ಲೋಕಸಭಾ ಚುನಾವಣೆಯ ಫಲಿತಾಂಶದಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ಭಾರೀ ಜಯಭೇರಿ ಭಾರಿಸುತ್ತಲೇ ಪ್ರತಿಪಕ್ಷಗಳ ನಾಯಕರು ಸೋಲಿನ ಕುರಿತು ಹೇಳಿಕೆ ನೀಡತೊಡಗಿದ್ದಾರೆ. ಪ್ರಧಾನಿ ಮೋದಿ ವಿರುದ್ಧ ಚುನಾವಣಾ ಕಣದಲ್ಲಿ ಭಾರೀ ಟೀಕೆಗಳ ಮೂಲಕವೇ ಬಿಜೆಪಿ ವಿರುದ್ಧದ ಪ್ರಬಲ ದನಿಯಾಗಿ ಹೊರಹೊಮ್ಮಿದ್ದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಂತೂ, “ಗೆದ್ದವರಿಗೆ ಅಭಿನಂದನೆ. ಆದರೆ, ಸೋತವರೆಲ್ಲಾ, ನಿಜವಾಗಿ ಸೋತಿಲ್ಲ” ಎಂದಿದ್ದಾರೆ.
ಅವರ ಆ ಹೇಳಿಕೆ, ಒಂದು ಕಡೆ, ಸೋಲು- ಗೆಲುವಿನ ಕುರಿತ ಸಹಜ ತತ್ವಜ್ಞಾನದಂತೆಯೂ, ಅದೇ ಹೊತ್ತಿಗೆ ರಾಷ್ಟ್ರಮಟ್ಟದಲ್ಲಿ ಈ ಚುನಾವಣೆಯ ಇವಿಎಂ ಅಕ್ರಮಗಳ ಕುರಿತ ಅವರ ಅನುಮಾನಗಳ ಅಭಿವ್ಯಕ್ತಿಯಂತೆಯೂ ಕೇಳಿಸುತ್ತಿದೆ. ವಿವಿಪ್ಯಾಟ್ ಮಾದರಿ ಮತಪತ್ರ ಎಣಿಕೆಯ ಬಳಿಕ ಏನಾಗಲಿದೆ ಮತ್ತು ಅದಕ್ಕೆ ಸೋಲು ಕಂಡವರು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದರ ಮೇಲೆ ಇವಿಎಂ ಗೊಂದಲ ಯಾವ ಆಯಾಮ ಪಡೆಯಲಿದೆ ಎಂಬುದು ನಿರ್ಧಾರವಾಗಲಿದೆ. ಆದರೆ, ಕರ್ನಾಟಕದ ಮಟ್ಟಿಗೆ ಮಮತಾ ದೀದಿಯ, ‘ಸೋತವರೆಲ್ಲಾ ನಿಜವಾಗಿ ಸೋತಿಲ್ಲ’ ಎಂಬ ಆ ಮಾತು ಬೇರೆಯದೇ ಅರ್ಥ ಕೊಡುತ್ತಿದೆ.
ಏಕೆಂದರೆ, ‘ಮತ್ತೊಮ್ಮೆ ಮೋದಿ’ ಅಲೆಯಲ್ಲಿ ಕೊಚ್ಚಿಹೋಗಿರುವ ರಾಜ್ಯ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಕೂಟದ ಘಟಾನುಘಟಿ ನಾಯಕರಲ್ಲಿ ಬಹುತೇಕರ ಪಾಲಿಗೆ, ಈ ಸೋಲು, ಅಕ್ಷರಶಃ ರಾಜಕೀಯ ಜೀವನದ ಪರಿಸಮಾಪ್ತಿಯೇ ಆಗಿ ಪರಿಣಮಿಸುವ ಸಾಧ್ಯತೆ ಹೆಚ್ಚಿದೆ. ಏಕೆಂದರೆ, ಇದೀಗ ಬಹುತೇಕ ಸೋಲು ಕಂಡಿರುವ (ಇನ್ನೂ ಅಧಿಕೃತ ಘೋಷಣೆ ಬಾಕಿ ಇದೆ) ಹಿರಿಯ ನಾಯಕರಿಗೆ ಈ ಚುನಾವಣೆಯೇ ಅಂತಿಮ ಚುನಾವಣೆಯಾಗಿದ್ದು, ಮುಂದಿನ ಚುನಾವಣೆಗೆ ಅವರಲ್ಲಿ ಹಲವರು ಕಣಕ್ಕಿಳಿಯುವುದೇ ಅನುಮಾನವಾಗಿದೆ. ಒಂದು ಕಡೆ ವಯೋಸಹಜ ವೃದ್ಧಾಪ್ಯದ ಕಾರಣಕ್ಕೆ ಅವರ ರಾಜಕೀಯ ಜೀವನದ ಕೊನೆಯ ಇನ್ನಿಂಗ್ಸ್ ಈ ಬಾರಿಯ ಚುನಾವಣೆಯಾಗಿದ್ದರೆ, ಮತ್ತೊಂದು ಕಡೆ ರಾಜಕೀಯ ಅವಕಾಶ ಮತ್ತು ಪ್ರಭಾವದ ಹಿನ್ನೆಲೆಯಲ್ಲಿಯೂ ಮುಂದಿನ ಬಾರಿಗೆ ಹಲವರಿಗೆ ವಯಸ್ಸಿದ್ದರೂ ಕಣಕ್ಕಿಳಿಯುವ ಅವಕಾಶ ಮತ್ತು ಉಮೇದು ಇರಲಾರದು. ಆ ಹಿನ್ನೆಲೆಯಲ್ಲಿ ಮಮತಾ ದೀದಿಯ ಮಾತಿಗೆ ವ್ಯತಿರಿಕ್ತವಾಗಿ, ಈ ನಾಯಕರ ಪಾಲಿಗೆ ಈ ಬಾರಿಯ ಸೋಲು, ರಾಜಕೀಯ ಬದುಕಿನ ನೈಜ ಸೋಲು, ಮತ್ತು ಮತ್ತೆ ಪುಟಿದೇಳಲಾಗದಂತಹ ಸೋಲಾಗಲಿದೆ ಎಂಬುದು ಕಟು ವಾಸ್ತವ.
ರಾಜ್ಯ ಮತ್ತು ರಾಷ್ಟ್ರ ರಾಜಕಾರಣದಲ್ಲಿ ದಶಕಗಳ ಕಾಲ ತಮ್ಮ ಚಹರೆ ಮೂಡಿಸಿದ್ದ ಮತ್ತು ಆಡಳಿತದ ವಿವಿಧ ಹೊಣೆಗಾರಿಕೆಗಳಲ್ಲಿ ತಮ್ಮ ಛಾಪು ಮೂಡಿಸಿದ್ದ ನಾಯಕರು, ಹೀಗೆ ತಮ್ಮ ರಾಜಕೀಯ ಜೀವನದ ತುದಿಗಾಲದಲ್ಲಿ ಸೋಲಿನ ಕಹಿಯೊಂದಿಗೆ ನಿರ್ಗಮಿಸಬೇಕಾಗಿ ಬಂದಿರುವುದು ವಿಪರ್ಯಾಸ ಮತ್ತು ಬಹುತೇಕ ವೇಳೆ ಅದು ರಾಜಕೀಯದ ವೈರುಧ್ಯ ಕೂಡ.
ಸದ್ಯದ ಫಲಿತಾಂಶದ ಪ್ರಕಾರ ಹಾಗೇ ಕಹಿ ನೆನಪುಗಳೊಂದಿಗೆ ರಾಜಕೀಯ ಬದುಕಿಗೆ ವಿದಾಯ ಹೇಳುವ ಸ್ಥಿತಿ ಮಾಜಿ ಪ್ರಧಾನಿ ಮತ್ತು ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ, ಕಾಂಗ್ರೆಸ್ ಹಿರಿಯ ನಾಯಕರಾದ ಕೇಂದ್ರ ಮಾಜಿ ಸಚಿವ ಮಲ್ಲಿಕಾರ್ಜುನ ಖರ್ಗೆ, ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ, ಕೇಂದ್ರ ಮಾಜಿ ಸಚಿವ ಕೆ.ಎಚ್. ಮುನಿಯಪ್ಪ ಸೇರಿದಂತೆ ಹಲವರದ್ದು.
