ಮತಗಟ್ಟೆ ಸಮೀಕ್ಷೆಗಳು ಎನ್ ಡಿಎ ಮೈತ್ರಿಕೂಟ ಭಾರೀ ಬಹುಮತದೊಂದಿಗೆ ಮತ್ತೆ ಅಧಿಕಾರದಲ್ಲಿ ಮುಂದುವರಿಯಲಿದೆ ಎಂಬ ಭವಿಷ್ಯ ನುಡಿದ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್ ಪಾಳೆಯದಲ್ಲಿ ಬಂಡಾಯದ ದನಿಗಳು ಮೊಳಗತೊಡಗಿದ್ದು, ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದ ಟಿಕೆಟ್ ವಂಚಿತ ಹಿರಿಯ ನಾಯಕ ರೋಷನ್ ಬೇಗ್ ಪಕ್ಷದ ರಾಜ್ಯ ನಾಯಕರ ವಿರುದ್ಧ ಬಹಿರಂಗವಾಗಿ ಹರಿಹಾಯ್ದಿದ್ದಾರೆ.
ಮಾಧ್ಯಮಗಳೊಂದಿಗೆ ಮಂಗಳವಾರ ಬೆಳಗ್ಗೆ ಮಾತನಾಡಿರುವ ಬೇಗ್, ಎನ್ ಡಿ ಎ ಬಹುಮತ ಪಡೆಯುತ್ತದೆ ಎಂಬ ಮತಗಟ್ಟೆ ಸಮೀಕ್ಷೆಗಳ ಅಂದಾಜು ನನಗೇನು ಅಚ್ಚರಿ ತಂದಿಲ್ಲ. ಇದನ್ನು ನಾವು ಊಹಿಸಿದ್ದೆ. ಅದರಲ್ಲೂ ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್ ಅತ್ಯಂತ ಕಳಪೆ ಸಾಧನೆ ತೋರಲಿದೆ ಎಂಬುದು ಕೂಡ ಗೊತ್ತಿತ್ತು. ಕಾಂಗ್ರೆಸ್ ಇತಿಹಾಸದಲ್ಲೇ ಅತ್ಯಂತ ಕಳಪೆ ಸಾಧನೆ ಇದಾಗಲಿದ್ದು, ಅದಕ್ಕೆ ಪಕ್ಷದ ರಾಜ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಚುನಾವಣಾ ಉಸ್ತುವಾರಿ ವಹಿಸಿಕೊಂಡಿರುವ ಸಿದ್ದರಾಮಯ್ಯ ಅವರೇ ಕಾರಣ” ಎಂದಿದ್ದಾರೆ.
ಅಲ್ಲದೆ, “ಎಐಸಿಸಿ ರಾಜ್ಯ ಉಸ್ತುವಾರಿ ಕೆ ಸಿ ವೇಣುಗೋಪಾಲ್ ಅವರೂ ಕಾಂಗ್ರೆಸ್ಸಿನ ಈ ಹೀನಾಯ ಹಿನ್ನಡೆಗೆ ಕಾರಣವಾಗಲಿದ್ದಾರೆ. ವೇಣುಗೋಪಾಲರಂಥ ಬಫೂನ್, ಸಿದ್ದರಾಮಯ್ಯನಂಥ ಅಹಂಕಾರದ ಮನುಷ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಫ್ಲಾಪ್ ಶೋನಿಂದಾಗಿ ಕಾಂಗ್ರೆಸ್ ಈ ಪರಿಯ ಸೋಲು ಕಾಣಲಿದೆ” ಎಂದು ಎಐಸಿಸಿ ಮತ್ತು ರಾಜ್ಯ ಪ್ರಮುಖರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಬೇಗ್, “ನಮ್ಮ ನಾಯಕ ರಾಹುಲ್ ಗಾಂಧಿಯವರ ಬಗ್ಗೆ ಬೇಸರವಾಗ್ತಿದೆ. ಕಾಂಗ್ರೆಸ್ ರಾಜ್ಯದಲ್ಲಿ ನಮ್ಮನ್ನು ಬಳಸಿಕೊಂಡಿದೆ. ಆದರೆ, ಚುನಾವಣೆಯಲ್ಲಿ ಮುಸ್ಲಿಮರಿಗೆ ಕೇವಲ ಒಂದು ಟಿಕೆಟ್ ನೀಡಿದ್ದರೆ, ಕ್ರೈಸ್ತರಿಗೂ ಒಂದೂ ಸ್ಥಾನ ನೀಡಿಲ್ಲ. ಅಲ್ಲದೆ ಪಕ್ಷದಲ್ಲಿ ಹಿರಿಯ ನಾಯಕರನ್ನು ಕಡೆಗಣಿಸಲಾಗ್ತಿದೆ. ಸಂಪುಟದಿಂದ ನನ್ನನ್ನು ಕೈಬಿಟ್ಟರು, ರಾಮಲಿಂಗಾರೆಡ್ಡಿ ಅವರನ್ನೂ ಕೈಬಿಟ್ಟಿದ್ದಾರೆ. ಕುಮಾರಸ್ವಾಮಿ ಮನೆಗೆ ಹೋಗಿ ನೀವೇ ಸಿಎಂ ಎಂದು ಸರ್ಕಾರ ರಚಿಸಿ, ಮೊದಲ ದಿನದಿಂದಲೇ ನಾನೇ ಸಿಎಂ ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ. ಇದನ್ನೆಲ್ಲಾ ರಾಜ್ಯದ ಜನ ನೋಡುತ್ತಿದ್ದಾರೆ” ಎಂದು ಸಿದ್ದರಾಮಯ್ಯ ವಿರುದ್ಧ ಕೆಂಡಕಾರಿದ್ದಾರೆ.
