ಜೆಮ್ಶೆಡ್ಪುರ/ಜಾರ್ಖಂಡ್: ಎರಡು ವರ್ಷದ ಹಿಂದೆ ತನ್ನ ಸಮುದಾಯದ ಆಹಾರದ ಹಕ್ಕಿನ (ದನದ ಮಾಂಸ ತಿನ್ನುವ ಹಕ್ಕಿನ) ಕುರಿತು ಫೇಸ್ಬುಕ್ ನಲ್ಲಿ ಬರೆದಿದ್ದ ಬರೆಹವೊಂದಕ್ಕೆ ಸಂಬಂಧಿಸಿದಂತೆ ಜಾರ್ಖಂಡಿನ ಪ್ರಮುಖ ಆದಿವಾಸಿ ಹೋರಾಟಗಾರ ಹಾಗೂ ಸರ್ಕಾರಿ ಮಹಿಳಾ ಕಾಲೇಜಿನ ಪ್ರಾಧ್ಯಾಪಕ ಜೀತ್ರಾಯಿ ಹನ್ಸ್ ದಾ ಅವರನ್ನು ನೆನ್ನೆ ಜೆಮ್ ಶೆಡ್ಪುರ ದಲ್ಲಿ ಬಂಧಿಸಲಾಗಿದೆ. ಜೂನ್ 2017ರಲ್ಲಿ ಆರೆಸ್ಸೆಸ್ಸಿನ ವಿದ್ಯಾರ್ಥಿ ಸಂಘಟನೆ ಎಬಿವಿಪಿ ನೀಡಿದ್ದ ದೂರಿನ ಸಂಬಂಧ ಎರಡು ವರ್ಷದ ನಂತರ ನೆನ್ನೆ ಹನ್ಸದಾ ಅವರನ್ನು ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ.
ಸಾರ್ವತ್ರಿಕ ಚುನಾವಣೆಗಳು ಸಮೀಪಿಸಿದ್ದ ಕಾರಣ ಆದಿವಾಸಿಗಳು ದಂಗೆ ಏಳಬಹುದು, ಅದು ಚುನಾವಣೆ ಫಲಿತಾಂಶದ ಮೇಲೆ ಪರಿಣಾಮ ಬೀರಬಹುದು ಎಂಬ ಹಿನ್ನೆಲೆಯಲ್ಲಿ ಇಷ್ಟು ದಿನ ಸುಮ್ಮನಿದ್ದ ಜಾರ್ಕಂಡ್ ಸರ್ಕಾರ ಈಗ ಚುನಾವಣಾ ಫಲಿತಾಂಶ ಬಂದ ನಂತರದಲ್ಲಿ ಆದಿವಾಸಿ ಪ್ರಾಧ್ಯಾಪಕರನ್ನು ಬಂಧಿಸಿದೆ ಎನ್ನಲಾಗಿದೆ.
ಇಲ್ಲಿನ ಸಾಕ್ಚಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್ ಐ ಆರ್ ಪ್ರಕಾರ ಹನ್ಸ್ ದಾ ಅವರು 2017ರಲ್ಲಿ ಫೇಸ್ಬುಕ್ ನಲ್ಲಿ ಬರೆದ ಬರೆಹವೊಂದರಲ್ಲಿ ಜಾರ್ಖಂಡಿನ ಆದಿವಾಸಿಗಳು ದನದ ಮಾಂಸ ತಿನ್ನುವ ಸಂಪ್ರದಾಯ ಹೊಂದಿರುವುದನ್ನು, ಹಾಗೂ ತಮ್ಮ ದೇವರಿಗೆ ಬಲಿ ಕೊಡುವ ನಂಬಿಕೆ ಇರುವುದನ್ನು ಉಲ್ಲೇಖಿಸಿದ್ದರು. “ದನದ ಮಾಂಸದ ಭಕ್ಷಣೆಯು ಆದಿವಾಸಿಗಳ ಪ್ರಜಾತಾಂತ್ರಿಕ ಹಾಗೂ ಸಾಂಸ್ಕೃತಿಕ ಹಕ್ಕು” ಎಂಬುದನ್ನು ಅವರು ವಿವರಿಸಿದ್ದರು. ಆದಿವಾಸಿಗಳು ಭಾರತದ ರಾಷ್ಟ್ರಪಕ್ಷಿಯಾದ ನವಿಲನ್ನು ತಿನ್ನುವ ರೂಢಿ ಹೊಂದಿರುವುದನ್ನು ಸಹ ಅವರು ಉಲ್ಲೇಖಿಸಿದ್ದರು.