ಅದರಲ್ಲೂ ಮುಖ್ಯವಾಗಿ ದೇವೇಗೌಡರ ಪಾಲಿಗೆ ಇದು ಆಘಾತದ ಸೋಲು. ಏಕೆಂದರೆ, ಅವರು ಈ ಬಾರಿ ಸ್ವಕ್ಷೇತ್ರ ಹಾಸನವನ್ನು ತಮ್ಮ ಮೊಮ್ಮಗ ಪ್ರಜ್ವಲ್ ರೇವಣ್ಣ ಅವರಿಗೆ ಬಿಟ್ಟುಕೊಟ್ಟು, ನಂತರ ಬೆಂಗಳೂರು ಉತ್ತರ ಮತ್ತು ತುಮಕೂರು ಕ್ಷೇತ್ರಗಳ ಪೈಕಿ ಎಲ್ಲಿ ಕಣಕ್ಕಿಳಿಯುವುದು ಎಂಬ ಬಗ್ಗೆ ಸಾಕಷ್ಟು ಅಳೆದು ತೂಗಿ ಅಂತಿಮವಾಗಿ ಕಲ್ಪತರು ನಾಡಿನಿಂದ ಕಣಕ್ಕಿಳಿದಿದ್ದರು. ತಮ್ಮ ಶಾಸಕ ಬಲ ಮತ್ತು ಜಾತಿ ಬಲದ ಹಿನ್ನೆಲೆಯಲ್ಲಿ ತುಮಕೂರು ಸುರಕ್ಷಿತ ಎಂದುಕೊಂಡಿದ್ದ ಅವರು, ಹಣಾಹಣಿ ಕಠಿಣವಾಗಿದೆ ಎಂಬುದನ್ನು ಕೂಡ ಬಲ್ಲವರಾಗಿದ್ದರು. ಆದರೆ, ಅಂತಿಮವಾಗಿ ಗೆಲುವು ತಮ್ಮದೇ ಎಂಬ ವಿಶ್ವಾಸದಲ್ಲಿ ಅವರು ಸಂದರ್ಭ ಬಂದರೆ ತೃತೀಯ ರಂಗದ ಚುಕ್ಕಾಣಿ ಹಿಡಿದು ಪ್ರಧಾನಿಗೆ ಟವಲ್ ಹಾಸುವ ಸಿದ್ಧತೆಯಲ್ಲೂ ಇದ್ದರು. ಆದರೆ, ಮೋದಿ ಅಲೆ ಮತ್ತು ಲಿಂಗಾಯತ ಮತಗಳ ಧ್ರುವೀಕರಣ ಹಾಗೂ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರ ನಡುವೆ ತಳಮಟ್ಟದಲ್ಲಿ ಮೂಡದ ಸಹಮತ ಅಂತಿಮವಾಗಿ ಅವರಿಗೆ ಇಳಿವಯಸ್ಸಿನಲ್ಲಿ ಆಘಾತಕಾರಿ ಸೋಲನ್ನು ತಂದುಕೊಟ್ಟಿವೆ. ಹಿರಿಯ ನಾಯಕನ ವಿರುದ್ಧ ಅಲ್ಲಿ ಬಿಜೆಪಿಯ ಬಸವರಾಜು ಜಯಭೇರಿ ಬಾರಿಸಿದ್ದಾರೆ.
ಪಂಚಾಯ್ತಿ ಮಟ್ಟದಿಂದ ರಾಜಕೀಯ ಜೀವನ ಆರಂಭಿಸಿರುವ ದೇವೇಗೌಡರಿಗೆ ಚುಣಾವಣಾ ಸೋಲು-ಗೆಲುವು ಎಂಬುದು ಹೊಸತಲ್ಲ. ಈ ಹಿಂದೆಯೂ ಅವರು ಲೋಕಸಭಾ ಕಣದಲ್ಲಿಯೇ ಸೋಲು ಕಂಡಿದ್ದಾರೆ. ಆದರೆ, ಈ ಬಾರಿಯ ಸೋಲು ಅವರ ಪಾಲಿಗೆ ದೊಡ್ಡದು. ಕಾರಣ; ಇಳಿ ವಯಸ್ಸು ಮತ್ತು ಮತ್ತೊಮ್ಮೆ ಕಣಕ್ಕಿಳಿದು ಮುಂದಿನ ಬಾರಿ ಈ ಸೋಲಿನ ನೋವು ನೀಗುವ ಅವಕಾಶವಿದೆ ಎಂಬ ವಿಶ್ವಾಸವಿಲ್ಲದ ಸ್ಥಿತಿ. ಹಾಗಾಗಿ ಅವರ ಪಾಲಿಗೆ ಈ ಸೋಲು, ನೈಜ ಸೋಲೇ. ದೀದಿ ಹೇಳಿದಂತೆ ಒಂದು ತಾತ್ಕಾಲಿಕ ಹಿನ್ನಡೆಯಲ್ಲ. ಪಕ್ಷದ ವರಿಷ್ಠರಾಗಿ ಇನ್ನೂ ಹಲವು ವರ್ಷಗಳ ಕಾಲ ಅವರು ರಾಜ್ಯ ರಾಜಕಾರಣದಲ್ಲಿ ಚಾಲ್ತಿಯಲ್ಲಿರಬಹುದು. ಆದರೆ, ದೆಹಲಿಯ ಸಂಸತ್ತಿಗೆ ಪ್ರವೇಶಿಸುವ ಕೊನೆಯ ರಾಜಕೀಯ ಅವಕಾಶ ಈ ಬಾರಿ ಅಂತಿಮವಾಗಿ ಅವರ ಕೈತಪ್ಪಿದೆ.
