ಚೆನ್ನೈ: ಚುನಾವಣಾ ಪ್ರಚಾರದ ವೇಳೆ ಮಹಾತ್ಮ ಗಾಂಧಿ ಹಂತಕ ನಾಥೂರಾಮ್ ಗೋಡ್ಸೆ ಕುರಿತು ನೀಡಿದ ಹೇಳಿಕೆಯಿಂದ ಬಿಜೆಪಿಯ ಆಕ್ರೋಶಕ್ಕೆ ಗುರಿಯಾಗಿದ್ದ ಪ್ರಖ್ಯಾತ ಸಿನಿಮಾ ನಟ ಹಾಗೂ ಮಕ್ಕಳ್ ನೀದಿ ಮೈಯಾಮ್ (ಎಂಎನ್ಎಂ) ಪಕ್ಷದ ನಾಯಕ ಕಮಲ್ ಹಾಸನ್ ಗೆ ಮದ್ರಾಸ್ ಹೈಕೋರ್ಟ್ ನ ಮಧುರೈ ಪೀಠ ಇಂದು ಷರತ್ತು ಬದ್ಧ ನಿರೀಕ್ಷಣಾ ಜಾಮೀನು ನೀಡಿದೆ.
ಅರವಕುರಚಿ ವಿಧಾನಸಭಾ ಕ್ಷೇತ್ರದಲ್ಲಿ ಮೇ 12ರಂದು ತನ್ನ ಪಕ್ಷದ ಅಭ್ಯರ್ಥಿ ಮೋಹನ್ ರಾಜ್ ಪರ ಪ್ರಚಾರ ಮಾಡುವ ವೇಳೆ ಕಮಲ್ ಹಾಸನ್ “ ಇದು ಮುಸ್ಲೀಮರ ಪ್ರದೇಶ ಎಂಬ ಕಾರಣಕ್ಕೆ ಈ ಹೇಳಿಕೆ ನೀಡುತ್ತಿಲ್ಲ. ಗಾಂಧಿಯ ಪ್ರತಿಮೆಯ ಮುಂದೆ ನಿಂತು ಹೇಳುತ್ತಿದ್ದೇನೆ. ಸ್ವತಂತ್ರ್ಯ ಭಾರತದ ಮೊದಲ ಉಗ್ರ ಓರ್ವ ಹಿಂದು. ಆತನ ಹೆಸರು ನಾಥೂರಾಮ್ ಗೋಡ್ಸೆ. ನಾನು ಮಹಾತ್ಮಾ ಗಾಂಧಿಯ ಮೊಮ್ಮಗನಾಗಿ ಆ ಹತ್ಯೆಗೆ ನ್ಯಾಯ ಕೇಳಲು ಇಲ್ಲಿಗೆ ಬಂದಿದ್ದೇನೆ” ಎಂದು ಹೇಳಿಕೆ ನೀಡಿದ್ದರು.
ಕಮಲ್ ಹಾಸನ್ ಅವರ ಈ ಹೇಳಿಕೆ ದೇಶದಾದ್ಯಂತ ಭಾರೀ ಚರ್ಚೆ, ವಿವಾದಕ್ಕೆ ಕಾರಣವಾಗಿತ್ತು. ಈ ಹೇಳಿಕೆಯನ್ನು ವಿರೋಧಿಸಿ ಬಿಜೆಪಿ ಹಾಗೂ ಸಂಘಪರಿವಾರದ ಸಂಘಟನೆಗಳು ಸುಪ್ರೀಂ ಕೋರ್ಟ್ ಹಾಗೂ ದೆಹಲಿ ಪಟಿಯಾಲ ಕೋರ್ಟಿನಲ್ಲಿ ಪ್ರಕರಣ ದಾಖಲಿಸಿದ್ದವು.
ಆರ್ ಎಸ್ ಎಸ್ ಬೆಂಬಲಿತ ಹಿಂದೂ ಮುನ್ನಾನಿ ಕರೂರ್ ಜಿಲ್ಲೆಯಲ್ಲಿ ಕಮಲ್ ವಿರುದ್ಧ ಎಫ್ಐಆರ್ ದಾಖಲಿಸಿದ್ದು, ಕಮಲ್ ಹಾಸನ್ ವಿರುದ್ಧ ಐಪಿಸಿ ಸೆ. 153 ಮತ್ತು ಸೆ. 295 ಅಡಿ ಜಾಮೀನು ರಹಿತ ಪ್ರಕರಣ ದಾಖಲಿಸಲಾಗಿತ್ತು.
ತನ್ನ ವಿರುದ್ಧ ಪ್ರಕರಣ ದಾಖಲಾಗಿರುವ ಸಂಬಂಧ, ಬಂಧನವಾಗಬಹುದು ಎಂಬ ಕಾರಣದಿಂದ ಮುಂಜಾಗ್ರತಾ ಕ್ರಮವಾಗಿ ಎಫ್ಐಆರ್ ರದ್ದು ಕೋರಿ ಕಮಲ್ ಮದ್ರಾಸ್ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ ನ್ಯಾಯಮೂರ್ತಿ ಬಿ. ಪುಗಲೆಂದಿ ಅವರು, ರಜಾವಧಿಯಲ್ಲಿ ಇಂಥ ಅರ್ಜಿಯನ್ನು ವಿಚಾರಣೆ ನಡೆಸುವುದಿಲ್ಲ, ಆದಾಗ್ಯೂ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರೆ ಅದನ್ನು ವಿಚಾರಣೆಗೆ ಪರಿಗಣಿಸಬಹುದು ಎಂದು ತಿಳಿಸಿದ್ದರು.
