ಮತ ಎಣಿಕೆಗೆ ಇನ್ನೇನು ಕೆಲವೇ ತಾಸುಗಳು ಬಾಕಿ ಇರುವಾಗ, ದೇಶದ ತುಂಬಾ ಇವಿಎಂ ಮತಯಂತ್ರಗಳ ಸಾಗಣೆ ಮತ್ತು ನಕಲಿ ಇವಿಎಂಗಳ ವಶದ ಸುದ್ದಿಗಳು ಬರತೊಡಗಿವೆ. ಕಳೆದ ಎರಡು ದಿನಗಳಿಂದ ಉತ್ತರಪ್ರದೇಶ, ಬಿಹಾರ, ಪಶ್ಚಿಮಬಂಗಾಳ, ತಮಿಳುನಾಡು, ಪಂಜಾಬ್, ಹರ್ಯಾಣ, ರಾಜಸ್ತಾನ ಸೇರಿದಂತೆ ಹಲವು ಕಡೆ ಲಾರಿಗಳಲ್ಲಿ ಇವಿಎಂ ಯಂತ್ರಗಳ ಅಕ್ರಮ ಸಾಗಣೆ, ಖಾಸಗಿ ಗೋದಾಮುಗಳಲ್ಲಿ ಅಕ್ರಮ ಸಂಗ್ರಹ ಮತ್ತು ನಕಲಿ ಯಂತ್ರಗಳ ಸಾಗಣೆ ಪ್ರಕರಣಗಳು ವರದಿಯಾಗಿವೆ. ಕೆಲವು ಕಡೆ ಕಾಂಗ್ರೆಸ್, ಎಸ್ಪಿ ಮತ್ತು ಆರ್ ಜೆಡಿ ಕಾರ್ಯಕರ್ತರು ಇವಿಎಂಗಳ ಅಕ್ರಮವನ್ನು ಬಯಲಿಗೆಳೆದರೆ, ಇನ್ನೂ ಕೆಲವು ಕಡೆ ಅಧಿಕಾರಿಗಳೇ ಇಂತಹ ಅಕ್ರಮಗಳನ್ನು ಬಯಲುಮಾಡಿರುವುದಾಗಿ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಆದರೆ, ಚುನಾವಣಾ ಆಯೋಗ ಮಂಗಳವಾರ ಅಂತಹ ವರದಿಗಳನ್ನು ಸಾರಾಸಗಟಾಗಿ ತಳ್ಳಿಹಾಕಿದ್ದು, ಮತದಾನಕ್ಕೆ ಬಳಸಿರುವ ಎಲ್ಲಾ ಇವಿಎಂಗಳೂ ಸೂಕ್ತ ಭದ್ರತೆಯಲ್ಲಿ ಸುರಕ್ಷಿತವಾಗಿವೆ. ಯಾವುದೇ ಅಕ್ರಮಗಳ ಕುರಿತ ವರದಿಗಳನ್ನು ಜನತೆ ನಂಬಬಾರದು ಎಂದು ಹೇಳಿದೆ. ಈ ನಡುವೆ ಮಂಗಳವಾರ ರಾತ್ರಿ ಕೂಡ ಅಕ್ರಮವಾಗಿ ಇವಿಎಂ ಯಂತ್ರಗಳನ್ನು ಸಾಗಣೆ ಮಾಡಲಾಗುತ್ತಿದೆ ಎಂದು ಬಿಹಾರದ ಆರ್ ಜೆ ಡಿ ಮುಖಂಡ ತೇಜಸ್ವಿ ಯಾದವ್ ಕೂಡ, ಇವಿಎಂ ಸಾಗಣೆಯ ವೀಡಿಯೋ ತುಣುಕು ಸಹಿತ ಟ್ವೀಟ್ ಮಾಡಿ, ಬಿಹಾರ ಸೇರಿದಂತೆ ಉತ್ತರ ಭಾರತದಾದ್ಯಂತ ದಿಢೀರನೇ ಇವಿಎಂ ಯಂತ್ರಗಳ ಸಾಗಣೆ ವರದಿಯಾಗುತ್ತಿದೆ. ಯಾರು ಈ ಕೆಲಸ ಮಾಡುತ್ತಿದ್ದಾರೆ? ಯಾವ ಉದ್ದೇಶದಿಂದ ಹೀಗೆ ಮಾಡಲಾಗುತ್ತಿದೆ? ಈ ಬಗ್ಗೆ ಎದ್ದಿರುವ ಗೊಂದಲಗಳನ್ನು ಪರಿಹರಿಸಲು ಚುನಾವಣಾ ಆಯೋಗ ಕೂಡಲೇ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದ್ದರು.
