ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ ಮರಳಿ ಅಧಿಕಾರಕ್ಕೆ ಬರಲಿದೆ, ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಲಿದ್ದಾರೆಂಬ ‘ಎಕ್ಸಿಟ್ ಪೋಲ್’ ಫಲಿತಾಂಶದ ಹಿನ್ನೆಲೆಯಲ್ಲಿ ತೀಕ್ಷ್ಣವಾಗಿ ಜಿಗಿದಿದ್ದ ಷೇರುಪೇಟೆ ನಂತರ ಮರುದಿನವೇ ಜರ್ರೆಂದು ಇಳಿದು ಅಚ್ಚರಿ ಮೂಡಿಸಿತ್ತು. ಗುರುವಾರ ಫಲಿತಾಂಶ ಪ್ರಕಟವಾಗುತ್ತಲೇ ತೀವ್ರ ಏರಿಳಿತ ಕಂಡ ಷೇರುಪೇಟೆ ಮೋದಿ ಮರುಆಯ್ಕೆ ಆಗಿದ್ದರಿಂದ ಹಿಗ್ಗದೇ ಕುಗ್ಗಿ ಇಳಿಜಾರಿನಲ್ಲಿ ಸಾಗಿದೆ.
ಬಿಜೆಪಿ ನೇತೃತ್ವದ ಎನ್ಡಿಎ ಅಧಿಕಾರಕ್ಕೆ ಮರಳಿದರೆ ಸೆನ್ಸೆಕ್ಸ್ ಕನಿಷ್ಠ 1500 ಅಂಶಗಳಷ್ಟು ಏರಿಕೆ ದಾಖಲಿಸುವ ನಿರೀಕ್ಷೆಯನ್ನು ಪೇಟೆ ತಜ್ಞರು ಇಟ್ಟುಕೊಂಡಿದ್ದರು. ಆದರೆ, ದಿನದ ಆರಂಭದಲ್ಲಿ ಏರುಹಾದಿಯಲ್ಲಿ ಸಾಗಿದ ಷೇರುಪೇಟೆ ನಂತರ ತ್ವರಿತವಾಗಿ ಕುಸಿತ ದಾಖಲಿಸಿತು. ದಿನದ ಅಂತ್ಯಕ್ಕೆ ಸೆನ್ಸೆಕ್ಸ್ 300 ಅಂಶಗಳಷ್ಟು ಕುಸಿದರೆ, ನಿಫ್ಟಿ ಸೂಚ್ಯಂಕ 80 ಅಂಶಗಳಷ್ಟು ಕುಸಿದಿದೆ. ವಿಸ್ತೃತ ಮಾರುಕಟ್ಟೆಯ ಬಹುತೇಕ ಸೂಚ್ಯಂಕಗಳು ಇಳಿಜಾರಿನಲ್ಲಿ ಸಾಗಿ ವಹಿವಾಟು ಅಂತ್ಯಗೊಳಿಸಿವೆ.
ನರೇಂದ್ರ ಮೋದಿ ಗೆಲುವನ್ನು ಸಂಭ್ರಮಿಸಲು ಮಾರುಕಟ್ಟೆ ಸಿದ್ದವಾಗಿತ್ತು. ಬಹುತೇಕ ಕಾರ್ಪೊರೆಟ್ ಗಳು ಮೋದಿ ಆಡಳಿತಕ್ಕೆ ಬರಬೇಕೆಂದು ಬಯಸಿದ್ದರು. ಹೀಗಾಗಿ ದಿನದ ಆರಂಭದಲ್ಲಿ ಸೆನ್ಸೆಕ್ಸ್ 80 ಅಂಶಗಳಷ್ಟು ಏರಿಕೆ ಕಂಡಿತು. ಆದರೆ, ಈ ಏರಿಕೆಯು ಬಹಳಹೊತ್ತು ಸ್ಥಿರವಾಗಿ ನಿಲ್ಲಲಿಲ್ಲ. ಏರಿದಷ್ಟೇ ತ್ವರಿತ ಗತಿಯಲ್ಲಿ ಕುಸಿಯಿತು. ದಿನದ ಅಂತ್ಯಕ್ಕೆ ಏರಿದ 800 ಅಂಶಗಳು ಕುಸಿದಿದ್ದಲ್ಲದೇ ಹೆಚ್ಚುವರಿಯಾಗಿ 300 ಅಂಶ ಕುಸಿತ ದಾಖಲಿಸಿದೆ.
