ಲೋಕಸಭಾ ಚುನಾವಣೆಗಳ ಮತ ಎಣಿಕೆಗೆ ಕೆಲವೇ ದಿನಗಳು ಬಾಕಿ ಇರುವಂತೆ ಬಿಹಾರದಲ್ಲಿ 50ಕ್ಕೂ ಹೆಚ್ಚು ಇವಿಎಂ ಯಂತ್ರಗಳನ್ನು ಅನುಮಾನಾಸ್ಪದವಾಗಿ ಸಾಗಿಸುತ್ತಿದ್ದ ವಾಹನವೊಂದು ಪತ್ತೆಯಾಗಿದೆ.
ಬಿಹಾರದ ಸಾರಣ ಮತ್ತು ಮಹಾರಾಜ್ ಗಂಜ್ ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಇವಿಎಂ ಯಂತ್ರಗಳು ತುಂಬಿದ್ದ ವಾಹನವೊಂದನ್ನು ಸ್ಥಳೀಯ ರಾಷ್ಟ್ರೀಯ ಜನತಾ ದಳ (ಆರ್ ಜೆ ಡಿ) ಮತ್ತು ಕಾಂಗ್ರೆಸ್ ಕಾರ್ಯಕರ್ತರು ತಡೆದು ನಿಲ್ಲಿಸಿ ವಶಕ್ಕೆ ಪಡೆದಿದ್ದಾರೆ.
ಈ ಕುರಿತು ರಾಷ್ಟ್ರೀಯ ಜನತಾ ದಳ ಪಕ್ಷವು ತನ್ನ ಟ್ವಿಟರ್ ಖಾತೆಯಿಂದ ಫೋಟೋಗಳನ್ನು ಹಂಚಿಕೊಂಡಿದೆ.
अभी-अभी बिहार के सारण और महाराजगंज लोकसभा क्षेत्र स्ट्रोंग रूम के आस-पास मँडरा रही EVM से भरी एक गाड़ी जो शायद अंदर घुसने के फ़िराक़ में थी उसे राजद-कांग्रेस के कार्यकर्ताओं ने पकड़ा। साथ मे सदर BDO भी थे जिनके पास कोई जबाब नही है। सवाल उठना लाजिमी है? छपरा प्रशासन का कैसा खेल?? pic.twitter.com/K1dZCsZNAG
— Rashtriya Janata Dal (@RJDforIndia) May 20, 2019
ಇದೇ ಸಮಯದಲ್ಲಿ ಸ್ಥಳದಲ್ಲಿ ಬ್ಲಾಕ್ ಡೆವೆಲಪ್ಮೆಂಟ್ ಆಫೀಸರ್ ಕೂಡಾ ಹಾಜರಿದ್ದು ಅವರನ್ನು ಪ್ರಶ್ನಿಸಿದಾಗ ಯಾವುದೇ ಉತ್ತರ ನೀಡಿಲ್ಲ ಎಂದು ಆರ್ ಜೆ ಡಿ ತಿಳಿಸಿದೆ.
ಚುನಾವಣೆ ಮುಗಿದ ಕೂಡಲೇ ಇವಿಎಂ ಯಂತ್ರಗಳನ್ನು ಸ್ಟ್ರಾಂಗ್ ರೂಮುಗಳಲ್ಲಿ ಬಿಗಿಭದ್ರತೆಯಲ್ಲಿ ಇರಿಸಲಾಗಿರುತ್ತದೆ. ತೀರಾ ಉನ್ನತ ಮಟ್ಟದಲ್ಲಿ ಅಧಿಕಾರಿಗಳು ಶಾಮೀಲಾಗದ ಹೊರತು ಈ ಭದ್ರತಾ ವ್ಯವಸ್ಥೆಯನ್ನು ಭೇದಿಸಿ ಮತಯಂತ್ರಗಳನ್ನು ಸ್ಥಳಾಂತರಿಸುವುದು ಕಷ್ಟಸಾಧ್ಯ.
ಈಗ ಆರ್ ಜೆ ಡಿ-ಕಾಂಗ್ರೆಸ್ ಕಾರ್ಯಕರ್ತರು ಪತ್ತೆ ಹಚ್ಚಿರುವ ಮತಯಂತ್ರಗಳ ಕುರಿತು ಸೂಕ್ತ ತನಿಖೆಯಾಗದ ಹೊರತು ಅವು ಎಲ್ಲಿಂದ ಬಂದವು, ಎಲ್ಲಿಗೆ ಹೊರಟಿದ್ದವು, ಇತ್ಯಾದಿ ಮಾಹಿತಿ ತಿಳಿಯುವುದು ಕಷ್ಟ.
ಇವಿಎಂ ಯಂತ್ರಗಳನ್ನು ಸ್ಥಳಾಂತರಸುವ ಹುನ್ನಾರ ನಡೆಯುತ್ತಿದೆ ಎಂದು ಪ್ರತಿಪಕ್ಷಗಳು ಕೇಂದ್ರದಲ್ಲಿ ಆಡಳಿತದಲ್ಲಿರುವ ಬಿಜೆಪಿ ಮೇಲೆ ಗಂಭೀರ ಆರೋಪ ನಡೆಸುತ್ತಿರುವ ಹೊತ್ತಿನಲ್ಲೇ ಈ ಘಟನೆ ನಡೆದಿರುವುದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ಇದರ ಜೊತೆಯಲ್ಲಿ ಸಾವಿರಾರು ಇವಿಎಂ ಯಂತ್ರಗಳು ಕಾಣೆಯಾಗಿರುವ ಕುರಿತು ಮಾಹಿತಿ ಹಕ್ಕಿನಲ್ಲಿ ವಿಷಯ ಬಯಲಾಗಿರುವ ಹಿನ್ನೆಲೆಯಲ್ಲಿ ದೇಶದಾದ್ಯಂತ ಇವಿಎಂ ಮತಯಂತ್ರಗಳನ್ನು ಸ್ಥಳಾಂತರಿಸುವ ದಂಧೆಯೇನಾದರೂ ನಡೆಯುತ್ತಿದೆಯೇ ಎಂಬ ಅನುಮಾನವೂ ಬಲವಾಗಿದೆ.