ಹದಿನೇಳನೇ ಲೋಕಸಭೆಗೆ ನಡೆದ ಚುನಾವಣೆಯ ಫಲಿತಾಂಶ ಹೊರಬಿದ್ದು, ಭಾರತೀಯ ಜನತಾ ಪಕ್ಷ ನೇತೃತ್ವದ ಎನ್ ಡಿಎ ಮೈತ್ರಿಕೂಟ ಭಾರೀ ಜನಾದೇಶ ಪಡೆದ ಬಳಿಕ ಶನಿವಾರ ಸಂಜೆ ನಡೆದ ಮೈತ್ರಿಕೂಟದ ನೂತನ ಸಂಸದರ ಸಭೆ ಹಲವು ಕುತೂಹಲಕಾರಿ ಸಂಗತಿಗಳಿಗೆ ಸಾಕ್ಷಿಯಾಯಿತು.
ಮೈತ್ರಿಕೂಟದ ನಾಯಕನಾಗಿ ಪ್ರಧಾನಿ ನರೇಂದ್ರ ಮೋದಿಯವರ ಹೆಸರು ಘೋಷಿಸಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಚುನಾವಣಾ ಗೆಲುವು, ಒಕ್ಕೂಟದ ಬಲ ಮತ್ತು ಹಿಂದಿನ ಸರ್ಕಾರದ ಸಾಧನೆಗಳ ಬಗ್ಗೆ ಮತದಾರ ತೋರಿರುವ ವಿಶ್ವಾಸದ ಕುರಿತು ಮಾತನಾಡಿದರು. ಆದರೆ, ಪ್ರಧಾನಿ ಮೋದಿಯವರು, ಒಕ್ಕೂಟದ ವತಿಯಿಂದ ಪ್ರಧಾನಿ ಅಭ್ಯರ್ಥಿಯಾಗಿ ತಮ್ಮನ್ನು ಆಯ್ಕೆ ಮಾಡಿದ ನೂತನ ಸಂಸದರಿಗೆ ಅಭಿನಂದನೆ ಮತ್ತು ಧನ್ಯವಾದ ಸಲ್ಲಿಸುವ ಮುನ್ನ ದೇಶದ ಸಂವಿಧಾನದ ಪ್ರತಿಗೆ ನಮಿಸಿ ಗಮನ ಸೆಳೆದರು.
ವಿಶೇಷವಾಗಿ ಅಲಂಕರಿಸಿ ವೇದಿಕೆಯ ಒಂದು ಬದಿಯಲ್ಲಿ ಇರಿಸಿದ್ದ ಸಂವಿಧಾನದ ಪ್ರತಿಗೆ ಮೋದಿ ಶಿರಬಾಗಿ ಕೈಜೋಡಿಸಿ ನಮಿಸುವ ಮೂಲಕ ಆ ತಮ್ಮ ಕ್ರಿಯೆ ಒಂದು ಮಹಾಘಟನೆಯಂತೆ ಮಾಧ್ಯಮಗಳಲ್ಲಿ ಬಿಂಬಿತವಾಗಲು ಬೇಕಾದ ಎಲ್ಲಾ ಸರಕನ್ನು ಒದಗಿಸಿಕೊಟ್ಟರು. ಅಲ್ಲದೆ, ನಂತರ ತಮ್ಮ ಮಾತಿನಲ್ಲಿ ಹಲವು ಬಾರಿ ಸಂವಿಧಾನವನ್ನು ಪ್ರಸ್ತಾಪಿಸಿದ ಅವರು, ತಮಗೆ ಸಂವಿಧಾನವೇ ಅಡಿಪಾಯ, ಅದರ ಮಾರ್ಗದರ್ಶನದಂತೆಯೇ ದೇಶದ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಗುರಿಯನ್ನು ಸಾಧಿಸೋಣ ಎಂದು ಸಂಸದರಿಗೆ ಕರೆ ನೀಡಿದರು. ಹಾಗೇ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹೆಸರನ್ನು ಪ್ರಸ್ತಾಪಿಸುವುದನ್ನು ಕೂಡ ಅವರು ಮರೆಯಲ್ಲಿಲ್ಲ. ಹಲವು ಬಾರಿ ಅಂಬೇಡ್ಕರರ ಹೆಸರು ಹೇಳಿದ ಮೋದಿ, ತಮಗೆ ಸದಾ ಮಾರ್ಗದರ್ಶಕರಾಗಿ ಬಾಬಾ ಸಾಹೇಬರು ಇರುತ್ತಾರೆ ಎಂದರು.