ಷೇರುಪೇಟೆ ಕುಸಿತವು ಏನು ಹೇಳ ಹೊರಟಿದೆ? ವಾಸ್ತವವಾಗಿ ದೇಶದಲ್ಲಿ ನಡೆದಿರುವ ಚುನಾವಣೆಗಳು ಆರ್ಥಿಕ ಅಭಿವೃದ್ಧಿ ಮತ್ತು ಸರ್ಕಾರದ ಸಾಧನೆಯನ್ನು ಪ್ರಧಾನವಾಗಿಟ್ಟುಕೊಂಡು ನಡೆದಿಲ್ಲ. ಪ್ರಧಾನಿ ನರೇಂದ್ರ ಮೋದಿ ದೇಶಪ್ರೇಮ ಮತ್ತು ರಾಷ್ಟ್ರೀಯತೆಯನ್ನು ಮುಂದಿಟ್ಟುಕೊಂಡು ಜನರಲ್ಲಿ ಭಾವನಾತ್ಮಕತೆಯನ್ನು ಬಿತ್ತಿ ಮತದ ಫಸಲನ್ನು ಪಡೆದಿದ್ದಾರೆ. ದೇಶದ ವಾಸ್ತವಿಕ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವಲ್ಲಿ ವಿಪಕ್ಷಗಳೂ ವಿಫಲವಾಗಿವೆ.
ಈ ವಾಸ್ತವಿಕ ಸತ್ಯದ ಅರಿವಿರುವ ಷೇರುಪೇಟೆ ಮೋದಿ ಭರ್ಜರಿ ಜಯಭೇರಿ ಬಾರಿಸಿದರೂ ಕುಸಿತ ದಾಖಲಿಸಿದೆ. ಇದರರ್ಥ ದೇಶದಲ್ಲಿನ ಆರ್ಥಿಕ ಪರಿಸ್ಥಿತಿ ಉತ್ತಮವಾಗಿಲ್ಲ.
ಏಕೆಂದರೆ ಕಳೆದ ಐದು ವರ್ಷಗಳಲ್ಲಿ ದೇಶದಲ್ಲಿ ನಿರುದ್ಯೋಗ, ಆರ್ಥಿಕ ಹಿಂಜರಿತ, ಕೃಷಿಕರ ಸಂಕಷ್ಟ ಹೆಚ್ಚಳವಾಗಿದೆ. ಜನರ ಖರೀದಿ ಶಕ್ತಿ ಕುಸಿದಿದೆ. ಜನರಿಗೆ ಉದ್ಯೋಗ ದೊರೆಯದ ಹೊರತು ಖರೀದಿ ಶಕ್ತಿ ಹೆಚ್ಚಾಗಲಾರದು. ಉದ್ಯೋಗ ಸೃಷ್ಟಿಯಾಗಬೇಕಾದರೆ ಆರ್ಥಿಕ ಚಟುವಟಿಕೆಗಳಿಗೆ ಚೇತರಿಕೆ ಬರಬೇಕು, ನಿರ್ಮಾಣ ವಲಯ, ಉತ್ಪಾದನಾ ವಲಯ, ಸೇವಾವಲಯದಲ್ಲಿ ಚೇತರಿಕೆ ಬರಬೇಕು. ಮೋದಿ ಸರ್ಕಾರ ಕಳೆದ ಐದು ವರ್ಷದಲ್ಲಿ ಈ ಆಕರ್ಷಕ ಘೋಷಣೆಗಳ ಪ್ರಚಾರದ ಹೊರತಾಗಿ ಏನನ್ನೂ ಮಾಡಿಲ್ಲ. ಅದು ವಾಸ್ತವಿಕ ಸಮಸ್ಯೆ. ಎಕ್ಸಿಟ್ ಪೋಲ್ ಬಂದಾಗ ಸುದ್ದಿಗೆ ಸ್ಪಂದಿಸಿದ ಷೇರುಪೇಟೆ ಫಲಿತಾಂಶ ಬರುವ ಹೊತ್ತಿಗೆ ವಾಸ್ತವಿಕತೆಯತ್ತ ಗಮನ ಹರಿಸಿದೆ. ಸದ್ಯಕ್ಕೆ ದೇಶದ ಜಿಡಿಪಿ ಶೇ.7ಕ್ಕಿಂತಲೂ ಕಡಮೆ ದಾಖಲಾಗುವ ನಿರೀಕ್ಷೆ ಇದೆ. ಈ ಹಂತದಲ್ಲಿ ಷೇರುಪೇಟೆ ಆರ್ಥಿಕ ಅಭಿವೃದ್ಧಿಯನ್ನೇ ಮಾಡದೇ ಕೇವಲ ಜನರ ಭಾವನೆ ಕೆರಳಿಸಿ ಅಧಿಕಾರಗಳಿಸುವ ತಂತ್ರಕ್ಕೆ ಮರುಳಾಗುವುದಿಲ್ಲ. ಗುರುವಾರದ ಕುಸಿತವು ಸಾಂಕೇತಿಕವಾದದ್ದು. ಮುಂಬರುವ ದಿನಗಳಲ್ಲಿ ಮತ್ತಷ್ಟು ಕುಸಿತ ದಾಖಲಾಗುವ ನಿರೀಕ್ಷೆ ಇದೆ. ಇದೇ ಮೊದಲ ಬಾರಿಗೆ ಸುಭದ್ರ ಸರ್ಕಾರ ಅಧಿಕಾರಕ್ಕೆ ಬಂದರೂ ಷೇರುಪೇಟೆ ಮಾತ್ರ ಕುಸಿತ ದಾಖಲಿಸಿದೆ.