿರಬೇಕು” ಎಂದಿದ್ದಾರೆ. ಅದೇ ವೇಳೆ, ಸಿಎಂ ಕುಮಾರಸ್ವಾಮಿ ಅವರೂ “ಮೋದಿ ಅಲೆ ಎಂಬ ಭ್ರಮೆ ಸೃಷ್ಟಿಸುವ ಮೂಲಕ ಪ್ರಾದೇಶಿಕ ಪಕ್ಷಗಳನ್ನು ಸೆಳೆಯಲು ಮತಗಟ್ಟೆ ಸಮೀಕ್ಷೆಯನ್ನು ಬಳಸಲಾಗುತ್ತಿದೆ. ಇದೊಂದು ರಾಜಕೀಯ ಪ್ರಹಸನ. ಇಂತಹ ಅನೈತಿಕ ರಾಜಕೀಯ ಕುತಂತ್ರಗಳಿಗೆ ಕಡಿವಾಣ ಹಾಕಲು ಮತಗಟ್ಟೆ ಸಮೀಕ್ಷೆಗಳನ್ನು ರದ್ದುಮಾಡಬೇಕಿದೆ” ಎಂದಿದ್ದಾರೆ.
ಇನ್ನೂ ಕೆಲವರು ಮತ್ತೊಂದು ಹೆಜ್ಜೆ ಮುಂದೆ ಹೋಗಿ, ಇವಿಎಂ ದುರ್ಬಳಕೆಯ ಮೂಲಕ ಜನಾದೇಶವನ್ನು ತಿರುಚುವ ಹುನ್ನಾರದ ಭಾಗವಾಗಿ ಮತಗಟ್ಟೆ ಸಮೀಕ್ಷೆಗಳನ್ನು ಬಿಜೆಪಿ ಬಳಸಿಕೊಂಡಿದೆ. ಸಮೀಕ್ಷಾ ಸಂಸ್ಥೆಗಳು ಮತ್ತು ಮಾಧ್ಯಮಗಳ ಮೂಲಕ ಸುಳ್ಳು ಹೇಳಿಸಿ, ಅಧಿಕಾರ ಉಳಿಸಿಕೊಳ್ಳಲು ಮತಯಂತ್ರ ಗೋಲ್ ಮಾಲ್ ನಡೆಸುವ ತಂತ್ರ ಇದು ಎಂಬ ಗಂಭೀರ ಆರೋಪಗಳನ್ನೂ ಮಾಡಿದ್ದಾರೆ. ಸ್ವತಃ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಕೂಡ, ‘ಮತಗಟ್ಟೆ ಸಮೀಕ್ಷೆಗಳು ಯಥಾ ಸಮೀಕ್ಷೆಗಳೇನಲ್ಲ’ ಎಂದಿದ್ದಾರೆ. ಆಸ್ಟ್ರೇಲಿಯಾದ ಸಂಸತ್ ಮತ್ತು ಪ್ರಧಾನಿ ಆಯ್ಕೆಯ ಚುನಾವಣೆಯಲ್ಲಿ ಆಡಳಿತಾರೂಢ ಲಿಬರಲ್ ಪಾರ್ಟಿ ಬದಲು ಪ್ರತಿಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ಅಲ್ಲಿನ ಬಹುತೇಕ ಮತಗಟ್ಟೆ ಸಮೀಕ್ಷೆಗಳು ಹೇಳಿದ್ದವು. ಆದರೆ, ಸಮೀಕ್ಷೆಗಳನ್ನು ತಲೆಕೆಳಗಾಗಿಸಿ ಆಡಳಿತಪಕ್ಷ ಮತ್ತೆ ಅಧಿಕಾರಕ್ಕೆ ಹಿಡಿದಿರುವುದನ್ನು ಕೂಡ ಕೆಲವರು ಉಲ್ಲೇಖಿಸಿ, ಮತಗಟ್ಟೆ ಸಮೀಕ್ಷೆಗಳು ವಿಶ್ವಾಸಾರ್ಹವಲ್ಲ ಎಂಬ ವಾದವನ್ನು ಸಮರ್ಥಿಸಿಕೊಂಡಿದ್ದಾರೆ.