ಆದರೆ, ಹಾಗೇ ಅವರು ಸಂವಿಧಾನಕ್ಕೆ ನಮಿಸುವಾಗ ಮತ್ತು ಸಂವಿಧಾನ ಶಿಲ್ಪಿಯನ್ನು ನೆನೆಯುವಾಗ, ಅವರ ಕಣ್ಣೆದುರು ನೆರೆದಿದ್ದ ಸಂಸದರ ಸಾಲಿನಲ್ಲಿ ಸಂವಿಧಾನಕ್ಕೆ ಬೆಂಕಿ ಹಚ್ಚಿ ಎಂದವರೂ, ಸಂವಿಧಾನವನ್ನು ಬದಲಾಯಿಸಲೇ ನಾವು ಅಧಿಕಾರಕ್ಕೆ ಬಂದದ್ದು ಎಂದವರು ಹಾಗೂ ಸ್ವತಃ ಅಂಬೇಡ್ಕರರ ವಿರುದ್ಧವೇ ಅಸಹನೆಯ ಮಾತುಗಳನ್ನು ಆಡಿದವರೂ ಇದ್ದರು ಎಂಬುದು ವಿಪರ್ಯಾಸ!
ಅದರಲ್ಲೂ ಪ್ರಮುಖವಾಗಿ ಸಂವಿಧಾನದ ವಿರುದ್ಧದ ಹೇಳಿಕೆಗಳ ಮೂಲಕವೇ ಸಾಕಷ್ಟು ಸುದ್ದಿಯಾಗಿದ್ದ ಕರ್ನಾಟಕದ ಸಂಸದರಾದ ಅನಂತಕುಮಾರ ಹೆಗಡೆ, ತೇಜಸ್ವಿ ಸೂರ್ಯ ಸೇರಿದಂತೆ ಹಲವು ಬಿಜಪಿ ಸಂಸದರು ಸಭೆಯಲ್ಲಿ ಹಾಜರಿದ್ದರು. ಆದರೆ, ತಮ್ಮ ಸಂವಿಧಾನ ವಿರೋಧಿ ಮತ್ತು ಅಂಬೇಡ್ಕರ್ ವಿರೋಧಿ ಆ ಸಂಸದರ ಎದುರಿನಲ್ಲಿಯೇ ಬಿಜೆಪಿ ಮತ್ತು ಮೋದಿಯವರು ಸಂವಿಧಾನದ ಪ್ರತಿಗೆ ನಮಿಸುವ ಮತ್ತು ಅದೇ ತಮ್ಮ ಮುಂದಿನ ಐದು ವರ್ಷಗಳ ಆಡಳಿತಕ್ಕೆ ಮಾರ್ಗದರ್ಶಕ ಎನ್ನುವ ಮೂಲಕ ತಮ್ಮ ನೂತನ ನಾಯಕರಿಗೆ ಯಾವ ಸಂದೇಶ ನೀಡುತ್ತಿದ್ದಾರೆ? ನಿಜವಾಗಿಯೂ ಮುಂದಿನ ದಿನಗಳಲ್ಲಿ ಈ ಆಶಯ, ಅವರ ನಡೆಯಲ್ಲಿ ಕಾಣಲಿದೆಯೇ? ಎಂಬ ಪ್ರಶ್ನೆಗಳನ್ನಂತೂ ಈ ಬೆಳವಣಿಗೆಗಳು ಹುಟ್ಟಿಸಿವೆ.
