ಬೆಂಗಳೂರು: ಬಹಳ ಮಹತ್ವಾಕಾಂಕ್ಷೆಯಿಂದ ಲೋಕಸಭಾ ಚುನಾವಣಾ ಕಣಕ್ಕಿಳಿದಿದ್ದ ಬಹುಭಾಷಾ ನಟ ಪ್ರಕಾಶ್ ರಾಜ್ ಗೆ ಸೋಲಾಗಿದೆ. ತಮ್ಮ ಉಮೇದುವಾರಿಕೆ ಪ್ರಕಾಶ್ ರಾಜ್ ಬೆಂಗಳೂರು ಸೆಂಟ್ರಲ್ ಕ್ಷೇತ್ರವನ್ನು ಆರಿಸಿಕೊಂಡಿದ್ದರಲ್ಲದೇ ಕೆಲವಾರು ತಿಂಗಳು ತಮ್ಮ ನಟನೆಯನ್ನು ಬದಿಗೊತ್ತಿ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿದ್ದರು. ಬಿಜೆಪಿಯ ಪಿ ಸಿ ಮೋಹನ್ ಹಾಗೂ ಕಾಂಗ್ರೆಸ್ ನ ರಿಜ್ವಾನ್ ಅರ್ಷದ್ ಈ ಕ್ಷೇತ್ರದಿಂದ ಪ್ರಮುಖ ಸ್ಪರ್ಧಿಗಳಾಗಿದ್ದರು.
ಇಂದು ಮತ ಎಣಿಕೆಯ ಫಲಿತಾಂಶ ಅಂತಿಮ ಹಂತಕ್ಕೆ ಬರುತ್ತಿದ್ದಂತೆ ಮೊದಲ ಸ್ಥಾನದಲ್ಲಿರುವ ಬಿಜೆಪಿ ಅಭ್ಯರ್ಥಿ ಕಾಂಗ್ರೆಸ್ ಅಭ್ಯರ್ಥಿಗಿಂತ 70 ಸಾವಿರ ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ. ಪ್ರಕಾಶ್ ರಾಜ್ ಸರಿಸುಮಾರು 26 ಸಾವಿರ ಮತಗಳನ್ನು ಮಾತ್ರವೇ ಪಡೆಯಲು ಸಾಧ್ಯವಾಗಿದೆ.
2018ರ ರಾಜ್ಯ ವಿಧಾನ ಸಭಾ ಚುನಾವಣೆಯ ಸಂದರ್ಭದಿಂದಲೂ ಈ ವರೆಗೂ ರಾಜ್ಯದಲ್ಲಿ ಬಿಜೆಪಿ- ಸಂಘಪರಿವಾರದ ದ್ವೇಷ ಸಂಸ್ಕೃತಿಗೆ, ತೀರಾ ಅತಿರೇಕದ ಟ್ರೋಲಿಂಗ್ ಗೆ ಒಳಗಾಗಿರುವ ಒಬ್ಬ ವ್ಯಕ್ತಿ ಇದ್ದರೆ ಅದು ಪ್ರಕಾಶ್ ರಾಜ್. ಇಂದು ಅವರ ಸೋಲು ಖಚಿತವಾಗುತ್ತಿದ್ದಂತೆ ಮತ್ತೆ ಟ್ರೋಲಿಂಗ್ ಪಡೆ ಪ್ರಕಾಶ್ ರಾಜ್ ಅವರನ್ನು ನಿಂದಿಸುವ, ಹೀಯಾಳಿಸುವ ಕೆಲಸದಲ್ಲಿ ತೊಡಗಿದೆ.
