ಲೋಕಸಭಾ ಚುನಾವಣೆಯ ಫಲಿತಾಂಶದ ಬಳಿಕದ ರಾಜಕೀಯ ವಿಪ್ಲವಗಳು ಈಗಾಗಲೇ ಆರಂಭವಾಗಿವೆ. ನಿರೀಕ್ಷಿತ ಸ್ಥಾನ ಗಳಿಕೆಗೆ ವಿಫಲವಾಗಿರುವ ಮತ್ತು ಮೋದಿ ಅಲೆಯ ಮುಂದೆ ಬಸವಳಿದು ನೆಲಕಚ್ಚಿರುವ ಪ್ರಮುಖ ಪಕ್ಷಗಳಲ್ಲಿ ಬದಲಾವಣೆಯ ಪರ್ವ ಆರಂಭವಾಗಿದೆ. ಅದರಲ್ಲೂ ಪ್ರಮುಖವಾಗಿ ಬಿಜೆಪಿಯ ಪ್ರತಿಸ್ಪರ್ಧಿ ಕಾಂಗ್ರೆಸ್ ಪಕ್ಷದ ಆಂತರಿಕ ಬೆಳವಣಿಗೆಗಳು ಆ ಪಕ್ಷದ ಭವಿಷ್ಯದ ಚಹರೆಯನ್ನೇ ಬದಲಾಯಿಸುವ ಸೂಚನೆ ನೀಡುತ್ತಿವೆ. ಅಷ್ಟರಮಟ್ಟಿಗೆ ಬಿಜೆಪಿಯ ಭರ್ಜರಿ ಜಯಭೇರಿ ಕಾಂಗ್ರೆಸ್ ಸೇರಿದಂತೆ ಪ್ರಮುಖ ಪ್ರತಿಪಕ್ಷಗಳ ಪಾಳೆಯದಲ್ಲಿ ಕಂಪನ ಮೂಡಿಸಿದೆ.
ಚುನಾವಣಾ ಫಲಿತಾಂಶ ಹೊರಬಿದ್ದು ಪಕ್ಷಕ್ಕೆ ಭಾರೀ ಹಿನ್ನಡೆಯಾದ ಹಿನ್ನೆಲೆಯಲ್ಲಿ ಫಲಿತಾಂಶದ ಪರಾಮರ್ಶೆಗಾಗಿ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಸ್ವತಃ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದರು. ಆದರೆ, ಪಕ್ಷದ ಇತರ ನಾಯಕರು ಅವರನ್ನು ಸಮಾಧಾನಪಡಿಸಿದ್ದಾರೆ. ಪಕ್ಷದ ಸೋಲಿಗೆ ವೈಯಕ್ತಿಕವಾಗಿ ಹೊಣೆಗಾರರಾಗುವುದಾಗಿ ಅವರು ಹೇಳಿದಾಗ, ಇತರ ನಾಯಕರು, ಸೋಲಿಗೆ ಪಕ್ಷದ ಎಲ್ಲಾ ನಾಯಕರೂ ಕಾರಣ. ಹಾಗಾಗಿ ಸೋಲಿನ ಹೊಣೆಗಾರಿಕೆಯನ್ನು ಸಾಮೂಹಿಕವಾಗಿ ಹಂಚಿಕೊಳ್ಳೋಣ ಎಂಬ ಮಾತುಗಳನ್ನಾಡಿದರು ಎಂದು ವರದಿಯಾಗಿದೆ.
