ರಾಯ್ಪುರ /ಛತ್ತೀಸ್ ಗಢ: ಮಹಿಳೆ ಮೇಲೆ ಸತತವಾಗಿ ಎರಡು ವರ್ಷ ಲೈಂಗಿಕ ದೌರ್ಜನ್ಯ ನಡೆಸಿದ ಸ್ಥಳೀಯ ಬಿಜೆಪಿ ನಾಯಕ ಪ್ರಕಾಶ್ ಬಜಾಜ್ ಎಂಬುವನನ್ನು ನನ್ನು ಪೊಲೀಸರು ಬಂಧಿಸಿದ್ದಾರೆ.
ಛತ್ತೀಸ್ ಗಡದ ರಾಯ್ಪುರದ 34 ವರ್ಷದ ಮಹಿಳೆಯೊಬ್ಬರು ಪ್ರಕಾಶ್ ಬಜಾಜ್ ನ ಕಿರುಕುಳ ತಾಳಲಾರದೆ ಇಲ್ಲಿನ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಗಾಯತ್ರಿ ನಗರದ ನಿವಾಸಿಯಾಗಿರುವ ಮಹಿಳೆ ನೀಡಿದ ದೂರಿನಲ್ಲಿ, ”2016ರಲ್ಲಿ ಮನೆಯೊಂದನ್ನು ಖರೀದಿಸುವ ಸಲುವಾಗಿ 10 ಲಕ್ಷ ರೂಪಾಯಿಯನ್ನು ಪ್ರಕಾಶ್ ಬಜಾಜ್ ಗೆ ನೀಡಿದ್ದರು, ಅಲ್ಲದೇ ಇನ್ನುಳಿದ ಹಣವನ್ನು ಸರಿಹೊಂದಿಲು ಬ್ಯಾಂಕ್ ನಿಂದ ಸಾಲಕ್ಕಾಗಿ ಪ್ರಯತ್ನಿಸುತ್ತಿದ್ದರು. ಆದರೆ ಬ್ಯಾಂಕ್ ನಿಂದ ಸಾಲ ಸಿಗದೇ ಇದ್ದರಿಂದ ತನ್ನ ಹಣವನ್ನು ಮತ್ತೆ ಹಿಂದಿರುಗಿಸುವಂತೆ ಬಜಾಜ್ ಗೆ ಕೇಳಿಕೊಂಡಿದ್ದಾಗಿ’’ ದೂರಿನಲ್ಲಿ ದಾಖಲಿಸಿದ್ದಾರೆ.
ಆದರೆ ಬಜಾಜ್ ಹಣವನ್ನು ಹಿಂದಿರುಗಿಸುವುದಾಗಿ ನಂಬಿಸಿ 2016ರಿಂದ 2018ರವರೆಗೆ ಸತತವಾಗಿ ತನ್ನ ಮನೆಯಲ್ಲೇ ಲೈಂಗಿಕ ಕಿರುಕುಳ ನೀಡಿದ್ದಾರೆ ಹಾಗೂ ಹಣವನ್ನೂ ಮರಳಿಸಿಲ್ಲ. ಅಷ್ಟೇ ಅಲ್ಲದೇ ಘಟನೆ ಬಗ್ಗೆ ಪೊಲೀಸರಿಗೆ ಅಥವಾ ಯಾರಿಗೂ ತಿಳಿಸದಂತೆ ಬೆದರಿಕೆ ಒಡ್ಡಿದ್ದಾರೆ ಎಂದು ಸಂತ್ತಸ್ತೆ ದೂರಿನಲ್ಲಿ ತೋಡಿಕೊಂಡಿದ್ದಾರೆ ಎಂದು ಸಿವಿಲ್ ಲೈನ್ಸ್ ಸ್ಟೇಶನ್ ಹೌಸ್ ಆಫೀಸರ್ ಮೊಹ್ಸಿನ್ ಖಾನ್ ತಿಳಿಸಿದ್ದಾರೆ. “ಲೈಂಗಿಕ ದೌರ್ಜನ್ಯ ನಡೆಸಿರುವ ಜೊತೆಗೆ ಆಕೆಯ ಹಣವನ್ನು ಪ್ರಕಾಶ್ ಬಜಾಜ್ ಮರಳಿ ನೀಡಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಖಾನ್ ಮಾಹಿತಿ ನೀಡಿದ್ದಾರೆ.
ಬಜಾಜ್ ವಿರುದ್ಧ ಐಪಿಸಿ ಸೆಕ್ಷನ್ 354 ಮತ್ತು 506 ಅಡಿಯಲ್ಲಿ ದೂರು ದಾಖಲಿಸಲಾಗಿದ್ದು, ನ್ಯಾಯಾಲಯವು 15 ದಿನಗಳ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ ಎಂದು ಖಾನ್ ತಿಳಿಸಿದ್ದಾರೆ.
ಈ ಪ್ರಕರಣವಲ್ಲದೆ ಬಿಜೆಪಿ ಮುಖಂಡ ಪ್ರಕಾಶ್ ಬಜಾಜ್ ವಿರುದ್ಧ ಛತ್ತೀಸ್ ಗಡ ಮಾಜಿ ಸಚಿವ ರಾಜೇಶ್ ಮೌನತ್ ಹಾಗೂ ಇತರ ಐವರು ಆರೋಪಿಗಳ ಜತೆ ಸೇರಿ ‘ಸೆಕ್ಸ್ ಸಿಡಿ’ ಮಾಡಿ ಬಿಡುಗಡೆ ಮಾಡಿದ ಆರೋಪ, ಕ್ರಿಮಿನಲ್ ಸಂಚು ರೂಪಿಸಿರುವ ಆರೋಪಗಳು ಸಹ ಇದೆ.