ತೃತೀಯ ರಂಗ ರಚಿಸಿ ಪ್ರಧಾನಿ ಅಥವಾ ಉಪಪ್ರಧಾನಿಯಾಗಿ ಕೇಂದ್ರದಲ್ಲಿ ಆಡಳಿತ ನಡೆಸುವ ಕನಸು ಕಾಣುತ್ತಿದ್ದ ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗುದೇಶಂ ಪಕ್ಷ ಆಂಧ್ರಪ್ರದೇಶ ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಗಳಲ್ಲಿ ಹೀನಾಯ ಸೋಲು ಅನುಭವಿಸಿದೆ. ವೈಎಸ್ಆರ್ ಕಾಂಗ್ರೆಸ್ ಪಕ್ಷ ಅಭೂತಪೂರ್ವ ಜಯಭೇರಿ ಬಾರಿಸಿದ್ದು ಆ ಪಕ್ಷದ ಅಧ್ಯಕ್ಷ ಜಗನ್ ಮೋಹನ್ ರೆಡ್ಡಿ ಆಂಧ್ರಪ್ರದೇಶದ ನೂತನ ಮುಖ್ಯಮಂತ್ರಿಯಾಗಲಿದ್ದಾರೆ. ಲೋಕಸಭಾ ಚುನಾವಣೆಯಲ್ಲೂ ಅದ್ವಿತೀಯ ಸಾಧನೆ ಮಾಡಿರುವ ವೈಎಸ್ಆರ್ ಕಾಂಗ್ರೆಸ್ ಎಲ್ಲಾ 25 ಲೋಕಸಭಾ ಕ್ಷೇತ್ರಗಳನ್ನು ತನ್ನದಾಗಿಸಿಕೊಂಡು ಇತಿಹಾಸ ಸೃಷ್ಟಿಸಿದೆ. ರಾಷ್ಟ್ರದಲ್ಲಿ ಮೋದಿ ಅಲೆಯಿದ್ದರೂ ಆಂಧ್ರದಲ್ಲಿ ಬಿಜೆಪಿ ಒಂದೂ ಸ್ಥಾನವನ್ನೂ ಪಡೆಯಲಾಗಿಲ್ಲ.
175 ಸದಸ್ಯ ಬಲದ ಆಂಧ್ರ ಪ್ರದೇಶ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ವೈಎಸ್ಆರ್ ಕಾಂಗ್ರೆಸ್ 152 ಸ್ಥಾನಗಳಿಸಿದ್ದರೆ, ತೆಲುಗುದೇಶಂ ಪಕ್ಷ 21ಸ್ಥಾನ, ಜೆಎಸ್ಪಿ ಮತ್ತು ವೈಆರ್ಪಿಪಿ ತಲಾ ಒಂದೊಂದು ಸ್ಥಾನಗಳಿಸಿವೆ. ಕಾಂಗ್ರೆಸ್ ಮತ್ತು ಬಿಜೆಪಿ ಖಾತೆ ತೆರೆಯಲೂ ವಿಫಲವಾಗಿವೆ. 2014ರಲ್ಲಿ ನಡೆದ ಚುನಾವಣೆಯಲ್ಲಿ ತೆಲುಗುದೇಶಂ ಬಿಜೆಪಿ ಮತ್ತು ಜನಸೇನಾ ಬೆಂಬಲದೊಂದಿಗೆ ಸ್ಪರ್ಧಿಸಿ 103 ಸ್ಥಾನಗಳಿಸಿ ಅಧಿಕಾರಕ್ಕೇರಿತ್ತು. ವೈಎಸ್ಆರ್ ಕಾಂಗ್ರೆಸ್ 66 ಸ್ಥಾನಗಳೊಂದಿಗೆ ವಿಪಕ್ಷ ಸ್ಥಾನದಲ್ಲಿತ್ತು. ಬಿಜೆಪಿ 4 ಸ್ಥಾನಗಳಿಸಿತ್ತು.