ಆದರೆ, ಇದೀಗ ರಾಹುಲ್ ಗಾಂಧಿಯವರು ತಮ್ಮ ನಿಲುವನ್ನು ಸಡಿಸಿಲ್ಲ. ಪಕ್ಷದ ಅಧ್ಯಕ್ಷರಾಗಿ ಮುಂದುವರಿಯಲಾರೆ. ಆ ಸ್ಥಾನಕ್ಕೆ ಬೇರೊಬ್ಬ ಸಮರ್ಥ ನಾಯಕರನ್ನು ಹುಡುಕಿ ಎಂದು ಪಕ್ಷದ ಹಿರಿಯ ನಾಯಕರಿಗೆ ತಿಳಿಸಿದ್ದಾರೆ ಎಂದು ಎನ್ ಡಿಟಿವಿ ಸೇರಿದಂತೆ ಕೆಲವು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಮುಖ್ಯವಾಗಿ ಪಕ್ಷದ ಹೀನಾಯ ಸೋಲಿನ ಹೊಣೆ ಹೊತ್ತುಕೊಂಡು ತಾವು ಮತ್ತೆ ಅದೇ ಸ್ಥಾನದಲ್ಲಿ ಮುಂದುವರಿಯಲಾಗದು. ಅಲ್ಲದೆ, ಗಾಂಧಿ ಕುಟುಂಬವೇ ಪಕ್ಷದ ಹೊಣೆಹೊರಬೇಕಾಗಿಲ್ಲ. ಅಂತಹ ಅಪವಾದ ಕೂಡ ಪಕ್ಷದ ಹಿನ್ನಡೆಗೆ ಕಾರಣವಾಗಿರಬಹುದು. ವಿರೋಧಪಕ್ಷಗಳ ಅಪಪ್ರಚಾರಕ್ಕೆ ಕೂಡ ಎಡೆಯಾಯಿತು. ಆ ಹಿನ್ನೆಲೆಯಲ್ಲಿ ತಾವು ಪಕ್ಷದ ಸಾರಥ್ಯವನ್ನು ವರ್ಗಾಯಿಸಲು ನಿರ್ಧರಿಸಿರುವುದಾಗಿ ರಾಹುಲ್ ತಿಳಿಸಿದ್ದಾರೆ ಎನ್ನಲಾಗಿದೆ.
ಅಲ್ಲದೆ, ಈ ವೇಳೆ ಹಾಜರಿದ್ದ ಕೆಲವು ಹಿರಿಯ ನಾಯಕರು, ತಾವು ಖಡಾಖಂಡಿತವಾಗಿ ಅಧ್ಯಕ್ಷ ಸ್ಥಾನದಿಂದ ದೂರ ಉಳಿಯಲು ನಿರ್ಧರಿಸಿದ್ದರೆ, ಆ ಸ್ಥಾನಕ್ಕೆ ನಿಮ್ಮ ಸಹೋದರಿ ಪ್ರಿಯಾಂಕಾ ಗಾಂಧಿಯವರನ್ನೇ ಏಕೆ ಕೂರಿಸಬಾರದು? ಆಗ ಪಕ್ಷದ ಚುಕ್ಕಾಣಿ ಗಾಂಧಿ ಕುಟುಂಬದೊಂದಿಗೇ ಇರಲಿದೆ. ಸಂಘಟನೆ ಮತ್ತು ಪ್ರಭಾವದ ದೃಷ್ಟಿಯಿಂದ ಅನುಕೂಲಕರ ಎಂಬ ಸಲಹೆ ನೀಡಿದರು. ಆದರೆ, ರಾಹುಲ್, ಆ ಸಲಹೆಗೆ ಒಪ್ಪಿಗೆ ನೀಡಲಿಲ್ಲ. ನನ್ನ ಸಹೋದರಿಯನ್ನು ಈ ವಿಷಯದಲ್ಲಿ ಎಳೆದುತರಬೇಡಿ ಎಂದು ಮನವಿ ಮಾಡಿದರು ಎಂದು ವರದಿಯಾಗಿದೆ.
ತತಕ್ಷಣಕ್ಕೆ ಪಕ್ಷದ ಹೊಣೆಗಾರಿಕೆಯಿಂದ ಮುಕ್ತಿ ಪಡೆಯುವುದಿಲ್ಲ. ಪಕ್ಷದ ಹಿರಿಯ ಕಾರ್ಯಕಾರಿಗಳು ಅಧ್ಯಕ್ಷ ಸ್ಥಾನಕ್ಕೆ ಸೂಕ್ತ ನಾಯಕರನ್ನು ಶೋಧಿಸಿ, ಅಂತಿಮಗೊಳಿಸುವವರೆಗೆ ಅಧ್ಯಕ್ಷನಾಗಿ ಮುಂದುವರಿಯುವೆ. ಆದರೆ, ಆ ವಿಷಯದಲ್ಲಿ ಈಗಾಗಲೇ ನಿರ್ಧಾರ ಅಂತಿಮಗೊಳಿಸಿದ್ದು, ಈ ಬಗ್ಗೆ ಎರಡನೇ ಯೋಚನೆ ಮಾಡುವ ಪ್ರಶ್ನೆಯೇ ಇಲ್ಲ. ಅಧ್ಯಕ್ಷ ಸ್ಥಾನಕ್ಕೆ ಶೀಘ್ರವೇ ಸಮರ್ಥ ನಾಯಕರನ್ನು ಹೆಸರಿಸಿ ಎಂದೂ ರಾಹುಲ್ ಹೇಳಿದ್ದಾರೆ. ರಾಹುಲ್ ಅವರ ಈ ಕಠಿಣ ನಿಲುವಿಗೆ ಅವರ ತಾಯಿ ಮತ್ತು ಪಕ್ಷದ ನಾಯಕಿ ಸೋನಿಯಾ ಗಾಂಧಿ ಮತ್ತು ಸಹೋದರಿ ಪ್ರಿಯಾಂಕಾ ಕೂಡ ಅಂತಿಮವಾಗಿ ಸಹಮತ ವ್ಯಕ್ತಪಡಿಸಿದ್ದಾರೆ ಎಂದೂ ಎನ್ ಡಿ ಟಿವಿ ಹೇಳಿದೆ.
