ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹಾಗೂ ತಮ್ಮ ತಾತ ಎಚ್ ಡಿ ದೇವೇಗೌಡರನ್ನು ಸಂಸತ್ತಿಗೆ ಕಳಿಸಲು ತಮ್ಮ ಸ್ಥಾನ ಬಿಟ್ಟುಕೊಡಲು ಸಜ್ಜಾಗಿದ್ದಾರೆ ಹಾಸನ ಕ್ಷೇತ್ರದಿಂದ ನೆನ್ನೆಯಷ್ಟೇ ಚುನಾಯಿತರಾಗಿರುವ ಪ್ರಜ್ವಲ್ ರೇವಣ್ಣ!
ತುಮಕೂರು ಕ್ಷೇತ್ರದಿಂದ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮಾಜಿ ಪ್ರಧಾನಿ ದೇವೇಗೌಡರು ಬಿಜೆಪಿ ಅಭ್ಯರ್ಥಿ ವಿರುದ್ಧ ಪರಾವಭಗೊಂಡ ಹಿನ್ನೆಲೆಯಲ್ಲಿ ಹಾಸನದಿಂದ ಚುನಾಯಿತರಾಗಿರುವ ಪ್ರಜ್ವಲ್ ರೇವಣ್ಣ ಈ ನಿರ್ಧಾರ ಕೈಗೊಂಡಿದ್ದಾರೆ. ಸಂಸದರಾಗಿ ತಮ್ಮ ಮೊದಲ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಪ್ರಜ್ವಲ್ ರೇವಣ್ಣ ವಿಷಯ ತಿಳಿಸಿದರು.
“ನಾನು ರಾತ್ರಿಯೆಲ್ಲಾ ಆಲೋಚಿಸಿ ಈ ತೀರ್ಮಾನಕ್ಕೆ ಬಂದದ್ದೇನೆ. ಹಾಸನ ಜಿಲ್ಲೆಯ ಜನ ತಪ್ಪು ತಿಳಿಯಬಾರದು, ನಾನು ನನ್ನ ಸಂಸದನ ಸ್ಥಾನಕ್ಕೆ ರಾಜೀನಾಮೆ ಕೊಡುವ ತೀರ್ಮಾನಕ್ಕೆ ಬಂದಿದ್ದೇನೆ, ಮತ್ತೆ ದೇವೇಗೌಡರಿಗೆ ಶಕ್ತಿ ತುಂಬುವುದು ನನ್ನ ಉದ್ದೇಶ. ಮದ್ಯಾಹ್ನ ಗೌಡರನ್ನು ಭೇಟಿ ಮಾಡಿ ಅವರ ಮನ ಒಲಿಸುವೆ” ಎಂದರು.
“ರೈತರ ಸಮಸ್ಯೆ ಬಗ್ಗೆ ಧ್ವನಿ ಎತ್ತಲು ದೇವೇಗೌಡರು ಬೇಕು. ಹಾಗಾಗಿ ಅವರನ್ನು ಇಲ್ಲಿಗೆ ಕರೆತಂದು ಮತ್ತೆ ಸಂಸತ್ ಗೆ ಕಳುಹಿಸಲಾಗುವುದು” ಎಂದು ಹೇಳಿದ ಪ್ರಜ್ವಲ್ ರೇವಣ್ಣ ಇದು ಕುಟುಂಬದ ಯಾರೊಂದಿಗೂ ಮಾತನಾಡಿ ತೆಗೆದುಕೊಂಡ ನಿರ್ಧಾರ ಅಲ್ಲ, ಈ ಬಗ್ಗೆ ಇನ್ನೂ ಯಾರೊಂದಿಗೂ ಚರ್ಚಿಸಿಲ್ಲ ಎಂದರು.
ಈ ಸಂಬಂಧ ಮುಖ್ಯಮಂತ್ರಿಗಳೊಂದಿಗೂ ಮಾತನಾಡುತ್ತೇನೆ ಎಂದೂ ಅವರು ಹೇಳಿದರು.
ತಾತನ ಸಲಹೆ ತಗೊಂಡು ಪ್ರಜ್ವಲ್ ಮಾತಾಡೋದು ಕಲೀಲಿ…. ಈ ತರಹ ಹೇಳಿಕೆ ಬೇಡ ಅನಿಸ್ತದೆ…. ಇದು ನೋಡುಗರಿಗೆ ಆಟದಂತೆ ಅಂತ ಆಡಿಕೊಳ್ಳಬಹುದು…