ಬೆಂಗಳೂರು- ಬೆಂಗಳೂರು- ಲೋಕಸಭಾ ಚುನಾವಣೆಯ ಫಲಿತಾಂಶದಿಂದ ರಾಜ್ಯದಲ್ಲಿರುವ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರಕ್ಕೆ ಯಾವುದೇ ಪ್ರಭಾವ ಬೀರುವುದಿಲ್ಲ. ನಮ್ಮ ಸರ್ಕಾರಕ್ಕೆ ಅಭದ್ರತೆ ಇಲ್ಲ, ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದಲ್ಲಿ ಸರ್ಕಾರ ನಾಲ್ಕು ವರ್ಷಗಳನ್ನು ಪೂರ್ಣಗೊಳಿಸಲಿದೆ ಎಂದು ಉಪಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ.
ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರೊಂದಿಗೆ ಗೃಹಕಚೇರಿ ಕೃಷ್ಣಾದಲ್ಲಿ ನಡೆದ ಅನೌಪಚಾರಿಕ ಸಭೆಯಲ್ಲಿ ಭಾಗವಹಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನತೆ ನೀಡಿರುವ ತೀರ್ಮಾನ ಕೇಂದ್ರ ಸರ್ಕಾರಕ್ಕೆ ಹೊರತು ರಾಜ್ಯ ಸರ್ಕಾರಕ್ಕಲ್ಲ. ರಾಜ್ಯಕ್ಕೆ ಕಳೆದ ವರ್ಷವೇ ಜನಾದೇಶ ನೀಡಿದ್ದಾರೆ. ಅದರಂತೆ ಸಮ್ಮಿಶ್ರ ಸರ್ಕಾರ ನಡೆಸಿಕೊಂಡು ಹೋಗುತ್ತೇವೆ ಎಂದು ತಿಳಿಸಿದ್ದಾರೆ.
ಎಲ್ಲಾ ಸಚಿವರು ಕುಮಾರಸ್ವಾಮಿ ಅವರಿಗೆ ಬೆಂಬಲ ಸೂಚಿಸಿದ್ದಾರೆ. ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ಅವರೇ ಮುಂದುವರೆಯುತ್ತಾರೆ. ಜನತೆಗೆ ನೀಡಿರುವ ವಿಶ್ವಾಸದಂತೆ ಸರ್ಕಾರ ಮೈತ್ರಿ ಸರ್ಕಾರ ಮುಂದುವರೆಯುತ್ತದೆ ಎಂದು ತಿಳಿಸಿದ್ದಾರೆ.
ವಿಪಕ್ಷವು ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದೆ. ವಿಪಕ್ಷದ ಯತ್ನ ವಿಫಲವಾಗಲಿದೆ. ಎಲ್ಲಾ ಶಾಸಕರು ನಮ್ಮ ಜೊತೆಯಲ್ಲೇ ಇದ್ದಾರೆ, ಸರ್ಕಾರಕ್ಕೆ ಯಾವುದೇ ಅಭದ್ರತೆ ಇಲ್ಲ ಎಂದೂ ಭರವಸೆ ನೀಡಿದ್ದಾರೆ.
ಪುತ್ರ ನಿಖಿಲ್ ಕುಮಾರಸ್ವಾಮಿ ಹಾಗೂ ತಂದೆ ಹೆಚ್. ಡಿ ದೇವೇಗೌಡ ಅವರ ಸೋಲಿನಿಂದ ಕುಮಾರಸ್ವಾಮಿ ಅವರು ಸಾಕಷ್ಟು ನೊಂದಿರುವ ಹಿನ್ನೆಲೆಯಲ್ಲಿ, “ಸಿದ್ದರಾಮಯ್ಯ ಅವರೂ ಸೇರಿದಂತೆ ಎಲ್ಲರೂ ಸ್ಥೈರ್ಯ ತುಂಬಿದ್ದೇವೆ,’’ ಎಂದು ಇದೇ ವೇಳೆ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಸಹ ಇದ್ದರು.