ಈ ನಡುವೆ, ಪಕ್ಷದ ಅಧ್ಯಕ್ಷರಾಗಿ ರಾಹುಲ್ ಅವರೇ ಮುಂದುವರಿಯಲಿದ್ದಾರೆ. ಆದರೆ, ಪಕ್ಷದ ಸಂಘಟನೆ ಕಾರ್ಯದ ಜೊತೆಗೆ ದೈನಂದಿನ ಕೆಲಸ ಕಾರ್ಯಗಳನ್ನೂ ನೋಡಿಕೊಳ್ಳುವುದು ಮತ್ತು ಚುನಾವಣಾ ಹೊತ್ತಿನಲ್ಲಿ ನಿರಂತರ ಪ್ರಚಾರ ಕಾರ್ಯದ ನೇತೃತ್ವವನ್ನೂ ವಹಿಸುವುದು ಸವಾಲಿನದ್ದು. ಹಾಗಾಗಿ ರಾಹುಲ್ ಅವರಿಗೆ ಸಂಘಟನೆ ಮತ್ತು ಪ್ರಚಾರದ ಹೊಣೆಗಾರಿಕೆ ಬಿಟ್ಟು, ಇನ್ನುಳಿದಂತೆ ದೈನಂದಿನ ಚಟುವಟಿಕೆ ಮತ್ತು ಪಕ್ಷದ ಪ್ರಾದೇಶಿಕ ಘಟಕಗಳ ಹೊಣೆಗಾರಿಕೆ ನೋಡಿಕೊಳ್ಳಲು ಅನುಕೂಲವಾಗುವಂತೆ ಕಾರ್ಯಾಧ್ಯಕ್ಷರನ್ನು ನೇಮಿಸಲು ಯೋಚಿಸಲಾಗಿದೆ. ಈ ಹಿಂದೆ ಕೂಡ ರಾಜೀವ್ ಗಾಂಧಿ ಮತ್ತು ಇಂದಿರಾಗಾಂಧಿ ಅವರ ಅವಧಿಯಲ್ಲಿಯೂ ಎಐಸಿಸಿ ಕಾರ್ಯಾಧ್ಯಕ್ಷರನ್ನು ಹೊಂದಿತ್ತು. ಇದೀಗ ಸ್ವತಃ ರಾಹುಲ್ ಕೂಡ ಪಕ್ಷದ ರಾಜ್ಯ ಘಟಕಗಳಲ್ಲಿ ಹಲವು ಕಡೆ ರಾಜ್ಯಾಧ್ಯಕ್ಷರನ್ನು ನೇಮಿಸಿದ್ದಾರೆ. ಅದೇ ಮಾದರಿಯಲ್ಲಿ ಕಾರ್ಯಾಧ್ಯಕ್ಷರ ನೇಮಕ ನಡೆಯಬಹುದು ಎಂಬ ವರದಿಗಳೂ ಇದ್ದವು.
ಆದರೆ, ಸೋಮವಾರ ಮಧ್ಯಾಹ್ನದ ಹೊತ್ತಿಗೆ ರಾಹುಲ್ ಗಾಂಧಿ ರಾಜೀನಾಮೆಯ ಖಚಿತ ನಿಲುವಿನ ವರದಿಗಳು ಕೇಳಿಬಂದಿದ್ದು, ಪಕ್ಷದ ಉನ್ನತ ನಾಯಕತ್ವ ಕೂಡ ಈಗ ಬೇರೆ ದಾರಿ ಇಲ್ಲದೆ ಹೊಸ ನಾಯಕರ ಹುಡುಕಾಟಕ್ಕೆ ಚಾಲನೆ ನೀಡಬೇಕಾಗಿದೆ.
