ಮತಗಟ್ಟೆ ಸಮೀಕ್ಷೆಗಳಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ಜಯಭೇರಿ ಭಾರಿಸುತ್ತಿದ್ದಂತೆ ರಾಷ್ಟ್ರ ಮತ್ತು ರಾಜ್ಯಮಟ್ಟದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಮಂಗಳವಾರ ಒಂದು ಕಡೆ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನೇತೃತ್ವದಲ್ಲಿ ಎನ್ ಡಿಎ ಮಿತ್ರಪಕ್ಷಗಳ ನಾಯಕರೊಂದಿಗೆ ವಿಶೇಷ ಭೋಜನಕೂಟ ಮತ್ತು ಸಭೆ ನಡೆಯುತ್ತಿದ್ದರೆ, ಮತ್ತೊಂದು ಕಡೆ ರಾಜ್ಯ ಬಿಜೆಪಿಯ ಯಡಿಯೂರಪ್ಪ ವಿರೋಧಿ ಬಣದ ನಾಯಕ ಬಿ ಎಲ್ ಸಂತೋಷ್ ನೇತೃತ್ವದಲ್ಲಿ ಅಂಡಮಾನ್ ನಲ್ಲಿ ಬಿಜೆಪಿ ನಾಯಕರ ರಹಸ್ಯ ಸಭೆ ನಡೆದಿದೆ.
ಅದರಲ್ಲೂ ಮುಖ್ಯವಾಗಿ ರಾಜ್ಯದಲ್ಲಿ ಬಿಜೆಪಿ 20ಕ್ಕೂ ಹೆಚ್ಚು ಸ್ಥಾನ ಪಡೆಯಲಿದೆ ಎಂಬ ಮತಗಟ್ಟೆ ಸಮೀಕ್ಷೆಗಳ ಅಂದಾಜಿನ ಹಿನ್ನೆಲೆಯಲ್ಲಿ; ಕೇಂದ್ರದ ಅಧಿಕಾರ ಮತ್ತು ರಾಜ್ಯದ ಭಾರೀ ಜನಾದೇಶದಿಂದ ಉಂಟಾಗಬಹುದಾದ ರಾಜಕೀಯ ಪರಿಸ್ಥಿತಿಯ ಲಾಭ ಪಡೆಯುವ ನಿಟ್ಟಿನಲ್ಲಿ ಸಂತೋಷ್ ಅವರು ತಮ್ಮ ಆಪ್ತರೊಂದಿಗೆ ಭಾನುವಾರವೇ ಅಂಡಮಾನ್ ಪ್ರವಾಸ ಕೈಗೊಂಡಿದ್ದಾರೆ. ಅಲ್ಲಿ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಸುಮಾರು 30 ಮಂದಿ ನಾಯಕರ ಸಭೆ ನಡೆದಿದ್ದು, ಅದರಲ್ಲಿ ಪ್ರಮುಖವಾಗಿ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಹೆಸರು ಕೇಳಿಬಂದಿರುವ ನಾಯಕರು ಕೂಡ ಭಾಗಿಯಾಗಿದ್ದಾರೆ. ಜೊತೆಗೆ ಕೇರಳ, ತಮಿಳುನಾಡು, ಗೋವಾ ಸೇರಿದಂತೆ ದಕ್ಷಿಣ ಭಾರತದ ಕೆಲವು ರಾಜ್ಯಗಳ ನಾಯಕರೂ ಭಾಗಿಯಾಗಿದ್ದಾರೆ ಎನ್ನಲಾಗಿದೆ.
