ಇಡೀ ದೇಶವೇ ಮತ್ತೊಮ್ಮೆ ಮೋದಿ ಅಲೆಯಲ್ಲಿ ತೇಲಾಡುತ್ತಿದೆ. ಸ್ವತಃ ಎಷ್ಟೋ ಬಿಜೆಪಿ ನಾಯಕರಿಗೇ ಇಂದಿನ ಫಲಿತಾಂಶ ಅಚ್ಚರಿಯುಂಟು ಮಾಡಿರುವುದರಲ್ಲಿ ಸಂದೇಹವಿಲ್ಲ. ಕರ್ನಾಟಕವನ್ನೂ ಒಳಗೊಂಡಂತೆ ದೇಶದ ಬಹುತೇಕ ರಾಜ್ಯಗಳಲ್ಲಿ “ಮೋದಿ ಅಲೆ” ಹುಚ್ಚು ಕುದುರೆಯಂತೆ ಓಡಿದೆ.
ಈ ಹುಚ್ಚು ಕುದುರೆಯನ್ನು ಮಿಸುಕಾಡದಂತೆ ಕಟ್ಟಿ ಹಾಕುವ ಕೆಲಸವನ್ನು ಮಾಡಿರುವ ಮೂರು ರಾಜ್ಯಗಳೆಂದರೆ ದಕ್ಷಿಣ ತುದಿಯ ಕೇರಳ, ತಮಿಳುನಾಡು ಮತ್ತು ಉತ್ತರದ ಪಂಜಾಬ್.
ಕೇರಳದ “ರಾಹುಲ್ ಅಲೆ”
ಕೇರಳದಲ್ಲಿ 20ರಲ್ಲಿ 19 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲುವ ಮೂಲಕ ಒಂದು ಕಾಲದ ಕಮ್ಯುನಿಷ್ಟ್ ಭದ್ರಕೋಟೆ ಕೇರಳವೀಗ ಕಾಂಗ್ರೆಸ್ಗೆ ಆಶ್ರಯ ಒದಗಿಸಿದೆ.
ಗುರುವಾರ ನಡೆದ ಮತೆಣಿಕೆಯಲ್ಲಿ ಹೊರಬಂದಿರುವ ಚುನಾವಣಾ ಫಲಿತಾಂಶದ ಪ್ರಕಾರ ಕಾಂಗ್ರೆಸ್ ಮತ್ತು ಮತ್ರಪಕ್ಷಗಳು 19 ಸೀಟುಗಳನ್ನು ಬಾಚಿಕೊಂಡು ಒಂದು ಸೀಟನ್ನು ಮಾತ್ರ ಸಿಪಿಎಂ ಪಕ್ಷಕ್ಕೆ ಬಿಟ್ಟುಕೊಟ್ಟಿವೆ. ಕಾಂಗ್ರೆಸ್ ಅಭ್ಯರ್ಥಿಗಳು 15 ಕ್ಷೇತ್ರಗಳಲ್ಲಿ ಜಯಗಳಿಸಿದ್ದರೆ, ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ನ 2 ಹಾಗೂ ಕೇರಳ ಕಾಂಗ್ರೆಸ್ (ಮಣಿ ಗುಂಪು) ಮತ್ತು ರೇವಲೂಶನರಿ ಸೋಶಲಿಷ್ಟ್ ಪಾರ್ಟಿ ತಲಾ ಒಂದೊಂದು ಕ್ಷೇತ್ರಗಳಲ್ಲಿ ಜಯ ದಾಖಲಿಸಿವೆ. ಎಲ್ ಡಿ ಎಫ್ ನಿಂದ ಅಲಪುಳ ಕ್ಷೇತ್ರದಿಂದ ಸ್ಪರ್ಧಿಸಿದ್ದ ಸಿಪಿಎಂ ಅಭ್ಯರ್ಥಿ ಎಂ ಎ ಆರಿಫ್ ಮಾತ್ರ ತಮ್ಮ ಸಮೀಪ ಸ್ಪರ್ಧಿ ಕಾಂಗ್ರೆಸ್ ನ ಶಾನಿಮೋಳ್ ವಿರುದ್ಧ 9000 ಮತಗಳ ಮುನ್ನಡೆ ಸಾಧಿಸಿ ಗೆದ್ದುಕೊಂಡಿದ್ದಾರೆ. ಇನ್ನು ಎಲ್ ಡಿ ಎಫ್ ನ ಸಹಭಾಗಿ ಸಿಪಿಐ ಪಕ್ಷ ತಾನು ಸ್ಪರ್ಧಿಸಿದ್ದ ಎಲ್ಲಾ ನಾಲ್ಕು ಸೀಟುಗಳಲ್ಲಿ ಪರಾಭವಗೊಂಡಿದೆ.