ಹಾಗೆಯೇ, ಮೋದಿಯವರ ತಮ್ಮ ಇಂದಿನ ಮಾತಿನಲ್ಲಿ ಬಿಜೆಪಿ ಸಂಸ್ಥಾಪಕ ದೀನ್ ದಯಾಳ್ ಉಪಾಧ್ಯಾಯ ಅವರ ಹೆಸರಿನೊಂದಿಗೆ ಮಹಾತ್ಮಾ ಗಾಂಧಿ ಹಾಗೂ ರಾಮ ಮನೋಹರ ಲೋಹಿಯಾ ಅವರ ಹೆಸರುಗಳನ್ನೂ ಪ್ರಸ್ತಾಪಿಸಿ, “ಆ ಮೂವರು ಮಹಾನ್ ನಾಯಕರು ಹಾಕಿಕೊಟ್ಟ ಆದರ್ಶದ ದಾರಿಯಲ್ಲಿ ನಾವು ಸಾಗಬೇಕು. ನಮ್ಮ ನೀತಿ-ನಿಲುವುಗಳು, ನಡೆ-ನುಡಿಗಳು ಸಮಾಜದ ಕಟ್ಟಕಡೆಯ ವ್ಯಕ್ತಿಯ ಬದುಕಿನ ಮೇಲೆ ಯಾವ ಪರಿಣಾಮ ಬೀರುತ್ತವೆ ಎಂಬುದನ್ನು ತಿಳಿದು ವರ್ತಿಸು ಎಂಬ ಗಾಂಧಿ ಮಾತನ್ನು ಮರೆಯಬಾರದು” ಎಂದು ಕಿವಿಮಾತು ಹೇಳಿದರು.
ಹಾಗೆ ಹೇಳುವ ಮೂಲಕ ಮೋದಿಯವರು, ದೀನ್ ದಯಾಳ್ ಕುರಿತು ತೋರಿದ ಗೌರವ ಸಹಜವೇ. ಆದರೆ, ಗಾಂಧಿ ಮತ್ತು ಲೋಹಿಯಾ ಕುರಿತ ಅವರ ಮಾತುಗಳು ಎಷ್ಟರಮಟ್ಟಿಗೆ ಅವರ ‘ಮನ್ ಕೀ ಬಾತ್’ ಎಂಬುದಕ್ಕೆ ಆ ಸಭೆಯಲ್ಲಿಯೇ ಸಜೀವ ನಿದರ್ಶನವಿತ್ತು! ಅದು ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್ ಎಂಬ ಗೋಡ್ಸೆ ಆರಾಧಕಿ ಸಂಸದೆ. ಹೌದು, ಗಾಂಧಿಯ ಹತ್ಯೆ ಮಾಡಿದ ಉಗ್ರ ಹಿಂದುತ್ವವಾದಿ “ನಾಥೂರಾಂ ಗೋಡ್ಸೆ ಒಬ್ಬ ದೇಶಭಕ್ತ ಆಗಿದ್ದ, ಈಗಲೂ ಆತ ದೇಶಭಕ್ತನೇ ಮತ್ತು ಮುಂದೆಯೂ ಆತ ದೇಶಭಕ್ತನಾಗಿಯೇ ಇರುತ್ತಾನೆ” ಎನ್ನುವ ಹೇಳಿಕೆ ನೀಡುವ ಮೂಲಕವೇ ಮಧ್ಯಪ್ರದೇಶದ ಭೋಪಾಲ್ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ತನ್ನ ಪ್ರಚಾರಕ್ಕೆ ತೀವ್ರತೆ ತಂದುಕೊಟ್ಟಿದ್ದ ಮತ್ತು ಆ ಅಲೆಯಲ್ಲಿಯೇ ಭಾರೀ ಜಯಭೇರಿ ಬಾರಿಸಿದ ಪ್ರಗ್ಯಾ ಸಿಂಗ್ ಎದುರಿನಲ್ಲೇ ಮೋದಿಯವರು ಗಾಂಧಿಯ ಆದರ್ಶ ಪಾಲನೆಯ ಮಾತನಾಡಿದ್ದಾರೆ!