ಈ ನಡುವೆ, ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳ ನಡುವಿನ ವಾಕ್ಸಮರದ ವಿಷಯವಾಗಿದ್ದ ಇವಿಎಂ ಅಕ್ರಮದ ವಿಷಯ ಇದೀಗ ಐಎಎಸ್ ಅಧಿಕಾರಿಗಳ ಹೊಣೆಗಾರಿಕೆಯ ಚರ್ಚೆಯಾಗಿ ಹೊರಹೊಮ್ಮಿದ್ದು, ರಾಜ್ಯದ ಬಂಧೀಖಾನೆ ಐಜಿಪಿ ಡಿ.ರೂಪಾ ಅವರು ಇವಿಎಂ ಯಂತ್ರಗಳನ್ನು ಹ್ಯಾಕ್ ಮಾಡುವುದು ಸಾಧ್ಯವಿಲ್ಲ ಎಂದು ಟ್ವೀಟ್ ಮಾಡುವ ಮೂಲಕ ಇಡೀ ವಿವಾದಕ್ಕೆ ಆಡಳಿತಶಾಹಿಯ ಆಯಾಮ ನೀಡಿದ್ದಾರೆ.
“ಇವಿಎಂ ಯಂತ್ರಗಳನ್ನು ಹ್ಯಾಕ್ ಮಾಡುವುದು ಸಾಧ್ಯವೇ ಇಲ್ಲ. ರಾಜ್ಯದ ಮತ್ತು ದೇಶದ ಎಲ್ಲಾ ಐಎಎಸ್ ಅಧಿಕಾರಿಗಳಿಗೂ ಇದು ಗೊತ್ತಿದೆ. ಯಾಕೆಂದರೆ, ಚುಣಾವಣೆ ಸಂದರ್ಭದಲ್ಲಿ ಅವರೆಲ್ಲಾ ಚುನಾವಣಾಧಿಕಾರಿಗಳಾಗಿ ಕೆಲಸ ಮಾಡುತ್ತಾರೆ. ಹ್ಯಾಕಿಂಗಿಗೆ ಅವಕಾಶ ನೀಡಿ ಅವರೆಲ್ಲಾ ತಮ್ಮ ಕೆಲಸ ಕಳೆದುಕೊಳ್ಳುತ್ತಾರಾ” ಎಂದು ಪ್ರಶ್ನಿಸಿದ್ದಾರೆ. ಆ ಮೂಲಕ ಇವಿಎಂ ವ್ಯವಸ್ಥೆಯನ್ನು ರೂಪಾ ಅವರು ಬಲವಾಗಿ ಸಮರ್ಥಿಸಿಕೊಂಡಿದ್ದು, ಬಿಜೆಪಿ ಮತ್ತು ಅದರ ಬೆಂಬಲಿಗರ ವಾದಕ್ಕೆ ದನಿಗೂಡಿಸಿದ್ದಾರೆ. ರೂಪಾ ಅವರ ಆ ಟ್ವೀಟ್ ಆಧರಿಸಿ ಇಂಡಿಯಾ ಟುಡೆ ಸುದ್ದಿವಾಹಿನಿ ಅವರನ್ನು ಮಾತನಾಡಿಸಿದಾಗ, ದೇಶದ ವಿವಿಧೆಡೆ ಕೇಳಿಬರುತ್ತಿರುವ ಇವಿಎಂ ಸಾಗಣೆ ಮತ್ತು ಇತರ ಅಕ್ರಮಗಳನ್ನು ಸಾರಾಸಗಟಾಗಿ ತಳ್ಳಿಹಾಕಿದ ಅವರು, “ಅವೆಲ್ಲಾ ಕೇವಲ ವದಂತಿಗಳು” ಎಂದಿದ್ದಾರೆ.