ಈ ಬಾರಿಯ ಲೋಕಸಭಾ ಚುನಾವಣೆಯ ಈ ಮತಗಟ್ಟೆ ಸಮೀಕ್ಷೆಗಳು ಹಿಂದೆಂದಿಗಿಂತ ಹೆಚ್ಚು ಟೀಕೆಗೆ ಗುರಿಯಾಗಿವೆ ಮತ್ತು ಆ ಕಾರಣಕ್ಕೆ ಮತಗಟ್ಟೆ ಸಮೀಕ್ಷೆಗಳ ಒಟ್ಟಾರೆ ಪ್ರಕ್ರಿಯೆ ಮತ್ತು ಇತಿಹಾಸದ ಕುರಿತ ಕುತೂಹಲ ಕೂಡ ಹೆಚ್ಚಾಗಿದೆ. ಆ ಹಿನ್ನೆಲೆಯಲ್ಲಿ ದೇಶದಲ್ಲಿ ಮತಗಟ್ಟೆ ಸಮೀಕ್ಷೆಗಳು ಹೇಗೆ ನಡೆಯುತ್ತವೆ. ಯಾರು ಅವನ್ನು ನಿರ್ವಹಿಸುತ್ತಾರೆ. ಈ ಹಿಂದಿನ ಚುನಾವಣೆಗಳಲ್ಲಿ ಇಂತಹ ಸಮೀಕ್ಷೆಗಳು ವಿಶ್ವಾಸಾರ್ಹತೆ ಏನಾಗಿದೆ? ಮುಂತಾದ ವಿವರಗಳ ಮೇಲೆ ಕಣ್ಣಾಡಿಸಿದರೆ, ಸಮೀಕ್ಷೆಗಳು ಯಶಸ್ಸು ಕಂಡದ್ದೇ ವಿರಳ ಎನ್ನಬಹುದು.
ಸಾಮಾನ್ಯವಾಗಿ ಮತದಾನ ಮಾಡಿ ಮತಗಟ್ಟೆಯಿಂದ ಹೊರಬರುವ ಮತದಾರನನ್ನು ಮಾತಿಗೆಳೆದು ಆತ ಯಾವ ಪಕ್ಷಕ್ಕೆ ಮತಹಾಕಿದ್ದಾನೆ ಎಂಬ ಮಾಹಿತಿ ಪಡೆದು (ಬಹುತೇಕ ಪರೋಕ್ಷವಾಗಿ), ಆ ಮಾಹಿತಿಯನ್ನು ಕಲೆಹಾಕಿ, ವಿಶ್ಲೇಷಿಸಿ ನೀಡುವುದೇ ಮತಗಟ್ಟೆ ಸಮೀಕ್ಷೆ. ಮತದಾನಕ್ಕೆ ಮುನ್ನ ಮತದಾರರ ಮನಸ್ಥಿತಿ, ಕ್ಷೇತ್ರದ ಒಟ್ಟಾರೆ ನಾಡಿಮಿಡಿತ ಅವಲಂಬಿಸಿ ಪಕ್ಷಗಳ ಬಲಾಬಲ ಅಂದಾಜಿಸುವುದು ಚುನಾವಣಾ ಪೂರ್ವ ಸಮೀಕ್ಷೆಯಾದರೆ, ಮತದಾನದ ಬಳಿಕ ಯಾವ ಪಕ್ಷ ಎಷ್ಟು ಪ್ರಮಾಣದ ಶೇಕಡಾವಾರು ಮತ ಪಡೆಯಬಹುದು ಎಂಬ ಲೆಕ್ಕದ ಮೇಲೆ ಪಕ್ಷಗಳ ಸ್ಥಾನಬಲ ಅಂದಾಜಿಸುವುದು ಮತಗಟ್ಟೆ ಸಮೀಕ್ಷೆ.