ಸಚಿವ ಸಂಪುಟ ಖಾತೆಗಳನ್ನು ಕಾಂಗ್ರೆಸ್ ನಾಯಕರು ಮಾರಿಕೊಂಡಿದ್ದಾರೆ ಎಂಬ ಗಂಭೀರ ಆರೋಪವನ್ನೂ ಮಾಡಿರುವ ಅವರು, ಧರ್ಮ ಒಡೆದು, ಜಾತಿ ಜಾತಿಗಳ ನಡುವೆ ಹಚ್ಚಿಹಾಕಿ ರಾಜಕಾರಣ ಮಾಡಲು ಆಗದು ಎಂಬುದನ್ನು ಈ ಚುನಾವಣೆಯಲ್ಲಿ ರಾಜ್ಯದ ಜನ ಕಾಂಗ್ರೆಸ್ ನಾಯಕರಿಗೆ ತೋರಿಸಿಕೊಡಲಿದ್ದಾರೆ. ಕಳೆದ ಚುನಾವಣೆಯಲ್ಲಿಯೂ 25-30 ಸ್ಥಾನ ಕಡಿಮೆಯಾಗಿದ್ದಕ್ಕೂ ಇದೇ ಕಾರಣ. ಒಟ್ಟಾರೆ, ಸಿದ್ದರಾಮಯ್ಯ ಮತ್ತು ದಿನೇಶ್ ಗುಂಡೂರಾವ್ ಅವರ ಧೋರಣೆಯೇ ಇದಕ್ಕೆಲ್ಲಾ ಕಾರಣ. ಹಾಗಾಗಿ ಅವರು ಮಾನ- ಮರ್ಯಾದೆ ಇದ್ದರೆ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದೂ ಒತ್ತಾಯಿಸಿದ್ದಾರೆ.
ಈ ನಡುವೆ, ಬೇಗ್ ಹೇಳಿಕೆ ಹೊರಬೀಳುತ್ತಿದ್ದಂತೆ ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನ ಆರಂಭವಾಗಿದ್ದು, ಸೋಮವಾರವಷ್ಟೇ ಅವರು, ನೀಡಿದ್ದ ‘ಅಗತ್ಯಬಿದ್ದರೆ ಬಿಜೆಪಿಗೆ ಬೆಂಬಲಿಸಲು ಮುಸ್ಲಿಮರು ಹಿಂಜರಿಯಬಾರದು’ ಎಂಬ ಹೇಳಿಕೆಯೊಂದಿಗೆ ತಾಳೆ ಹಾಕಿ, ಸ್ವತಃ ರೋಷನ್ ಬೇಗ್ ಈಗಾಗಲೇ ಒಂದು ಕಾಲು ಹೊರಗಿಟ್ಟಿದ್ದಾರೆ. ಪ್ರಮುಖವಾಗಿ ಸಮ್ಮಿಶ್ರ ಸರ್ಕಾರದಲ್ಲಿ ತಮಗೆ ಸಚಿವ ಖಾತೆ ಸಿಕ್ಕಿಲ್ಲ ಮತ್ತು ಆಯಕಟ್ಟಿನ ಇತರ ಸ್ಥಾನಮಾನಗಳನ್ನೂ ನೀಡಿಲ್ಲ ಎಂಬ ಅಸಮಾಧಾನ ಬೇಗ್ ಅವರಿಗಿದೆ. ಜೊತೆಗೆ ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದ ಟಿಕೆಟ್ ವಿಷಯವಾಗಿ ಅವರು ಸಾಕಷ್ಟು ಪ್ರಯತ್ನ ಮಾಡಿದ್ದರು. ಆದರೆ, ಅಲ್ಲಿ ರಿಜ್ವಾನ್ ಅರ್ಷಾದ್ ಅವರಿಗೆ ಟಿಕೆಟ್ ನೀಡಲಾಯಿತು. ಅದರಿಂದಾಗಿ ಬೇಗ್ ಈ ಚುನಾವಣೆಯಲ್ಲಿ ಪ್ರಚಾರದಿಂದ ಬಹುತೇಕ ದೂರವೇ ಉಳಿದಿದ್ದರು. ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ಮತ್ತು ಕೆ ಸಿ ವೇಣುಗೋಪಾಲ್ ವಿರುದ್ಧದ ಅವರ ಆಕ್ರೋಶಕ್ಕೂ ಇದೇ ಕಾರಣ ಎನ್ನಲಾಗುತ್ತಿದೆ.
ಈ ನಡುವೆ, ಬೇಗ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಉಪಮುಖ್ಯಮಂತ್ರಿ ಜಿ ಪರಮೇಶ್ವರ್, ಅದು ಬೇಗ್ ಅವರ ವೈಯಕ್ತಿಕ ಹೇಳಿಕೆ, ಪಕ್ಷದಲ್ಲ ಎನ್ನುವ ಮೂಲಕ ಬೇಗ್ ಆರೋಪಗಳನ್ನು ತಳ್ಳಿಹಾಕಿದ್ದಾರೆ.