ಎನ್ಡಿಎ ಅಂಗ ಪಕ್ಷವಾಗಿದ್ದ ಟಿಡಿಪಿ ಆಂಧ್ರಪ್ರದೇಶಕ್ಕೆ ಹೆಚ್ಚಿನ ಅನುದಾನ ನೀಡಲಿಲ್ಲ ಮತ್ತು ವಿಶೇಷ ರಾಜ್ಯದ ಸ್ಥಾನಮಾನ ನೀಡಲಿಲ್ಲ ಎಂಬ ಕಾರಣಕ್ಕೆ ಕೂಟದಿಂದ ಹೊರಬಂದಿತ್ತು. ಅಲ್ಲದೇ ಚಂದ್ರಬಾಬುನಾಯ್ಡು ಅವರ ಕೇಂದ್ರದಲ್ಲಿ ಅಧಿಕಾರ ನಡೆಸುವ ಮಹಾತ್ವಕಾಂಕ್ಷೆ ಕೂಡಾ ಎನ್ಡಿಎ ಕೂಟದಿಂದ ಹೊರಬರಲು ಕಾರಣವಾಗಿತ್ತು. ಮೋದಿ ಸರ್ಕಾರದ ವಿರುದ್ಧ ಸತತ ಟೀಕೆ ಮಾಡುತ್ತಿದ್ದ ಚಂದ್ರಬಾಬು ನಾಯ್ಡು ಚುನಾವಣೆ ಸಮಯದಲ್ಲಿ ತೃತೀಯ ರಂಗದ ನಾಯಕರನ್ನು ಒಗ್ಗೂಡಿಸುವ ಪ್ರಯತ್ನದಲ್ಲಿ ತಮ್ಮ ತವರು ರಾಜ್ಯದ ವಿಧಾನಸಭಾ ಚುನಾವಣೆಯನ್ನು ನಿರ್ಲಕ್ಷಿಸಿದ್ದೇ ಹೀನಾಯ ಸೋಲಿಗೆ ಕಾರಣ ಎನ್ನಲಾಗುತ್ತಿದೆ. ನೂತನ ರಾಜಧಾನಿ ಅಮರಾವತಿ ನಿರ್ಮಿಸುವ ಉತ್ಸಾಹದಲ್ಲಿ ರಾಜ್ಯದ ಇತರ ಅಭಿವೃದ್ಧಿ ಕಾರ್ಯಗಳತ್ತ ಗಮನ ಹರಿಸಿರಲಿಲ್ಲ ಎಂಬ ದೂರು ಚಂದ್ರಾಬಾಬು ನಾಯ್ಡು ಅವರ ಮೇಲಿದೆ.
ಚಂದ್ರಬಾಬುನಾಯ್ಡು ಕುಪ್ಪಂ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ. ಆಂಧ್ರಪ್ರದೇಶದಲ್ಲಿ ಸುದೀರ್ಘ ಅವಧಿಯವರೆಗೆ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಹೆಗ್ಗಳಿಕೆ ಹೊಂದಿರುವ ಚಂದ್ರಬಾಬುನಾಯ್ಡು ಅವರು ಹೈದರಾಬಾದ್ ಗೆ ತೆರಳಿ ತೆಲಂಗಾಣ ಮತ್ತು ಆಂಧ್ರಪ್ರದೇಶ ರಾಜ್ಯಪಾಲರಾದ ಇ ಎಲ್ ಎಸ್ ನರಸಿಂಹನ್ ಅವರನ್ನು ಭೇಟಿ ಮಾಡಿ ರಾಜಿನಾಮೆ ಸಲ್ಲಿಸಿದ್ದಾರೆ. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಚಂದ್ರಬಾಬು ನಾಯ್ಡು, ಜನತೆಯ ತೀರ್ಪನ್ನು ಗೌರವಿಸುತ್ತೇನೆ. ಪಕ್ಷದ ಸೋಲಿಗೆ ಕಾರಣವೇನೆಂಬುದರ ಬಗ್ಗೆ ಪರಾಮರ್ಶೆ ಮಾಡುತ್ತೇವೆ ಎಂದು ಹೇಳಿದ್ದಾರೆ. ಜತೆಗೆ ಜಗನ್ ಮೋಹನ್ ರೆಡ್ಡಿ, ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಮತ್ತು ಪ್ರಧಾನಿ ನರೇಂದ್ರಮೋದಿ ಅವರಿಗೆ ಅಭಿನಂದನೆ ತಿಳಿಸಿದ್ದಾರೆ.