ಆದರೆ, ದೇಶದಲ್ಲಿ ಮತಗಟ್ಟೆ ಸಮೀಕ್ಷೆಗಳು ಮೊದಲು ಆರಂಭವಾದ 1980ರ ದಶಕದಿಂದ ಆರಂಭವಾಗಿ ಈವರೆಗೆ ಚುನಾವಣಾ ಫಲಿತಾಂಶದ ಬಳಿಕ ಅವುಗಳು ನಿಜವಾದದ್ದಕ್ಕಿಂತ ಸುಳ್ಳಾದ ಉದಾಹರಣೆಗಳೇ ಹೆಚ್ಚು. ಹಾಗಂತ, ಸಾರಾಸಗಟಾಗಿ ಮತಗಟ್ಟೆ ಸಮೀಕ್ಷೆಗಳು ಪೂರಾ ಸುಳ್ಳಿನ ಕಂತೆ ಎಂದು ತಳ್ಳಿಹಾಕಲಾಗದು ಕೂಡ. ಏಕೆಂದರೆ; ಇಂತಹ ಸಮೀಕ್ಷೆಗಳನ್ನು ನಡೆಸುವ ಸಂಸ್ಥೆ ಮತ್ತು ಮಾಧ್ಯಮಗಳು ಕೂಡ ಯಾವುದೋ ಒಂದು ಪಕ್ಷ ಅಥವಾ ಸಿದ್ಧಾಂತದ ಪರ ವಾಲುವ ಸಾಧ್ಯತೆ ಹೆಚ್ಚು, ವ್ಯಾವಹಾರಿಕ ಕಾರಣಕ್ಕೋ, ರಾಜಕೀಯ ಮಹತ್ವಾಕಾಂಕ್ಷೆಯ ಕಾರಣಕ್ಕೋ ಅಥವಾ ಇನ್ನಾವುದೋ ಉದ್ದೇಶದ ಕಾರಣಕ್ಕೋ ಇಂತಹ ಸಮೀಕ್ಷೆಗಳು ವಾಸ್ತವದಿಂದ ದೂರ ಉಳಿಯಬಹುದಾದರೂ, ಕೆಲವೊಮ್ಮೆ ಮತ ಎಣಿಕೆಯ ಬಳಿಕದ ಲೆಕ್ಕಾಚಾರಗಳಿಗೆ ಸಮೀಪದಲ್ಲಿ ನಿಂತ ಉದಾಹರಣೆಗಳೂ ಇವೆ.
1980ರಲ್ಲಿ ಮತಗಟ್ಟೆ ಸಮೀಕ್ಷೆಗಳು ಆರಂಭವಾದರೂ, ಚುನಾವಣಾ ಆಯೋಗದ ನಿರ್ಬಂಧ ಮತ್ತು ಆ ಕುರಿತ ನ್ಯಾಯಾಲಯದ ಪ್ರಕರಣಗಳ ಹಿನ್ನೆಲೆಯಲ್ಲಿ ಮತಗಟ್ಟೆ ಸಮೀಕ್ಷೆಗಳು ವಾಸ್ತವವಾಗಿ ದೇಶವ್ಯಾಪಿ ನಡೆದದ್ದು 1996ರ ಬಳಿಕವೇ. ಆ ಬಳಿಕ ನಡೆದ ಲೋಕಸಭಾ ಚುನಾವಣೆಗಳ ಪೈಕಿ, 1998 ಮತ್ತು 2014ರ ಚುನಾವಣೆಗಳನ್ನು ಹೊರತುಪಡಿಸಿ ಉಳಿದಂತೆ ಬಹುತೇಕ ಸಂದರ್ಭಗಳಲ್ಲಿ ಮತಗಟ್ಟೆ ಸಮೀಕ್ಷೆಗಳು ಯಶಸ್ಸು ಕಂಡಿಲ್ಲ. ಅದರಲ್ಲೂ 2004 ಮತ್ತು 2009ರ ನಿರಂತರ ಎರಡು ಲೋಕಸಭಾ ಚುನಾವಣೆಗಳಲ್ಲೂ ಮತಗಟ್ಟೆ ಸಮೀಕ್ಷೆಗಳು ಸಂಪೂರ್ಣ ತಲೆಕೆಳಗಾಗಿವೆ.
