ನವದೆಹಲಿ: ಲೋಕಸಭಾ ಚುನಾವಣೆಯ ಅಂತಿಮ ಹಂತದ ಮತದಾನ ಅಂತ್ಯಗೊಂಡ ನಂತರದ ದಿನವೇ ದೇಶಾದ್ಯಂತ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ದಿಢೀರ್ ಏರಿಕೆ ಕಂಡಿದೆ. ಅಲ್ಲದೇ ತೈಲ ಕಂಪನಿಗಳು ತಮಗಾಗಿರುವ ನಷ್ವನ್ನು ತುಂಬಿಕೊಳ್ಳಲು ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ಮತ್ತೆ ಇನ್ನಷ್ಟು ಏರಿಕೆ ಮಾಡುವ ಸಂಭವವಿದೆ ಎಂದು ಹೇಳಲಾಗಿದೆ.
ಸರ್ಕಾರಿ ಒಡೆತನದ ತೈಲ ಕಂಪನಿಗಳು ಅಥವಾ ಒಎಂಸಿಗಳು ಸೋಮವಾರ ತೈಲ ಬೆಲೆಯನ್ನು ದಿಢೀರ್ ಏರಿಕೆ ಮಾಡಿವೆ. ಇದರ ಬಗ್ಗೆ ಪ್ರತಿಕ್ರಿಯಿಸಿರುವ ವಿಶ್ಲೇಷಕರು ದೇಶಾದ್ಯಂತ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯ ಮೊಲದ ಹಂತ ಇದಾಗಿದೆ ಎಂದು ಮುನ್ನೆಚ್ಚರಿಕೆ ನೀಡಿದ್ದಾರೆ.
ದೆಹಲಿಯಲ್ಲಿ ಸೋಮವಾರ ತೈಲ ಬೆಲೆ 8-10ಪೈಸೆ ಏರಿಕೆಯಾಗಿತ್ತು, ಮಂಗಳವಾರ ಒಎಂಸಿ ಪ್ರತಿ ಲೀಟರ್ ಪೆಟ್ರೋಲ್ ಗೆ 5 ಪೈಸೆ ಮತ್ತೆ ಹೆಚ್ಚಳ ಮಾಡಿದೆ. ಪ್ರಸ್ತುತ ಪೆಟ್ರೋಲ್ ದರ ದೆಹಲಿಯಲ್ಲಿ ಲೀಟರ್ ಗೆ 71.7 ರೂಪಾಯಿ ಇದ್ದರೆ, ಮುಂಬೈನಲ್ಲಿ 76.78 ರೂಪಾಯಿಗೆ ತಲುಪಿದೆ.
ಅಲ್ಲದೇ ತೈಲ ಕಂಪನಿಗಳು ಡೀಸೆಲ್ ದರವನ್ನು ಸಹ ಏರಿಸಿದ್ದು, ಸೋಮವಾರ ಕನಿಷ್ಠ 15-16ಪೈಸೆ ಏರಿಕೆ ಮಾಡಿದ್ದ ಕಂಪನಿ ಇಂದು ಮತ್ತೆ 10 ಪೈಸೆ ತುಟ್ಟಿ ಮಾಡಿದೆ. ಪ್ರಸ್ತುತ ಡೀಸೆಲ್ ದರ ದೆಹಲಿಯಲ್ಲಿ ಲೀಟರ್ ಗೆ 66.20 ರೂಪಾಯಿಗೆ ಏರಿಕೆಯಾಗಿದ್ದು, ಮುಂಬೈನಲ್ಲಿ 69.36 ರೂಪಾಯಿಯಾಗಿದೆ.
ಲೋಕಸಭಾ ಚುನಾವಣೆ ವೇಳೆ ಏರಿಕೆಯಾಗದ ತೈಲ ಬೆಲೆ ಚುನಾವಣೆ ಮುಗಿದ ತಕ್ಷಣವೇ ಮತ್ತೆ ಹಿಂದಿನಂತೆ ಅದೇ ಚಾಳಿಯನ್ನು ಮುಂದುವರೆಸಿಕೊಂಡು ಹೋಗುತ್ತಿದೆ ಎನ್ನಲಾಗುತ್ತಿದೆ.
ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಹದಗೆಡುತ್ತಿರುವ ಪರಿಸ್ಥಿತಿಯಲ್ಲಿ ಅವಲೋಕಿಸಿ ಏಪ್ರಿಲ್ 24ರ ನಂತರ ತೈಲ ಏರಿಕೆ ಬಿಸಿ ತಟ್ಟಲಿದೆ ಎಂದು ಟ್ರೂಥ್ ಇಂಡಿಯಾ ಕನ್ನಡ ಈ ಬಗ್ಗೆ ಸವಿಸ್ತಾರವಾಗಿ ವರದಿ ಮಾಡಿತ್ತು.
ಕಳೆದ ಕೆಲವು ತಿಂಗಳಿಂದ ತೈಲ ಮಾರುಕಟ್ಟೆಯಲ್ಲಿ ಸಾಕಷ್ಟು ಏರುಪೇರು ಕಂಡಿದೆ. ಪೆಟ್ರೋಲಿಯಂ ರಫ್ತು ರಾಷ್ಟ್ರಗಳ ಒಕ್ಕೂಟ(ಒಪೆಕ್) ದಲ್ಲಿ ಒಮ್ಮತ ಅಭಿಪ್ರಾಯ ಇಲ್ಲದ ಕಾರಣ ಮತ್ತು ಅದರ ಮಿತ್ರ ರಾಷ್ಟ್ರಗಳು ತೈಲ ಪೂರೈಕೆಯನ್ನು ಮತ್ತಷ್ಟು ಮಿತಿಗೊಳಿಸಲಿರುವ ಬಗ್ಗೆ ಸೌದಿ ಅರೇಬಿಯಾ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಸೋಮವಾರ ಪೆಟ್ರೋಲ್ ಹಾಗೂ ಡೀಸೆಲ್ ದರದಲ್ಲಿ ಏರಿಕೆ ಕಂಡಿದೆ.
ಒಪೆಕ್ ಮತ್ತು ಒಪೆಕ್ ಸದಸ್ಯರ ಜತೆ ಮೈತ್ರಿ ಮಾಡಿಕೊಂಡಿರುವವರು, ರಷ್ಯಾ ಹಾಗೂ ಇತರೆ ಸದಸ್ಯೇತರ ಉತ್ಪಾದಕ ದೇಶಗಳು ತೈಲ ಮಾರುಕಟ್ಟೆಯನ್ನು ಸಬಲಗೊಳಿಸುವ ನಿಟ್ಟಿನಲ್ಲಿ 2019ರ ಜನವರಿ 1ರಿಂದ ಆರು ತಿಂಗಳ ಕಾಲ ತೈಲ ಉತ್ಪಾದನೆಯನ್ನು ಕಡಿಮೆ ಮಾಡುವ ಬಗ್ಗೆ, ದಿನಕ್ಕೆ 1.2 ದಶಲಕ್ಷ ಬ್ಯಾರೆಲ್ ಉತ್ಪಾದಿಸುವ ಕುರಿತು ನಿರ್ಧರಿಸಿದ್ದರು.
ಒಟ್ಟಾರೆ ವಿಶ್ಲೇಷಕರ ಅಭಿಪ್ರಾಯದಂತೆ, ಲೋಕಸಭಾ ಚುನಾವಣಾ ಬಿಸಿಯಿಂದಾಗಿ ಭಾರತಕ್ಕೆ ತೈಲ ಬೆಲೆ ಹೆಚ್ಚು ತಟ್ಟಲಿಲ್ಲ, ಇದೀಗ ಎಲ್ಲಾ ಹಂತಗಳಲ್ಲೂ ಚುನಾವಣೆ ಅಂತ್ಯಗೊಂಡಿದ್ದು, ಮುಂದಿನ ಕೆಲವು ತಿಂಗಳ ಕಾಲ ದೇಶದಲ್ಲಿ ತೈಲ ಬೆಲೆಯಲ್ಲಿ ದಾಖಲೆಯ ಪ್ರಮಾಣದಲ್ಲಿ ಏರಿಕೆ ಕಾಣಲಿದೆ .