ಜಗನ್ ಮೋಹನ್ ರೆಡ್ಡಿ ಮೇ 30 ರಂದು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಭರ್ಜರಿ ಗೆಲುವಿನ ನಂತರ ಮಾತನಾಡಿದ ಜಗನ್ ಮೋಹನ್ ರೆಡ್ಡಿ, ಈ ಗೆಲುವು ಜನತೆಯ ಗೆಲುವು. ಜನತೆ ನಿರೀಕ್ಷೆಯನ್ನು ಹುಸಿಗೊಳಿಸದಂತೆ ಕಾರ್ಯನಿರ್ವಹಿಸುತ್ತೇನೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷದಿಂದ ಜಗನ್ ಮೋಹನ್ ರೆಡ್ಡಿ ಅವರ ತಂದೆ ವೈಎಸ್ ರಾಜಶೇಖರ ರೆಡ್ಡಿ ಅವಿಭಜಿತ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿದ್ದರು. 2009 ಸೆಪ್ಟೆಂಬರ್ ನಲ್ಲಿ ರಾಜಶೇಖರ ರೆಡ್ಡಿ ಅವರು ತೆರಳುತ್ತಿದ್ದ ಹೆಲಿಕಾಫ್ಟರ್ ಅಪಘಾತಕ್ಕೀಡಾಗಿತ್ತು. ರಾಜಶೇಖರ ರೆಡ್ಡಿ ಮತ್ತು ಅವರೊಂದಿಗೆ ಇದ್ದ ಇತರ ನಾಲ್ವರು ಅಧಿಕಾರಿಗಳು ಮೃತಪಟ್ಟಿದ್ದರು. ಆಗ ವೈಎಸ್ ರಾಜಶೇಖರ ರೆಡ್ಡಿ ಅವರ ಉತ್ತರಾಧಿಕಾರಿಯಾಗಿ ತನ್ನನ್ನೇ ನೇಮಕ ಮಾಡುವಂತೆ ಜಗನ್ ಮೋಹನ್ ರೆಡ್ಡಿ ಪಟ್ಟುಹಿಡಿದಿದ್ದರು. ಕಾಂಗ್ರೆಸ್ ಹೈಕಮಾಂಡ್ ಜಗನ್ ಮೋಹನ್ ರೆಡ್ಡಿಯನ್ನು ಮುಖ್ಯಮಂತ್ರಿ ಮಾಡಲು ಒಪ್ಪಿರಲಿಲ್ಲ. ಪಕ್ಷದಲ್ಲಿ ಅತ್ಯಂತ ಹಿರಿಯರಾಗಿದ್ದ ಕೆ. ರೋಸಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ನೇಮಿಸಿತ್ತು. ಇದರಿಂದ ಸಿಟ್ಟಿಗೆದ್ದಿದ್ದ ಜಗನ್ ಮೋಹನ್ ರೆಡ್ಡಿ ಕಾಂಗ್ರೆಸ್ ತೊರೆದು ವೈಎಸ್ಆರ್ ಕಾಂಗ್ರೆಸ್ ಪಕ್ಷ ಕಟ್ಟಿದ್ದರು. ರಾಜಶೇಖರ ರೆಡ್ಡಿಯಂತೆಯೇ ಇಡೀ ಆಂಧ್ರಪ್ರದೇಶದಲ್ಲಿ ಪಾದಯಾತ್ರೆ ಮಾಡಿದ್ದ ಜಗನ್ ಮೋಹನ್ ರೆಡ್ಡಿ ಚಂದ್ರಬಾಬು ನಾಯ್ಡು ಆಡಳಿತವನ್ನು ಟೀಕಿಸುತ್ತಲೇ ತಮ್ಮ ಪಕ್ಷವನ್ನು ತಳಮಟ್ಟದಲ್ಲಿ ಬೇರು ಬಿಡುವಂತೆ ಮಾಡುವಲ್ಲಿ ಸಫಲರಾಗಿದ್ದರು.