ಅದರಲ್ಲೂ ಮುಖ್ಯವಾಗಿ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ ಎಸ್ ಯಡಿಯೂರಪ್ಪ ಅವರ ಅವಧಿ ಮುಗಿದಿರುವ ಹಿನ್ನೆಲೆಯಲ್ಲಿ ಲೋಕಸಭಾ ಚುನಾವಣಾ ಫಲಿತಾಂಶದ ಬಳಿಕ ಹೊಸ ಅಧ್ಯಕ್ಷರ ಆಯ್ಕೆ ನಡೆಯಲಿದೆ. ಆ ಹಿನ್ನೆಲೆಯಲ್ಲಿ ಈಗಾಗಲೇ ರಾಜ್ಯ ಬಿಜೆಪಿಯಲ್ಲಿ ಪೈಪೋಟಿ ಆರಂಭವಾಗಿದೆ. ಯಡಿಯೂರಪ್ಪ ಅವರು ತಮ್ಮ ಸ್ಥಾನಕ್ಕೆ ತಮ್ಮ ಆಪ್ತರಲ್ಲೇ ಒಬ್ಬರನ್ನು ಕೂರಿಸುವ ಪ್ರಯತ್ನದಲ್ಲಿದ್ದರೆ, ಅವರ ಪ್ರತಿಸ್ಪರ್ಧಿಯಾಗಿರುವ ಬಿ ಎಲ್ ಸಂತೋಷ್ ಅವರು ಪಕ್ಷದ ಸಿದ್ಧಾಂತ ಮತ್ತು ಸಂಘಟನೆಯನ್ನು ಗಟ್ಟಿಗೊಳಿಸುವ ಪ್ರಯತ್ನವಾಗಿ ಆರ್ ಎಸ್ ಎಸ್ ಹಿನ್ನೆಲೆಯ, ಕಳಂಕರಹಿತ ಮತ್ತು ಯುವ ನಾಯಕರನ್ನು ಆ ಸ್ಥಾನದಲ್ಲಿ ಕೂರಿಸಲು ಯತ್ನಿಸುತ್ತಿದ್ದಾರೆ. ಸ್ವತಃ ಸಂತೋಷ್ ಅವರ ಹೆಸರೂ ಸ್ಪರ್ಧೆಯಲ್ಲಿದ್ದರೂ, ಅವರು ತಮ್ಮ ಆಪ್ತ ಯುವ ನಾಯಕರಲ್ಲಿ ಒಬ್ಬರನ್ನು ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಕೂರಿಸಿ, ಆಪರೇಷನ್ ಕಮಲದ ಮೂಲಕ ಸರ್ಕಾರ ರಚನೆಯ ಸಂದರ್ಭ ಒದಗಿ ಬಂದಲ್ಲಿ ಸಿಎಂ ಕುರ್ಚಿಗೆ ಟವಲ್ ಹಾಕುವ ಲೆಕ್ಕಾಚಾರದಲ್ಲಿದ್ದಾರೆ. ಆ ಲೆಕ್ಕಾಚಾರ ಹಿನ್ನೆಲೆಯಲ್ಲಿಯೇ ಈಗಿನ ಅಂಡಮಾನ್ ಪ್ರವಾಸ ನಿಗದಿಯಾಗಿದೆ ಎನ್ನಲಾಗುತ್ತಿದೆ.
ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ, ಸಂಸದ ನಳೀನ್ ಕುಮಾರ್ ಕಟೀಲು, ಶಿವಮೊಗ್ಗದ ಯಡಿಯೂರಪ್ಪ ವಿರೋಧಿ ಬಣದ ನಾಯಕ ಎಂ ಬಿ ಭಾನುಪ್ರಕಾಶ್, ನಿರ್ಮಲಕುಮಾರ್ ಸುರಾನಾ ಸೇರಿದಂತೆ ಯಡಿಯೂರಪ್ಪ ವಿರೋಧಿ ಬಣದಲ್ಲಿ ಇರುವ ಪ್ರಮುಖರು ಮಾತ್ರ ಸಂತೋಷ್ ಅವರ ಅಂಡಮಾನ್ ಪ್ರವಾಸದ ಸಹಯಾತ್ರಿಗಳಾಗಿದ್ದಾರೆ ಎಂಬುದು ಗಮನಾರ್ಹ.