1996ರಲ್ಲಿ ಅತಂತ್ರ ಲೋಕಸಭೆ ನಿರ್ಮಾಣವಾದ ಹಿನ್ನೆಲೆಯಲ್ಲಿ, ಅತಿದೊಡ್ಡ ಪಕ್ಷವಾಗಿದ್ದ ಬಿಜೆಪಿ, ಅಟಲ್ ಬಿಹಾರಿ ವಾಜಪೇಯಿ ನೇತೃತ್ವದಲ್ಲಿ ಸರ್ಕಾರ ರಚಿಸಿದ್ದರೂ, ಬಹುಮತ ಸಾಬೀತುಮಾಡಲಾಗದೆ 13 ದಿನಕ್ಕೆ ಕುಸಿದಿತ್ತು. ಬಳಿಕ ದೇವೇಗೌಡರ ನೇತೃತ್ವದ ತೃತೀಯ ರಂಗ ಸರ್ಕಾರ ಅಧಿಕಾರಕ್ಕೆ ಬಂದು, ಎರಡು ವರ್ಷದಲ್ಲಿ ಇಬ್ಬರು ಪ್ರಧಾನಿಗಳನ್ನು ಕಂಡಿತ್ತು. 1998ರಲ್ಲಿ ಮತ್ತೆ ಚುನಾವಣಾ ಎದುರಾದಾಗ ಬಹುತೇಕ ಮತಗಟ್ಟೆ ಸಮೀಕ್ಷೆಗಳು ಬಿಜೆಪಿ ನೇತೃತ್ವದ ಎನ್ ಡಿಎ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದಿದ್ದವು. ಆ ಬಾರಿ 252 ಸ್ಥಾನ ಗಳಿಸಿ ವಾಜಪೇಯಿ ಅವರು ಮತ್ತೊಮ್ಮೆ ಪ್ರಧಾನಿಯಾಗುವ ಮೂಲಕ ಮತಗಟ್ಟೆ ಸಮೀಕ್ಷೆಗಳು ನಿಜವಾಗಿದ್ದವು. ಆದರೆ, ಮತ್ತೆ ಎದುರಾದ 1999ರ ಲೋಕಸಭಾ ಚುಣಾವಣೆಯಲ್ಲಿ, ಕಾರ್ಗಿಲ್ ಯುದ್ಧದ ಹಿನ್ನೆಲೆಯಲ್ಲಿ ವಾಜಪೇಯಿ ಅವರು 325ಕ್ಕೂ ಸ್ಥಾನಗಳನ್ನು ಪಡೆದು ಮತ್ತೆ ಮುಂದುವರಿಯಲಿದ್ದಾರೆ ಎಂದು ಮತಗಟ್ಟೆ ಸಮೀಕ್ಷೆಗಳು ಹೇಳಿದ್ದವು. ಆದರೆ, ಆ ಬಾರಿ ಎನ್ ಡಿಎ 296 ಸ್ಥಾನ ಪಡೆಯಿತು. ನಂತರ, 2004ರಲ್ಲಿ ಭಾರತ ಪ್ರಕಾಶಿಸುತ್ತಿದೆ ಘೋಷಣೆಯೊಂದಿಗೆ ಚುನಾವಣೆಗೆ ಹೋದ ವಾಜಪೇಯಿ ಅವರು ಭಾರೀ ಬಹುಮತದೊಂದಿಗೆ ಮತ್ತೆ ಅಧಿಕಾರ ಹಿಡಿಯುತ್ತಾರೆ ಎಂದು ಸಮೀಕ್ಷೆಗಳು ಹೇಳಿದ್ದವು. ಆದರೆ, ಯಾವ ಸಮೀಕ್ಷೆಗಳೂ ಕಾಂಗ್ರೆಸ್ ಅಧಿಕಾರಕ್ಕೇರುತ್ತವೆ ಎಂಬುದಿರಲಿ, ಕನಿಷ್ಠ ತನ್ನ ಸ್ಥಾನ ಹೆಚ್ಚಿಸಿಕೊಳ್ಳುವ ಅಂದಾಜು ಕೂಡ ಮಾಡಿರಲಿಲ್ಲ. ಆದರೆ, 222 ಸ್ಥಾನ ಗಳಿಸಿ ಇತರ ಪಕ್ಷಗಳ ಬಾಹ್ಯ ಬೆಂಬಲದೊಂದಿಗೆ ಕಾಂಗ್ರೆಸ್ ನೇತೃತ್ವದ ಯುಪಿಎ ಅಧಿಕಾರಕ್ಕೇರಿದರೆ, ಬಿಜೆಪಿ ನೇತೃತ್ವದ ಎನ್ ಡಿಎ ಬರೋಬ್ಬರಿ 100 ಸ್ಥಾನ ಕಳೆದುಕೊಂಡು 189ಕ್ಕೆ ಕುಸಿದಿತ್ತು.