ನಂತರ ಕಮಲ್ ನಿರೀಕ್ಷಣಾ ಜಾಮೀನು ಕೋರಿ ಮತ್ತೊಂದು ಅರ್ಜಿ ಸಲ್ಲಿಸಿದ್ದರು. ಅರ್ಜಿಯಲ್ಲಿ “ಗೋಡ್ಸೆ ಕುರಿತು ಮಾತ್ರ ತಾನು ಮಾತನಾಡಿದ್ದು, ಹಿಂದೂ ಬಗ್ಗೆ ಅಲ್ಲ. ‘ವೈ ಐ ಕಿಲ್ಡ್ ಗಾಂಧಿ’ ಪುಸ್ತಕದಲ್ಲಿ ಗೋಡ್ಸೆ ಸಹ ಗಾಂಧಿಯನ್ನು ಕೊಂದಿರುವುದಾಗಿ ಸ್ವತಃ ಒಪ್ಪಿಕೊಂಡಿದ್ದಾರೆ ಮತ್ತು ಅವನು ನೀಡಿರುವ ಹೇಳಿಕೆಯು ಇತಿಹಾಸದಲ್ಲಿ ದಾಖಲಾಗಿರುವ ಹೇಳಿಕೆ,’’ ಎಂದು ತಿಳಿಸಿದ್ದರು.
ಇಂದು ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಮಧುರೈ ಪೀಠ ನಟ ಕಮಲ್ ಅವರಿಗೆ ಷರತ್ತು ಬದ್ಧ ಜಾಮೀನು ನೀಡಿ ಆದೇಶ ಹೊರಡಿಸಿದೆ.
ಕಮಲ್ ಹೇಳಿಕೆಗೆ ಬಿಜೆಪಿ ಮತ್ತು ಮಿತ್ರಪಕ್ಷಗಳ
ಕಮಲ್ ಹೇಳಿಕೆ ಖಂಡಿಸಿ ಬಿಜೆಪಿ, ಹಿಂದು ಮುನ್ನಾನಿ, ಇಂದು ಮಕ್ಕಳ್ ಕಟ್ಚಿ ಮತ್ತು ಬಿಜೆಪಿ ಮಿತ್ರಪಕ್ಷ ಎಐಎಡಿಎಂಕೆ ಪಕ್ಷಗಳು ಕಮಲ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದವು.
ಬಿಜೆಪಿಯ ತಮಿಳುನಾಡು ಘಟಕದ ಅಧ್ಯಕ್ಷ ತಮಿಳಿಸೈ ಸುಂದರ್ ರಾಜನ್ ಅಲ್ಪಸಂಖ್ಯಾತರನ್ನು ಓಲೈಸುವ ಸಲುವಾಗಿ ಕಮಲ್ ನೀಡಿರುವ ಹೇಳಿಕೆಯನ್ನು ಖಂಡಿಸಿದ್ದಾರೆ.
ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಹೆಚ್ ರಾಜಾ, ಎಂಎನ್ಎಂ ಪಕ್ಷ ವಿಷಪೂರಿತ ಸಸ್ಯವಾಗಿದ್ದು, ಮೊಗ್ಗಿನಲ್ಲೇ ಅದನ್ನು ಚಿವುಟಬೇಕಿದೆ ಎಂದಿದ್ದಾರೆ.
ಎಐಎಡಿಎಂಕೆ ಸಚಿವ ರಾಜೆಂತಿರಾ ಬಾಲಾಜಿ ಕಮಲ್ ಹಾಸನ್ ನಾಲಿಗೆಯನ್ನು ತುಂಡರಿಸಬೇಕು ಎಂದು ವಿವಾದಾತ್ಮಕವಾಗಿ ಪ್ರತಿಕ್ರಿಯಿಸಿದ್ದರು.
ಕಮಲ್ ಹಾಸನ್ ಅವರು ಧಾರ್ಮಿಕ ಸಹಿಷ್ಣುತೆ ಮತ್ತು ಸಹಬಾಳ್ವೆಗೆ ಬೆಂಬಲಿಸುತ್ತಾರೆ ಮತ್ತು ಅವರ ಹೇಳಿಕೆಯನ್ನು ಹಿಂದೂ ವಿರೋಧಿ ತಪ್ಪಾಗಿ ಅರ್ಥೈಸಲಾಗಿದ್ದು, ಸ್ವಹಿತಸಾಧನೆಗಾಗಿ ಹೇಳಿಕೆಯನ್ನು ತಿರುಚಲಾಗಿದೆ ಎಂದು ಎಂಎನ್ಎಂ ಪಕ್ಷದ ನಾಯಕ ಸಮರ್ಥಿಸಿದ್ದಾರೆ. ವಿವಾದದ ನಡುವೆಯೇ ಬಹಿರಂಗ ಸಮಾರಂಭವೊಂದರಲ್ಲಿ ಕಮಲ್ ಮೇಲೆ ಚಪ್ಪಲಿ, ಮೊಟ್ಟೆ ಹಾಗೂ ಕಲ್ಲುಗಳನ್ನು ಎಸೆಯಲಾಗಿತ್ತು.