2014ರ ಚುನಾವಣೆಯಲ್ಲಿ ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ (ಯುನೈಟೆಡ್ ಡೆಮಕ್ರಟಿಕ್ ಫ್ರಂಟ್) 12 ಸೀಟು ಗಳಿಸಿದ್ದರೆ ಸಿಪಿಐ (ಎಂ) ನೇತೃತ್ವದ ಎಲ್ ಡಿ ಎಫ್ (ಲೆಫ್ಟ್ ಡೆಮಕ್ರಟಿಕ್ ಫ್ರಂಟ್) 8 ಸೀಟು ಪಡೆದಿತ್ತು. 2019ರಲ್ಲಿ ಇಡೀ ರಾಜ್ಯ ಕಾಂಗ್ರೆಸ್ ಕಡೆ ವಾಲಿಕೊಳ್ಳಲು ಮುಖ್ಯ ಕಾರಣ ಕೇರಳದ ವಯನಾಡಿನಲ್ಲಿ ರಾಹುಲ್ ಗಾಂಧಿಯ ಸ್ಪರ್ಧೆ ಎನ್ನಲಾಗುತ್ತಿದೆ. ರಾಹುಲ್ ಗಾಂಧಿ ಕೇರಳದ ಚುನಾವಣಾ ಇತಿಹಾಸದಲ್ಲೇ ಅಭೂತಪೂರ್ವ 4 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಕೇರಳ ಕಾಂಗ್ರೆಸ್ ಮುಖಂಡ ಮುಲ್ಲಪ್ಪಲ್ಲಿ ರಾಮಚಂದ್ರನ್ ಪ್ರಕಾರ ‘ರಾಹುಲ್ ವಯನಾಡಿನಲ್ಲಿ ಸ್ಪರ್ಧಿಸಿದ್ದು ಕೇರಳದ 20 ಲೋಕಸಭಾ ಕ್ಷೇತ್ರಗಳ ಫಲಿತಾಂಶದ ಮೇಲೂ ನೇರ ಪರಿಣಾಮ ಬೀರಿದೆ’. ಮತ್ತೊಬ್ಬ ಕಾಂಗ್ರೆಸ್ ಮುಖಂಡ ರಮೇಶ್ ಚೆನ್ನಿತಾಲ ಅವರಂತೂ, ಕೇರಳದಲ್ಲಿ ಮೋದಿ ಅಲೆಗೆ ವಿರುದ್ಧವಾಗಿ ರಾಹುಲ್ ಅಲೆ ಕೆಲಸ ಮಾಡಿದೆ ಎಂದು ವಾದಿಸುತ್ತಾರೆ.
ಆದರೆ ಕೇವಲ ರಾಹುಲ್ ಗಾಂಧಿ ಸ್ಪರ್ಧೆಯೊಂದೇ ಕಾಂಗ್ರೆಸ್ಸಿನ ಈ ಪರಿಯ ಜಯಭೇರಿ ಕಾರಣವೆನ್ನಲು ಬರುವುದಿಲ್ಲ. ರಾಹುಲ್ ಗಾಂಧಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದು, ಪ್ರಧಾನಿ ಅಭ್ಯರ್ಥಿಯೂ ಆಗಿದ್ದ ಕಾರಣ ಇದು ಒಂದು ಪ್ರಮುಖ ಅಂಶವಾಗಿತ್ತು. ಇದರೊಂದಿಗೆ ಕೇರಳ ಫಲಿತಾಂಶದ ಮೇಲೆ ಪರಿಣಾಮ ಬೀರಿರುವ ಮತ್ತೊಂದು ಅಂಶವೆಂದರೆ “ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶ”ದ ಪ್ರಕರಣ.