2009ರಲ್ಲಿ ಕೂಡ ಮತಗಟ್ಟೆ ಸಮೀಕ್ಷೆಗಳು ಬಹುತೇಕ ಬಿಜೆಪಿ ಅಧಿಕಾರಕ್ಕೆ ಬರಲಿದೆ ಮತ್ತು ಕಾಂಗ್ರೆಸ್ ಸೋಲಲಿದೆ ಎಂದೇ ಹೇಳಿದ್ದವು. ಕೆಲವು ಸಮೀಕ್ಷೆಗಳು ಕಾಂಗ್ರೆಸ್ ಮತ್ತು ಬಿಜೆಪಿ ಅಧಿಕಾರಕ್ಕೇರುವ ಪ್ರಮಾಣ 50:50 ಎಂದಿದ್ದವು. ಆದರೆ, ಕಾಂಗ್ರೆಸ್ ಅಧಿಕಾರದಲ್ಲಿ ಮುಂದುವರಿಯಲಿದೆ ಎಂದು ಯಾವ ಸಮೀಕ್ಷೆಯೂ ಊಹಿಸಿರಲಿಲ್ಲ. ಆದರೆ ಫಲಿತಾಂಶ ಹೊರಬಿದ್ದಾಗ, ಯುಪಿಎ 262 ಸ್ಥಾನ ಗಳಿಸಿದರೆ, ಬಿಜೆಪಿ ಕೇವಲ 159ಕ್ಕೆ ಕುಸಿದಿತ್ತು.
ಆ ಬಳಿಕ 2014ರಲ್ಲಿ ಮೋದಿ ಅಲೆಯ ಹಿನ್ನೆಲೆಯಲ್ಲಿ ಬಹುತೇಕ ಮತಗಟ್ಟೆ ಸಮೀಕ್ಷೆಗಳು, ಬಿಜೆಪಿ ಗೆಲುವನ್ನು ಅಂದಾಜಿಸಿದ್ದವು. ಆದರೆ, ಸಮೀಕ್ಷೆಗಳ ನಿರೀಕ್ಷೆಯನ್ನೂ ಮೀರಿ ಬರೋಬ್ಬರಿ 330ಕ್ಕೂ ಹೆಚ್ಚು ಸ್ಥಾನ ಗಳಿಸುವ ಮೂಲಕ ಎನ್ ಡಿಎ ಅಧಿಕಾರ ಹಿಡಿದಿತ್ತು. ಆದರೆ, ಸಮೀಕ್ಷೆಗಳು ಎನ್ ಡಿಎಗೆ ಅತಿಹೆಚ್ಚು ಎಂದರೆ 289 ಸ್ಥಾನ ಬರಬಹುದು ಎಂದು ಹೇಳಿದ್ದವು.
ಈ ಬಾರಿ ಕೂಡ, ಮೋದಿ ಅಲೆ ಮತ್ತು ಪುಲ್ವಾಮಾ ದಾಳಿಯ ಬಳಿಕದ ರಾಜಕೀಯ ವಾಗ್ವಾದಗಳೇ ಚುನಾವಣೆಯಲ್ಲಿ ನಿರ್ಣಾಯಕವಾಗಿದ್ದು, ನಿರುದ್ಯೋಗ, ಕೃಷಿ ಬಿಕ್ಕಟ್ಟು, ಭ್ರಷ್ಟಾಚಾರ, ತಪ್ಪು ಆರ್ಥಿಕ ನೀತಿಗಳಿಂದ ಹದಗೆಟ್ಟಿರುವ ಅರ್ಥವ್ಯವಸ್ಥೆಯಂತಹ ನೈಜ ಸಮಸ್ಯೆಗಳು ಬದಿಗೆ ಸರಿದಿವೆ. ಮತದಾರ ಮುಖ್ಯವಾಗಿ ದೇಶದ ಸುರಕ್ಷತೆ ಮತ್ತು ಭದ್ರತೆಯನ್ನೇ ಗುರಿಯಾಗಿಟ್ಟುಕೊಂಡು ಮತದಾನ ಮಾಡಿದ್ದಾನೆ ಎಂಬ ಲೆಕ್ಕಾಚಾರಗಳು ಮತಗಟ್ಟೆ ಸಮೀಕ್ಷೆಗಳ ಹಿಂದಿವೆ.
