ಲೋಕಸಭಾ ಚುನಾವಣೆಯಲ್ಲಿ ಇವಿಎಂ ಯಂತ್ರಗಳಲ್ಲಿ ಫಲಿತಾಂಶ ತಿರುಚಿರಬಹುದಾದ ಸಾಧ್ಯತೆ ಕುರಿತು ರಾಷ್ಟ್ರಾದ್ಯಂತ ಎದ್ದಿರುವ ಭಾರೀ ಚರ್ಚೆ ಹಿನ್ನೆಲೆಯಲ್ಲಿ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ “ದೇಶದ ಮತದಾರರು ನೀಡಿರುವ ತೀರ್ಪಿನ ಕುರಿತು ತಮ್ಮ ಆತಂಕ ವ್ಯಕ್ತಪಡಿಸಿದ್ದಾರೆ. ಇವಿಎಂ ಯಂತ್ರಗಳ ರಕ್ಷಣೆ ಹಾಗೂ ಭದ್ರತೆ ಚುನಾವಣಾ ಆಯೋಗದ ಜವಾಬ್ದಾರಿಯಾಗಿದೆ” ಎಂದು ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹೇಳಿದ್ದಾರೆ. ಚುನಾವಣೆಗಳನ್ನು ಯಾವ ತೊಂದರೆಯಿಲ್ಲದೆ ಅಚ್ಚುಕಟ್ಟಾಗಿ ನಡೆಸಲಾಗಿದೆ ಎಂದು ಚುನಾವಣಾ ಆಯೋಗವನ್ನು ಹೊಗಳಿ ಅಟ್ಟಕ್ಕೇರಿಸಿದ್ದ ಮಾರನೇ ದಿನವೇ ಪ್ರಣವ್ ಮುಖರ್ಜಿ ಈ ಹೇಳಿಕೆ ನೀಡಿದ್ದಾರೆ.
ಇವಿಎಂ ಯಂತ್ರಗಳ ಬಗ್ಗೆ ಭುಗಿಲೆದ್ದಿರುವ ಉಹಾಪೋಹಗಳ ಕುರಿತು ಪ್ರಣವ್ ಮುಖರ್ಜಿ ಸಹ ಕಳವಳ ವ್ಯಕ್ತಪಡಿಸಿದ್ದಾರೆ.
ಪ್ರತಿಪಕ್ಷಗಳು ಚುನಾವಣಾ ಆಯೋಗದ ಕುರಿತು ತೀವ್ರ ಆರೋಪ ನಡೆಸುತ್ತಿರುವಾಗಲೇ ಮಾಜಿ ರಾಷ್ಟ್ರಪತಿಯವರು ನೀಡಿರುವ ಹೇಳಿಕೆಗೆ ಬಹಳ ಪ್ರಾಮುಖ್ಯತೆ ಬಂದಿದೆ. ಸಾಂಸ್ಥಿಕ ಸಮಗ್ರತೆಯನ್ನು ಕಾಪಾಡುವ ಹೊಣೆ ಚುನಾವಣಾ ಆಯೋಗದ್ದೇ ಆಗಿದೆ ಎಂದು ಅವರು ಹೇಳಿದ್ದಾರೆ. ಈ ಕುರಿತು ಒಂದು ಹೇಳಿಕೆಯನ್ನೂ ಅವರು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ.
Please read my statement below.#CitizenMukherjee pic.twitter.com/UFXkbv06Ol
— Pranab Mukherjee (@CitiznMukherjee) May 21, 2019
ಪ್ರಜಾಪ್ರಭುತ್ವದ ಬುನಾದಿಗೇ ಸವಾಲೊಡ್ಡುವ ಊಹಾಪೋಹಗಳಿಗೆ ಯಾವುದೇ ಸ್ಥಳವಿರಕೂಡದು. ಈ ಕುರಿತು ಎದ್ದಿರುವ ಸಂದೇಹಗಳನ್ನು ಚುನಾವಣಾ ಆಯೋಗ ನಿವಾರಿಸಬೇಕಿದೆ ಎಂದಿರುವ ಅವರು, “ಜನಾದೇಶವು ಅತ್ಯಂತ ಪವಿತ್ರವಾಗಿದೆ, ಹಾಗಾಗಿ ಇದರ ಕುರಿತು ಲವಲೇಶದಷ್ಟೂ ಅನುಮಾನ ಜನತೆಯಲ್ಲಿ ಇಣುಕದಂತೆ ನೋಡಬೇಕಾಗುತ್ತದೆ. ನಮ್ಮ ಸಂಸ್ಥೆಗಳಲ್ಲಿ ಗಾಢನಂಬಿಕೆ ಹೊಂದಿರುವ ನಾನು ಹೇಳುವುದೇನೆಂದರೆ ಸಾಂಸ್ಥಿಕ ಸಾಧನಗಳು ಹೇಗೆ ಕಾರ್ಯ ನಿರ್ವಹಿಸುತ್ತವೆ ಎಂಬುದನ್ನು ತೀರ್ಮಾನಿಸುವುದು “ಕೆಲಸಗಾರರು” ಎಂದಿದ್ದಾರೆ
ಇವಿಎಂ ಯಂತ್ರಗಳ ತಿರುಚುವಿಕೆ ಕುರಿತು ಕಳೆದ ಹಲವು ದಿನಗಳಿಂದ ಬಹುತೇಕ ಎಲ್ಲಾ ವಿರೋಧ ಪಕ್ಷಗಳು ಅನುಮಾನ ವ್ಯಕ್ತಪಡಿಸುತ್ತಲೇ ಇವೆ. ಆದರೆ, ಈ ಕುರಿತ ಎಲ್ಲಾ ಆಕ್ಷೇಪಗಳನ್ನೂ ಚುನಾವಣಾ ಅಲ್ಲಗಳೆಯುತ್ತಲೇ ಇದೆ. ಅಲ್ಲದೆ ಇವಿಎಂ ಯಂತ್ರ ಹಾಗೂ ವಿವಿ ಪ್ಯಾಟ್ ತಾಳೆ ಹಾಕಿ ಮತ ಎಣಿಸುವ ಕುರಿತು ವಿರೋಧ ಪಕ್ಷಗಳು ಸುಪ್ರೀಂ ಮೊರೆ ಹೋಗಿದ್ದವು. ಆದರೆ, ಈ ಅರ್ಜಿಯನ್ನೂ ಸಹ ಸುಪ್ರೀಂ ತಳ್ಳಿಹಾಕಿದೆ. ಈ ಹಿನ್ನೆಲೆಯಲ್ಲಿ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹೇಳಿಕೆ ಭಾರೀ ಮಹತ್ವ ಪಡೆದುಕೊಂಡಿದೆ