ಮತ್ತೊಂದು ಕಡೆ ಯಡಿಯೂರಪ್ಪ ಬಣದವರು, ಮತಗಟ್ಟೆ ಸಮೀಕ್ಷೆಗಳ ಲೆಕ್ಕಾಚಾರಗಳಿಂದ ಉತ್ಸುಕರಾಗಿದ್ದು, ಆಪರೇಷನ್ ಕಮಲಕ್ಕೆ ಮತ್ತೆ ಚಾಲನೆ ನೀಡಲು ಸಿದ್ಧತೆ ನಡೆಸಿದ್ದಾರೆ. ಈಗಾಗಲೇ ಕಾಂಗ್ರೆಸ್ಸಿನ ಕೆಲವು ಶಾಸಕರನ್ನು ಸಂಪರ್ಕಿಸುವ ಪ್ರಯತ್ನ ಕೂಡ ನಡೆಯುತ್ತಿದೆ. ಶತಾಯಗತಾಯ ಮತ್ತೊಮ್ಮೆ ಸಿಎಂ ಪಟ್ಟಕ್ಕೇರಲೇಬೇಕು ಎಂಬ ಜಿದ್ದಿಗೆ ಬಿದ್ದಿರುವ ಬಿಎಸ್ ವೈ ಈ ಬಾರಿ ಗುರಿತಪ್ಪದಂತೆ ಎಚ್ಚರಿಕೆಯಿಂದ ತಂತ್ರಗಾರಿಕೆ ರೂಪಿಸುತ್ತಿದ್ದಾರೆ. ಆ ಕಾರ್ಯಾಚರಣೆಗೆ ಚಾಲನೆ ನೀಡುವ ಸಲುವಾಗಿಯೇ ಮಲೇಶ್ವರಂನ ರಾಜ್ಯ ಬಿಜೆಪಿ ಕಚೇರಿಯಲ್ಲಿ ಹೋಮಹವನ ಹಮ್ಮಿಕೊಂಡಿದ್ದರು. ಈ ಬಾರಿ ಸಿಎಂ ಸ್ಥಾನ ಕೈತಪ್ಪಿದರೆ, ರಾಜ್ಯಾಧ್ಯಕ್ಷ ಸ್ಥಾನದ ಜೊತೆಗೆ ಶಾಶ್ವತವಾಗಿ ಪಕ್ಷದಲ್ಲಿ ತಮ್ಮ ಪ್ರಭಾವ ಕೂಡ ಮೂಲೆಗುಂಪಾಗಲಿದೆ. ಆ ಮೂಲಕ ತಮ್ಮ ರಾಜಕೀಯ ಅಧ್ಯಾಯವೇ ಅಂತ್ಯವಾಗಲಿದೆ ಎಂಬ ಚಿಂತೆಯಲ್ಲಿರುವ ಯಡಿಯೂರಪ್ಪ, ಪಕ್ಷದ ಅಧ್ಯಕ್ಷ ಸ್ಥಾನ ಹೋದರೂ, ಸಿಎಂ ಪಟ್ಟವನ್ನಾದರೂ ಪಡೆದು ಮುಂದಿನ ನಾಲ್ಕು ವರ್ಷ ಅಧಿಕಾರ ಅನುಭವಿಸುವ ಹಠಕ್ಕೆ ಬಿದ್ದಿದ್ದಾರೆ ಎನ್ನಲಾಗುತ್ತಿದೆ.
ಆದರೆ, ಹತ್ತು ವರ್ಷದ ಹಿಂದೆ ಯಡಿಯೂರಪ್ಪ ಸಿಎಂ ಆಗಿ ಆಡಳಿತ ನಡೆಸಿದ ಸಂದರ್ಭದಲ್ಲಿ ಅವರ ಭ್ರಷ್ಟಾಚಾರ ಮತ್ತು ದುರಾಡಳಿತದಿಂದಾಗಿ ಪಕ್ಷದ ವರ್ಚಸ್ಸಿಗೆ ಅಂಟಿದ ಕಳಂಕವನ್ನು ತೊಡೆಯುವ ಉದ್ದೇಶದಿಂದಲೇ ಆರ್ ಎಸ್ ಎಸ್ ಸಕ್ರಿಯ ರಾಜಕಾರಣದ ಮುಂಚೂಣಿಗೆ ತಂದ ಬಿ ಎಲ್ ಸಂತೋಷ್ ಅವರು, ಈಗಲೂ ಸಂಘಪರಿವಾರಕ್ಕೆ ಯಡಿಯೂರಪ್ಪ ಅವರನ್ನು ಅಧಿಕಾರದಿಂದ ದೂರವಿಡಲು ಪ್ರಬಲ ಅಸ್ತ್ರವಾಗಿ ಬಳಕೆಯಾಗುತ್ತಿದ್ದಾರೆ. ಹಾಗಾಗಿಯೇ, ಅವರ ನೇತೃತ್ವದಲ್ಲಿಯೇ ಈ ಬಾರಿ ಮುಂದಿನ ರಾಜ್ಯಾಧ್ಯಕ್ಷರ ಕುರಿತ ತೀರ್ಮಾನವಾಗಲಿದೆ ಮತ್ತು ಸಂದರ್ಭ ಕೂಡಿ ಬಂದಲ್ಲಿ ಅವರನ್ನೇ ಮುಂದಿನ ಸಿಎಂ ಆಗಿ ಕೂಡ ಬಿಂಬಿಸಲು ಸಂಘಪರಿವಾರ ಯೋಚಿಸಿದೆ.
