ಒಡಿಶಾ ವಿಧಾನಸಬಾ ಚುನಾವಣೆಯಲ್ಲಿ ನವೀನ್ ಪಾಟ್ನಾಯಕ್ ನೇತೃತ್ವದ ಬಿಜು ಜನತಾದಳ ಭರ್ಜರಿ ಜಯ ದಾಖಲಿಸಿದೆ. 147 ಸದಸ್ಯ ಬಲದ ಒಡಿಶಾ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಬಿಜು ಜನತಾದಳ 111 ಕ್ಷೇತ್ರಗಳಲ್ಲಿ ಜಯಭೇರಿ ಭಾರಿಸಿದೆ. ನವೀನ್ ಪಟ್ನಾಯಕ್ ಸತತ ಐದನೇ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.
ಒಡಿಶಾ ಮುಖ್ಯಮಂತ್ರಿಯಾಗಿದ್ದ ಬಿಜು ಪಟ್ನಾಯಕ್ ಅವರು 2000ರಲ್ಲಿ ನಿಧನರಾದಾಗ ಕೇಂದ್ರ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿ ಮುಖ್ಯಮಂತ್ರಿ ಗದ್ದುಗೆ ಏರಿದ ನವೀನ್ ಪಟ್ನಾಯಕ್ ಒಡಿಶಾದ ಸುಧೀರ್ಘ ಅವಧಿಗೆ ಸೇವೆ ಸಲ್ಲಿಸುತ್ತಿರುವ ಮುಖ್ಯಮಂತ್ರಿಯಾಗಿದ್ದಾರೆ.
ದೇಶವ್ಯಾಪಿ ನರೇಂದ್ರ ಮೋದಿ ಅಲೆ ಇದ್ದರೂ ವಿಧಾನಸಭಾ ಚುನಾವಣೆಯಲ್ಲಿ ಮೋದಿ ಅಲೆಯ ಚಮತ್ಕಾರ ಏನೂ ನಡೆದಿಲ್ಲ. ಬಿಜೆಪಿ 23 ವಿಧಾನಸಭಾ ಕ್ಷೇತ್ರಗಳಲ್ಲಿ ಮಾತ್ರ ಜಯಗಳಿಸಿದೆ. ಕಾಂಗ್ರೆಸ್ 10 ಕ್ಷೇತ್ರಗಳಲ್ಲಿ ಗೆದ್ದಿದ್ದರೆ, ಸಿಪಿಐಎಂ ಒಂದು ಸ್ಥಾನ ಪಡೆದಿದೆ. ಜತೆಗೆ ಪಕ್ಷೇತರ ಅಭ್ಯರ್ಥಿಯೊಬ್ಬರು ಗೆದ್ದಿದ್ದಾರೆ.
ವಿಧಾನಸಭಾ ಚುನಾವಣೆಯಲ್ಲಿ ಮೋದಿ ಅಲೆಯ ಪ್ರಭಾವ ಇಲ್ಲದಿದ್ದರೂ ಲೋಕಸಭಾ ಚುನಾವಣೆಯಲ್ಲಿ ಮೋದಿ ಪ್ರಭಾವ ನಿಚ್ಚಳವಾಗಿದೆ. 2014ರ ಲೋಕಸಭಾ ಚುನಾವಣೆಯಲ್ಲಿ 21 ಲೋಕಸಭಾ ಸ್ಥಾನಗಳ ಪೈಕಿ 20 ಸ್ಥಾನಗಳನ್ನು ಗೆದ್ದು ಪಾರಮ್ಯ ಮೆರೆದಿದ್ದ ಬಿಜು ಜನತಾದಳ ಈ ಚುನಾವಣೆಯಲ್ಲಿ ಕೊಂಚ ಹಿನ್ನಡೆ ಅನುಭವಿಸಿದೆ. 21 ಕ್ಷೇತ್ರಳ ಪೈಕಿ 13 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದು ಏಳು ಸ್ಥಾನಗಳನ್ನು ಕಳೆದುಕೊಂಡಿದೆ. ಪ್ರಧಾನಿ ಮೋದಿ ಅಲೆಯ ಲಾಭ ಪಡೆದಿರುವ ಬಿಜೆಪಿ ಎಂಟು ಸ್ಥಾನಗಳನ್ನು ಗಳಿಸಿದೆ.
2014 ವಿಧಾನಸಭಾ ಚುನಾವಣೆಯಲ್ಲಿ 117 ಸ್ಥಾನಗಳಿಸಿದ್ದ ಬಿಜು ಜನತಾದಳ ಈಗ 111 ಸ್ಥಾನಗಳಿಸಿದೆ. ಅಂದರೆ, ಹಿಂದಿನ ಚುನಾವಣೆಗೆ ಹೋಲಿಸಿದರೆ 6 ಸ್ಥಾನ ಕಳೆದುಕೊಂಡಿದೆ. ಆದರೆ, ಮೂರನೇ ಎರಡರಷ್ಟು ಭರ್ಜರಿ ಬಹುಮತ ಪಡೆದಿದೆ.
ಎನ್ಡಿಎ ಮೈತ್ರಿಕೂಟದೊಂದಿಗೆ ಇದ್ದ ನವೀನ್ ಪಟ್ನಾಯಕ್ 2009ರಲ್ಲಿ ಕೂಟದಿಂದ ಹೊರಬಂದಿದ್ದರು. ಯುಪಿಎ ಮತ್ತು ಎನ್ಡಿಎಯೇತರ ಮೈತ್ರಿ ಕೂಟ ಅಧಿಕಾರ ತರುವ ನಿಟ್ಟಿನಲ್ಲಿ ಅವರ ಪ್ರಯತ್ನವೂ ಸಾಗಿತ್ತು.
ಒಂದು ವೇಳೆ ಲೋಕಸಭಾ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಬಂದಿದ್ದರೆ ನವೀನ್ ಪಟ್ನಾಯಕ್ ತೃತೀಯ ರಂಗದ ನೇತೃತ್ವ ವಹಿಸಿಕೊಳ್ಳುವ ಸಾಧ್ಯತೆ ಇತ್ತು. ಅತಂತ್ರ ಫಲಿತಾಂಶ ಬಂದರೆ ಬಿಜೆಪಿಯನ್ನು ಅಧಿಕಾರದಿಂದ ಹೊರಗಿಡಲು ಕಾಂಗ್ರೆಸ್ ಕೂಡಾ ತೃತೀಯ ರಂಗಕ್ಕೆ ಹೊರಗಿನಿಂದ ಬೆಂಬಲ ಸೂಚಿಸಲು ನಿರ್ಧರಿಸಿತ್ತು. ಅಂತಹ ಸಂದರ್ಭದಲ್ಲಿ ನವೀನ್ ಪಟ್ನಾಯಕ್ ಅವರು ತೃತೀಯ ರಂಗದ ಸಾರಥ್ಯವಹಿಸುವ ಸಾಧ್ಯತೆ ಇತ್ತು.