ಅದೇ ರೀತಿ, ಮಲ್ಲಿಕಾರ್ಜುನ ಖರ್ಗೆ ಅವರ ವಿಷಯದಲ್ಲಿಯೂ ಕೂಡ, ರಾಜಕೀಯ ಬದುಕಿನ ಇಳಿಸಂಜೆಯಲ್ಲಿ ಒಂದು ಆಘಾತಕಾರಿ ಸೋಲು ಅವರನ್ನು ಎದುರುಗೊಂಡಿದೆ. ಜನಪ್ರಿಯ ನಾಯಕರಾಗಿ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದರೂ, ಅಭಿವೃದ್ಧಿ ಮತ್ತು ಜನಪರ ಕೆಲಸಗಳ ವಿಷಯದಲ್ಲಿ ತಮ್ಮ ಪ್ರತಿಸ್ಪರ್ಧಿಗಿಂತ ಹಲವು ಪಟ್ಟು ಮುಂದಿದ್ದ, ಅವರು ಸುದೀರ್ಘ ಐದು ದಶಕಗಳ ರಾಜಕೀಯದಲ್ಲಿ ಇದೇ ಮೊದಲ ಬಾರಿಗೆ ಹೀನಾಯ ಸೋಲಿಗೆ ಮುಖಾಮುಖಿಯಾಗಿದ್ದಾರೆ.
45 ವರ್ಷಗಳಲ್ಲೇ ಈ ಸೋಲು ಅವರಿಗೆ ಮೊದಲನೆಯದು. 76ರ ವಯೋಮಾನದ ಅವರಿಗೆ ಈ ಸೋಲಿನೊಂದಿಗೆ ರಾಜಕೀಯ ಅವಕಾಶಗಳೇ ಮುಗಿದು ಹೋಗಿವೆ ಎನ್ನಲಾಗದು. ಆದರೆ, ಕಳೆದ ಬಾರಿ ಲೋಕಸಭೆಯ ಪ್ರಮುಖ ಪ್ರತಿಪಕ್ಷ ನಾಯಕರಾಗಿ ಅವರು ಸರ್ಕಾರ ಮತ್ತು ಪ್ರಧಾನಿ ವಿರುದ್ಧ ನೈಜ ಪ್ರತಿಪಕ್ಷವಾಗಿ ಕೆಲಸ ಮಾಡಿದ್ದರು. ಸದನದ ಒಳ-ಹೊರಗೆ ಅತ್ಯಂತ ಸಮರ್ಕಪಕವಾಗಿ ತಮ್ಮ ಹೊಣೆಗಾರಿಕೆ ನಿಭಾಯಿಸಿದ್ದರು. ಹಾಗಾಗಿ ಈ ಬಾರಿ ಕೂಡ ಅವರು ಲೋಕಸಭೆಯ ಒಳಗಿರಬೇಕಿತ್ತು. ಆದರೆ, ತಾವೇ ಬೆಳೆಸಿದ ನಾಯಕ ಬಿಜೆಪಿಯ ಉಮೇಶ್ ಜಾಧವ್ ಎದುರು ಸೋಲು ಕಂಡು, ರಾಜಕೀಯ ಹಿನ್ನಡೆ ಅನುಭವಿಸಿರುವುದು ವೈಯಕ್ತಿಕವಾಗಿ ಅವರಿಗಷ್ಟೇ ಅಲ್ಲ; ಕಾಂಗ್ರೆಸ್ ಪಕ್ಷದ ಪಾಲಿಗೂ ದೊಡ್ಡ ನಷ್ಟವೇ ಸರಿ.
