ಸೂರತ್: ಗುಜರಾತ್ ನ ಸೂರತ್ ನಲ್ಲಿರುವ ತರಬೇತಿ ಕೇಂದ್ರವೊಂದರಲ್ಲಿ ಬೆಂಕಿ ಅವಘಡ ಸಂಭವಿಸಿದ್ದು ಕನಿಷ್ಠ 21ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ.
ಬಹುಅಂತಸ್ತಿನ ವಾಣಿಜ್ಯ ಕಟ್ಟಡ “ತಕ್ಷಶಿಲಾ”ದ ಮೇಲಿನ ಅಂತಸ್ತಿನಲ್ಲಿ ಹೊತ್ತಿಕೊಂಡ ಬೆಂಕಿ ನಂತರ ಇಡೀ ಕಟ್ಟಡ ವ್ಯಾಪಿಸಿದೆ.
ಮೂರು ಹಾಗೂ ನಾಲ್ಕನೇ ಕಟ್ಟಡದಲ್ಲಿದ್ದ ತರಬೇತಿ ಕೇಂದ್ರಕ್ಕೂ ವ್ಯಾಪಿಸಿದ ಬೆಂಕಿ 21 ಯುವಕರನ್ನು ಬಲಿ ಪಡೆದಿದೆ.
ಬೆಂಕಿಯಿಂದ ತಪ್ಪಿಸಿಕೊಳ್ಳಲು ಹಲವು ವಿದ್ಯಾರ್ಥಿಗಳು ಕಟ್ಟಡದ ನಾಲ್ಕನೇ ಮಹಡಿಯಿಂದ ಜಿಗಿಯುತ್ತಿರುವ ದೃಶ್ಯವನ್ನು ಪ್ರತ್ಯಕ್ಷದರ್ಶಿಯೊಬ್ಬರು ವಿಡಿಯೋ ಮಾಡಿದ್ದಾರೆ.
ಬೆಂಕಿ ನಂದಿಸಲು 19 ಅಗ್ನಿ ಶಾಮಕ ವಾಹನ ಹಾಗೂ 2 ಹೈಡ್ರಾಲಿಕ್ಸ್ ಗಳನ್ನು ಘಟನಾ ಸ್ಥಳಕ್ಕೆ ರವಾನಿಸಲಾಗಿದೆ ಎಂದು ಅಗ್ನಿಶಾಮಕ ಅಧಿಕಾರಿಗಳು ತಿಳಿಸಿದ್ದಾರೆ.
ಬಹುತೇಕ ಯುವಕರು 14ರಿಂದ 17 ವರ್ಷ ವಯಸ್ಸಿನವರು ಎಂದು ಹೇಳಲಾಗಿದೆ. ಘಟನೆಗೆ ನಿಖರವಾದ ಕಾರಣ ಇನ್ನೂ ತಿಳಿದಿಲ್ಲ ಎಂದು ಅಗ್ನಿಶಾಮಕ ಅಧಿಕಾರಿಗಳು ತಿಳಿಸಿದ್ದಾರೆ.
ಘಟನಾ ಸ್ಥಳದ ಸುತ್ತ ಪ್ರದೇಶದಲ್ಲಿ ಬೆಂಕಿಯ ಜ್ವಾಲೆ ಆವರಿಸಿದ್ದು, ಸ್ಥಳೀಯ ನಿವಾಸಿಗಳು ರಕ್ಷಣಾ ಕಾರ್ಯದಲ್ಲಿ ನೆರವು ನೀಡುತ್ತಿದ್ದಾರೆ ಎನ್ನಲಾಗಿದೆ.
“ಜೀವ ಉಳಿಸಿಕೊಳ್ಳಲು ಹಲವು ಯುವಕರು 3 ಹಾಗೂ 4ನೇ ಹಂತದಿಂದ ಜಿಗಿಯುತ್ತಿದ್ದಾರೆ. ಹಲವರನ್ನು ರಕ್ಷಿಸಿ ಆಸ್ಪತ್ರೆಗೆ ರವಾನಿಸಲಾಗಿದೆ.
ಬೆಂಕಿ ನಂದಿಸುವ ಕಾರ್ಯ ನಡೆಸಲಾಗುತ್ತಿದೆ,” ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಘಟನೆ ಬಗ್ಗೆ ಸಂತಾಪ ಸೂಚಿಸಿದ್ದಾರೆ.
ಅವಘಡದ ಬಗ್ಗೆ ತನಿಖೆ ನಡೆಸಲು ಆದೇಶಿಸಲಾಗಿದೆ. ಮೃತಪಟ್ಟವರ ಕುಟುಂಬಗಳಿಗೆ 4 ಲಕ್ಷ ರುಪಾಯಿ ಪರಿಹಾರ ನೀಡುವುದಾಗಿ ಗುಜರಾತ್ ಮುಖ್ಯಮಂತ್ರಿ ವಿಜಯ್ ರುಪಾಣಿ ಭರವಸೆ ನೀಡಿದ್ದಾರೆ