ಕೋಲ್ಕತ: ಇತ್ತೀಚೆಗೆ ಪ್ರಕಟಗೊಂಡಿರುವ ಲೋಕಸಭಾ ಚುನಾವಣಾ ಫಲಿತಾಂಶಗಳನ್ನು ತಾವು ಒಪ್ಪಲಾಗುವುದಿಲ್ಲ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಹಾಗೂ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದರು. ಚುನಾವಣಾ ಫಲಿತಾಂಶದ ಬಳಿಕ ಮೊದಲ ಸುದ್ದಿ ಗೋಷ್ಠಿ ನಡೆಸಿದ ಮಮತಾ ಬ್ಯಾನರ್ಜಿ ತಾವು ಚುನಾವಣಾ ಫಲಿತಾಂಶಗಳ ಕುರಿತು ತೀವ್ರ ಸಂಶಯ ಹೊಂದಿರುವುದಾಗಿ ಹೇಳಿದ್ದಾರೆ.
“ಇದೆಂತಹ ಚುನಾವಣೆ? ಈ ಚುನಾವಣೆಯಲ್ಲಿ ಚುನಾವಣಾ ಆಯೋಗವು ಅತ್ಯಂತ ಪಕ್ಷಪಾತಿ ನೀತಿ ಅನುಸರಿಸಿದೆ. ಅತ್ಯಂತ ಹಿಂಸಾತ್ಮಕವಾಗಿ, ಕೋಮು ದ್ವೇಷದ ಆಧಾರದಲ್ಲಿ ಈ ಚುನಾವಣೆ ನಡೆದಿದೆ” ಎಂದು ದೂರಿದರು.
“ಎಲ್ಲಾ ಕಡೆ ಒಂದೊಂದು ಲಕ್ಷ ಲೀಡಿಂಗ್ ನಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಗೆಲ್ಲುವುದು ಹೇಗೆ ಸಾಧ್ಯ? ದೆಹಲಿ, ಗುಜರಾತ್ ಗಳಲ್ಲಿ ಆ ಮಟ್ಟಿಗೆ ಬಿಜೆಪಿ ಗೆಲುವುದು ಸಾಧಿಸುವುದು, ಅಸೆಂಬ್ಲಿ ಚುನಾವಣೆಯಲ್ಲಿ ಕಳಪೆ ಪ್ರದರ್ಶನ ತೋರಿದ ರಾಜಾಸ್ಥಾನ, ಚತ್ತೀಸ್ಗಡ, ಮಧ್ಯಪ್ರದೇಶಗಳಲ್ಲಿ ಸಹ ಬಿಜೆಪಿ ಭಾರೀ ಸಂಖ್ಯೆಯಲ್ಲಿ ಸ್ಥಾನ ಗಳಿಸಿರುವುದು ಒಪ್ಪಲು ಸಾಧ್ಯವಿಲ್ಲ ” ಎಂದು ಮಮತಾ ಬ್ಯಾನರ್ಜಿ ಹೇಳಿದರು.
“ಕಾಂಗ್ರೆಸ್ ನಂತೆ ನಾನು ಶರಣಾಗತಿ ಘೋಷಿಸುವುದಿಲ್ಲ. ಬಿಜೆಪಿಯ ಗೆಲುವನ್ನು ನಾನು ಒಪ್ಪಿಕೊಳ್ಳುವುದಿಲ್ಲ” ಎಂದು ಅವರು ಹೇಳಿದರು.
“ಈ ಚುನಾವಣೆಯಲ್ಲಿ ಬಿಜೆಪಿ ಹಣದ ಹೊಳೆಯನ್ನೇ ಹರಿಸಿದೆ. ಪ್ರತಿ ಕುಟುಂಬಕ್ಕೆ 5000 ರೂಪಾಯಿ ಹಂಚಿದೆ. ಹಿಂದೂ-ಮುಸ್ಲಿಂ ಎಂದು ಮತದಾರರನ್ನು ವಿಭಜಿಸಿ ಚುನಾವಣೆ ನಡೆಸಿದೆ. ನಾನು ಒಬ್ಬ ಹಿಂದೂ. ಆದರೆ ಮುಸ್ಲಿಮರನ್ನು ಅಂಚಿಗೆ ತಳ್ಳುವುದನ್ನು ನಾನು ಒಪ್ಪುವುದಿಲ್ಲ” ಎಂದು ಮಮತಾ ಬ್ಯಾನರ್ಜಿ ಹೇಳಿದರು.
ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ಸಾಧನೆಗೆ ಕಮ್ಯುನಿಸ್ಟ್ ಪಕ್ಷವೂ ಕಾರಣವಾಗಿದೆ ಎಂದು ಅವರು ದೂರಿದರು. “ಸಿಪಿಎಂ ಇಲ್ಲಿ ಬಿಜೆಪಿಯನ್ನು ಬೆಂಬಲಿಸಿದೆ. ಈ ವಿಷಯದಲ್ಲಿ ಅದು ಲೋಪ ಎಸಗಿದೆ” ಎಂದು ಮಮತಾ ಆರೋಪಿಸಿದರು.
ಚುನಾವಣೆಯಲ್ಲಿ ಟಿಎಂಸಿ ಪಕ್ಷದ ಹಿನ್ನಡೆಗೆ ನೈತಿಕ ಹೊಣೆ ಹೊತ್ತು ತಾವು ಮುಖ್ಯಮಂತ್ರಿಯಾಗಿ ಮುಂದುವರೆಯುವುದಿಲ್ಲ ಎಂದು ಪಕ್ಷಕ್ಕೆ ತಿಳಿಸಿದ್ದಾಗಿ ಅವರು ತಿಳಿಸಿದರು. ಆದರೆ ಇದನ್ನು ಪಕ್ಷ ಒಪ್ಪಲಿಲ್ಲ ಎಂದೂ ಮಮತಾ ತಿಳಿಸಿದರು.