ನವ ದೆಹಲಿ: ರಾಷ್ಟ್ರೀಯ ಪ್ರಜಾತಾಂತ್ರಿಕ ಮೈತ್ರಿ (ಎನ್ ಡಿ ಎ )ಯ ನೂತನ ನಾಯಕರನ್ನಾಗಿ ಬಿಜೆಪಿ ಮತ್ತು ಎನ್ ಡಿ ಎ ಮಿತ್ರಪಕ್ಷಗಳ ಮುಖಂಡರು ನರೇಂದ್ರ ಮೋದಿಯವರನ್ನು ಸರ್ವಾನುಮತದಿಂದ ಆಯ್ಕೆ ಮಾಡಿದರು. ಹೊಸ ಸರ್ಕಾರ ರಚಿಸುವ ಪ್ರಕ್ರಿಯೆಯ ಭಾಗವಾಗಿ ಇಂದು ದೆಹಲಿಯ ಸಂಸತ್ತಿನ ಸೆಂಟ್ರಲ್ ಹಾಲ್ ನಲ್ಲಿ ನಡೆದ ಸಭೆಯಲ್ಲಿ ಬಿಜೆಪಿ ಮಾರ್ಗದರ್ಶಕ ಮಂಡಲದ ಎಲ್ ಕೆ ಅಡ್ವಾಣಿ, ಮುರಳಿ ಮನೋಹರ್ ಜೋಶಿ, ಎನ್ ಡಿ ಎ ಮುಖಂಡ ಪ್ರಕಾಶ್ ಸಿಂಗ್ ಬಾದಲ್, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್, ಶಿವಸೇನಾ ಮುಖಂಡ ಉದ್ಧವ್ ಠಾಕ್ರೆ, ಎಲ್ ಜೆ ಪಿ ಮುಖ್ಯಸ್ಥ ರಾಮ್ ವಿಲಾಸ್ ಪಾಸ್ವಾನ್ ಮುಂತಾದವರ ಉಪಸ್ಥಿತಿಯಲ್ಲಿ ಮಾಜಿ ಪ್ರಧಾನಿ ನರೇಂದ್ರ ಮೋದಿಯನ್ನು ಎನ್ ಡಿ ಎ ಮುಖ್ಯಸ್ಥ ಎಂದು ಆಯ್ಕೆ ಮಾಡಲಾಯಿತು. ಅಮಿತ್ ಶಾ ಅವರು ಮೋದಿಯವರ ಹೆಸರನ್ನು ಪ್ರಸ್ತಾಪಿಸಿದ ನಂತರದಲ್ಲಿ ಪ್ರಮುಖ ಎನ್ಡಿಎ ಮುಖಂಡರು ವೇದಿಕೆಯಲ್ಲಿ ಅನುಮೋದನೆ ನೀಡಿ ಮೋದಿಯನ್ನು ಅಭಿನಂದಿಸಿದರು.
ನಂತರದಲ್ಲಿ ಸಭೆಯನ್ನು ಉದ್ದೇಶಿಸಿ ನರೇಂದ್ರ ಮೋದಿ ಸುದೀರ್ಘ ಭಾಷಣ ಮಾಡಿದರು.
“2019ರ ಚುನಾವಣೆಗಳು ಜನರನ್ನು ಒಂದುಗೂಡಿಸಿವೆ” ಎಂದು ಹೇಳಿದ ಮೋದಿ “ಎನ್ ಡಿ ಎ ಯ ಮತ್ತೊಂದು ಹೆಸರೇ ಎನರ್ಜಿ-ಸಿನರ್ಜಿ, ಮುಂದಿನ ದಿನಗಳಲ್ಲಿ ಮುಖಂಡರು ಮಾಧ್ಯಮಗಳ ಕ್ಯಾಮೆರಾಗಳೆದುರು ಹೇಳಿಕೆ ನೀಡುವಾಗ ಎಚ್ಚರಿಕೆಯಿಂದ ಇರಬೇಕು” ಎಂದು ಎಚ್ಚರಿಸಿದರು. ಮೋದಿ ವಿಐಪಿ ಸಂಸ್ಕತಿಯನ್ನು ಕೊನೆಗಳಿಸಲು ತಿಳಿಸಿದರು.
“ಭಾರತದ ಚುನಾವಣಾ ಫಲಿತಾಂಶಗಳನ್ನು ನೋಡಿ ಇಡೀ ವಿಶ್ವವೇ ಅಚ್ಚರಿಗೊಂಡಿದೆ, ಪ್ರಪಂಚದೆಲ್ಲೆಡೆ ನಮ್ಮ ವಿಜಯವನ್ನು ಆಚರಿಸಿದ್ದಾರೆ… ಇದು ಜನರ ವಿಜಯವಾಗಿದೆ” ಎಂದ ಮೋದಿ “ಇದುವರೆಗೆ ಸಬ್ ಕಾ ಸಾಥ್ ಸಬ್ ಕಾ ವಿಶ್ವಾಸ್ ಎಂದು ಹೇಳಿದ್ದೆವು… ಇನ್ನು ಮುಂದೆ ಸಬ್ ಕಾ ವಿಶ್ವಾಸ್ ನಮ್ಮ ಘೋಷಣೆಯಾಗಲಿದೆ” ಎಂದರು.
“ಅಲ್ಪಸಂಖ್ಯಾತರಿಗೆ ಇದುವರೆಗೆ ವಂಚಿಸಲಾಗಿದೆ, ಅವರಿಗೆ ಶಿಕ್ಷಣವನ್ನು ನೀಡಲಿಲ್ಲ. ದೇಶದ ಬಡವರನ್ನು ಹೇಗೆ ರಾಜಕಾರಣಕ್ಕೆ ಬಳಸಿಕೊಂಡೇ ಬರಲಾಗಿದೆಯೋ ಹಾಗೇ ಅಲ್ಪಸಂಖ್ಯಾತರನ್ನು ಬಳಸಿಕೊಳ್ಳಲಾಗಿದೆ. ಇದನ್ನು ನಾವು ನಿಲ್ಲಿಸಬೇಕಿದೆ” ಎಂದು ಮೋದಿ ಹೇಳಿದರು.
ಇಂದು ರಾತ್ರಿ 8 ಗಂಟೆಗೆ ಎನ್ ಡಿ ಎ ಮುಖಂಡರು ರಾಷ್ಟ್ರಪತಿಗಳಾದ ರಮಾನಾಥ ಕೋವಿಂದ್ ಅವರನ್ನು ಭೇಟಿ ಮಾಡಿ ಸರ್ಕಾರ ರಚಿಸುವ ಹಕ್ಕು ಮಂಡಿಸಲಿದ್ದಾರೆ.