ಇದೇ ಸ್ಥಿತಿ ಅವರ ಲೋಕಸಭಾ ಸಹಪಾಠಿಗಳಾಗಿದ್ದ ಎಂ ವೀರಪ್ಪ ಮೊಯ್ಲಿ ಮತ್ತು ಕೆ ಎಚ್ ಮುನಿಯಪ್ಪ ಅವರದ್ದೂ ಕೂಡ. ಚಿಕ್ಕಬಳ್ಳಾಪುರದಿಂದ ಎರಡು ಬಾರಿ ಜಯ ಗಳಿಸಿದ್ದ ಅವರು ಈ ಬಾರಿ ಮೂರನೇ ಬಾರಿಗೆ ಕಣಕ್ಕಿಳಿದಿದ್ದರು. ಆದರೆ, ಅವರು ಇದೀಗ ಬಿಜೆಪಿಯ ಬಿ ಎನ್ ಬಚ್ಚೇಗೌಡ ವಿರುದ್ಧ ಭಾರೀ ಅಂತರದ ಸೋಲು ಕಂಡಿದ್ದು, 79ರ ಇಳಿವಯಸ್ಸಿನ ಅವರ ರಾಜಕೀಯ ಜೀವನದ ಇಳಿಸಂಜೆಯಲ್ಲಿ ಈ ಸೋಲು ಆಘಾತ ತಂದಿದೆ. ಅವರ ಸ್ಪರ್ಧೆಯ ಬಗ್ಗೆ ಪಕ್ಷದಲ್ಲೇ ಆಂತರಿಕವಾಗಿ ಸಾಕಷ್ಟು ಅಪಸ್ವರ ಮತ್ತು ಬಂಡಾಯ ಕೇಳಿಬಂದಿತ್ತು. ಅಲ್ಲದೆ, ಎರಡು ಅವಧಿಯ ಅವರ ಆಡಳಿತ ವೈಫಲ್ಯ ಮತ್ತು ಕ್ಷೇತ್ರದ ಅಭಿವೃದ್ಧಿ ನಿರ್ಲಕ್ಷ್ಯದ ಹಿನ್ನೆಲೆಯಲ್ಲಿ ದೊಡ್ಡ ಮಟ್ಟದ ಆಡಳಿತ ವಿರೋಧಿ ಅಲೆ ಕೂಡ ಇತ್ತು. ಹಾಗಾಗಿ ಅವರ ಸೋಲು ಪಕ್ಷದ ಪಾಲಿಗೆ ಆಘಾತಕಾರಿಯೇನಲ್ಲ. ಆದರೆ, ವೈಯಕ್ತಿಕವಾಗಿ ಅವರ ರಾಜಕೀಯ ಬದುಕಿಗೆ ಈ ಸೋಲು ದೊಡ್ಡ ಪೆಟ್ಟು ಕೊಟ್ಟಿದೆ ಎಂಬುದು ನಿಜ. ಹಾಗಾಗಿ ಮೊಯ್ಲಿ ಅವರ ಪಾಲಿಗೂ ಈ ಸೋಲು, ನೈಜ ಸೋಲೇ. ಮತ್ತೆ ಆ ಸೋಲನ್ನು ಹಿಮ್ಮೆಟ್ಟಿಸಿ ರಾಜಕೀಯವಾಗಿ ಎದ್ದುನಿಲ್ಲಲಾಗದ ಮಟ್ಟಿಗಿನ ಸೋಲೇ!
