ಬೆಂಗಳೂರು: 2017ರ ಸೆಪ್ಟೆಂಬರ್ 5ರಂದು ಹಿಂದುತ್ವ ಭಯೋತ್ಪಾದಕರಿಂದ ಹತ್ಯೆಯಾದ ಪತ್ರಕರ್ತೆ ಗೌರಿ ಲಂಕೇಶ್ ಕೊಲೆ ಪ್ರಕರಣವನ್ನು ಯಶಸ್ವಯಾಗಿ ಭೇದಿಸಿದ ವಿಶೇಷ ತನಿಖಾ ತಂಡಕ್ಕೆ ಕರ್ನಾಟಕ ಸರ್ಕಾರ 25 ಲಕ್ಷ ರೂಪಾಯಿ ಬಹುಮಾನ ಘೋಷಿಸಿದೆ.
ಇನ್ಸ್ ಪೆಕ್ಟರ್ ಗಳಾದ ಬಿಜಿ ಕುಮಾರಸ್ವಾಮಿ, ಜಿವೈ ಗಿರಿರಾಜ್, ಡಿವೈಎಸ್ ಪಿ ಕೆಪಿ ರವಿಕುಮಾರ್ ಸೇರಿದಂತೆ ಒಟ್ಟು 91 ಮಂದಿ ವಿವಿಧ ದರ್ಜೆಯ ಪೊಲೀಸ್ ಅಧಿಕಾರಿ/ಸಿಬ್ಬಂದಿಗಳಿಗೆ ಒಟ್ಟು 25ಲಕ್ಷ ರೂಪಾಯಿಗಳ ನಗದು ಬಹುಮಾನ ನೀಡಲು ಸರ್ಕಾರ ಆದೇಶಿಸಿದೆ.
ಗೌರಿ ಲಂಕೇಶ್ ಹತ್ಯೆ ಪ್ರಕರಣವನ್ನು ತನಖೆ ನಡೆಸಲು ಹೆಚ್ಚುವರಿ ಪೊಲೀಸ್ ಆಯುಕ್ತ ಬಿಜಯ್ ಕುಮಾರ್ ಸಿಂಗ್, ಐಪಿಎಸ್ ಅವರನ್ನು ಮುಖಸ್ಥರನ್ನಾಗಿ ಹಾಗೂ ಉಪ ಪೊಲೀಸ್ ಆಯುಕ್ತ ಎಂ ಎನ್ ಅನುಚೇತ್ ಅವರನ್ನು ತನಿಖಾಧಿಕಾರಿಯನ್ನಾಗಿ ನೇಮಿಸಿ ವಿಶೇಷ ತನಿಖಾ ತಂಡವನ್ನು ರಚಿಸಲಾಗಿತ್ತು.
ಬಿಕೆ ಸಿಂಗ್ ನೇತೃತ್ವದ ಎಸ್ ಐ ಟಿಯು ಕೆಲವು ತಿಂಗಳುಗಳ ಕಾಲ ಸತತವಾಗಿ ತನಿಖೆ ನಡೆಸಿ ಇಲ್ಲಿಯವರೆಗೆ 16 ಜನರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಅಂತರರಾಷ್ಟ್ರೀಯ ಮಟ್ಟದವರೆಗೂ ಸುದ್ದಿಯಾಗಿದ್ದ ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆಯಲ್ಲಿ ಎಸ್ ಐ ಟಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಡಿ ಎನ್ ಎ ಪ್ರೊಫೈಲಿಂಗ್, ಗೇಯ್ಟ್ ಅನಾಲಿಸಿಸ್ ಸೇರಿದಂತೆ ಆಧುನಿಕ ತಂತ್ರಜ್ಞಾನವನ್ನು ಬಳಸಿ ಚಾಣಾಕ್ಷತನ, ನಿಷ್ಠೆ, ಸಮಯೋಜಿತ ಕಾರ್ಯತತ್ಪರತೆಯನ್ನು ಪ್ರದರ್ಶಿಸಿ ಪ್ರಕರಣವನ್ನು ಭೇದಿಸಿದ್ದಾರೆ.