ಹಾಗೇನಾದರೂ, ರಾಹುಲ್ ಕೊನೆಗೂ ಮನಸ್ಸು ಬದಲಾಯಿಸದೆ ಪಕ್ಷದ ಅಧ್ಯಕ್ಷ ಸ್ಥಾನದಿಂದ ದೂರ ಸರಿಯುವ ತಮ್ಮ ನಿರ್ಧಾರಕ್ಕೆ ಅಂಟಿಕೊಂಡರೆ, ಬಹುಶಃ 1978ರ ಬಳಿಕ ಈವರೆಗೆ ಬರೋಬ್ಬರಿ 40 ವರ್ಷಗಳಲ್ಲಿ ಪಿ ವಿ ನರಸಿಂಹ ರಾವ್ ಮತ್ತು ಸೀತಾರಾಂ ಕೇಸರಿ ಅವಧಿ ಹೊರತುಪಡಿಸಿ (1992-1998) ಮತ್ತೊಮ್ಮೆ ದೇಶದ ಅತ್ಯಂತ ಹಳೆಯ ಪಕ್ಷದ ಚುಕ್ಕಾಣಿ ಗಾಂಧಿ ಕುಟುಂಬದ ಹೊರಗಿನವರ ಕೈವಶವಾಗಲಿದೆ. 1978ರಲ್ಲಿ ಇಂದಿರಾಗಾಂಧಿ ಪಕ್ಷದ ಅಧ್ಯಕ್ಷೆಯಾಗಿ ಚುಕ್ಕಾಣಿ ಹಿಡಿದ ಬಳಿಕ, 1992ರಿಂದ 96ರವೆಗೆ ಪಿ ವಿ ನರಸಿಂಹರಾವ್ ಹಾಗೂ 1996ರಿಂದ 98ರವರೆಗೆ ಸೀತಾರಾಂ ಕೇಸರಿ ಅವರು ಅಧ್ಯಕ್ಷರಾಗಿದ್ದನ್ನು ಹೊರತುಪಡಿಸಿ, ಪಕ್ಷದ ಚುಕ್ಕಾಣಿ ಗಾಂಧಿ ಕುಟುಂಬದ ಹಿಡಿತದಲ್ಲಿಯೇ ಇತ್ತು. ಇಂದಿರಾ ಬಳಿಕ, ಪುತ್ರ ರಾಜೀವ್ ಗಾಂಧಿ ಮತ್ತು ಆ ಬಳಿಕ ಅವರ ಪತ್ನಿ ಸೋನಿಯಾ ಗಾಂಧಿ ಹಾಗೂ ನಂತರ ರಾಹುಲ್ ಗಾಂಧಿಗೆ ಪಕ್ಷದ ಚುಕ್ಕಾಣಿ ವರ್ಗಾವಣೆಯಾಗಿತ್ತು. ಆ ಮೂಲಕ ಪಕ್ಷದಲ್ಲಿ ವಂಶಪಾರಂಪರ್ಯ ಮುಂದುವರಿದಿದೆ. ಗಾಂಧಿ ಕುಟುಂಬದ ಪಕ್ಷ ಎಂಬ ಟೀಕೆಗಳಿಗೆ ಪಕ್ಷ ಗುರಿಯಾಗುತ್ತಲೇ ಇತ್ತು. ಆದರೆ, ಈಗ ರಾಹುಲ್ ಗಾಂಧಿಯವರ ಈ ನಿರ್ಧಾರ ನಿಜವಾದಲ್ಲಿ, ಕಾಂಗ್ರೆಸ್ ಪಕ್ಷಕ್ಕೆ ಅಂಟಿದ್ದ ಆ ಅಪವಾದ ಕೂಡ ಕಳಚಬಹುದು. ಮುಖ್ಯವಾಗಿ ಬಿಜೆಪಿ ಮತ್ತು ಸಂಘಪರಿವಾರದ ಎಂದಿನ ಟೀಕೆಯಾದ ಕುಟುಂಬ ರಾಜಕಾರಣ ಅಥವಾ ವಂಶಪಾರಂಪರ್ಯ ರಾಜಕಾರಣದ ಆರೋಪದಿಂದ ಪಾರಾಗಬಹುದು.