ಏಕೆಂದರೆ, ರಾಜ್ಯ ಬಿಜೆಪಿಯಲ್ಲಿ ಯಡಿಯೂರಪ್ಪ ಯುಗ ಬಹುತೇಕ ಮುಗಿದಿದ್ದು, ಪಕ್ಷಕ್ಕೆ ಹೊಸ ಮುಖ ಬೇಕಿದೆ. ಯಡಿಯೂರಪ್ಪ ಲಿಂಗಾಯತ ಸಮುದಾಯದ ನಾಯಕ ಎಂಬುದು ನಿಜವಾದರೂ, ಇತ್ತೀಚಿನ ವಿಧಾನಸಭಾ ಚುನಾವಣೆ ಫಲಿತಾಂಶ ಅವರ ಆ ಹೆಚ್ಚುಗಾರಿಕೆ ಇತಿಹಾಸಕ್ಕೆ ಸೇರಿದ ಸಂಗತಿ ಎಂಬುದನ್ನು ಹೇಳಿದೆ. ಆ ಹಿನ್ನೆಲೆಯಲ್ಲಿ ಪಕ್ಷಕ್ಕೆ ಈವರೆಗೆ ಕರ್ನಾಟಕದಲ್ಲಿ ಇದ್ದ ಲಿಂಗಾಯತ-ಬ್ರಾಹ್ಮಣ ಪಕ್ಷ ಎಂಬ ಚಹರೆಯನ್ನು ಬದಲಾಯಿಸುವುದು ಅನಿವಾರ್ಯ. ಹಾಗಾಗಿ, ಈಗ ಬಿಜೆಪಿಯನ್ನು ಹಿಂದುಳಿದ ವರ್ಗಗಳ ಪಕ್ಷವನ್ನಾಗಿ ಬಿಂಬಿಸುವುದು ಸದ್ಯದ ರಾಜಕೀಯ ಅನಿವಾರ್ಯತೆ. ಆ ಹಿನ್ನೆಲೆಯಲ್ಲಿ ಹಿಂದುಳಿದ ವರ್ಗಗಳ ನಾಯಕರಾದ ಸಿ ಟಿ ರವಿ ಅಥವಾ ವಿ ಸುನೀಲ್ ಕುಮಾರ್ ಅವರಲ್ಲಿ ಯಾರಿಗಾದರೂ ಅಧ್ಯಕ್ಷ ಪಟ್ಟ ಕಟ್ಟಿ, ಸಿಎಂ ಸ್ಥಾನಕ್ಕೆ ಬಿ ಎಲ್ ಸಂತೋಷ್ ಅವರನ್ನು ಬಿಂಬಿಸುವುದು ಸಂಘದ ಲೆಕ್ಕಾಚಾರವಿರಬಹುದು ಎನ್ನಲಾಗಿದೆ.
ಈ ಎಲ್ಲಾ ಹಿನ್ನೆಲೆಯಲ್ಲಿ, ಅಂಡಮಾನ್ ಪ್ರವಾಸ ಮಹತ್ವ ಪಡೆದಿದ್ದು, ಪಕ್ಷದ ರಾಜ್ಯಾಧ್ಯಕ್ಷರ ಆಯ್ಕೆಯಷ್ಟೇ ಅಲ್ಲದೆ, ಚುನಾವಣಾ ಫಲಿತಾಂಶದ ಬಳಿಕ ಯಡಿಯೂರಪ್ಪ ತಮ್ಮ ಅಧಿಪತ್ಯ ಉಳಿಸಿಕೊಳ್ಳಲು ನಡೆಸಬಹುದಾದ, ತಮ್ಮ ಆಪ್ತರನ್ನೇ ಪಕ್ಷದ ಅಧ್ಯಕ್ಷ ಗಾದಿಗೆ ಕೂರಿಸುವುದೂ ಸೇರಿದಂತೆ, ಆಪರೇಷನ್ ಕಮಲ, ಸರ್ಕಾರ ರಚನೆ ಮತ್ತಿತರ ಬೆಳವಣಿಗೆಗಳು ಮತ್ತು ಅವುಗಳ ಸಾಧಕ ಬಾಧಕ ಕುರಿತು ಚರ್ಚೆ ನಡೆಸಿದ್ದಾರೆ. ಒಟ್ಟಾರೆ, ಈ ಪ್ರವಾಸ, ಬಿಜೆಪಿ ಹೇಳುವಂತೆ ಮೇಲುನೋಟಕ್ಕೆ ಬಿಜೆಪಿ ದಕ್ಷಿಣ ರಾಜ್ಯಗಳ ಚುನಾವಣಾ ಉಸ್ತುವಾರಿ ನಾಯಕರ ಸಭೆಯಂತೆ ಕಂಡರೂ, ಆಳದಲ್ಲಿ ಇದೊಂದು ಭವಿಷ್ಯದ ರಾಜ್ಯ ಬಿಜೆಪಿ ನಾಯಕತ್ವದ ತಂತ್ರಗಾರಿಕೆಯ ರಹಸ್ಯ ಮಾತುಕತೆಯ ವೇದಿಕೆ ಕೂಡ ಎನ್ನುವುದು ಪಕ್ಷದ ಆಂತರಿಕ ಮೂಲಗಳ ಮಾಹಿತಿ.