ಆದರೆ, ಇವಿಎಂ ವಿಷಯದಲ್ಲಿ ಹಿಂದೆಂದಿಗಿಂತಲೂ ಈ ಬಾರಿ ಅತಿ ಹೆಚ್ಚು ಆರೋಪಗಳು ಕೇಳಿಬಂದಿದ್ದು, ಸ್ವತಃ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಕೂಡ ಚುನಾವಣಾ ವ್ಯವಸ್ಥೆಯ ಮೇಲಿನ ಜನಸಾಮಾನ್ಯರ ವಿಶ್ವಾಸಕ್ಕೆ ಧಕ್ಕೆ ಬರದಂತೆ ಇವಿಎಂ ವಿವಾದದಲ್ಲಿ ಚುನಾವಣಾ ಆಯೋಗ ಭರವಸೆಯ ಕ್ರಮಗಳನ್ನು ಕೈಗೊಳ್ಳಬೇಕು ಎಂದಿದ್ದಾರೆ. ಅಲ್ಲದೆ, ಬಿಜೆಪಿಯನ್ನು ಹೊರತುಪಡಿಸಿ ಉಳಿದೆಲ್ಲಾ ರಾಜಕೀಯ ಪಕ್ಷಗಳು ಇವಿಎಂ ಮೇಲೆ ತಮಗೆ ನಂಬಿಕೆ ಇಲ್ಲ ಎಂಬುದನ್ನು ಮತ್ತೆ ಮತ್ತೆ ಹೇಳುತ್ತಲೇ ಇವೆ. ಈ ನಡುವೆ, ವಿವಿಪ್ಯಾಟ್ ಚೀಟಿಗಳನ್ನು ಸಂಪೂರ್ಣವಾಗಿ ಎಣಿಕೆ ಮಾಡದೇ ಇದ್ದಲ್ಲಿ, ಸುಮಾರು 16 ಸಾವಿರ ಕೋಟಿ ವೆಚ್ಚದಲ್ಲಿ ಆ ಯಂತ್ರಗಳನ್ನು ಅಳವಡಿಸುವ ಅಗತ್ಯವೇನಿತ್ತು ಎಂಬ ಪ್ರಶ್ನೆ ಕೂಡ ಎದ್ದಿದೆ. ರಾಜಕೀಯ ಪಕ್ಷಗಳ ಒಕ್ಕೊರಲಿನ ಆಗ್ರಹಕ್ಕೂ ಸೊಪ್ಪು ಹಾಕದ ಆಯೋಗ, ಈ ಮೊದಲಿನಂತೆ ಒಂದು ಕ್ಷೇತ್ರದ ತಲಾ ಒಂದು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಐದು ಮತಗಟ್ಟೆಗಳ ವಿವಿಪ್ಯಾಟ್ ಮಾತ್ರ ಎಣಿಕೆ ಮಾಡುವುದಾಗಿ ಹೇಳಿದೆ. ಅಲ್ಲದೆ, ಇವಿಎಂ ಮತ ಎಣಿಕೆಗೂ ಮುನ್ನ ಈ ಮಾದರಿ ವಿವಿಪ್ಯಾಟ್ ಮತ ಎಣಿಕೆ ನಡೆಯಬೇಕು, ಒಂದು ವೇಳೆ ವ್ಯತ್ಯಾಸ ಕಂಡುಬಂದಲ್ಲಿ ಆ ಕ್ಷೇತ್ರಗಳ ಎಲ್ಲಾ ಮತಗಳನ್ನು ವಿವಿಪ್ಯಾಟ್ ಆಧಾರದಲ್ಲೇ ಎಣಿಕೆ ಮಾಡಬೇಕು ಎಂಬ ಒತ್ತಾಯಕ್ಕೂ ಆಯೋಗ ಮಣಿದಿಲ್ಲ. ಬದಲಾಗಿ ಹಿಂದಿನಂತೆ ಇವಿಎಂ ಮತ ಎಣಿಕೆ ಮುಗಿದ ಬಳಿಕ ಮಾದರಿ ವಿವಿಪ್ಯಾಟ್ ಮತ ಎಣಿಕೆ ಮಾಡುವುದಾಗಿಯೇ ಆಯೋಗ ಹೇಳಿದೆ.