ಗೌರಿ ಹತ್ಯೆಗೆ ಸಂಬಂಧಿಸಿದಂತೆ ಬಿ ಕೆ ಸಿಂಗ್ ತಂಡ ಒಟ್ಟು 9650 ಪುಟಗಳಷ್ಟು ಮಾಹಿತಿ ಸಾಮಗ್ರಿ ಇರುವ ಆರೋಪ ಪಟ್ಟಿ ಮತ್ತು ಸಾಕ್ಷ್ಯಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದೆ. ಎಸ್ ಐ ಟಿ ಆರೋಪ ಪಟ್ಟಿಯು ಸುಮಾರು 400 ಸಾಕ್ಷಿಗಳ ಹೇಳಿಕೆಯನ್ನು, 1200ರಷ್ಟು ಮೆಟೀರಿಯಲ್ ಸಾಕ್ಷ್ಯವನ್ನು ಒಳಗೊಂಡಿದೆ

ಗೌರಿ ಲಂಕೇಶ್ ಹತ್ಯೆಯ ಹಿಂದೆ ಹಿಂದುತ್ವ ಭಯೋತ್ಪಾದಕ ಸಂಘಟನೆಯಾದ ಸನಾತನ ಸಂಸ್ಥೆಯ ಕೈವಾಡವಿರುವುದನ್ನು ಮತ್ತು ಅದರ ಸದಸ್ಯರು ಭಾಗಿಯಾಗಿರುವುದನ್ನು ಸಹ ಎಸ್ ಐ ಟಿ ತನಿಖೆ ಬಯಲುಗೊಳಿಸಿದೆ. ಅದುವರೆಗೆ ಗೌರಿ ಹತ್ಯೆಯ ಸುತ್ತಾ ಅನೇಕ ಸುಳ್ಳು ಪೊಳ್ಳು ವಾದಗಳನ್ನು ಹರಿಬಿಡಲಾಗಿತ್ತು.
ಗೌರಿ ಲಂಕೇಶ್ ಹತ್ಯೆಗೂ ಒಂದು ವರ್ಷ ಮುಂಚೆ ನಡೆದಿದ್ದ ಕನ್ನಡ ಸಾಹಿತಿ ಎಂ ಎಂ ಕಲ್ಬುರ್ಗಿ ಅವರ ಹತ್ಯೆಯ ತನಿಖೆಗೆ ನೇಮಿಸಿದ್ದ ಎಸ್ ಐ ಟಿಯು ಹತ್ಯೆ ಪ್ರಕರಣದಲ್ಲಿ ಯಾವುದೇ ಸುಳಿವು ಸಿಗದೇ ಕುಳಿತಿದ್ದಾಗ ಬಿ ಕೆ ಸಿಂಗ್ ನೇತೃತ್ವದ ಎಸ್ ಐ ಟಿ ತಂಡ ಪ್ರಗತಿ ಸಾಧಿಸಿತ್ತು.
ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆ ಕೈಗೊಂಡಿರುವ ಬಿ ಕೆ ಸಿಂಗ್ ನೇತೃತ್ವದ ವಿಶೇಷ ತನಿಖಾ ದಳಕ್ಕೆ ಎಂ.ಎಂ. ಕಲ್ಬುರ್ಗಿ ಅವರ ಕೊಲೆ ಪ್ರಕರಣವನ್ನೂ ವರ್ಗಾಯಿಸುವಂತೆ ಇದೇ ಮಾರ್ಚ್ ತಿಂಗಳಿನಲ್ಲಿ ಸುಪ್ರೀಮ್ ಕೋರ್ಟ್ ನಿರ್ದೇಶನ ನೀಡಿತ್ತು. ಇದು ಈ ತಂಡದ ಕಾರ್ಯತತ್ಪರತೆಗೆ ಸಾಕ್ಷಿಯಾಗಿದೆ.