ಅದೇ ಹೊತ್ತಿಗೆ, ಎಐಸಿಸಿ ಅಧ್ಯಕ್ಷರಾಗಿ ರಾಹುಲ್ ಅವರೇ ಸೋಲಿನ ಹೊಣೆಹೊತ್ತು ಹುದ್ದೆ ತ್ಯಜಿಸಿದರೆ ಅವರನ್ನು ಅನುಸರಿಸುವುದು ಇತರ ಪಿಸಿಸಿ ಅಧ್ಯಕ್ಷರಿಗೆ ಅನಿವಾರ್ಯವಾಗಲಿದೆ. ಹಾಗಾಗಿ ಕಾಂಗ್ರೆಸ್ ಹೀನಾಯ ಸೋಲು ಕಂಡಿರುವ ಕರ್ನಾಟಕವೂ ಸೇರಿದಂತೆ ವಿವಿಧ ರಾಜ್ಯಗಳ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರು ಕೂಡ ರಾಜೀನಾಮೆ ನೀಡುವ ಸಾಧ್ಯತೆ ಹೆಚ್ಚಿದೆ. ಆಗ ಪ್ರದೇಶ ಸಮಿತಿಗಳಿಗೂ ಹೊಸ ಅಧ್ಯಕ್ಷರ ನೇಮಕವಾಗಬೇಕಾಗುತ್ತದೆ ಮತ್ತು ಕೆಲವೊಮ್ಮೆ ಪಕ್ಷದ ಅಧ್ಯಕ್ಷರ ಜೊತೆಗೆ ಕಾರ್ಯಾಧ್ಯಕ್ಷರು ಮತ್ತು ಇತರ ಕಾರ್ಯಕಾರಿ ಸಮಿತಿಯೂ ಬದಲಾಗಬಹುದು. ಒಟ್ಟಾರೆ, ರಾಹುಲ್ ರಾಜೀನಾಮೆಯ ಬೆಳವಣಿಗೆ ಕೇವಲ ಎಐಸಿಸಿ ಅಧ್ಯಕ್ಷ ಪಟ್ಟವಷ್ಟೇ ಅಲ್ಲದೆ, ಖಂಡಿತವಾಗಿಯೂ ದೇಶಾದ್ಯಂತ ಬಹುತೇಕ ಕಾಂಗ್ರೆಸ್ಸಿನ ನಾಯಕತ್ವದಲ್ಲಿ ದೊಡ್ಡ ಮಟ್ಟದ ಬದಲಾವಣೆ ತರಲಿದೆ.
2 Comments
ಕಾಂಗ್ರೆಸ್ ನಲ್ಲಿ ವಂಶಪಾರಂಪರ್ಯ ರಾಜಕಾರಣ ನಡೆಯುತ್ತಿದೆ. ನೆಹರು ಕುಟುಂಬ ಬಿಟ್ಟರೆ ಕಾಂಗ್ರೆಸ್ ಗೆ ಗತಿ ಇಲ್ಲ ಎಂಬ ರೀತಿಯ ಟೀಕೆಗಳು, ಆರೋಪಗಳು ದೇಶವ್ಯಾಪಿ ವಿರೋಧಿಗಳಿಂದ ಕೇಳಿ ಬರುತ್ತಿರುವುದು ನಿಜ. ಆದರೆ, ಕಾಂಗ್ರೆಸ್ ಎಂದರೆ ಅದು ಕೇವಲ ರಾಜಕೀಯ ಪಕ್ಷವಲ್ಲ.ಈ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ, ಬಲಿದಾನಗೈದಿರುವ ಒಂದು ದೇಶಭಕ್ತ ಸಂಸ್ಥೆ. ಅಂಥಾ ಪಕ್ಷದ ಸೋಲಿನ ಹೊಣೆ ಹೊತ್ತು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿರುವ ರಾಹುಲ್ ಗಾಂದಿ ಅವರ ಕ್ರಮ ನೈತಿಕತೆಗೆ ಸಾಕ್ಷಿಯಾಗಿದೆ. ಅದಕ್ಕೆ ಹೇಳುವುದು ದೊಡ್ಡವರ ದೊಡ್ಡಗುಣ ಎಂದು.. ಲೋಕ ಚುನಾವಣೆಯಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮಾತ್ರ ಹೊಣೆಯಲ್ಲ. ಪಕ್ಷದ ಎಲ್ಲಾ ಮುಖಂಡರು ಹೊಣೆಯಾಗುತ್ತಾರೆ. ನಿಜವಾಗಿ ಪಕ್ಷದ ಮುಖಂಡರಿಗೆ ನೈತಿಕತೆ ಇದ್ದರೆ ತಮ್ಮ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ತಳ ಮಟ್ಟದಿಂದ ಪಕ್ಷ ಸಂಘಟನೆಗೆ ಎಲ್ಲರೂ ಕೈ ಜೋಡಿಸಬೇಕು.
ದಲಿತರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರು ಪಕ್ಷದ ಬೆನ್ನೆಲುಬು ಆಗಿರುವುದರಿಂದ ಆ ಸಮುದಾಯಗಳನ್ನು ಗಣನೆಗೆ ತೆಗೆದುಕೊಳ್ಳಬೇಕು ಎಂಬುದು ನಿಷ್ಟಾವಂತ ಕಾಂಗ್ರೆಸ್ಸಿಗನಾಗಿರುವ ನನ್ನ ಸಲಹೆ.
ಕಾಂಗ್ರೆಸ್ ನಲ್ಲಿ ವಂಶಪಾರಂಪರ್ಯ ರಾಜಕಾರಣ ನಡೆಯುತ್ತಿದೆ. ನೆಹರು ಕುಟುಂಬ ಬಿಟ್ಟರೆ ಕಾಂಗ್ರೆಸ್ ಗೆ ಗತಿ ಇಲ್ಲ ಎಂಬ ರೀತಿಯ ಟೀಕೆಗಳು, ಆರೋಪಗಳು ದೇಶವ್ಯಾಪಿ ವಿರೋಧಿಗಳಿಂದ ಕೇಳಿ ಬರುತ್ತಿರುವುದು ನಿಜ. ಆದರೆ, ಕಾಂಗ್ರೆಸ್ ಎಂದರೆ ಅದು ಕೇವಲ ರಾಜಕೀಯ ಪಕ್ಷವಲ್ಲ.ಈ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ, ಬಲಿದಾನಗೈದಿರುವ ಒಂದು ದೇಶಭಕ್ತ ಸಂಸ್ಥೆ. ಅಂಥಾ ಪಕ್ಷದ ಸೋಲಿನ ಹೊಣೆ ಹೊತ್ತು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿರುವ ರಾಹುಲ್ ಗಾಂದಿ ಅವರ ಕ್ರಮ ನೈತಿಕತೆಗೆ ಸಾಕ್ಷಿಯಾಗಿದೆ. ಅದಕ್ಕೆ ಹೇಳುವುದು ದೊಡ್ಡವರ ದೊಡ್ಡಗುಣ ಎಂದು.
ರಾಹುಲ್ ಗಾಂಧಿ ಅವರ ಕ್ರಮ ಸ್ವಾಗತಾರ್ಹವಾಗಿದೆ. ಚುನಾವಣೆಯ ಸೋಲಿಗೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮಾತ್ರ ಹೊಣೆಯಲ್ಲ. ಪಕ್ಷದ ಎಲ್ಲಾ ಮುಖಂಡರು ಹೊಣೆಯಾಗುತ್ತಾರೆ. ನಿಜವಾಗಿ ಪಕ್ಷದ ಮುಖಂಡರಿಗೆ ನೈತಿಕತೆ ಇದ್ದರೆ ತಮ್ಮ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ತಳ ಮಟ್ಟದಿಂದ ಪಕ್ಷ ಸಂಘಟನೆಗೆ ಎಲ್ಲರೂ ಕೈ ಜೋಡಿಸಬೇಕು.
ದಲಿತರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರು ಪಕ್ಷದ ಬೆನ್ನೆಲುಬು ಆಗಿರುವುದರಿಂದ ಆ ಸಮುದಾಯಗಳನ್ನು ಗಣನೆಗೆ ತೆಗೆದುಕೊಳ್ಳಬೇಕು ಎಂಬುದು ನಿಷ್ಟಾವಂತ ಕಾಂಗ್ರೆಸ್ಸಿಗನಾಗಿರುವ ನನ್ನ ಸಲಹೆ.