ಇಡೀ ಶಬರಿಮಲೆ ಪ್ರಕರಣದಲ್ಲಿ ಕೇರಳದ ಬಿಜೆಪಿ ಮತ್ತು ಸಂಘಪರಿವಾರ ಆಡಳಿತಾರೂಢ ಪಿಣರಾಯ್ ವಿಜಯನ್ ಕಮ್ಯುನಿಷ್ಟ್ ಸರ್ಕಾರವನ್ನು “ಅಪರಾಧಿ” ಸ್ಥಾನದಲ್ಲಿ ನಿಲ್ಲಿಸಲು ಸಾಕಷ್ಟು ಪ್ರಯತ್ನ ನಡೆಸಿತು. ಹಿಂದೂಗಳ ಭಾವನೆಗಳನ್ನು ಕೆರಳಿಸಿತು. ಸಂವಿಧಾನ, ಕಾನೂನು ಕೋರ್ಟಿಗಿಂತಲೂ ದೇಗುಲದ ಪುರೋಹಿತರು ಪೊರೆದುಕೊಂಡು ಬಂದಿರುವ ರೂಢಿ ಸಂಪ್ರದಾಯ ಶ್ರೇಷ್ಟವೆಂದು ಜನತೆಗೆ ಮನವರಿಕೆ ಮಾಡಿಸಲು ಪ್ರಯತ್ನಿಸಿತು. ಸಂಘಪರಿವಾರ ಇದಕ್ಕಾಗಿ ಕೇರಳದ ಪ್ರಬಲ ಸಮುದಾಯವಾದ ನಾಯರ್ ಸಮುದಾಯವನ್ನು ಸರ್ಕಾರದ ವಿರುದ್ಧ ಎತ್ತಿಕಟ್ಟಿತು. ಇದಕ್ಕೆ ಪ್ರತಿಯಾಗಿ ಪಿಣರಾಯಿ ಸರ್ಕಾರ ಕೆಲವು ಕಠಿಣ ಕ್ರಮಗಳನ್ನು ತೆಗೆದುಕೊಂಡಿತು, ನೂರಾರು ಸಂಘಪರಿವಾರದ ಕಾರ್ಯಕರ್ತರನ್ನು ಬಂಧಿಸಿತು, ಪ್ರಕರಣ ದಾಖಲಿಸಿತು.
ಇಷ್ಟೆಲ್ಲಾ ನಡೆಯುವಾಗ ಕಾಂಗ್ರೆಸ್ ತಟಸ್ಥತೆ ವಹಿಸಿತ್ತು. ಒಂದು ಕಡೆ ಬಿಜೆಪಿಯ ತಂತ್ರಕ್ಕೆ ಬಲಿಯಾಗಿದ್ದ ಜನತೆಗೆ ಕಮ್ಯುನಿಷ್ಟರು ಬೇಡವಾಗಿತ್ತು, ಮತ್ತೊಂದು ಕಡೆ ಶಬರಿಮಲೆ ದೈವನಂಬಿಕೆ ಬಳಸಿಕೊಂಡು ರಾಜಕೀಯ ಮಾಡುವುದನ್ನು ಅರ್ಥಮಾಡಿಕೊಂಡ ಕೇರಳಿಗರಿಗೆ ಸಂಘಪರಿವಾರವೂ ಬೇಡವಾಗಿತ್ತು. ಹೀಗೆ ಸದಾ “ ರಕ್ತ ಸಿಕ್ತ ಹಿಂಸೆಯಲ್ಲೇ” ಮುಳುಗಿರುವ ಸಿಪಿಎಂ ಮತ್ತು ಸಂಘಪರಿವಾರ ಎರಡನ್ನೂ ದೂರವಿಡಲು ಬಯಸಿದ್ದ ದೊಡ್ಡ ಜನಸಮೂಹಕ್ಕೆ “ಕಾಂಗ್ರೆಸ್ಸೇ” ಸರಿ ಎಂದು ತೋರಿದ ಪರಿಣಾಮವೇ ಈಗಿನ ಫಲಿತಾಂಶ.
ಅದೇನೇ ಇರಲಿ, ಇಡೀ ದೇಶದಲ್ಲೇ ಕಾಂಗ್ರೆಸ್ ಮೂಲೋತ್ಪಾಟನೆ ಮಾಡಲು ಹಾತೊರೆಯುತ್ತಿರುವ ಬಿಜೆಪಿಗೆ ಕೇರಳವೀಗ ಸುಧಾರಿಸಿಕೊಂಡು, ಶಕ್ತಿ ಸಂಚಯಿಸಿಕೊಂಡು ಮುಂದಿನ ಅಡಿ ಇಡಲು ಕೇರಳ ತಂಗುದಾಣವವನ್ನು ಒದಗಿರುವುದಂತು ಸತ್ಯ. ಆದರೆ ಈ ಇಡೀ ಪ್ರಕ್ರಿಯೆಯ ನೇರ ಬಾಧಿತರು ಕೇರಳದಲ್ಲಿ ಉತ್ತಮ ಶಿಕ್ಷಣ, ಆರೋಗ್ಯ, ಭೂಸುಧಾರಣೆಗಳ ಅತ್ಯುತ್ತಮ ಬುನಾದಿ ಹಾಕಿದ್ದ ಕಮ್ಯುನಿಷ್ಟರು ತಮ್ಮ ಅಸ್ತಿತ್ವವನ್ನೇ ಕಳೆದುಕೊಳ್ಳಬೇಕಾಗಿ ಬಂದಿರುವುದು ದುರಂತ.