ಆ ಹಿನ್ನೆಲೆಯಲ್ಲಿ ಇದೀಗ ಮತ್ತೊಮ್ಮೆ ರಾಷ್ಟ್ರವ್ಯಾಪಿ ಇವಿಎಂಗಳ ಪ್ರಸ್ತುತತೆಯ ಬಗ್ಗೆಯೇ ದೊಡ್ಡ ಮಟ್ಟದ ಚರ್ಚೆ ಆರಂಭವಾಗಿದೆ. ಈ ನಡುವೆ, ಒಬ್ಬ ಸರ್ಕಾರಿ ಅಧಿಕಾರಿಯಾಗಿ, ಡಿ.ರೂಪಾ ಅವರು ಇವಿಎಂ ಹ್ಯಾಕಿಂಗ್ ಕುರಿತ ವೈಯಕ್ತಿಕ ಹೇಳಿಕೆ ನೀಡಿರುವುದು ಕುತೂಹಲ ಹುಟ್ಟಿಸಿದೆ.
ಈ ನಡುವೆ, ಆಂಧ್ರಪ್ರದೇಶ ಸಿಎಂ ಹಾಗೂ ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ಅವರು ಇವಿಎಂ ಕುರಿತ ಗಂಭೀರ ಆರೋಪಗಳ ಹಿನ್ನೆಲೆಯಲ್ಲಿ ರಾಷ್ಟ್ರಮಟ್ಟದಲ್ಲಿ ವಿವಿಧ ಪಕ್ಷಗಳ ಮುಖಂಡರೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ಇವಿಎಂ ಅಕ್ರಮಗಳ ಮೂಲಕ ಬಿಜೆಪಿ ಅಧಿಕಾರ ಹಿಡಿಯಲು ಬಯಸುತ್ತಿದೆ, ಆ ಹಿನ್ನೆಲೆಯಲ್ಲಿ ಇವಿಎಂಗಳ ಜೊತೆಗೆ ವಿವಿಪ್ಯಾಟ್ ಮತ ಎಣಿಕೆಯನ್ನೂ ಕಡ್ಡಾಯವಾಗಿ ಮಾಡಬೇಕು ಎಂಬ ಮನವಿಯನ್ನು ವಿವಿಧ ಪಕ್ಷಗಳ ಮುಖಂಡರು ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದರು. ಆದರೆ, ಆಯೋಗ ಬೇಡಿಕೆಯನ್ನು ತಳ್ಳಿಹಾಕಿತ್ತು.
ಈ ನಡುವೆ, ತಮಿಳುನಾಡಿನಲ್ಲಿಯೂ ಇವಿಎಂಗಳ ಅಕ್ರಮ ಸಾಗಣೆ ವರದಿಯಾಗಿರುವುದಾಗಿ ಡಿಎಂಕೆ ನಾಯಕಿ ಕನಿಮೋಳಿ ಹೇಳಿದ್ದಾರೆ. ಇದೇ ಆರೋಪ ಹರ್ಯಾಣ, ಪಂಜಾಬ್ ಗಳಲ್ಲಿಯೂ ಕೇಳಿಬಂದಿದೆ.
ಒಂದು ಕಡೆ ಮತದಾನಕ್ಕೆ ಕೆಲವೇ ತಾಸುಗಳಿರುವಾಗ ಇವಿಎಂ ಯಂತ್ರಗಳನ್ನು ಖಾಸಗಿ ಹೋಟೆಲ್, ಗೋದಾಮುಗಳಲ್ಲಿ ಸಂಗ್ರಹಿಸುತ್ತಿರುವ, ಸಾಗಣೆ ಮಾಡುತ್ತಿರುವ ವೀಡಿಯೋಗಳು ವೈರಲ್ ಆಗುತ್ತಿದ್ದರೆ, ಮತ್ತೊಂದು ಕಡೆ ಮತ ಎಣಿಕೆಯ ಸಂದರ್ಭದಲ್ಲಿ ಇವಿಎಂ ಯಂತ್ರದಿಂದ ಕಂಟ್ರೋಲ್ ಯುನಿಟ್ ಗೆ ಮತ ವರ್ಗಾವಣೆ ವೇಳೆ ಹ್ಯಾಕ್ ಮಾಡುವ ಅವಕಾಶವಿದ್ದು, ಅಂತಹ ಲೋಪಗಳ ಲಾಭವನ್ನು ಆಳುವ ಸರ್ಕಾರಗಳು ಪಡೆಯುತ್ತಿವೆ ಎಂಬ ಆರೋಪಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿವೆ.