ಹನ್ಸ್ ದಾ ಅವರ ವಕೀಲರು ಹೇಳುವ ಪ್ರಕಾರ 2017ರಲ್ಲಿ ಪೊಲೀಸ್ ಠಾಣೆಗೆ ಬರಲು ಹೇಳಲಾಗಿತ್ತು, ಆದರೆ ಬಂಧಿಸಿರಲಿಲ್ಲ. ಪ್ರಾಧ್ಯಾಪಕರು ಸಲ್ಲಿಸಿದ್ದ ನಿರೀಕ್ಷಾಣಾ ಜಾಮೀನು ಅರ್ಜಿ ಕೂಡಾ ತಿರಸ್ಕೃತಗೊಂಡಿತ್ತು. ಹಫ್ಪೋಸ್ಟ್ ಇಂಡಿಯಾ ಸುದ್ದಿತಾಣದಲ್ಲಿ ವರದಿಯಾದ ಪ್ರಕಾರ ಹನ್ಸ್ ದಾ ಅವರ ಮೇಲೆ ಇಂಡಿಯನ್ ಪೀನಲ್ ಕೋಡ್ ಅಡಿ “ಧಾರ್ಮಿಕ ಭಾವನೆಗಳನ್ನು ಅಗೌರವಿಸುವ” ಹಾಗೂ ಸಮುದಾಯಗಳ ನಡುವೆ ಶತ್ರುತ್ವ ಪ್ರೋತ್ಸಾಹಿಸುವ ಕೇಸುಗಳನ್ನು ದಾಖಲಿಸಲಾಗಿದೆ.
2017ರಲ್ಲಿ ಪ್ರಾಧ್ಯಾಪಕರ ಮೇಲೆ ಪ್ರಕರಣ ದಾಖಲಿಸಿದ ನಂತರದಲ್ಲಿ ಆದಿವಾಸಿ ಸಂಸ್ಕೃತಿಯ ಉಳಿವಿಗಾಗಿ ಕೆಲಸ ಮಾಡುತ್ತಿರುವ ಸಂಘಟನೆಯೊಂದರ ಮುಖಂಡರು ಕೋಲ್ಹನ್ ವಿಶ್ವವಿದ್ಯಾಲಯದ ಉಪಕುಲಪತಿಗಳಿಗೆ ಪತ್ರ ಬರೆದು ಪ್ರಾಧ್ಯಾಪಕ ಹನ್ಸ್ ದಾ ಅವರನ್ನು ಕಾಲೇಜಿಜಿನಂದ ತೆಗೆದು ಹಾಕದಂತೆ ವಿನಂತಿಸಿಕೊಂಡಿದ್ದರು. ಮಾಜ್ಹಿ ಪರಗಣ ಮಹಲ್ ಆದಿವಾಸಿ ಸಂಘಟನೆಯ ಮುಖಂಡ ದಸಮತ್ ಹನ್ಸ್ ದಾ ಅವರು ವಿಸಿಗೆ ಬರೆದ ತಮ್ಮ ಆ ಪತ್ರದಲ್ಲಿ, “ಪ್ರಾಧ್ಯಾಪಕ ಜೀತ್ರಾಯಿ ಹನ್ಸ್ ದಾ ಅವರು ಬರೆದ ಯಾವ ಅಂಶದಲ್ಲೂ ತಪ್ಪಿಲ್ಲ, ಅದೆಲ್ಲವೂ ಆದಿವಾಸಿಗಳ ಆಚರಣೆಯಲ್ಲಿ ಇರುವಂತದ್ದು, “ಆದಿವಾಸಿ ಸಮುದಾಯದ ಸಾಂಸ್ಕೃತಿಕ ಹಾಗೂ ಧಾರ್ಮಿಕ ಸಂಪ್ರದಾಯಗಳು ಮತ್ತು ಆದಿವಾಸಿಗಳ ಆಹಾರ ಪರಂಪರೆಯ ವಾಸ್ತವಿಕ ಪ್ರತಿನಿಧೀಕರಣ” ಅವರ ಬರೆಹದಲ್ಲಿದೆ ವಿವರಿಸಿದ್ದರು.

ವಿಶ್ವವಿದ್ಯಾಲಯವು ಹನ್ಸ್ ದಾ ಅವರನ್ನು ಅಮಾನತುಗೊಳಿಸಿತ್ತೇ ಎಂಬುದು ಸ್ಪಷ್ಟವಾಗಿಲ್ಲ, “ಅವರು ಕಾಲೇಜಿಗೆ ಹೋಗುವುದನ್ನು ನಿಲ್ಲಿಸಿದ್ದರು” ಎಂದು ದಸಮತ್ ಹನ್ಸ್ ದಾ ಹಫ್ ಪೋಸ್ಟ್ ಇಂಡಿಯಾ ಪತ್ರಿಕೆಗೆ ತಿಳಿಸಿದ್ದಾರೆ.