ಅದೇ ಸಭೆಯಲ್ಲಿ ಗಾಂಧಿ ಹತ್ಯೆಯನ್ನು ಮತ್ತು ನಾಥೂರಾಂನ ಭಯೋತ್ಪಾದಕ ಕೃತ್ಯವನ್ನು ಸಮರ್ಥಿಸಿದ ಕರ್ನಾಟಕದ ಸಂಸದರಾದ ಅನಂತಕುಮಾರ ಹೆಗಡೆ ಹಾಗೂ ನಳೀನ್ ಕುಮಾರ್ ಕಟೀಲು ಕೂಡ ಇದ್ದರು ಎಂಬುದು ವಿಪರ್ಯಾಸ. ಯಾರ ವ್ಯಕ್ತಿತ್ವ ಮತ್ತು ತತ್ವದ ವಿರುದ್ಧದ ಕಡುದ್ವೇಷ ಮತ್ತು ಸಹನೆಯ ಮೂಲಕವೇ ಚುನಾವಣೆಗಳನ್ನು ಗೆಲ್ಲುತ್ತಿರುವ ಸಂಸದರನ್ನು ಎದುರು ಕೂರಿಸಿಕೊಂಡು ಮೋದಿ ಈ ಅದೇ ಗಾಂಧಿಯನ್ನು ಹೊಗಳಿದ್ದಾರೆ!
ಎರಡನೇ ಬಾರಿಗೆ ಪ್ರಧಾನಿಯಾಗಿ ಆಯ್ಕೆಯಾದ ಬಳಿಕ ಸಂಸತ್ತಿನಲ್ಲಿ ನಡೆದ ಮಿತ್ರಕೂಟದ ಸಂಸದರ ಸಭೆಯಲ್ಲಿನ ಇಂತಹ ವಿರೋಧಾಭಾಸಗಳ ಸರಣಿ ಇಲ್ಲೇ ನಿಲ್ಲುವುದಿಲ್ಲ.
ಅಲ್ಪಸಂಖ್ಯಾತರ ಕುರಿತೂ ಮೋದಿ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದರು. ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎಂಬ ತಮ್ಮ ಐದು ವರ್ಷಗಳ ಹಳೆಯ ಮಂತ್ರವನ್ನು ಈ ಸಭೆಯಲ್ಲಿಯೂ ಪುನರುಚ್ಛರಿಸಿದ ಅವರು, ಬಿಜೆಪಿ ಮತ್ತು ಎನ್ ಡಿಎಯ ಬಲವರ್ಧನೆಯನ್ನು ಇನ್ನಷ್ಟು ಹಿಗ್ಗಿಸಬೇಕು. ಆ ನಿಟ್ಟಿನಲ್ಲಿ ಭಾರತದ ಎಲ್ಲ ಜನ-ಜನಾಂಗಗಳನ್ನೂ ಯಾವ ತಾರತಮ್ಯವಿಲ್ಲದೆ ನಮ್ಮೊಂದಿಗೆ ಕರೆದೊಯ್ಯಬೇಕು ಎಂದು ಹೇಳುತ್ತಾ, ಮುಖ್ಯವಾಗಿ “ಅಲ್ಪಸಂಖ್ಯಾತರ ವಿಶ್ವಾಸವನ್ನೂ ನಾವು ಗಳಿಸಬೇಕು” ಎಂದು ಕರೆ ನೀಡಿದರು.