ಕೋಲಾರದಲ್ಲಿ ಮತ್ತೊಬ್ಬ ಕಾಂಗ್ರೆಸ್ ಹಿರಿಯ ನಾಯಕ ಕೆ ಎಚ್ ಮುನಿಯಪ್ಪ ಕೂಡ ಸೋಲು ಕಂಡಿದ್ದಾರೆ. ಬಿಜೆಪಿಯ ನಾರಾಯಣಸ್ವಾಮಿ ಎಂಬ ಬೆಂಗಳೂರಿನ ಕಾರ್ಪೊರೇಟರ್ ವಿರುದ್ಧದ ಅವರ ಈ ಸೋಲು ಮುನಿಯಪ್ಪ ಅವರಿಗೂ ರಾಜಕೀಯ ಬದುಕಿನ ಇಳಿಸಂಜೆಯಲ್ಲಿ ದುಬಾರಿಯೇ. ಕೇಂದ್ರ ಹೆದ್ದಾರಿ, ರೈಲ್ವೆ ಸಚಿವರಾಗಿ ಸುದೀರ್ಘ ರಾಜಕೀಯ ಅನುಭವ ಹೊಂದಿರುವ ಮುನಿಯಪ್ಪ, ಈ ಭಾರಿ ಪ್ರಬಲ ಪ್ರತಿರೋಧದ ನಡುವೆ ಪಕ್ಷದ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಸ್ವಪಕ್ಷೀಯರ ದೊಡ್ಡ ಮಟ್ಟದ ಪ್ರತಿರೋಧ, ಬಂಡಾಯದ ಹೊರತಾಗಿಯೂ ತಮ್ಮದೇ ತಂತ್ರಗಾರಿಕೆಯ ಮೂಲಕ ಗೆಲ್ಲುವ ವಿಶ್ವಾಸದಲ್ಲಿದ್ದರು. ಆದರೆ, ಇದೀಗ ಅವರಿಗೆ ಅದೃಷ್ಟ ಕೈಕೊಟ್ಟಿದೆ. ಆಡಳಿತ ವಿರೋಧಿ ಅಲೆಯೊಂದಿಗೆ ಪಕ್ಷದ ಸ್ಥಳೀಯ ನಾಯಕರನ್ನು ವಿಶ್ವಾಸಕ್ಕೆ ಪಡೆಯದ ಅವರ ಪ್ರತಿಷ್ಠೆಗೆ ಈಗ ರಾಜಕೀಯ ಇಳಿಗಾಲದಲ್ಲಿ ಸೋಲು ಎದುರಾಗಿದೆ.
ಸತತ ಏಳು ಬಾರಿ ಕ್ಷೇತ್ರದಿಂದ ಸಂಸದರಾಗಿದ್ದ ಅವರು, ಈ ಬಾರಿ ಎಂಟನೇ ಬಾರಿಗೆ ಆಯ್ಕೆ ಬಯಸಿದ್ದರು. ಆದರೆ, ಈ ಬಾರಿಯ ಸೋಲು, ಅವರ ಪಾಲಿಗೂ ಭರಿಸಲಾರದ ಸೋಲು. ಮತ್ತೆ ಭವಿಷ್ಯದಲ್ಲಿ ಪಕ್ಷದ ಟಿಕೆಟ್ ಪಡೆದು ತಮ್ಮ ಆಯ್ಕೆಯ ಕ್ಷೇತ್ರದಿಂದ ಆರಿಸಿಬರುವ ವಿಶ್ವಾಸ ಅವರ ಪಾಲಿಗೆ ಸದ್ಯಕ್ಕಂತೂ ಕ್ಷೀಣ. ಆ ಹಿನ್ನೆಲೆಯಲ್ಲಿ ಅನುಭವಿ ಹಿರಿಯ ನಾಯಕನ ಸೋಲು ಪಕ್ಷದ ಪಾಲಿಗೂ ನಷ್ಟವೇ ಎನ್ನಲಾಗುತ್ತಿದೆ.
ಒಟ್ಟಾರೆ, ಕರ್ನಾಟಕದ ಇಬ್ಬರು ಮಾಜಿ ಮುಖ್ಯಮಂತ್ರಿಗಳು (ಆ ಪೈಕಿ ಒಬ್ಬರು ಮಾಜಿ ಪ್ರಧಾನಿ ಕೂಡ), ಇಬ್ಬರು ಮಾಜಿ ಕೇಂದ್ರ ಸಚಿವರ ಪಾಲಿಗೆ ಈ ಚುಣಾವಣೆಯ ಸೋಲು ನಿರ್ಣಾಯಕವಾಗಿದ್ದು, ಬಹುತೇಕ ಅವರ ರಾಜಕೀಯ ಬದುಕಿಗೇ ಅಂತ್ಯಹಾಡುವ ಸಾಧ್ಯತೆ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಘಟಾನುಘಟಿ ನಾಯಕರನ್ನು ಮನೆಗಟ್ಟಿದ ಈ ಬಾರಿಯ ಚುನಾವಣೆ ರಾಜ್ಯ ರಾಜಕಾರಣದ ಪಾಲಿಗೆ ಒಂದು ಮರೆಯಲಾಗದ ಅಧ್ಯಾಯ.