ಆದರೆ, ಚುನಾವಣೆಯಲ್ಲಿ ತಮ್ಮ ಸೋಲನ್ನು ಒಪ್ಪಿಕೊಂಡಿರುವ ಪ್ರಕಾಶ್ ರಾಜ್ ಹೇಳಿರುವ ಮಾತು ನೋಡಿ:
“ನನ್ನ ಕಪಾಳಕ್ಕೊಂದು ಸರಿಯಾದ ಪೆಟ್ಟು ಬಿದ್ದಂತಾಗಿದೆ…. ನನ್ನ ದಾರಿಯಲ್ಲಿ ಮತ್ತಷ್ಟು ನಿಂದನೆ, ಟ್ರೋಲ್.. ಹೀಯಾಳಿಕೆ ಬರುತ್ತಿದ್ದಂತೆ.. ನಾನು ನನ್ನ ನಿಲುವುಗಳಲ್ಲಿ ಮತ್ತಷ್ಟು ಅಚಲವಾಗಿದ್ದೇನೆ. ಜಾತ್ಯತೀತ ಭಾರತಕ್ಕಾಗಿ ಹೋರಾಡುವ ನನ್ನ ಪ್ರಯತ್ನ ಎಂದಿನಂತೆ ಮುಂದುವರೆಯಲಿದೆ.. ಕಠಿಣ ಹಾದಿಯ ಪಯಣ ಈಗಷ್ಟೇ ಶುರುವಾಗಿದೆ… ನನ್ನ ಈ ಪಯಣದಲ್ಲಿ ಜೊತೆಗಿರುವ ಎಲ್ಲರಿಗೂ ಆಭಾರಿಯಾಗಿದ್ದೇನೆ..ಜೈ ಹಿಂದ್’
a SOLID SLAP on my face ..as More ABUSE..TROLL..and HUMILIATION come my way..I WILL STAND MY GROUND ..My RESOLVE to FIGHT for SECULAR INDIA will continue..A TOUGH JOURNEY AHEAD HAS JUST BEGUN ..THANK YOU EVERYONE WHO WERE WITH ME IN THIS JOURNEY. …. JAI HIND
— Prakash Raj (@prakashraaj) May 23, 2019
ಪ್ರಕಾಶ್ ರಾಜ್ ಅವರ ಈ ಮಾತಿನ ಹಿಂದೆ ನೋವಿದೆ, ಅದಕ್ಕಿಂತ ಹೆಚ್ಚಾಗಿ ತಾವು ನಂಬಿದ ತಾತ್ವಿಕತೆಯಲ್ಲಿ ಬದ್ಧತೆಯಿದೆ. ಹೀಗಾಗಿ ಅವರ ಈ ಹೇಳಿಕೆಗೆ ಟ್ವಿಟರ್ ಮತ್ತು ಫೇಸ್ಬುಕ್ ಗಳಲ್ಲಿ ಸಹೃದಯ ಮನಸುಗಳು ಬೆಂಬಲ ವ್ಯಕ್ತಪಡಿಸಿವೆ.
ಬೆಂಗಳೂರು ಸೆಂಟ್ರಲ್ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿದ್ದ ಪ್ರಕಾಶ್ ರಾಜ್ ಇಡೀ ರಾಜ್ಯದಲ್ಲಿ ಯಾವ ಅಭ್ಯರ್ಥಿಯೂ ನಡೆಸದ ವಿಶೇಷ ಪ್ರಯೋಗವೊಂದನ್ನು ನಡೆಸಿದ್ದರು. ಬೆಂಗಳೂರು ಮತ್ತು ಬೆಂಗಳೂರು ಸೆಂಟ್ರಲ್ ಕ್ಷೇತ್ರದ ಜನರ ಗಂಭೀರ ಸಮಸ್ಯೆಗಳನ್ನೇ ಪ್ರಮುಖವಾಗಿ ಚುನಾವಣೆಯ ವಿಷಯಗಳನ್ನಾಗಿಸಿದ್ದ ಪ್ರಕಾಶ್ ರಾಜ್ ಜನರ ಪ್ರಣಾಳಿಕೆಯನ್ನು ಸಿದ್ಧಪಡಿಸಿದ್ದರು. ಇತರೆ ಪ್ರಮುಖ ರಾಜಕೀಯ ಪಕ್ಷಗಳಂತೆ ಹಣ ಹಂಚದೇ ಕೇವಲ ವಿಷಯಾಧಾರಿತವಾಗಿ ಅವರು ಕ್ಷೇತ್ರದ 26 ಸಾವಿರ ಜನರ ಮತ ಗಳಿಸಲು ಯಶಸ್ವಿಯಾಗಿದ್ದಾರೆ.