ಜನಸೇನಾದ ಪಕ್ಷದ ನಾಯಕ, ಚಿತ್ರನಟ ಪವನ್ ಕಲ್ಯಾಣ್ ಗಾಜುವಾಕ ಸೇರಿದಂತೆ ಸ್ಪರ್ಧಿಸಿದ್ದ ಎರಡೂ ಕ್ಷೇತ್ರಗಳಿಂದಲೂ ಸೋತಿದ್ದಾರೆ. ಆ ಮೂಲಕ ಎನ್ ಟಿ ಆರ್ ರಂತಹ ನಟರನ್ನು ಮುಖ್ಯಮಂತ್ರಿಯಾಗಿಯೂ ಒಂದು ಕಾಲದಲ್ಲಿ ಮಾಡಿದ್ದ ಆಂಧ್ರಪ್ರದೇಶದ ಜನತೆ ಅದ್ಯಾಕೋ ಈಗ ತಾವು ರಾಜಕಾರಣದಲ್ಲಿ ಚಿತ್ರತಾರೆಯರನ್ನು ನೋಡಬಯಸುವುದಿಲ್ಲ, ಬೆಳ್ಳಿತೆರೆಗಷ್ಟೇ ಚಿತ್ರತಾರೆಯರು ಸೀಮಿತವಾಗಬೇಕು ಎಂಬುದನ್ನು ಪರೋಕ್ಷವಾಗಿ ತಿಳಿಸಿದಂತಿದೆ.
ಚುನಾವಣೆ ಫಲಿತಾಂಶವು ಆಂಧ್ರಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷ ಸಂಪೂರ್ಣವಾಗಿ ನಶಿಸಿರುವುದಕ್ಕೆ ಸಾಕ್ಷಿಯಾಗಿದೆ. ಹತ್ತು ವರ್ಷಗಳ ಹಿಂದೆ ಅಧಿಕಾರದಲ್ಲಿದ್ದ ಕಾಂಗ್ರೆಸ್ ಇಷ್ಟು ತ್ವರಿತಗತಿಯಲ್ಲಿ ತನ್ನ ಅಸ್ವಿತ್ವವನ್ನೇ ಕಳೆದುಕೊಂಡಿರುವುದು ಆ ಪಕ್ಷದ ಪಾಲಿಗೆ ದೊಡ್ಡ ಆಘಾತವೇ ಸರಿ. ಅವಿಭಜಿತ ಆಂಧ್ರಪ್ರದೇಶದ ಮೇಲೆ ಹಿಡಿತ ಸಾಧಿಸಿದ್ದ ಕಾಂಗ್ರೆಸ್ ನಂತರ ಆಂಧ್ರಪ್ರದೇಶ ಮತ್ತು ತೆಲಂಗಾಣ ಎರಡೂ ರಾಜ್ಯಗಳಲ್ಲೂ ತನ್ನ ಅಸ್ಥಿತ್ವ ಕಳೆದುಕೊಂಡಿದೆ. ಈ ಅವಧಿಯಲ್ಲಿ ಪ್ರಾದೇಶಿಕ ಪಕ್ಷಗಳು ಪ್ರಾಬಲ್ಯ ಮೆರೆದಿವೆ. ಈಗ ಉಭಯ ರಾಜ್ಯಗಳಲ್ಲೂ ಪ್ರಾದೇಶಿಕ ಪಕ್ಷಗಳದ್ದೇ ಆಡಳಿತ.