ತಮಿಳುನಾಡಿನ “ದ್ರಾವಿಡ ಅಲೆ”ಯಲ್ಲಿ ‘ಮೋದಿ ಅಲೆ’ ಪಡ್ಚ!
ಮೋದಿ ಭೇಟಿ ನೀಡಿದಾಗಲೆಲ್ಲಾ ಭಾರೀ ಪ್ರತಿಭಟನೆ ಮಾಡಿ ಕಳಿಸುವಲ್ಲಿ “ಪೋನೆ ಮೋದಿ” ಖ್ಯಾತಿಯ ಕೇರಳ ಒಂದು ಕಡೆಯಾದರೆ “ಗೋ ಬ್ಯಾಕ್ ಮೋದಿ” ಖ್ಯಾತಿಯ ತಮಿಳು ನಾಡು ಮತ್ತೊಂದು ಕಡೆ. ಕಳೆದ ಹಲವಾರು ವರ್ಷಗಳಿಂದ ಬಿಜೆಪಿ-ಸಂಘಪರಿವಾರಗಳು ತಮಿಳು ನಾಡಿನಲ್ಲಿ ತಮ್ಮ ಖಾತೆ ತೆರೆಯಲು ಮಾಡಿದ ಯಾವುದೇ ಪ್ರಯತ್ನಗಳು ಯಶಸ್ವಿಯಾಗಿಲ್ಲ. ಇದಕ್ಕೆ ಮುಖ್ಯ ಕಾರಣವೇ ತಮಿಳುನಾಡಿನ ಜನರಲ್ಲಿರುವ ಗಟ್ಟಿಯಾದ ದ್ರಾವಿಡ ಪ್ರಜ್ಞೆ. ಇದರ ಮೂಲಕ ಬಿಜೆಪಿಯಿರಲಿ, ಮೋದಿಯಿರಲಿ, ಆರೆಸ್ಸೆಸ್ ಇರಲಿ ಇವೆಲ್ಲವೂ ದಕ್ಷಿಣ ಭಾರತದ ದ್ರಾವಿಡ ಸಮುದಾಯಗಳನ್ನು ಗುಲಾಮರಾಗಿಸುವ ವೈದಿಕ ಸಂಘಟನೆಗಳು ಎಂದು ತಮಿಳಿಗರ ಎಚ್ಚೆತ್ತ ದ್ರಾವಿಡ ಪ್ರಜ್ಞೆ ಸದಾ ಎಚ್ಚರಿಸುವುದರಿಂದಲೇ ಬಿಜೆಪಿಯ ಪ್ರಯತ್ನಗಳು ಮಣ್ಣುಪಾಲಾಗಿವೆ.
2014ರಲ್ಲಿ ಬಲವಾದ ಆಡಳಿತ ವಿರೋಧಿ ಅಲೆಯಲ್ಲಿ ಶೂನ್ಯ ಫಲಿತಾಂಶ ಪಡೆದುಕೊಂಡಿದ್ದ ಡಿಎಂಕೆ ಮತ್ತು ಮಿತ್ರಪಕ್ಷಗಳು ಸ್ಪರ್ಧಿಸಿದ್ದ 38 ಕ್ಷೇತ್ರಗಳಲ್ಲಿ 37 ಕ್ಷೇತ್ರಗಳಲ್ಲಿ ಜಯ ಸಾಧಿಸಿದೆ. ಶೇಕಡಾ 50 ವೋಟ್ ಶೇರ್ ಡಿಎಂಕೆ ಪಡೆದುಕೊಂಡಿದೆ.