ಅಂದರೆ; ಪರೋಕ್ಷವಾಗಿ ಬಿ ಎಸ್ ಯಡಿಯೂರಪ್ಪ ಅವರ ವಿರುದ್ಧದ ಧ್ರವವಾಗಿ ಕಳೆದ ಹತ್ತು ವರ್ಷಗಳಿಂದ ಬಿಜೆಪಿಯ ತತ್ವ ಮತ್ತು ಸಿದ್ಧಾಂತನಿಷ್ಠರ ಗುಂಪಿನ ನಾಯಕರಾಗಿ ಸಂಘದ ಬೆಂಬಲದಲ್ಲಿ ಪ್ರವರ್ಧಮಾನಕ್ಕೆ ಬಂದಿರುವ ಸಂತೋಷ್ ಅವರು, ಜನ ಸಂಘಟನೆ ಮತ್ತು ಪಕ್ಷ ಸಂಘಟನೆಯ ಮೂಲಕ ರಾಜಕೀಯ ಪ್ರಾಬಲ್ಯ ಸಾಧಿಸಿದ ಯಡಿಯೂರಪ್ಪ ವಿರುದ್ಧ ತೋಡುತ್ತಿರುವ ಖೆಡ್ಡಾಕ್ಕೆ ಈ ಸಭೆಯಲ್ಲಿ ಅಂತಿಮ ಸ್ವರೂಪ ದೊರೆಯಲಿದೆ. ಆ ಮೂಲಕ ಯಡಿಯೂರಪ್ಪ ಯುಗಾಂತ್ಯದ ರೂಪುರೇಷೆ ಸಿದ್ಧಗೊಳ್ಳುತ್ತಿದೆ. ರಾಜ್ಯ ಬಿಜೆಪಿಯಲ್ಲಿ ತಮ್ಮ ಉಸಿರಿರುವವರೆಗೆ ಯಡಿಯೂರಪ್ಪ ವಿರುದ್ಧದ ಧ್ರುವವಾಗಿ ನಿಂತಿದ್ದ ದಿವಂಗತ ಅನಂತ ಕುಮಾರ್ ಅವರ ಸ್ಥಾನದಲ್ಲಿ ಇದೀಗ ಅವರ ಪರಮಾಪ್ತ ಬಿ ಎಲ್ ಸಂತೋಷ್ ನಿಂತಿದ್ದಾರೆ. ಆ ಮೂಲಕ ಸಂಘದ ಪ್ರತಿನಿಧಿಯಾಗಿ ಪಕ್ಷವನ್ನು ಮುನ್ನಡೆಸುವ ಹೊಣೆಗಾರಿಕೆಗೆ ಈಗ ಅವರು ಹೆಗಲು ಕೊಟ್ಟಿದ್ದು, ನಿರ್ಣಾಯಕ ಹೆಜ್ಜೆ ಇಡಲು ಪಕ್ಷದ ಯುವ ನಾಯಕರ ವಿಶ್ವಾಸ ಗಳಿಸುವ ಪ್ರಯತ್ನ ಆರಂಭಿಸಿದ್ದಾರೆ.
ಆ ಹಿನ್ನೆಲೆಯಲ್ಲಿ; ಮುಂದಿನ ಮೂರ್ನಾಲ್ಕು ದಿನಗಳಲ್ಲಿ ರಾಜ್ಯ ಬಿಜೆಪಿಯ ಬೆಳವಣಿಗೆಗಳು ಕುತೂಹಲ ಹುಟ್ಟಿಸಿವೆ ಮತ್ತು ಮುಖ್ಯವಾಗಿ ಯಡಿಯೂರಪ್ಪ ಅವರ ಪ್ರತಿತಂತ್ರಗಳು ಏನಾಗಲಿವೆ ಎಂಬುದನ್ನು ಕಾದುನೋಡಬೇಕಿದೆ.