ಆ ಹಿನ್ನೆಲೆಯಲ್ಲಿ ಪಶ್ಚಿಮಬಂಗಾಳ, ಬಿಹಾರ, ಉತ್ತರಪ್ರದೇಶ, ಪಂಜಾಬ್, ಹರ್ಯಾಣ ಸೇರಿದಂತೆ ಉತ್ತರ ಭಾರತದ ವಿವಿಧ ರಾಜ್ಯಗಳಲ್ಲಿ ತೃಣಮೂಲ ಕಾಂಗ್ರೆಸ್, ಆರ್ಜೆಡಿ, ಬಿಎಸ್ಪಿ, ಕಾಂಗ್ರೆಸ್ ಮತ್ತಿತರರ ಪ್ರತಿಪಕ್ಷಗಳ ಕಾರ್ಯಕರ್ತರು ಇವಿಎಂಗಳನ್ನು ಸಂಗ್ರಹಿಸಿರುವ ಭದ್ರತಾ ಕೊಠಡಿಗಳ ಸುತ್ತಮುತ್ತ ಆಹೋರಾತ್ರಿ ಕಾವಲು ಕಾಯತೊಡಗಿದ್ದಾರೆ ಎಂಬ ವರದಿಗಳು ಇವೆ. ಸೋನಿಯಾ ಗಾಂಧಿಯವರು ಸ್ಪರ್ಧಿಸಿರುವ ರಾಯ್ ಬರೇಲಿ ಕ್ಷೇತ್ರವೂ ಸೇರಿ ವಿವಿಧೆಡೆ ಕಾಂಗ್ರೆಸ್ ಕಾರ್ಯಕರ್ತರು ಭದ್ರತಾ ಕೊಠಡಿಗಳಿಗೆ ಸ್ವಯಂಪ್ರೇರಿತ ಕಣ್ಗಾವಲು ಹಾಕಿರುವುದು ಹೊಸ ಬೆಳವಣಿಗೆ.
ಒಟ್ಟಾರೆ, ದೇಶದ ಚುನಾವಣಾ ಇತಿಹಾಸದಲ್ಲೆ ಮೊದಲ ಬಾರಿಗೆ ಇಡೀ ಚುನಾವಣಾ ವ್ಯವಸ್ಥೆಯೇ ನಂಬಿಕೆ ಕಳೆದುಕೊಂಡು, ಅಹಹಾಸ್ಯಕ್ಕೆ ಗುರಿಯಾಗಿದ್ದು, ಮತ ಮತ್ತು ಆಯ್ಕೆಯ ಕುರಿತ ಜನರ ವಿಶ್ವಾಸಾರ್ಹತೆಯೇ ಮಣ್ಣುಮುಕ್ಕಿದೆ. ಆ ಹಿನ್ನೆಲೆಯಲ್ಲಿ ಪ್ರಣಬ್ ದಾದಾ ಅವರು, ಆಯೋಗಕ್ಕೆ ಕಿವಿಮಾತು ಹೇಳಿದ್ದಾರೆ.