ವೆಲ್ಲೂರಿನ ಒಂದು ಕ್ಷೇತ್ರದಲ್ಲಿ ಭಾರೀ ಹಣದ ಅವ್ಯವಹಾರ ಪತ್ತೆಯಾದ ಕಾರಣ ಚುನಾವಣಾ ಆಯೋಗ ಚುನಾವಣೆಯನ್ನು ರದ್ದುಪಡಿಸಿತ್ತು.
ಡಿಎಂಕೆಯಿಂದ ಸ್ಪರ್ಧಿಸಿದ್ದ ಬಹುತೇಕ ನಾಯಕಮಣಿಗಳು ಗಣನೀಯ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಕೆ ಕಣಿಮೋಳಿ, ದಯಾನಿದಿ ಮಾರನ್, ಕಾರ್ತಿ ಚಿದಂಬರಂ, ಎ ರಾಜಾ ಇವರೆಲ್ಲರ ಮೇಲೆ ಭ್ರಷ್ಟಾಚಾರದ ಆರೋಪಗಳಿದ್ದಾಗ್ಯೂ ತಮಿಳು ಜನತೆ ಆ ಬಗ್ಗೆ ತಲೆಕೆಡಿಸಿಕೊಳ್ಳದೇ ತಮ್ಮ ಜನಪ್ರತಿನಿಧಿಗಳಾಗಿ ಆರಿಸಿಕೊಂಡಿದ್ದಾರೆ.
ಎನ್ ಡಿ ಎ ಮಿತ್ರಪಕ್ಷ ಎಐಡಿಎಂಕೆ ಬೆಂಬಲದ ಮೂಲಕ ಬಿಜೆಪಿ ತಮಿಳುನಾಡಿನಲ್ಲಿ ಒಂದಷ್ಟು ಚಟುವಟಿಕೆ ನಡೆಸಲು ಯತ್ನಿಸಿದೆ. 2014ರ ಚುನಾವಣೆಯಲ್ಲಿ ಎಐಡಿಎಂಕೆ ಭಾರೀ ವಿಜಯಗಳಿಸಿತ್ತು. ಆಗ ಕನ್ಯಾಕುಮಾರಿ ಕ್ಷೇತ್ರದಿಂದ ಬಿಜೆಪಿಯ ಪೋನ್ ರಾಧಾಕೃಷ್ಣನ್ ಗೆಲುವು ಸಾಧಿಸುವ ಮೂಲಕ ಬಿಜೆಪಿ ತಮಿಳುನಾಡಿನಲ್ಲಿ ಖಾತೆ ತೆರೆದಿತ್ತು.
ಆದರೆ, 2019 ಬಿಜೆಪಿಯ ಪಾಲಿಗೆ ದುಸ್ವಪ್ನವಾಗಿದೆ. ಈಸಲ ತನ್ನ ಪಾಲಿನ 5 ಕ್ಷೇತ್ರಗಳಲ್ಲಿ ಒಂದರಲ್ಲೂ ಜಯ ಗಳಿಸಲಾಗದೇ ಬಿಜೆಪಿ ಶೂನ್ಯಸಂಪಾದನೆ ಮಾಡಿದೆ. ದೇಶದಾದ್ಯಂತ ಮೋದಿ ಅಲೆ ಇದ್ದರೂ ತಮಿಳು ನಾಡಿನ ಜನತೆ ಅದಕ್ಕೆ ಕವಡೆ ಕಾಸಿನ ಬೆಲೆಯನ್ನೂ ಕೊಡದೇ ಮೋದಿ ಆಡಳಿತಕ್ಕೆ ಸ್ಪಷ್ಟ ವಿರೋಧ ವ್ಯಕ್ತಪಡಿಸಿದ್ದಾರೆ. ಬಿಜೆಪಿಯನ್ನು ಹತ್ತಿರ ಬಿಟ್ಟುಕೊಳ್ಳುವುದಿಲ್ಲ ಎಂಬ ಸಂದೇಶ ನೀಡಿದ್ದಾರೆ.