ಹಾಗೆ ಮೋದಿಯವರ ದೇಶದ ಮುಸ್ಲಿಮರು, ಕ್ರೈಸ್ತರನ್ನು ಉದ್ದೇಶಿಸಿ ಆಡಿದ ಮಾತುಗಳು ಸಂಸತ್ತಿನ ಸೆಂಟ್ರಲ್ ಹಾಲಿನಲ್ಲಿ ಮಾತ್ರ ಪ್ರತಿಧ್ವನಿಸಲಿಲ್ಲ, ಬದಲಾಗಿ ಅಲ್ಲಿ ಮುಸ್ಲಿಂ ಮತ್ತು ಕ್ರೈಸ್ತರ ವಿರುದ್ಧದ ಹೇಳಿಕೆ, ಅಸಹನೆಯ ಮಾತು ಮತ್ತು ದ್ವೇಷಕಾರುವ ಮೂಲಕವೇ ಚುನಾವಣಾ ಕಣವನ್ನು ಮತೀಯ ನೆಲೆಯಲ್ಲಿ ಧ್ರುವೀಕರಣ ಮಾಡಿ ಗೆದ್ದುಬಂದಿದ್ದ ನೂರಾರು ಸಂಸದರು ಇದ್ದರು. ಅದರಲ್ಲೂ ಪ್ರಮುಖವಾಗಿ ಕರ್ನಾಟಕದ ಸಂಸದ ಮತ್ತು ಸಚಿವ ಅನಂತಕುಮಾರ ಹೆಗಡೆ, ನೂತನ ಸಂಸದ ತೇಜಸ್ವಿ ಸೂರ್ಯ, ಮೇನಕಾ ಗಾಂಧಿ, ಗಿರಿರಾಜ್ ಸಿಂಗ್ ಸೇರಿದಂತೆ ಹಲವು ಕಟ್ಟಾ ಮುಸ್ಲಿಂ ವಿರೋಧಿ ಖ್ಯಾತರೂ ಇದ್ದರು ಎಂಬುದು ಮತ್ತೊಂದು ವಿಪರ್ಯಾಸ!
ಒಟ್ಟಾರೆ, ಮೋದಿಯವರ ಇಡೀ ಭಾಷಣದಲ್ಲಿ ಸಂಸದರು ಹೇಗೆ ಇರಬೇಕು, ಯಾವೆಲ್ಲಾ ಮುನ್ನೆಚ್ಚರಿಕೆ ವಹಿಸಬೇಕು ಮತ್ತು ಒಮ್ಮೆ ಗೆದ್ದುಬಂದ ಬಳಿಕ ಮತ ಹಾಕಿದವರು ಮತ್ತು ಹಾಕದೇ ಇರುವವರನ್ನೂ, ಟೀಕಿಸುವವರು ಮತ್ತು ಹೊಗಳುವವರನ್ನು ಸಮಾನವಾಗಿ ಕಾಣಬೇಕು ಎಂಬ ಅಂಶಗಳನ್ನೂ ಪ್ರಸ್ತಾಪಿಸಿದರು. ಅದೇ ಹೊತ್ತಿಗೆ, ಗಾಂಧಿ, ಅಂಬೇಡ್ಕರ್, ಲೋಹಿಯಾ, ಮುಸ್ಲಿಮರು ಮತ್ತು ಸಂವಿಧಾನದ ವಿಷಯದಲ್ಲಿ ವಾಸ್ತವವಾಗಿ ಬಿಜೆಪಿ ಪಕ್ಷದ ನಿಲುವು ಮತ್ತು ಅದರ ಸಂಸದರ ನಡೆ-ನುಡಿಗಳಿಗೆ ವ್ಯತಿರಿಕ್ತವಾದ ಮತ್ತು ಚುನಾವಣಾ ಕಣದಲ್ಲಿ ಯಾವ ಅಂಶಗಳ ವಿರುದ್ಧ ದ್ವೇಷದ ಮಾತುಗಳ ಮೂಲಕವೇ ಚುನಾವಣೆ ಗೆದ್ದು ಬಂದಿದ್ದಾರೋ ಅದೇ ಸಂಗತಿಗಳ ಪರ ಸಂಸದರಿಗೆ ಪಾಠ ಮಾಡಿದ್ದು ಇಡೀ ಅವರ ಮಾತುಗಳನ್ನೇ ವಿಚಿತ್ರ ನಗೆಪಾಟಲಿಗೆ ಈಡುಮಾಡುವಂತಿತ್ತು.
ಮುಂದಿನ ದಿನಗಳಲ್ಲಿ ಅವರದ್ದೇ ಆಡಳಿತವಾದರೂ, ಅದು ಇಂತಹ ವಿಪರ್ಯಾಸ ಮತ್ತು ನಗೆಪಾಟಲಿನಿಂದ ಹೊರತಾಗಿರಲಿದೆಯೇ ಎಂಬುದನ್ನು ಕಾದುನೋಡಬೇಕಿದೆ!