ಆದರೆ, ಆಯೋಗದ ಸದ್ಯದ ಸ್ಥಿತಿ ಹೇಗಿದೆ ಎಂದರೆ, ಅದು ಹೊರಗಿನವರ ಮಾತಿರಲಿ, ಸ್ವತಃ ತನ್ನದೇ ವ್ಯವಸ್ಥೆಯ ಒಳಗಿನ ಚುನಾವಣಾ ಆಯುಕ್ತರಲ್ಲಿ ಒಬ್ಬರಾದ ಅಶೋಕ ಲಾವೊಸಾ ಅವರ ಮಾತಿಗೇ ಬೆಲೆ ಇಲ್ಲದಾಗಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮತ್ತು ಪ್ರಧಾನಿ ಮೋದಿ ವಿರುದ್ಧದ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳಲ್ಲಿ ಅವರಿಗೆ ಕ್ಲೀನ್ ಚಿಟ್ ನೀಡಿದ ಆಯೋಗದ ಕ್ರಮವನ್ನು ಲಾವೊಸಾ ಪ್ರಶ್ನಿಸಿದ್ದರು ಮತ್ತು ಆಯೋಗದ ಆಯುಕ್ತರಲ್ಲಿ ಒಬ್ಬರಾಗಿ ಆ ಕ್ರಮಕ್ಕೆ ತಮ್ಮ ಸಹಮತ ಇಲ್ಲ ಎಂಬುದನ್ನು ಹೇಳಿದ್ದರು. ಅಲ್ಲದೆ, ಕನಿಷ್ಟ ತಮ್ಮ ಸಹಮತ ಇರಲಿಲ್ಲ ಎಂಬ ಅಂಶವನ್ನು ಆ ಪ್ರಕರಣದಲ್ಲಿ ನಮೂದಿಸುವಂತೆ ಕೇಳಿಕೊಂಡಿದ್ದ ಅವರ ಕೋರಿಕೆಯನ್ನು ಕೂಡ ಆಯೋಗ ಬುಧವಾರ ತಿರಸ್ಕರಿಸಿದೆ.
ಈ ಬೆಳವಣಿಗೆ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಪಕ್ಷ, “ಮುಕ್ತ ಮತ್ತು ಪಾರದರ್ಶಕ ಕಾರ್ಯವಿಧಾನದ ಮೂಲಕ ದೇಶದ ಚುನಾವಣಾ ವ್ಯವಸ್ಥೆಯ ಮೇಲಿನ ಜನರ ನಂಬಿಕೆಯನ್ನು ಕಾಯ್ದುಕೊಳ್ಳಬೇಕಾದ ಆಯೋಗವೇ ಈಗ ತನ್ನ ಆಂತರಿಕ ಆಡಳಿತದಲ್ಲಿ ‘ಗುಪ್ತ’ ಮತ್ತು ‘ತೆರೆಮರೆಯ’ ವಿಧಾನಗಳಿಗೆ ಮೊರೆಹೋಗಿದೆ. ಆ ಮೂಲಕ ತನ್ನ ಒಳಗೇ ಪಾರದರ್ಶಕತೆ ಮತ್ತು ಮುಕ್ತತೆಗೆ ಅವಕಾಶವೇ ಇಲ್ಲ” ಎಂಬುದನ್ನು ಹೇಳಿದೆ. ಅಲ್ಲದೆ “ಆಂತರಿಕ ವ್ಯವಹಾರದಲ್ಲೇ ಪಾರದರ್ಶಕತೆ ಕಾಯ್ದುಕೊಳ್ಳದ ಆಯೋಗ, ಸಾರ್ವಜನಿಕ ಚುನಾವಣೆಯಲ್ಲಿ ಎಷ್ಟರಮಟ್ಟಿಗೆ ಪಾರದರ್ಶಕತೆ ಕಾಯ್ದುಕೊಳ್ಳಬಲ್ಲದು” ಎಂದು ಪ್ರತಿಕ್ರಿಯಿಸಿದೆ.
ಒಟ್ಟಾರೆ, ಒಂದು ಕಡೆ ಚುನಾವಣಾ ಪ್ರಕ್ರಿಯೆ ಆರಂಭವಾದ ಕ್ಷಣದಿಂದಲೂ ಒಂದಲ್ಲಾ ಒಂದು ವಿವಾದ, ಆರೋಪಗಳಿಗೆ ಈಡಾಗುತ್ತಿರುವ ಆಯೋಗದ ನಡೆಗಳು ಒಟ್ಟಾರೆ ಚುನಾವಣೆ ಮತ್ತು ಫಲಿತಾಂಶದ ಪಾರದರ್ಶಕತೆ ಮತ್ತು ಮುಕ್ತತೆಯ ಬಗ್ಗೆಯೇ ಅನುಮಾನಗಳನ್ನು ಬಿತ್ತಿದ್ದರೆ, ಮತ್ತೊಂದು ಕಡೆ ನಿತ್ಯ ವರದಿಯಾಗುತ್ತಿರುವ ಇವಿಎಂ ಅಕ್ರಮಗಳು ಇಡೀ ಪ್ರಕ್ರಿಯೆಯನ್ನೇ ನಗೆಪಾಟಲಿಗೆ ಈಡುಮಾಡಿವೆ.