ಕಳೆದ ಚುನಾವಣೆಯಲ್ಲಿ ಎಐಎಡಿಎಂಕೆ ಮುಖ್ಯಸ್ಥೆ ಕುಮಾರಿ ಜಯಲಲಿತ ನೇತೃತ್ವದಲ್ಲಿ ಚುನಾವಣೆ ನಡೆಸಿದ ಪಕ್ಷ ಡಿಎಂಕೆ ಕರುಣಾನಿಧಿಗೆ ಭಾರೀ ಮುಖಭಂಗ ಮಾಡಿತ್ತು. ಈ ಬಾರಿಯ ಚುನಾವಣೆ ಡಿಎಂಕೆ ಮತ್ತು ಎಐಎಡಿಎಂಕೆ ಎರಡೂ ಪಕ್ಷಗಳು ತಂತಮ್ಮ ಸುಪ್ರೀಂ ನಾಯಕರುಗಳನ್ನು ಕಳೆದುಕೊಂಡ ನಂತರ ಎದುರಿಸುತ್ತಿರುವ ಮೊದಲ ಚುನಾವಣೆಯಾಗಿದ್ದು ಎಐಎಡಿಎಂಕೆ ಪರ್ಯಾಯ ನಾಯಕತ್ವವನ್ನು ಸ್ಥಾಪಿಸಿಲು ವಿಫಲವಾಗಿದೆ. ಮತ್ತೊಂದು ಕಡೆ ಡಿಎಂಕೆ ನಾಯಕ ಎಂ ಕೆ ಸ್ಟಾಲಿನ್ ಹೊಸ ತಲೆಮಾರಿನ ತಮಿಳರ ವರ್ಚಸ್ವೀ ನಾಯಕರಾಗಿ ಲೋಕಸಭಾ ಚುನಾವಣೆಯಲ್ಲಿ ಹೊರಹೊಮ್ಮಿದ್ದಾರೆ.
ಇನ್ನು ಖ್ಯಾತ ಸಿನಿಮಾ ನಟ ಕಮಲ್ ಹಾಸನ್ ಅವರ ಎನ್ ಎಂ ಎಂ ಮತ್ತು ಟಿಟಿವಿ ದಿನಕರನ್ ಅವರ ಎಐಎಂಎಂಕೆ ಪಕ್ಷಗಳು ಸಧ್ಯದ ಲೋಕಸಭಾ ಚುನಾವಣೆಯಲ್ಲಿ ಯಾವುದೇ ಖಾತೆ ತೆರೆಯಲು ವಿಫಲಗೊಂಡರೂ ಕಮಲ್ ಹಾಸನ್ ಪಕ್ಷ ಎರಡು ಮೂರು ಕಡೆಗಳಲ್ಲೆ ಶೇಕಡಾ 8 ರಿಂದ ಶೇಕಡಾ 12ರ ವರೆಗೂ ವೋಟ್ ಶೇರ್ ಪಡೆದಿರುವುದು ಮುಂದಿನ ರಾಜ್ಯ ವಿಧಾನಸಭಾ ಚುನಾವಣೆ ದೃಷ್ಟಿಯಿಂದ ಅದಕ್ಕೆ ಸಕಾರಾತ್ಮಕವಾಗಿದೆ ಎನ್ನಲಾಗಿದೆ.
ಈ ನಡುವೆ ಡಿಎಂಕೆ ವರಿಷ್ಠ ಸ್ಟಾಲಿನ್ಗೆ ಅಷ್ಟೊಂದು ಖುಷಿಯಾಗಿಲ್ಲ. ಏಕೆಂದರೆ ತಮಿಳುನಾಡಿನಲ್ಲಿ ನಡೆದ 22 ಅಸೆಂಬ್ಲಿ ಕ್ಷೇತ್ರಗಳ ಉಪಚುನಾವಣೆಗಳಲ್ಲಿ 9 ಸೀಟು ಗಳಿಸುವ ಮೂಲಕ ಸರಳ ಬಹುಮತ ನಿಕ್ಕಿ ಮಾಡಿಕೊಂಡಿರುವ ಎಐಎಡಿಎಂಕೆ 2021ರವರೆಗೂ ಅಬಾಧಿತವಾಗಿ ಮುಂದುವರೆಯುವುದು ನಿಶ್ಚಿತವಾಗಿದೆ.
ಲೋಕಸಭಾ ಚುನಾವಣೆಯ ಫಲಿತಾಂಶದ ಬಗ್ಗೆ ಸಂತೃಪ್ತಿ ವ್ಯಕ್ತಪಡಿಸಿರುವ ಸ್ಟಾಲಿನ್ ತಮ್ಮ ಪಕ್ಷದ ವಿಜಯವನ್ನು ದೇಶದ ಪ್ರಬಲ ದ್ರಾವಿಡ ಪಕ್ಷದ ಸ್ಥಾಪಕ ಕರುಣಾನಿಧಿಯವರಿಗೆ ಅರ್ಪಿಸಿದ್ದಾರೆ.