ಆದರೆ, ಬಿಜೆಪಿ ಭಾರೀ ಜಯಭೇರಿ ಬಾರಿಸಲಿದೆ ಎಂಬ ಈ ಸಮೀಕ್ಷೆಗಳ ಈಗಿನ ಲೆಕ್ಕಾಚಾರಗಳು, ಇದೇ ಸಂಸ್ಥೆಗಳೇ ನಡೆಸಿದ್ದ ಚುನಾವಣಾಪೂರ್ವ ಸಮೀಕ್ಷೆಗಳ ಲೆಕ್ಕಾಚಾರಗಳಿಗೆ ತದ್ವಿರುದ್ಧವಾಗಿವೆ. ಮೋದಿ ವರ್ಚಸ್ಸು ಕುಂದಿದೆ, ಸರ್ಕಾರದ ವೈಫಲ್ಯಗಳು, ಹಿಂದಿನ ಚುನಾವಣೆಯಲ್ಲಿ ನೀಡಿದ್ದ ಭರವಸೆಗಳನ್ನು ಕಾಯ್ದುಕೊಳ್ಳವ ವಚನಭ್ರಷ್ಟತೆ, ಕೃಷಿ ಸಾಲ ಮನ್ನಾ ಮಾಡದ ನಿರ್ಧಾರ, ಉದ್ಯೋಗ ಸೃಷ್ಟಿಯ ಬದಲು, ಉದ್ಯೋಗ ನಷ್ಟಕ್ಕೆ ಪೂರಕ ನೀತಿ-ನಿಲುವುಗಳಿಗೆ ಪ್ರೋತ್ಸಾಹಿಸಿದ್ದು ಸೇರಿದಂತೆ ಹಲವು ಅಂಶಗಳು ಎನ್ ಡಿಎ ಸರ್ಕಾರದ ವಿರುದ್ಧ ಜನರ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಹಾಗಾಗಿ ಮೋದಿ ಮತ್ತೊಮ್ಮೆ ಸರ್ಕಾರ ರಚಿಸುವಷ್ಟು ಬಹುಮತ ದೊರೆಯುವುದು ಕಷ್ಟ. ಸರಳ ಬಹುಮತ ಕೂಡ ಎನ್ ಡಿಎಗೆ ಬರಲಾರದು ಎಂದು ಇದೇ ಮಾಧ್ಯಮಗಳು ತಿಂಗಳ ಹಿಂದೆ ಹೇಳಿದ್ದವು. ಇದೀಗ ದಿಢೀರನೇ ಈ ಮಟ್ಟಿಗಿನ ಭಾರೀ ಏರಿಕೆ ಹೇಗೆ ? ಎಂಬುದು ಎಲ್ಲರ ಕುತೂಹಲ.
ಆ ಕುತೂಹಲ ತಣಿಯಲು ಇನ್ನೆರಡು ದಿನ(ಮೇ 23ರ ಮತ ಎಣಿಕೆ) ಕಾಯಲೇಬೇಕಿದೆ. ಅಂದು ಮಧ್ಯಾಹ್ನದ ಹೊತ್ತಿಗೆ, ಮುಂದಿನ ಸರ್ಕಾರದ ಯಾರದ್ದು ಎಂಬ ಕುತೂಹಲಕ್ಕಷ್ಟೇ ಅಲ್ಲದೆ, ಮತಗಟ್ಟೆ ಸಮೀಕ್ಷೆಗಳ ವಿಶ್ವಾಸಾರ್ಹತೆ ಕೂಡ ಮತ್ತೊಮ್ಮೆ ನಿರ್ಧಾರವಾಗಲಿದೆ.