ಮಾಜಿ ಪ್ರಧಾನಿ ನರೇಂದ್ರ ಮೋದಿಯವರ “ಬಾಲಾಕೋಟ್ ಮೋಡ ಮತ್ತ ರಾಡಾರ್” ಹೇಳಿಕೆಗೆ ಸಂಬಂಧಿಸಿದಂತೆ ಮಾಧ್ಯಮದವರು ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಭಾರತದ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರು ಮೇ 25ರ ಶನಿವಾರ “ಕೆಲವು” ರಾಡಾರ್ ಗಳು ಮೋಡಗಳ ಮೂಲಕ ನೋಡಲು ಸಾಧ್ಯವಾಗುವುದಿಲ್ಲ, ಅವುಗಳು ಕೆಲಸ ಮಾಡುವ ರೀತಿಯೇ ಹಾಗಿರುತ್ತದೆ ಎಂದಿದ್ದಾರೆ.
“ರಾಡಾರ್ ಗಳಲ್ಲಿ ಹಲವಾರು ಬಗೆಯ ರಾಡಾರ್ ಗಳಿವೆ, ಹಲವಾರು ಬಗೆ ತಂತ್ರಜ್ಞಾನ ಹೊಂದಿರುತ್ತವೆ. ಕೆಲವು ರಾಡಾರ್ ಗಳು ಮೋಡಗಳ ಮೂಲಕ ನೋಡುತ್ತವೆ, ಮತ್ತೆ ಕೆಲವು ಮೋಡಗಳ ಮೂಲಕ ನೋಡುವುದಿಲ್ಲ. ಕೆಲವು ರಾಡಾರ್ ಗಳು ಕೆಲಸ ಮಾಡುವ ರೀತಿಯೇ ಹೇಗಿರುತ್ತದೆ ಎಂದರೆ ಅವು ಮೋಡಗಳ ಮೂಲಕ ನೋಡಲು ಸಾಧ್ಯವಾಗುವುದೇ ಇಲ್ಲ” ಎಂದು ರಾವತ್ ಮೋದಿಯವರ ಮಾತನ್ನು ಸಮರ್ಥಿಸಿಕೊಂಡು ಹೇಳಿದ್ದಾರೆ.
ಎಳಿಮಲಾದಲ್ಲಿ ಭಾರತೀಯ ನೌಕೆ, ಇಂಡಿಯನ್ ಕೋಸ್ಟ್ ಗಾರ್ಡ್ ಗಳಿಗೆ 264 ಟ್ರೈನಿಗಳ ಹಾಗೂ 10 ಅಂತರರಾಷ್ಟ್ರೀಯ ಕೆಡೆಟ್ ಗಳ ಕುರಿತು ಸಮೀಕ್ಷೆ ನಡೆಸುವ ಸಂದರ್ಭದಲ್ಲಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಮೇಲಿನಂತೆ ಉತ್ತರಿಸಿದ್ದರು.
ಚುನಾವಣಾ ಪೂರ್ವದಲ್ಲಿ ನ್ಯೂಸ್ ನೇಶನ್ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ, ಬಾಲಾಕೋಟ್ ನಲ್ಲಿ ದಾಳಿ ನಡೆಸುವ ಮುನ್ನಾರಾತ್ರಿ ಪರಿಸ್ಥಿತಿ ಅವಲೋಕಿಸಿ ಬಾಲಾಕೋಟ್ ನಲ್ಲಿ ಮೋಡಗಳಿದ್ದರೆ ಒಳ್ಳೆಯದಾಯಿತು, ರಾಡಾರ್ ಗಳು ಯುದ್ಧವಿಮಾನಗಳನ್ನು ನೋಡಲಾಗುವುದಿಲ್ಲ, ದಾಳಿ ನಡೆಸಿ ಎಂದು ಹೇಳಿದ್ದಾಗಿ ತಿಳಿಸಿದ್ದರು.
ರಾಡಾರ್ ಗಳು ಮೋಡಗಳ ಮೂಲಕ, ಪ್ರತಿಕೂಲ ಹವಾಮಾನದಲ್ಲೂ ಆಕಾಶದಲ್ಲಿ ಹಾರುವ ವಸ್ತುಗಳನ್ನು ಕರಾರುವಕ್ಕಾಗಿ ಗುರುತಿಸುವ ಹಿನ್ನೆಲೆಯಲ್ಲಿ ಮೋದಿಯವರ ಹೇಳಿಕೆ ನಗೆಪಾಟಲಿಗೀಡಾಗಿತ್ತು ಮಾತ್ರವಲ್ಲ ದೇಶದ ಭದ್ರತೆಯ ವಿಷಯದಲ್ಲಿ ಇಷ್ಟು ಅಸಡ್ಡೆ ವಹಿಸಿ, ತಜ್ಞರ ಮಾತಿಗೆ ವ್ಯತಿರಿಕ್ತವಾಗಿ ದಾಳಿ ನಡೆಸಲು ಮೋದಿ ಹೇಳಿದ್ದರ ಬಗ್ಗೆ ಆಕ್ರೋಶ ವ್ಯಕ್ತವಾಗಿತ್ತು.
ಈಗ ಸೇನಾ ಮುಖ್ಯಸ್ಥರು “ಕೆಲವು” ರಾಡಾರ್ ಗಳು ಮೋಡದ ಮೂಲಕ ನೋಡುವುದಿಲ್ಲ ಎಂದು ಹೇಳುವ ಮೂಲಕ ಮೋದಿಯ ಮಾತನ್ನು ಸಮರ್ಥಿಸಿಕೊಂಡಿದ್ದಾರೆ. ಆದರೆ ಪಾಕಿಸ್ತಾನದ ಬಳಿ ಆ ಮೋಡದ ಮೂಲಕ ನೋಡಲಾಗದ “ಕೆಲವು” ರಾಡಾರ್ ಗಳಿವೆಯೇ ಅಥವಾ ಮೋಡದ ಮೂಲಕವೂ ನೋಡುವ ರಾಡಾರ್ ಗಳಿವೆಯೇ ಎಂಬ ಬಗ್ಗೆ ಯಾವುದೇ ಸುದ್ದಿ ಮಾಧ್ಯಮದವರು ಪ್ರಶ್ನಿಸಿರುವ ಕುರಿತು ಮಾಹಿತಿ ಲಭ್ಯವಾಗಿಲ್ಲ.